‘ಪುತ್ತೂರಿಗೆ ಪುತ್ತಿಲ ‘ ಸ್ಪರ್ಧೆಯಿಂದ ಯಾರಿಗೆ ಲಾಭ, ಎಲ್ಲಿ ನಷ್ಟ ಮತ್ತು ಅರುಣ್ ಕುಮಾರ್ ಪುತ್ತಿಲರಿಗೆ ಏನು ಸಿಗಲಿದೆ ?
Arun Kumar Puttila : ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ, ಪುತ್ತೂರಿನ ಹಿಂದುತ್ವದ ಫೈರ್ ಬ್ರಾಂಡ್ ಮುಖ ಅರುಣ್ ಕುಮಾರ್ ಪುತ್ತಿಲ (Arun Kumar Puttila) ರವರು ‘ನಮ್ಮ ಯುದ್ಧ ಭಾರತೀಯ ಜನತಾ ಪಾರ್ಟಿ ವಿರುದ್ಧ ಅಲ್ಲ, ಪುತ್ತೂರಿನಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಶಾಫಿ ಬೆಳ್ಳಾರೆ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ವಿರುದ್ಧ’ ಎಂದು ಫೇಸ್ಟುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
” ನಾನು ಜನರಲ್ಲಿ ಇರುವ ತಪ್ಪು ಕಲ್ಪನೆಗೆ ಒಂದು ಸ್ಪಷ್ಟನೆ ಕೊಡಲು ಬಯಸುತ್ತೇನೆ. ನಮ್ಮ ಯುದ್ಧ ಭಾರತೀಯ ಜನತಾ ಪಕ್ಷದ ವಿರುದ್ಧ ಅಲ್ಲ, ನಮ್ಮ ಯುದ್ಧ ಏನಿದ್ದರು ಪುತ್ತೂರಿನಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಎಸ್.ಡಿ.ಪಿ.ಐಯ ಶಾಫಿ ಬೆಳ್ಳಾರೆ ಹಾಗೂ ಹಿಂದೂ ಕಾರ್ಯಕರ್ತರಿಗೆ ಬುದ್ದಿ ಕಲಿಸುತ್ತೇನೆ ಎಂದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ವಿರುದ್ಧ” ಎಂದು ಫೇಸ್ಟುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಾಸ್ತವವಾಗಿ ಅರುಣ್ ಕುಮಾರ್ ಪುತ್ತಿಲ (Arun Kumar Puttila) ಅವರು ಇಂದು ಬಯಸುವ ಮತಗಳು ಹಿಂದುತ್ವದ ಮತಗಳೇ. ಅವು ಪ್ರತಿ ಬಾರಿಯ ಬಿಜೆಪಿಯ ಓಟ್ ಬ್ಯಾಂಕ್ ಗಳೇ. ಪುತ್ತೂರು ವಿಧಾನಸಭಾ ಕ್ಷೇತ್ರವು ಹಿಂದುತ್ವದ ಪ್ರಯೋಗಶಾಲೆ ಎಂದೇ ಜನಜನಿತ. ಹೊಸ ಆಲೋಚನೆಗಳು ಅಲ್ಲಿನ ಸಾಂಘಿಕರಿಂದ ಜನಿಸಿ, ಅದೇ ನೆಲದಲ್ಲಿ ಅದನ್ನು ಪ್ರಯೋಗಕ್ಕೆ ಇಳಿಸಿ ಯಶಃ ಕಾಣಿಸುವುದು ಸಂಘ ಪರಿವಾರದ ಅಭ್ಯಾಸ. ಈಗ ನನ್ನ ಹೋರಾಟ ಕಾಂಗ್ರೆಸ್ ವಿರುದ್ಧ ಅಂತ ಅರುಣ್ ಕುಮಾರ್ ಪುತ್ತಿಲ ಅವರು ಹೇಳುತ್ತಿದ್ದಾರೆ. ತನ್ನ ಹಿಂದುತ್ವದ ಬುಟ್ಟಿಯಲ್ಲಿರುವ ಹಣ್ಣಾದ ಮಾವಿನಹಣ್ಣುಗಳನ್ನು ಎಷ್ಟು ಜೋರಾಗಿ ಬೀಸಿ ಹೊಡೆದರೂ ಅದರ ಪ್ರಯೋಜನ ವಿರೋಧಿ ಪಾಳಯಕ್ಕೇ. ಏನೋ ತನ್ನ ಸಮಾಧಾನಕ್ಕೆ ನಾನು ಹಣ್ಣು ತೂರಿದೆ ಅನ್ನುವ ಆತ್ಮತೃಪ್ತಿ ಬದಿಗಿರಿಸಿ ನೋಡಿದರೆ, ಅರುಣ್ ಗಾಗಲಿ ಒಟ್ಟಾರೆ ಹಿಂದುತ್ವಕ್ಕಾಗಲಿ ಇದರಿಂದ ಯಾವುದೇ ಲಾಭವಿಲ್ಲ. ಇಲ್ಲಿಂದ ಎಸೆದ ಒಂದೊಂದು ಓಟೂ ಅಶೋಕ್ ಕುಮಾರ್ ರೈ ಅವರ ಜೋಳಿಗೆ ಸೇರುತ್ತದೆ. ಅವರ ಬಲ ಹೆಚ್ಚುತ್ತಾ ಹೋಗುತ್ತದೆ. ಅದು ಹಿಂದುತ್ವದ ಸೋಲು ಅಂತ ಅರುಣ್ ಕುಮಾರ್ ಪುತ್ತಿಲ ಅವರಿಗೆ ತಿಳಿಯದಷ್ಟು ಅವರು ದಡ್ಡರಲ್ಲ.
