D K Shivkumar: ಸಿಎಂ ಸ್ಥಾನವನ್ನು ‘ಅವರಿಗೆ’ ಮಾತ್ರ ಬಿಟ್ಟುಕೊಡುತ್ತೇನೆ ಎಂದ ಡಿಕೆಶಿ! ಹಾಗಿದ್ರೆ ಯಾರು ಆ ಪ್ರಭಾವಿ ನಾಯಕ!

D K Shivkumar :ರಾಜ್ಯದಲ್ಲಿ ಚುನಾವಣೆ ಮುಂಚಿತವಾಗಿಯೇ ಮುಂದಿನ ಸಿಎಂ(CM) ಯಾರು ಎಂಬ ವಿಚಾರ ಗರಿಗೆದರಿದೆ. ಎಲ್ಲಾ ಪಕ್ಷಗಳೊಳಗೆ ಹಲವಾರು ಆಕಾಂಕ್ಷಿಗಳೂ ಹುಟ್ಟಿಕೊಂಡಿದ್ದಾರೆ. ಆದರೆ ಇದು ಕಾಂಗ್ರೆಸ್(Congress) ನಲ್ಲಿ ತುಸು ಹೆಚ್ಚೆನ್ನಬಹುದು. ಯಾಕೆಂದರೆ ಕೆಪಿಸಿಸಿ(KPCC) ಅಧ್ಯಕ್ಷ ಡಿಕೆ ಶಿವಕುಮಾರ್(D K Shivkumar) ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಈಗಾಗಲೇ ಈ ಇಂಗಿತವನ್ನು ವ್ಯಕ್ತಪಡಿಸಿ, ಬಹಿರಂಗವಾಗಿ ತಮ್ಮ ಆಸೆಗಳನ್ನು ಹೊರಹಾಕಿದ್ದಾರೆ. ಆದರೀಗ ಇಲ್ಲೊಂದು ಮಹತ್ವದ ಬೆಳವಣಿಗೆ ಆಗಿದೆ. ಏನೆಂದರೆ ಇಷ್ಟು ದಿನ ಸಿಎಂ ಆಗಲೇಬೇಕೆಂದು ಹಟ ಹಿಡಿದಿದ್ದ ಡಿಕೆಶಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ರೆಡಿ ಇದ್ದೇನೆ ಎಂದು ತಿಳಿಸಿದ್ದಾರೆ.

ಹೌದು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ದೇಶದ ಆಲ್‌ ಇಂಡಿಯಾ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಅಧ್ಯಕ್ಷ ಸ್ಥಾನಕ್ಕೇರಿರುವ ಜನಪ್ರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬಯಸಿದರೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಾಗಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖರ್ಗೆ ಅವರು ಈ ಹುದ್ದೆಯನ್ನು ಬಯಸುವುದಾದರೆ ನಾನು ರೇಸ್‌ನಿಂದ ಹಿಂದೆ ಸರಿಯುತ್ತೇನೆ ಎಂದಿದ್ದಾರೆ.

ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ “ಮಲ್ಲಿಕಾರ್ಜುನ ಖರ್ಗೆ ಅವರು ಅತ್ಯಂತ ಜನಪ್ರಿಯ ನಾಯಕ. ಕಾಂಗ್ರೆಸ್‌ನ ಅತ್ಯಂತ ಹಿರಿಯ ನಾಯಕರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ. ಪಕ್ಷದ ಬೆಳವಣಿಗೆಯಲ್ಲಿ ಅವರ ಕೊಡುಗೆ ತುಂಬಾ ದೊಡ್ಡದು. ನನಗಿಂತಲೂ 20 ವರ್ಷಗಳ ಕಾಲ ಹಿರಿಯ ರಾಜಕಾರಣಿ. ಅವರು ಶಾಸಕಾಂಗ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದ ಕೆಲಸಕ್ಕೆ ಮುಂದಾದವರು. ಹೀಗಾಗಿ ಖರ್ಗೆಯವರು ಬಯಸಿದ್ರೆ ನಾನು ನನ್ನ ಅವಕಾಶ ಬಿಟ್ಟು ಕೊಡ್ತೀನಿ. ಅವರ ಕೈಕೆಳಗೆ ಕೆಲಸ ಮಾಡಲು ಸಿದ್ಧನಿದ್ದೇನೆ” ಎಂದು ಹೇಳಿದರು.

