Karnataka Election 2023: ಬಿಜೆಪಿ ಹಾಲಿ ಶಾಸಕರಿಗೇಕೆ ಟಿಕೇಟ್ ನಿರಾಕರಣೆ? ಅಚ್ಚರಿಯ ಹೇಳಿಕೆ ನೀಡಿದ ಅಮಿತ್ ಶಾ!
BJP Sitting MLA : ಕರ್ನಾಟಕ ವಿಧಾನಸಭಾ(Karnataka Assembly Election)ಚುನಾವಣೆಗೆ ಮಾಸ್ಟರ್ ಪ್ಲಾನ್ ಮಾಡಿರುವ ಬಿಜೆಪಿ ಹಲವಾರು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿ ಬರೋಬ್ಬರಿ 72 ಹೊಸ ಮುಖಗಳಿಗೆ ಮಣೆಹಾಕಿದೆ. ಇದರಿಂದ ಶಾಸಕರ ಬಂಡಾಯದ ಪರ್ವ ಕೂಡ ಬಿಜೆಪಿಯಲ್ಲಿ ಏರ್ಪಟ್ಟಿದೆ. ಸದ್ಯ ಈ ಪ್ಲಾನ್ ನ ಮಾಸ್ಟರ್ ಮೈಂಡ್, ಬಿಜೆಪಿ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ(Amith sha) ಪ್ರತಿಕ್ರಿಯಿಸಿ ಟಿಕೆಟ್ ನಿರಾಕರಿಸಲು ಕಾರಣವೇನೆಂದು ತಿಳಿಸಿದ್ದಾರೆ.
ಹೌದು, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹಲವು ಮಂದಿ ಹಾಲಿ ಶಾಸಕರಿಗೆ (BJP Sitting MLA) ಟಿಕೆಟ್ ನಿರಾಕರಿಸಿರುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಿದ್ದು, ಪಕ್ಷದಲ್ಲಿ ಯುವ ಶಕ್ತಿಗೆ ಅವಕಾಶ ನೀಡುವುದಕ್ಕಾಗಿ ಕೆಲವು ಶಾಸಕರಿಗೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಟಿಕೆಟ್ ವಂಚಿತ ನಾಯಕರು ಪಕ್ಷ ತೊರೆಯುತ್ತಿರುವ ಸಂದರ್ಭದಲ್ಲಿ ಅಮಿತ್ ಶಾ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಶನಿವಾರ ಬೆಂಗಳೂರಿನಲ್ಲಿ ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಉಳಿದ ರಾಜ್ಯಗಳಲ್ಲಿ ಮಾಡಿದಂತೆ ಕರ್ನಾಟಕದಲ್ಲಿ ಅತಿ ಹೆಚ್ಚು ಬದಲಾವಣೆಯನ್ನು ನಾವು ಮಾಡಿಲ್ಲ. ಪಕ್ಷ ಪ್ರತಿ ಬಾರಿಯೂ ಹಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಈಗ ಕೈಬಿಟ್ಟಿರುವವರಲ್ಲಿ ಯಾವುದೇ ದೋಷಗಳಿಲ್ಲ. ಅವರೆಲ್ಲರೂ ಗೌರವಯುತವಾದ ನಾಯಕರಾಗಿದ್ದಾರೆ. ಹೊಸ ರಕ್ತ ಮತ್ತು ಹೊಸ ತಲೆಮಾರಿಗೆ ಅವಕಾಶ ನೀಡುವ ಸಲುವಾಗಿ ಕರ್ನಾಟಕದಲ್ಲಿ ಹೊಸಬರಿಗೆ ಅವಕಾಶ ನೀಡಲಾಗಿದೆ. ಪಕ್ಷ ಎಂದೆಂದೂ ಬದಲಾವಣೆಯಲ್ಲಿ ನಂಬಿಕೆ ಹೊಂದಿದೆ. ಪಕ್ಷ ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೊಸ ತಲೆಮಾರಿಗೆ ಅವಕಾಶ ಕೊಡಬೇಕಾಗುತ್ತದೆ. ಇದೊಂದು ಸಹಜ ಪ್ರಕ್ರಿಯೆ’ ಎಂದು ಹೇಳಿದರು.
ಇನ್ನು ಟಿಕೆಟ್ ನೀಡದೇ ಇರುವುದನ್ನು ಪ್ರತಿಭಟಿಸಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸೇರಿದಂತೆ ಅನೇಕ ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಾ ಜಗದೀಶ್ ಶೆಟ್ಟರ್ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ಭಾವಿಸಿದ್ದರೆ, ಕನಿಷ್ಠ ಅವರು ಸ್ವತಂತ್ರವಾಗಿ ಗೆಲ್ಲುವುದಿಲ್ಲ ಎಂಬುದು ಅರ್ಥ ಮಾಡಿಕೊಂಡು ಒಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೂ ಸ್ಪಷ್ಟವಾಗಿ ಹೇಳೆಬೇಕೆಂದರೆ ಜಗದೀಶ್ ಶೆಟ್ಟರ್ ನಮ್ಮ ಓಟ್ ಬ್ಯಾಂಕ್ ಅಲ್ಲ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಅಲ್ಲದೆ ಬಿಜೆಪಿ ತೊರೆದು ಬೇರೆ ಪಕ್ಷಕ್ಕೆ ವಲಸೆ ಹೋಗಿ ಸ್ಪರ್ಧೆ ಮಾಡಿದವರ ಪೈಕಿ ಹೆಚ್ಚಿನವರು ಚುನಾವಣೆ ಗೆದ್ದ ಇತಿಹಾಸ ಬಿಜೆಪಿಯಲ್ಲಿ ಇಲ್ಲ. ಕರ್ನಾಟಕದಲ್ಲೂ ಕೂಡ ಆ ಇತಿಹಾಸ ಪುನರಾವರ್ತನೆ ಆಗಲಿದೆ ನೋಡಿ ಎಂದು ತಿಳಿಸಿದರು. ಟಿಕೆಟ್ ನಿರಾಕರಿಸಿದವರಿಗೆ ಪಕ್ಷದ ನಾಯಕರು ಮಾಹಿತಿ ಮೊದಲೇ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಂತೆ ನಡೆಸಿಕೊಂಡಿಲ್ಲ. ಹಿಂದೆ ರಾಜೀವ್ ಗಾಂಧಿ ಅವರು ವಿಮಾನ ನಿಲ್ದಾಣದಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ… ಅವರಿಗೆ ಕುರ್ಚಿಯಿಂದ ಕೆಳಗಿಳಿಯುವಂತೆ ಸೂಚಿಸಿದ್ದರು. ನಮ್ಮಲ್ಲಿ ಆ ರೀತಿ ಇಲ್ಲ ಎಂದು ಸಮರ್ಥಿಸಿಕೊಂಡರು.