Bhagirathi Murulya: ಸುಳ್ಯದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಎಂಬ ಕಾಡ ಕಮಲ ಪುಷ್ಪ: ಕರ್ನಾಟಕದ ಮುರ್ಮು ಎನ್ನಲು ಇದೆ ಅದೊಂದು ಕಾರಣ !
ಭಾಗೀರಥಿ ಮುರುಳ್ಯ ಆಯ್ಕೆ ಮಾಡಿ ಘನತೆ ಹೆಚ್ಚಿಸಿಕೊಂಡ ಬಿಜೆಪಿ
Bhagirathi Murulya: ಆಕೆ ಕೂಲಿ ಕೆಲಸದ ಹೆಂಗಸು. ಇವತ್ತು ಆಕೆ ಸುಳ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಭಾಗೀರಥಿ ಮುರುಳ್ಯ (Bhagirathi Murulya) ಕೇವಲ ಇವರ ಪಕ್ಷ ನಿಷ್ಠೆ, ರಾಷ್ಟ್ರೀಯ ವಿಚಾರಧಾರೆಯ ಸೆಳೆತ ಅವರನ್ನು ಎತ್ತರದ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎಂದು ಮಾತ್ರ ಹೇಳಿದರೆ ಅಷ್ಟೇನೂ ಸಮಂಜಸ ಆಗದೇನೋ. ಅದಕ್ಕೂ ಇದೆ ಒಂದು ಬಲವಾದ ಕಾರಣ !
ಇವತ್ತು ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮುಂತಾದವರು ಭಾಗೀರಥಿ ಅವರ ಆಯ್ಕೆಯನ್ನು ಪಕ್ಷದ ಹಲವು ವೇದಿಕೆಯಲ್ಲಿ ಬೆಂಬಲಿಸಿ, ಭಾಗೀರಥಿ ಅವರ ಪಕ್ಷ ನಿಷ್ಟೆ ಹಾಗೂ ಸೇವೆಯನ್ನು ಉದಾಹರಣೆಯಾಗಿ ನೀಡುತ್ತಾರೆ. ಇನ್ನೊಬ್ಬರಿಗೆ ಉದಾಹರಣೆಯಾಗಿ ಆಕೆ ಬೆಳೆದಳಲ್ಲ, ಅದರ ಹಿಂದೆ ಇದೆ, ಆಕೆಯ ಮತ್ತು ಆಕೆಯ ಇಡೀ ಕುಟುಂಬದ ಕಣ್ಣೀರ ಕಥೆ !
ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ದಲಿತ ಸಮುದಾಯದಲ್ಲಿ ಆದಿದ್ರಾವಿಡ ಸಮುದಾಯ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಸಮುದಾಯವಾಗಿದ್ದು, ರಾಜಕೀಯ ಸ್ಥಾನಮಾನದ ವಿಚಾರದಲ್ಲಿ ಅಷ್ಟೇ ಹಿಂದೆ ಉಳಿದಿದೆ. ಸಮುದಾಯದವರ ಒಗ್ಗಟ್ಟಿನ ಕೊರತೆ ಇದಕ್ಕೆ ಮೇಲ್ನೋಟಕ್ಕೆ ಕಾರಣವಾಗಿದ್ದರೂ ಮೇಲ್ವರ್ಗದ ಜತೆ ಹೋರಾಡಿ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆರಲು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳು ಪ್ರಮುಖ ಕಾರಣಗಳು.
