Kumaraswamy-Sumalatha: ನಿಮಗೆ, ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ ?: ಸುಮಲತಾಗೆ ಎಚ್ಡಿಕೆ ಎಮೋಷನಲ್ ಪ್ಲೇ ಮಾಡಿ ಪ್ರಶ್ನೆ
Kumaraswamy-Sumalatha : ಕಳೆದ ಲೋಕಸಭೆ ಚುನಾವಣೆಯಲ್ಲಿ ಹತ್ತಿಕೊಂಡು ಆನಂತರ ಬೂದಿ ಮುಚ್ಚಿದ ಕೆಂಡದಂತೆ ಅತ್ತ ಆರದೆಯೂ, ಇತ್ತ ಜ್ವಾಲೆಯಾಗಿ ಉರಿಯದೆಯೂ ಇದ್ದ ಸುಮಲತಾಗೆ ಮತ್ತು ಎಚ್ಡಿಕೆ (Kumaraswamy-Sumalatha) ಮಧ್ಯೆ ಇದ್ದ ವೈರತ್ವ ಇದೀಗ ವಿಧಾನಸಭಾ ಚುನಾವಣೆಯ ವೇಳೆ ಭುಗಿಲೇಳುತ್ತಿದೆ. ಈ ಚುನಾವಣೆಯಲ್ಲಿ ಮತ್ತೆ ಸುಮಲತಾ ಅಂಬರೀಷ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಮಧ್ಯೆ ವಾಗ್ದಾಳಿ ಆರಂಭವಾಗಿದ್ದು, ‘ನಾನು ನಿಮಗೆ, ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ?’ ಎಂದು ಸುಮಲತಾ ಅವರನ್ನು ಉದ್ದೇಶಿಸಿ ಕುಮಾರಸ್ವಾಮಿ ಎಮೋಷನಲ್ ಕಾರ್ಡ್ ಪ್ಲೇ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಹಮ್ಮಿಕೊಳ್ಳಲಾದ ಜೆಡಿಎಸ್ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
‘ ಮಂಡ್ಯದಲ್ಲಿ ಯಾವುದಾದರೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಪುಟ್ಟರಾಜು ಹೇಳಿದ್ದಾರೆ. ಮಂಡ್ಯ ಜನರ ಬಗ್ಗೆ ನನಗೆ ವಿಶ್ವಾಸ ಇದೆ. ಆದರೆ ಮಂಡ್ಯ ಜಿಲ್ಲೆಯಲ್ಲಿರುವ ಕೆಲ ಕುತಂತ್ರಿಗಳು ಅಷ್ಟು ಸುಲಭವಾಗಿ ಚುನಾವಣೆ ನಡೆಸಲು ಬಿಡುವುದಿಲ್ಲ. ಈಗಾಗಲೇ ಮಂಡ್ಯದಲ್ಲಿ ಅರ್ಜಿ ಹಾಕಲು ಮಹಾನ್ ಘಟಾನುಘಟಿ ನಾಯಕಿ ಸಿದ್ದವಾಗಿದ್ದಾರೆ. ಮಂಡ್ಯದಲ್ಲಿ ಸ್ವಾಭಿಮಾನ ಉಳಿದವರು ಅವರು ಮಾತ್ರ, ಇತ್ತೀಚೆಗೆ ಬಿಜೆಪಿ ಸೇರಿದವರೊಬ್ಬರು ಅರ್ಜಿ ಹಾಕಲು ತಯಾರಾಗಿದ್ದಾರೆ ‘ ಎಂದು ಎಚ್ಡಿ ಕುಮಾರಸ್ವಾಮಿಯವರು ಸುಮಲತಾ ಅವರನ್ನು ಮಾತಲ್ಲೇ ಹಂಗಿಸಿದ್ದಾರೆ.
‘ ನಾನು ಮಂಡ್ಯದಲ್ಲಿ ಸ್ಪರ್ಧಿಸುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಕಾರ್ಯಕರ್ತರು ಆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೇ. ಸುಮಲತಾ ಯಾಕೆ ಈ ಸವಾಲು ಹಾಕಿದ್ದಾರೆಯೋ ನನಗೆ ಗೊತ್ತಿಲ್ಲ. ನಾನು ನಿಂತರೆ ಚುನಾವಣೆಗೆ ಸ್ಪರ್ಧೆ ಮಾಡ್ತೀನಿ ಎಂದು ಹೇಳಿದ್ದೀರಲ್ಲ ಮೇಡಂ, ನಾನು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ? ‘ ಎಂದು ಸುಮಲತಾ ಅವರನ್ನು ಉದ್ದೇಶಿಸಿ ಕುಮಾರಣ್ಣ ಪ್ರಶ್ನೆ ಮಾಡಿದ್ದಾರೆ.