ಇದೆಲ್ಲ ಅರುಣ್ ಕುಮಾರ್ ಪುತ್ತಿಲ ಅವರ ಅಭಿಮಾನಿ ಹುಡುಗರಿಗೆ ಕೂಡಾ ತಿಳಿಯದಷ್ಟು ಅವರು ಮುಗ್ಧರಲ್ಲ ಅಂದುಕೊಳ್ಳೋಣ. ಅರುಣ್ ಕುಮಾರ್ ಅವರ ಪಕ್ಷೇತರ ಸ್ಪರ್ಧೆಯಿಂದ ಕಾಂಗ್ರೆಸ್ ಪಾಳಯ ಖುಷಿಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಹೊಸ ಹುರುಪಿನಿಂದ ಫೀಲ್ಡ್ ಗೆ ಇಳಿದಿದ್ದಾರೆ. ಅತ್ತ ಶಕುಂತಳಾ ಶೆಟ್ಟಿಯ ಮುನಿಸು, ಕಾವು ಹೇಮನಾಥ ಮನಸ್ಸಿನ ಕಾವು ಇನ್ನೂ ಕುದಿ ಹಾಕುತ್ತಲೇ ಇದೆ. ಇದರ ಮಧ್ಯೆಯೂ ಅರುಣ್ ಪುತ್ತಿಲ ಅವರ ಎಂಟ್ರಿ ಕಾಂಗ್ರೆಸ್ ಗೆ ಬಹು ದೊಡ್ಡ ಪ್ಲಸ್ ಪಾಯಿಂಟ್.
ಪ್ರಸ್ತುತ ಸನ್ನಿವೇಶದಲ್ಲಿ ಅಭ್ಯರ್ಥಿಗಳಾದ ಪಕ್ಷೇತರ ಅರುಣ್ ಕುಮಾರ್ ಪುತ್ತಿಲ, ಕಾಂಗ್ರೆಸ್ ನ ಅಶೋಕ್ ಕುಮಾರ್ ರೈ, ಬಿಜೆಪಿಯ ಆಶಾ ತಿಮ್ಮಪ್ಪ ಅವರ ಬೆಂಬಲಿಗರು ಜಯ ತಮ್ಮದೇ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ಜೆಡಿಎಸ್ ನ ದಿವ್ಯಪ್ರಭಾ ಅವರು ಸ್ಪರ್ಧೆ ಮಾಡುತ್ತಿದ್ದು, ಸಣ್ಣ ಪ್ರಮಾಣದ ಓಟ್ ಕಸಿಯುವ ಲಕ್ಷಣ ಇದೆ. ಒಕ್ಕಲಿಗರ ಓಟು ಕಸಿಯಬಲ್ಲರಾ ? ಎಂದರೆ ಉತ್ತರ ‘ ನೋ’ ಎಂದು ಹೇಳಬೇಕಾಗುತ್ತದೆ. ಆಕೆ ಪಡೆಯುವ ಓಟು ಸಮಾನವಾಗಿ 50% ಬಿಜೆಪಿ ಕಡೆಯಿಂದ, ಮತ್ತೆ 50 % ಕಾಂಗ್ರೆಸ್ ಕಡೆಯಿಂದ ಇರಲಿದ್ದು, ಒಟ್ಟಾರೆ ಫಲಿತಾಂಶದಲ್ಲಿ ಆಕೆಯ ಪಾಲು ನ್ಯೂಟ್ರಲ್ ಅನ್ನಬಹುದು. ಆಕೆಯನ್ನು ಕುಮಾರಸ್ವಾಮಿ ಇಲ್ಲಿ ನಿಲ್ಲಿಸಿದ್ದೇ ಕಾಂಗ್ರೆಸ್ ಗೆ ಸಹಾಯ ಆಗಲಿ ಎಂದು. ಯಾಕೆಂದರೆ, ಅತಂತ್ರ ಸರ್ಕಾರ ಬಂದಾಗ ಕಾಂಗ್ರೆಸ್ ತಾನೇ ಜೆಡಿಎಸ್ ನ ಪ್ರಥಮ ಆಯ್ಕೆ ? ಕಾಂಗ್ರೆಸ್ ಸುಲಭವಾಗಿ ಕುಮಾರಣ್ಣನಿಗೆ ಮುಖ್ಯಮಂತ್ರಿ ಸೀಟು ಬಿಟ್ಟು ಕೊಡುತ್ತದೆ. ಬಿಜೆಪಿಯ ಥರ ಅದು ಮುಖ್ಯಮಂತ್ರಿ ಪಟ್ಟಕ್ಕೆ ಚೌಕಾಶಿ ಮಾಡಲ್ಲ.
