M B Patil: ವಿಧಾನಸಭೆ ಚುನಾವಣೆ ಬೆನ್ನಲ್ಲೇ ಎಂಬಿ ಪಾಟೀಲ್ ಚುನಾವಣಾ ವೆಚ್ಚಕ್ಕೆ 50 ಸಾವಿರ ರೂ. ಹಣ ನೀಡಿದ ರೈತ…! ಯಾಕೆ ಗೊತ್ತಾ?
M B Patil: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ರಾಜಕೀಯ ನಾಯಕರು ಅಖಾಡಕ್ಕೆ ಇಳಿದಿದ್ದಾರೆ. ಇದಲ್ಲದೆ ಮತದಾರರನ್ನು ಸೆಳೆಯಲು ಹಣ, ಬಟ್ಟೆ, ಸೀರೆ, ಕುಕ್ಕರ್ ಹಂಚುತ್ತಿದ್ದಾರೆ. ಈಗಾಗಲೇ ಜಿಲ್ಲೆಗಳಲ್ಲಿ ಬಹುತೇಕ ಚೆಕ್ ಪೋಸ್ಟ್ ತೆರೆದಿದ್ದಾರೆ. ಹೀಗಾಗಿ ಎಲ್ಲಾ ಕಡೆ ಕಾರುಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.
ಆದರೆ ವಿಜಯಪುರ ಜಿಲ್ಲೆ ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ (M B Patil) ಗೆ ಕ್ಷೇತ್ರದ ಮತದಾರನೋರ್ವ 50 ಸಾವಿರ ಹಣ ದೇಣಿಗೆ ನೀಡಿದ್ದಾರೆ.
ಹೌದು ಇಂದು ಬೆಳಗ್ಗೆ ವಿಜಯಪುರ ನಗರದಲ್ಲಿನ ಎಂ.ಬಿ ಪಾಟೀಲ್ ನಿವಾಸಕ್ಕೆ ಆಗಮಿಸಿದ ಬಬಲೇಶ್ವರ ತಾಲೂಕಿನ ಸಂಗಾಪೂರ ಎಸ್.ಎಚ್ ಗ್ರಾಮದ ಶೇಖು ಗಲಗಲಿ ಎಂಬ ರೈತ ಎಂ.ಬಿ ಪಾಟೀಲ್ ಗೆ ಚುನಾವಣೆ ವೆಚ್ಚಕ್ಕೆ 50 ಸಾವಿರ ಹಣ ಬಳಕೆ ಮಾಡಿಕೊಳ್ಳಬೇಕೆಂದು ಶೇಖು ಗಲಗಲಿ ಚೆಕ್ ನೀಡಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ‘ನಮ್ಮ ಭಾಗದಲ್ಲಿ ಮೊದಲು ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿತ್ತು. ಕೆರೆಗಳಿಗೂ ನೀರು ಸಿಗುತ್ತಿರಲಿಲ್ಲ. ಎಂ.ಬಿ ಪಾಟೀಲರು ಜಲಸಂಪನ್ಮೂಲ ಸಚಿವರಾದ ನಂತರ ನಮ್ಮ ಭಾಗದಲ್ಲಿ ಸಂಪೂರ್ಣ ನೀರಾವರಿ ಮಾಡಿ ಎಲ್ಲವನ್ನು ಸಮೃದ್ಧಿ ಮಾಡಿದ್ದಾರೆ. ಈಗ ಪ್ರತಿ ಎಕರೆಗೆ ಕನಿಷ್ಠ 50 ಸಾವಿರದಂತೆ ಬೆಳೆ ಬೆಳೆಯುತ್ತಿದ್ದೇವೆ. ಎಲ್ಲ ಗ್ರಾಮಗಳು ಶ್ರೀಮಂತವಾಗಿವೆ. ಆರ್ಥಿಕವಾಗಿ ಅಭಿವೃದ್ಧಿಯಾಗಿವೆ. ಪ್ರತಿಯೊಂದು ಊರುಗಳ ಚಿತ್ರಣ ಬದಲಾಗಿದೆ. ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಹಲವರು ಕಾರುಗಳನ್ನು ಖರೀದಿಸಿದ್ದಾರೆ. ಈ ಭಾಗದಲ್ಲಿ ಮತ್ತಷ್ಟು ಅಭಿವೃದ್ಧಿಯಾಗಬೇಕು ಎಂದು ಹೇಳಿದ್ದಾರೆ.