Y S V Datta: ಮತ್ತೆ JDS ಗೂಡು ಸೇರಿದ ವೈ ಎಸ್ವಿ ದತ್ತ! ಕಡೂರಿನಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿಯಲಿದ್ದಾರೆ ಗಣಿತ ಮೇಷ್ಟ್ರು!
Y S V Datta :ಮಾಜಿ ಶಾಸಕ ವೈ.ಎಸ್.ವಿ ದತ್ತ (Y S V Datta) ಅವರು ಜೆಡಿಎಸ್ ತೊರೆದು, ಕಾಂಗ್ರೆಸ್ ಸೇರಿದರೂ ಕೂಡ ಕಡೂರು ಕ್ಷೇತ್ರದ ಟಿಕೆಟ್ ನಿಂದ ವಂಚಿತರಾಗಿದ್ದರು. ಈ ನಡುವೆ ಅಭಿಮಾನಿಗಳ ಕೋರಿಕೆಯ ಮೇರೆಗೆ ಪಕ್ಷೇತರವಾಗಿ ಸ್ಪರ್ಧಿಸಲು ಮುಂದಾಗಿ, ಈ ಕುರಿತು ಘೋಷಣೆಯನ್ನೂ ಮೊಳಗಿಸಿದ್ದರು. ಆದರೀಗ ಹಲವು ಬೆಳವಣಿಗೆಗಳಿಂದಾಗಿ ದತ್ತ ಅವರು ಮರಳಿ ಜೆಡಿಎಸ್‌ಗೆ (JDS) ಬಂದಿದ್ದು, ಕಡೂರಿನಲ್ಲಿ (Kaduru) ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಹೌದು, ಕಾಂಗ್ರೆಸ್‌ನಿಂದ (Congress) ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ವೈಎಸ್‌ವಿ ದತ್ತಾ (YSV Datta) ಮರಳಿ ಜೆಡಿಎಸ್ (JDS) ಮನೆಯ ಬಾಗಿಲನ್ನು ತಟ್ಟಿದ್ದಾರೆ. ಕಾಂಗ್ರೆಸ್ ನಿಂದ ಟಿಕೆಟ್ ಸಿಗದೆ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ್ದ ದತ್ತಾ ಅವರು ಇಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಅವರ ಸಮ್ಮುಖದಲ್ಲಿ ಜೆಡಿಎಸ್ ಗೆ ವಾಪಸ್ಸಾದರು.
ವೈ.ಎಸ್.ವಿ ದತ್ತ ಮನೆಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D.Revanna), ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಭೇಟಿ ನೀಡಿ ಚರ್ಚಿಸಿದ ಬಳಿಕ ಕಡೂರಿನಲ್ಲಿ ದತ್ತ ಸ್ಪರ್ಧಿಸಲಿದ್ದಾರೆ ಎಂದು ರೇವಣ್ಣ ಘೋಷಿಸಿದ್ದಾರೆ. ಅಲ್ಲದೆ ದತ್ತ ಅವರು ಇದೇ 18ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಆಗ ಎಷ್ಟೇ ಕಷ್ಟ ಆದರೂ ಸರಿ ನಾನು ಬಂದೇ ಬರುತ್ತೇನೆ ಎಂದು ಹೆಚ್.ಡಿ.ದೇವೇಗೌಡರು ತಿಳಿಸಿದ್ದಾರೆ ಎಂದು ರೇವಣ್ಣ ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ಕಡೂರಿನ ಜೆಡಿಎಸ್ ಅಭ್ಯರ್ಥಿಯಾಗಿ ವೈ.ಎಸ್.ವಿ. ದತ್ತಾ ಸ್ಪರ್ಧಿಸಲಿದ್ದಾರೆ. ನಮ್ಮ ಕುಟುಂಬ, ಪಕ್ಷ ದತ್ತ ಅವರ ಜೊತೆ ಇದ್ದು, ನಾಮಪತ್ರ ಸಲ್ಲಿಸುವಾಗ ಖುದ್ದು ಹಾಜರಿರುವುದಾಗಿ ತಿಳಿಸಿದರು. ವೈ.ಎಸ್. ವಿ. ದತ್ತಾ ಮಾತನಾಡಿ, ದೇವೇಗೌಡರು ಮತ್ತು ನನ್ನ ನಡುವಿನ ಸಂಬಂಧ ರಾಜಕೀಯವನ್ನು ಮೀರಿದ್ದು ಎಂದು ಭಾವುಕರಾದರು.
ಅಂದಹಾಗೆ ಕಡೂರು ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್‌ನಿಂದ ಧನಂಜಯ್ ಅವರನ್ನು ಅಧಿಕೃತಗೊಳಿಸಲಾಗಿತ್ತು. ಆದರೆ ಈಗ ದತ್ತ ಅವರಿಗೆ ಟಿಕೆಟ್ ಎಂದು ಘೋಷಿಸುವ ಮೂಲೀ ಧನಂಜಯ್ ಅವರಿಗೆ ಕೊಕ್ ನೀಡಲಾಗಿದೆ.