ಇನ್ನು ಮುಸ್ಲಿಂ ಪರಿಷತ್ ನ ಅಶ್ರಫ್ ಕಲ್ಲೆಗ ಕೂಡಾ ಇನ್ನೊಂದು ಕಡೆ, ಜೈಲಿಂದಲೇ ಸ್ಪರ್ಧಿಸುವ, ಪ್ರವೀಣ್ ನೆಟ್ಟಾರ್ ಶಾಫಿ ಬೆಳ್ಳಾರೆ ಇನ್ನೊಂದು ಕಡೆ ಸ್ಪರ್ಧೆಯಲ್ಲಿ ಇದ್ದಾರೆ. ಅವರವರ ಲೆಕ್ಕಾಚಾರ ಅವರದು. ಸದ್ಯಕ್ಕೆ ಎಲ್ಲವೂ ಗುಪ್ತ್ ಗುಪ್ತ್.
ಇತ್ತ ಹಾಲಿ ಶಾಸಕರನ್ನು ಹೊಂದಿರುವ ಬಿಜೆಪಿಗೆ ಪ್ಲಸ್ ಪಾಯಿಂಟ್ ಹಾಲಿ ಶಾಸಕ ಸಂಜೀವ ಮಠಂದೂರು. ಕ್ಷೇತ್ರದ ಬಿಜೆಪಿ ಬಳಗದ ಜತೆ ಸಮನ್ವಯ ಸಾಧಿಸಿ ಎಲ್ಲರ ವಿಶ್ವಾಸ ಗಳಿಸಿದ್ದ ಸಂಜೀವ ಮಠಂದೂರು ಅವರಿಗೆ ಟಿಕೆಟ್ ತಪ್ಪಿದ ಬಗ್ಗೆ ಸ್ಥಳೀಯ ಬಿಜೆಪಿಯಲ್ಲಿ ಬಹುದೊಡ್ಡ ಅಸಮಾಧಾನವಿದೆ. ಅದಕ್ಕೆ ಕಾರಣ ಯಾರು, ಅದೆಷ್ಟು ಕೋಟಿ ರೂಪಾಯಿಗಳ ಲೇವಾದೇವಿ ನಡೆದಿದೆ, ಸೀಟು ತಪ್ಪಿಸಲು ಯಾರು ಎಲ್ಲೆಲ್ಲಿ ದುಡ್ಡು ಕೊಟ್ಟಿದ್ದಾರೆ ಎನ್ನುವ ಬಗ್ಗೆ ಕೂಡಾ ಚರ್ಚೆ ನಡೆಯುತ್ತಿದೆ. ಅದಿರಲಿ, ಈಗಿನ ನಮ್ಮ ವಿಷಯ ಅದಲ್ಲ.