‘ ಮಂಡ್ಯ ಜಿಲ್ಲೆಯ ಜನತೆಗೆ ನಾನು ಕೈ ಮುಗಿದು ಮನವಿ ಮಾಡುವೆ. ಅನುಕಂಪಕ್ಕೆ ನಿಮ್ಮ ಹೃದಯ ಕರಗುತ್ತದೆ. ಭಾವನಾತ್ಮಕ ವಿಷಯಗಳು ಬಂದಾಗ ಹಣಕ್ಕೆ ನೀವು ಮಾರು ಹೋಗಲ್ಲ. ಮಂಡ್ಯ ಜನರ ಮೇಲೆ ನನಗೆ ಅಪಾರ ಗೌರವ ಇದೆ. ಕಾರ್ಯಕರ್ತರು ಮಂಡ್ಯದಲ್ಲಿ ಸ್ಪರ್ಧೆ ಮಾಡಲು ಪ್ರೀತಿಯಿಂದ ಕರೆಯುತ್ತಿದ್ದಾರೆ. ಆದರೆ ನಾನು ಸ್ಪರ್ಧೆ ಮಾಡಿದ್ರೆ ನನ್ನನ್ನು ಮುಗಿಸಲಿಕ್ಕೆ ತಯಾರಾಗಿದ್ದೇನೆ ಎಂದು ಸುಮಲತಾ ಅಂಬರೀಷ್ ಸವಾಲು ಹಾಕಿದ್ದಾರೆ. ನಾನು ಸವಾಲು ಹಾಕುವಷ್ಟು ದೊಡ್ಡ ಮನುಷ್ಯ ಅಲ್ಲ. ಅವರೆಲ್ಲ ಈಗ ತುಂಬಾ ಬೆಳೆದು ಬಿಟ್ಟಿದ್ದಾರೆ. ನಾನೊಬ್ಬ ಸಣ್ಣ ಪಕ್ಷದ ರೈತರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ. ಅವರ ಮಟ್ಟಕ್ಕೆ ನಾನು ಬೆಳೆದಿಲ್ಲ. ಅವರ ಮೇಲೆ ನಾನು ಸವಾಲು ಹಾಕಲು ಸಾಧ್ಯಾನಾ ? ‘ ಎಂದು ಕುಮಾರಸ್ವಾಮಿ ಕುಟುಕಿದ್ದಾರೆ.
ಈ ಸಂದರ್ಭದಲ್ಲಿ ಅವರು ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಉಲ್ಲೇಖಿಸದೆ ಪರೋಕ್ಷ ವಾಗ್ದಾಳಿ ನಡೆಸಿದರು. ನಾನು ಸಿಎಂ ಆಗುವುದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ನನ್ನ ಮೇಲಿದೆ. ರಾಜ್ಯದ ಹಳ್ಳಿಹಳ್ಳಿಗಳನ್ನು ಸುತ್ತಿ ಬಂದಿದ್ದೇನೆ. ಬೆಳಗಾವಿ, ಬಳ್ಳಾರಿಯಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲ ಅಂತಿದ್ದರು. ಇವತ್ತು ಅಂತಹ ಜಿಲ್ಲೆಯಲ್ಲೂ 2-3 ಸ್ಥಾನ ಗೆಲ್ಲುವ ಶಕ್ತಿ ಬಂದಿದೆ. ಇವತ್ತು ಒಬ್ಬರು ನನಗೂ ಒಂದು ಅವಕಾಶ ಕೊಡಿ ಅಂತಿದ್ದಾರೆ. ಕುಮಾರಸ್ವಾಮಿ, ದೇವೇಗೌಡರಿಗೆ ಅವಕಾಶ ಕೊಟ್ಟಿದ್ದೀರಿ. ನನಗೂ ಒಂದು ಅವಕಾಶ ಕೊಡಿ ಕೇಳ್ತಿದ್ದಾರೆ. ಅವರು ಅಧಿಕಾರ ಕೇಳ್ತಿರೋದು ಸಾವಿರಾರು ಕೋಟಿಯ ಲೂಲು ಮಾಲ್ ಕಟ್ಟೋಕಾ? ಅಥವಾ ಬಡವರ ಪರ ಅಧಿಕಾರ ಕೊಡೋಕಾ? ಇವರು ಯಾವತ್ತಾದ್ರೂ ಬಡವರ ಕೆಲಸ ಮಾಡಿದ್ದಾರಾ? ಆಡಳಿತ ಕೊಟ್ಟಿದ್ದಾರಾ? ‘ ಎಂದು ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಉಲ್ಲೇಖಿಸದೆ ಪರೋಕ್ಷ ವಾಗ್ದಾಳಿ ನಡೆಸಿದರು.