Ex CM Siddaramaiah : ಸಿಎಂ ಆಗುತ್ತಿರಲಿಲ್ಲ, ಕುರಿ ಮೇಯಿಸುತ್ತಿದ್ದೆ: ಸಿದ್ದರಾಮಯ್ಯ ಹೀಗೆ ಹೇಳಿದ್ಯಾಕೆ ?
Ex CM Siddaramaiah : ಅವರು ಇಲ್ಲದೆ ಹೋಗಿದ್ದರೆ ನಾನು ಕುರಿ ಕಾಯೋ ಕೆಲಸ ಮಾಡುತ್ತಿದ್ದೆ ಎಂದಿದ್ದಾರೆ ಮಾಜಿ ಸಿಎಂ (Ex CM Siddaramaiah) ಸಿದ್ದರಾಮಯ್ಯನವರು. ಅವರು ಹೀಗೆ ಅಂದದ್ದು ಯಾಕೆ ಗೊತ್ತೇ ? ಅದಕ್ಕೂ ಒಂದು ಕಾರಣ, ಸಂದರ್ಭ ಇದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನೆಯ ಸಂವಿಧಾನ ಜಾರಿಗೆ ಬರದೆ ಇದ್ದಿದ್ದರೆ ನಾನು ಮುಖ್ಯಮಂತ್ರಿಯಾಗುತ್ತಿರಲಿಲ್ಲ, ಎಲ್ಲೋ ಊರಲ್ಲಿ ಕುರಿ ಮೇಯಿಸುತ್ತಿದ್ದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಸಂವಿಧಾನ ಶಿಲ್ಪಿಗೆ ಸಿದ್ದರಾಮಯ್ಯ ಗೌರವ ನಮನ ಸಲ್ಲಿಸಿದ್ದು ಅವರು ಅಂಬೇಡ್ಕರ್ ಅವರ ಸಿದ್ದಾಂತವನ್ನು ಹೊಗಳಿದ್ದಾರೆ.
ಈ ಸಂದರ್ಭ ಟ್ವೀಟ್ ಮಾಡಿರುವ ಅವರು, ‘ ಮತ್ತೆ ಮತ್ತೆ ಹೇಳುತ್ತೇನೆ, ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನೆಯ ಸಂವಿಧಾನ ಜಾರಿಗೆ ಬರದೆ ಇದ್ದಿದ್ದರೆ ನಾನು ಮುಖ್ಯಮಂತ್ರಿಯಾಗುತ್ತಿರಲಿಲ್ಲ, ಊರಲ್ಲಿ ಕುರಿ ಮೇಯಿಸುತ್ತಿದ್ದೆ. ನನ್ನ ರಾಜಕೀಯ ಬದುಕು ಬಾಬಾ ಸಾಹೇಬರ ಋಣ. ಈ ಋಣ ಸಂದಾಯಕ್ಕೆ ನನ್ನ ರಾಜಕೀಯ ಮುಡಿಪು. ಮಹಾಗುರುವಿಗೆ ನಮನಗಳು ‘ ಎಂದು ಹೇಳಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಯ ಪ್ರತಿರೂಪವಾಗಿರುವ ಸಂವಿಧಾನಕ್ಕೆ ಎದುರಾಗಿರುವ ಬೆದರಿಕೆಯ ವಿರುದ್ಧ ಹೋರಾಡುವುದೇ ಸಂವಿಧಾನ ಶಿಲ್ಪಿಗೆ ನಾವು ಸಲ್ಲಿಸುವ ಅತ್ಯುನ್ನತ ಗೌರವ. ಈ ಹೋರಾಟಕ್ಕೆ ಬಾಬಾಸಾಹೇಬರ ಚಿಂತನೆಗಳು ನಮ್ಮ ಆಯುಧವಾಗಲಿ ಎಂದು ಸಿದ್ದು ಹೇಳಿದ್ದಾರೆ.
ನಮ್ಮ ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವ ಸ್ಥಾಪನೆಯಾಗದೆ ರಾಜಕೀಯ ಪ್ರಜಾಪ್ರಭುತ್ವ ಬಾಳಲಾರದು ಎಂಬ ಬಿ.ಆರ್.ಅಂಬೇಡ್ಕರರ ಎಚ್ಚರಿಕೆಯ ಸಂದೇಶವನ್ನು ನಾನು ಮಂಡಿಸಿರುವ ಹದಿಮೂರು ಬಜೆಟ್ ಗಳಲ್ಲಿ ನಾನು ಪಾಲಿಸಿದ್ದೇನೆ. ಇದು ನಾನು ಬಾಬಾ ಸಾಹೇಬರಿಗೆ ಸಲ್ಲಿಸಿದ ಗೌರವವೂ ಹೌದು ಎಂದು ಅವರು ತಿಳಿಸಿದ್ದಾರೆ.
ನಿರ್ಲಕ್ಷ್ಯ, ತುಚ್ಛೀಕರಣ, ದೈವೀಕರಣದ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ದಮನಿಸಲು ಪ್ರಯತ್ನಿಸಿ ವಿಫಲರಾದ ಕೋಮುವಾದಿ ಶಕ್ತಿಗಳು ಈಗ ಬಾಬಾಸಾಹೇಬರನ್ನು ಆಪೋಶನ ತೆಗೆದುಕೊಂಡು ತಮ್ಮವರನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಹುನ್ನಾರದ ಬಗ್ಗೆ ನಾವು ಎಚ್ಚರವಾಗಿರಬೇಕು ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದ್ದಾರೆ.
https://twitter.com/siddaramaiah/status/1646720813935243264/photo/1
ಇದನ್ನು ಓದಿ : Karnataka Election: ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವುದು ಹೇಗೆ? ಸಂಪೂರ್ಣ ವಿವರ ಇಲ್ಲಿದೆ