ಟಿಕೆಟ್ ತಪ್ಪಿಸಿದರು ಪಕ್ಷದ ಶಿಸ್ತಿನ ಕಾರ್ಯಕರ್ತನಾಗಿ ಸಂಜೀವ ಮಠಂದೂರು, ತನಗೆ ಟಿಕೆಟ್ ನೀಡದ ಬಗೆಗಿನ ಬೇಸರವನ್ನು ಒಂದೇ ದಿನದಲ್ಲಿ ಮರೆತು ಅಖಾಡಕ್ಕೆ ಧುಮುಕಿದ್ದಾರೆ. ಈಗ ಮುಂದೆ ನಿಂತು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಗೆಲುವಿಗೆ ಪ್ರಯತ್ನಿಸುತ್ತಿರುವುದು ಬಿಜೆಪಿಗೆ ಸಿಕ್ಕ ಆರಂಭಿಕ ದೊಡ್ಡ ಜಯ ಅಂತಲೇ ಹೇಳಬಹುದು. ‘ ಸೈಲೆಂಟ್ ವರ್ಕರ್ ‘ ಸಂಜೀವ ಮಠಂದೂರುರ ಮೇಲೆ ಅನುಕಂಪದ ಅಲೆ ಧಾರಾಳವಾಗಿ ಹರಿದಿದೆ. ಅದು ಬಿಜೆಪಿ ಅಭ್ಯರ್ಥಿಯ ಪಾಲಿಗೆ ಮತ್ತೊಂದು ವರದಾನ.
ಅರುಣ್ ಅವರು ಇವತ್ತು ಬಯಸುವ ಓಟುಗಳು ಸಂಘ ಪರಿವಾರದ ಮಿತ್ರ ಬಿಜೆಪಿಯ ಸಾಂಪ್ರದಾಯಿಕ ಓಟುಗಳು. ಇಂತಹ ಪ್ರತಿ ಓಟು ಚದುರಿದಷ್ಟೂ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಗೆಲುವಿಗೆ ಮತ್ತಷ್ಟು ಹತ್ತಿರವಾಗುತ್ತಾರೆ. ಆದರೆ ಹಾಗೆ ಚದುರಿ ಹೋಗಲು ಬಿಜೆಪಿ ಆಗಲಿ, ಆರೆಸ್ಸೆಸ್ ಆಗಲಿ ಬಿಡುತ್ತಾ ಅನ್ನೋದೇ ಪ್ರಶ್ನೆ. ಉತ್ತರವನ್ನು ಬಿಜೆಪಿ ಬಾಯಿಬಿಟ್ಟು ಕೊಡುತ್ತಿಲ್ಲ. ಆದರೆ ಇದಾಗಲೇ ಬೂತ್ ಮಟ್ಟದಲ್ಲಿ ಒಂದೊಂದು ಓಟನ್ನೂ ಅಮರಿ ಹಿಡಿಯಲು ಪರಿವಾರ ಸಜ್ಜಾಗಿದೆ. ಸಶಕ್ತ ಕಾರ್ಯಕರ್ತರ ತಂಡ ಗುಪ್ತವಾಗಿ ಕೆಲಸ ಶುರುಮಾಡಿದೆ. ಹಾಗಾಗಿ ಬಿಜೆಪಿ ಕಡೆಯಿಂದ ಹೆಚ್ಚಿನ ಓಟುಗಳು ಚದುರದಂತೆ ಬಿಜೆಪಿ ಎಚ್ಚರಿಕೆ ವಹಿಸಿದೆ. ಸದ್ಯಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಸಮ ಬಲದಲ್ಲಿದ್ದಾರೆ.
ಈ ಮೊದಲು ಅರುಣ್ ಕುಮಾರ್ ಪುತ್ತಿಲ ಅವರು, ನಾವು ಚುನಾವಣೆಯಲ್ಲಿ ಗೆದ್ದರೂ ಬೆಂಬಲಿಸುವುದು ಬಿಜೆಪಿಯನ್ನೆ ಎಂದು ಹೇಳಿದ್ದರು. ಆದರೆ ಬಿಜೆಪಿ ಮತಗಳು ಹಂಚಿ ಹೋದರೆ ಮೂರನೇ ಅಭ್ಯರ್ಥಿಗಳಿಗೆ ಜಯ ಸಲೀಸಾಗಲಿದೆ ಎನ್ನುವುದು ನಾಲ್ಕನೆಯ ಕ್ಲಾಸಿನ ಮಗುವಿಗೂ ಗೊತ್ತಿರುವ ಲೆಕ್ಕಾಚಾರ. ‘ ಪಾಲಿಟಿಕ್ಸ್ ಈಸ್ ದ ಗೇಮ್ ಆಫ್ ವೈಟಿಂಗ್ ‘ ಅನ್ನುವುದು ಸಂಜೀವಣ್ಣನಿಗೆ ಅರ್ಥ ಆಗಿರುವ ಕಾರಣವೇ ಅವರು ಕಳೆದ ಬಾರಿ ಶಾಸಕ ಆಗಿರೋದು. 