ಅಲ್ಲದೆ “ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಆಗಿದ್ದಾಗ ಸೋನಿಯಾ ಗಾಂಧಿಯವರಿಗೆ ಸರ್ಕಾರ ರಚನೆಗೆ ಆಹ್ವಾನ ಕೊಟ್ಟರು. ಪ್ರಧಾನಿ ಆಗುವ ಅವಕಾಶ ಇದ್ದರೂ ಸೋನಿಯಾಗಾಂಧಿಯವರು ಅದನ್ನು ತ್ಯಾಗ ಮಾಡಿದರು. ಇದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮೊದಲು ತಿಳಿದುಕೊಳ್ಳಲಿ. ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಈ ದೇಶಕ್ಕೆ ಸಾಕಷ್ಟು ತ್ಯಾಗ ಮಾಡಿದ್ದಾರೆ. ಸಿ ಟಿ ರವಿ ಅವರು ಇಂತಹ ಒಂದು ತ್ಯಾಗವನ್ನು ಪಂಚಾಯತಿ ಮಟ್ಟದಲ್ಲಿಯೂ ಮಾಡಿಲ್ಲ” ಎಂದು ಟೀಕೆ ಮಾಡಿದರು

ಇನ್ನು ಈ ಸಿಎಂ ವಿಚಾರವಾಗಿ ಡಿ.ಕೆ. ಶಿವಕುಮಾರ್‌ ಅವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಪ್ರಯತ್ನ ನಡೆಸಿದರೇ ಎನ್ನುವ ಗುಮಾನಿ ಮೂಡಿದೆ. ಈಗಲೇ ಸಿದ್ದರಾಮಯ್ಯ ಮತ್ತು ಡಿಕೆಶಿ ಸಿಎಂ ಆಕಾಂಕ್ಷಿಗಳಾಗಿದ್ದಾರೆ. ಒಂದೊಮ್ಮೆ ಕಾಂಗ್ರೆಸ್‌ ಗೆದ್ದರೆ ಡಿ.ಕೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರು ಸಿಎಂ ಹುದ್ದೆಗಾಗಿ ಪರಸ್ಪರ ಬಡಿದಾಡುವುದು ಖಚಿತವಾಗಿದೆ.

ಈಗ ಡಿ.ಕೆ. ಶಿವಕುಮಾರ್‌ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗಾಗಿ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿರುವುದು ಒಂದೊಮ್ಮೆ ತಮ್ಮ ನಡುವಿನ ಸ್ಪರ್ಧೆ ಬಿರುಸುಗೊಂಡರೆ ತಮ್ಮಿಬ್ಬರನ್ನೂ ಬಿಟ್ಟು ಮೂರನೇ ವ್ಯಕ್ತಿಯೊಬ್ಬರಿಗೆ ಬಿಟ್ಟುಕೊಡುವಂಥ ವಾತಾವರಣ ನಿರ್ಮಾಣವಾಗುತ್ತದೆ. ಆಗ ತಾನೂ ಖರ್ಗೆ ಪರವಾಗಿ ನಿಲ್ಲುತ್ತೇನೆ ಎಂದು ಶಿವಕುಮಾರ್‌ ಹೇಳಿದಂತಿದೆ. ಡಿ.ಕೆ. ಶಿವಕುಮಾರ್‌ ಅವರು ಖರ್ಗೆ ಅವರನ್ನು ಸಿಎಂ ಮಾಡಲು ಸಿದ್ಧ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ದಲಿತಾಸ್ತ್ರ ಪ್ರಯೋಗ ಮಾಡಿದರಾ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.

Leave A Reply

Your email address will not be published.