ಸುಮಾರು 4 ದಶಕಗಳ ಹಿಂದೆ ಎಲ್ಲೆಡೆಯೂ ಬಲಿಷ್ಟವಾಗಿದ್ದ ಕಾಂಗ್ರೆಸ್ ಆಡಳಿತವಿದ್ದ ಕಾಲ ಅದು. ಆ ಸಮಯದಲ್ಲಿಯೇ ಭಾಗೀರಥಿ ಮುರುಳ್ಯ ಅವರ ತಂದೆ, ತಾಯಿ ಬಿಜೆಪಿಯಲ್ಲಿ ಸಕ್ರೀಯರಾಗಿದ್ದವರು. ಬದುಕಿನ ಬಂಡಿ ಎಳೆಯಲು ಈ ದಂಪತಿಗಳು ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾಗ ಇವರು ಕೆಲಸ ಮಾಡುವ ಮನೆಯವರಾದ ದಿ.ಮುತ್ತಪ್ಪ ಗೌಡ ಗೋಳ್ತಿಲ ಅವರು ರಾಷ್ಟ್ರೀಯ ವಿಚಾರಧಾರೆಗಳನ್ನು ಬೆಳೆಸಿಕೊಂಡಿದ್ದವರು. ಜತೆಗೆ ಬಿಜೆಪಿ ಪಕ್ಷದ ಪರವಾಗಿದ್ದವರು. ಸುತ್ತಲಿನ ಎಲ್ಲಾ ವರ್ಗದ ಜನ ಮಾತ್ರವಲ್ಲ, ತಮ್ಮ ಆದಿ ದ್ರಾವಿಡ ಸಮುದಾಯದ ಎಲ್ಲರೂ ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ಅದೊಂದು ಮನೆ ಮಾತ್ರ ರಾಷ್ಟ್ರೀಯತೆಯನ್ನು ಮನದಲ್ಲಿ ತುಂಬಿಕೊಂಡು ಒಂಟಿಯಾಗಿ ನಿಂತಿತ್ತು. ಆ ಸಮಯದಿಂದಲೇ ಭಾಗೀರಥಿ ಮುರುಳ್ಯ ಅವರ ಮನೆ ಬಿಜೆಪಿ ಮನೆಯಾಗಿ ಗುರುತಿಸಿಕೊಂಡಿತ್ತು. ಅದೇ ಕಾರಣಕ್ಕೆ ಆ ಒಂದು ಮನೆಗೆ ಯಾವತ್ತೂ ಸೌಲಭ್ಯಗಳು ಸಿಕ್ಕಿರಲಿಲ್ಲ.
ತಮ್ಮ ಬಾಲ್ಯದ ದಿನಗಳಲ್ಲಿ ಬೀಸಿದ ಬಿರುಗಾಳಿಗೆ ತಮ್ಮ ಮನೆಯನ್ನು ಕಳೆದುಕೊಂಡಾಗಲೂ ‘ ಇದು ಬಿಜೆಪಿ ಮನೆ ‘ ಎಂಬ ಒಂದೇ ಕಾರಣಕ್ಕಾಗಿ ಕಾಂಗ್ರೆಸ್ ಆಡಳಿತದವರು ಮನೆ ನಿರ್ಮಾಣಕ್ಕೆ ಅನುದಾನ ನೀಡದೆ ಸತಾಯಿಸಿದರು. ಹಾಕಿದ ಅರ್ಜಿಗಳು ಕಸದ ಬುಟ್ಟಿ ಸೇರುತ್ತಿದ್ದವು. ಆದರೆ ಆಕೆಯ ತಂದೆ ಗುರುವ ಮತ್ತು ತಾಯಿ ಕೊರಗು ದಿ.ಮುತ್ತಪ್ಪ ಗೌಡ ಗೋಳ್ತಿಲರ ಸ್ವಾಭಿಮಾನದ ಪಾಠ ಕೇಳಿ ಬೆಳೆದವರು. ಕೂಲಿ ಮಾಡಿ ದಿನದ ಬದುಕು ಸವೆಸುವ ಬಡತನದಲ್ಲಿದ್ದರೂ ಎಲ್ಲಾ ಮಕ್ಕಳಿಗೂ ಸ್ವಾಭಿಮಾನದ ಬದುಕು ಕಲಿಸಿದವರು ದಿ.ಗುರುವ-ಕೊರಗು ದಂಪತಿ. ‘ ಯಾವತ್ತೂ ಯಾರಿಗೂ ಕೈ ಚಾಚಬೇಡ, ಯಾವತ್ತಿಗೂ ಬೇಡಿ ತಿನ್ನಬೇಡ : ದುಡಿದು ತಿನ್ನು ‘ ಎಂದ ಮಾತಿನಂತೆ ಸ್ವಾಭಿಮಾನಿಯಾಗಿ ತಾವೇ ಕಷ್ಟಪಟ್ಟು ಮನೆಯ ಮಾಡಿನ ಮೇಲೆ ಅಡಿಕೆಯ ಸೋಗೆ ಸಿಕ್ಕಿಸಿದರು. ಹಾಗೆ ಮುರುಕು ಸೋರುವ ಮನೆ ನಿರ್ಮಿಸಿ ಬದುಕು ಸವೆಸಿದವರು ಇವತ್ತಿನ ಸುಳ್ಯದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಲ್ಯ ಅವರ ಕುಟುಂಬ.
ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಬಿಜೆಪಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದ ಸಮಯದಲ್ಲಿಯೇ ಭಾಗೀರಥಿ ಅವರ ತಂದೆ ಗುರುವ ಅವರು ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡವರು. ಭಾಗೀರಥಿ ಅವರ ತಾಯಿ ಕೊರಗು ಅವರು ಮಹಿಳಾ ಮೀಸಲಾತಿ ಬಂದ ಸಮಯದಲ್ಲಿ ಸ್ಪರ್ಧಿಸಿ 7 ಮತಗಳ ಅಂತರದಿಂದ ಸೋಲು ಕಂಡವರು.
ಇವರ ಮಾರ್ಗದರ್ಶನದಲ್ಲಿ ಬೆಳೆದ ಭಾಗೀರಥಿ ಅವರು ಕೂಲಿ ಕಾರ್ಮಿಕೆಯಾಗಿ, ಗೌರವ ಶಿಕ್ಷಕಿಯಾಗಿ, ಟೈಲರಿಂಗ್, ಹೈನುಗಾರಿಕೆ ಮಾಡಿಕೊಂಡು ಸ್ವಾಭಿಮಾನದ ಬದುಕು ರೂಪಿಸಿಕೊಂಡವರು. ಜತೆಗೆ, ರಾಷ್ಟ್ರೀಯ ಸೇವಿಕಾ ಸಮಿತಿಯ ಸಕ್ರೀಯ ಕಾರ್ಯಕರ್ತೆಯಾಗಿ ಮಹಿಳೆಯರನ್ನು ರಾಷ್ಟ್ರ ಜಾಗೃತಿಯ ಕಾರ್ಯದಲ್ಲಿ ತೊಡಗಿಸಿಕೊಂಡವರು. ಬರಿಗಾಲಿನಲ್ಲಿ ನಡೆದುಕೊಂಡೇ ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸಿ ಪಕ್ಷದಲ್ಲಿ ಕೆಲಸ ಮಾಡಿದರು.
ಈ ಕಾರ್ಯದ ಫಲವಾಗಿ ಸುಳ್ಯ ತಾ.ಪಂ.ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆದುಕೊಂಡರು. ಬಳಿಕ ಜಿ.ಪಂ.ಚುನಾವಣೆಯಲ್ಲಿ ಜಾಲ್ಸೂರು ಕ್ಷೇತ್ರದ ಜಿ.ಪಂ.ಸದಸ್ಯೆಯಾಗಿ ಆಯ್ಕೆಯಾಗಿ ಕೆಲಸ ಮಾಡಿದರು.
ಇವರಿಗೆ ಇಬ್ಬರು ಅಣ್ಣಂದಿರು, ಓರ್ವ ಅಕ್ಕ, ಓರ್ವ ತಂಗಿ ಇದ್ದಾರೆ. ಇವರ ತಂಗಿ ಜಾನಕಿ ಮುರುಳ್ಯ ಅವರು ಮುರುಳ್ಯ ಗ್ರಾ.ಪಂ.ನ ಅಧ್ಯಕ್ಷೆಯಾಗಿದ್ದಾರೆ. ಅಕ್ಕ ಹಾಗೂ ಅಣ್ಣಂದಿರಿಗೆ ವಿವಾಹವಾಗಿದೆ. ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಿಕೆಯ ಕಾರಣದಿಂದ ಭಾಗೀರಥಿ ಮುರುಳ್ಯ ಅವಿವಾಹಿತರಾಗಿಯೇ ಈಗಲೂ ಉಳಿದುಕೊಂಡಿದ್ದಾರೆ. ಇದೆಲ್ಲಾ ಕಾರಣಕ್ಕಾಗಿಯೇ ಹೇಳಿದ್ದು: ಈಕೆ ಕರ್ನಾಟಕದ ದ್ರೌಪದಿ ಮುರ್ಮು. ನಮ್ಮ ಕನ್ನಡದ ಕಾಡ ಕಮಲ ಪುಷ್ಪ. ಈಕೆಯನ್ನು ಆಯ್ಕೆ ಮಾಡಿ ಸುಳ್ಯದ ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ, ಈಕೆಯ ಅಭ್ಯರ್ಥಿ ಆಯ್ಕೆಯಿಂದಾಗಿ ಬಿಜೆಪಿಯ ಘನತೆ-ಗೌರವ ಹೆಚ್ಚಾಗಿದೆ !