22 ವರ್ಷಗಳ ಕಾಲ, ತಮ್ಮ ಹಳೆಯ ಮಾರುತಿ ಓಮ್ನಿ ಕಾರಿನ ಟೈರು 11 ನೆಯ ಬಾರಿ ಚೇಂಜ್ ಆದ ನಂತರವಷ್ಟೆ ಅವಕಾಶ ಆತನಿಗೆ ಲಭ್ಯ ಆದದ್ದು. ಅದನ್ನು ಅರುಣ್ ಪುತ್ತಿಲ ಅವರಿಗೂ ಅರ್ಥ ಮಾಡಿಸುವವರು ಈ ಸಲ ಬೇಕಾಗಿದೆ. ಇದಲ್ಲದೆ ಹಿಂದುತ್ವದ ತತ್ವದ ಮೇಲೆ, ಧರ್ಮದ ಆಧಾರದ ಓಟು ಕೇಳುವ – ಹಾಕುವ ಪುತ್ತೂರಿನಲ್ಲಿ ‘ ಜಾತಿ ‘ ವಿಷಯವನ್ನು ಎತ್ತಲಾಗಿದೆ. ಎಂದೂ ಇಲ್ಲದ ಜಾತಿ ರಾಜಕಾರಣ ವಿಷ್ಯ ಎತ್ತಿದ್ದು ಯಾರು ಮತ್ತು ಯಾಕೆ ? ಈ ಕಾರಣಕ್ಕೆ ಹೆಚ್ಚಿನವರು ಅರುಣ್ ಕುಮಾರ್ ಪುತ್ತಿಲ ಬಳಗದ ಮೇಲೆ ಮುನಿಸಿಕೊಂಡಿದ್ದಾರೆ.
‘ ಅಣ್ಣಾ, ಫೈಟ್ ಮಾಡೋಣ, ನಮ್ಮದೇ ಗೆಲುವು ‘ ಅನ್ನುವವರ ಸಲಹೆ ನಂಬಿಕೊಂಡು ಕೊನೆಗೆ ಅತ್ತ ಬಿಜೆಪಿಯೂ ಇಲ್ಲ, ಇತ್ತ ಸಂಘದ ಸಪೋರ್ಟ್ ಕೂಡಾ ಇಲ್ಲದಂತೆ ಅರುಣ್ ಗೆ ಆಗಬಾರದು. ದಕ್ಷಿಣ ಕನ್ನಡದಲ್ಲಿ ಈಗಲೂ ಮೋದಿಯೇ ಅಲ್ಟಿಮೇಟ್. ಮೋದಿ ವಿರುದ್ಧ ಮತಹಾಕಲು ಗಂಡ ಹೇಳಿದರೂ ಮನೆಯಾಕೆ ಕೇಳದ ಸನ್ನಿವೇಶ ಇದೆ. ಆ ಮಟ್ಟಿಗೆ ಮಹಿಳೆಯರು ಮೋದಿ ಬ್ರಾಂಡ್ ಮೇಲೆ ಭರವಸೆ ಇಟ್ಟಿದ್ದಾರೆ. ಅಲೆಗೆ ವಿರುದ್ಧವಾಗಿ ಈಜಲು ಅರುಣ್ ಹೊರಟಿದ್ದಾರೆ. ಆದರೆ ಅದಕ್ಕೆ ಬೇಕಿದ್ದ ತಯಾರಿ ಸಾಲದು. ಕನಿಷ್ಠ 3 ವರ್ಷದ ಹಿಂದಿನಿಂದಲೇ ಅವರು ಕ್ಯಾಂಪೇನ್ ಶುರುಮಾಡಬೇಕಿತ್ತು. ಈಗ ತುಂಬಾ ತಡವಾಗಿ ಹೋಗಿದೆ. ಗುಂಪಿನಲ್ಲಿ ‘ ಹೋ ‘ ಎಂದು ತನ್ನ ನಾಯಕನನ್ನು ಹುರಿದುಂಬಿಸುವ ವ್ಯಕ್ತಿ ಕೊನೆಗೆ ಕಷ್ಟಕಾಲದಲ್ಲಿ ಕೇವಲ ಅಸ್ಪಷ್ಟ ಮುಖವಷ್ಟೇ. ಎಲ್ಲವೂ ರಾಜಕಾರಣ ಎಂಬ ಬೃಹತ್ ಜಾಲದಲ್ಲಿ ಹೇಳ ಹೆಸರಿಲ್ಲದಂತೆ ಅದೃಶ್ಯವಾಗುತ್ತದೆ. ಹುಷಾರ್ ಅರುಣ್, ಹುಷಾರ್ ಪುತ್ತಿಲ !!