Heat Rash : ಬೇಸಿಗೆಯಲ್ಲಿ ಬೆವರುಸಾಲೆಯ ತೊಂದರೆಯೇ? ಈ ಕಿರಿಕಿರಿಯಿಂದ ತಪ್ಪಿಸಲು ಇಲ್ಲಿದೆ ಸುಲಭ ಉಪಾಯ

Heat Rashes in summer : ಸಾಮಾನ್ಯವಾಗಿ ಬೇಸಿಗೆ ಕಿರಿಕಿರಿಯನ್ನು ತರುವ ಬೆವರುಗುಳ್ಳೆ ಇದರಿಂದ ಎಲ್ಲರಿಗೂ ತೊಂದರೆ ತಪ್ಪಿದ್ದಲ್ಲ. ಈ ಬೆವರುಗುಳ್ಳೆಗಳು (Heat Rashes in summer)ಸಣ್ಣದಾದ ಕೆಂಪು ಅಥವಾ ಚರ್ಮದ ಬಣ್ಣದಲ್ಲಿದ್ದು ದೇಹದ ಹಲವಾರು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇದು ತುರಿಕೆ ಹಾಗೂ ನೋವಿನಿಂದಲೂ ಕೂಡಿರುತ್ತದೆ. ಈ ಗುಳ್ಳೆಗಳು ಸಾಮಾನ್ಯವಾಗಿ ಮುಖ, ಕುತ್ತಿಗೆ, ಬೆನ್ನು, ಎದೆ ಹಾಗೂ ತೊಡೆಗಳ ಮೇಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

ಅದಲ್ಲದೆ ಅತಿ ಸೆಕೆ ಮಾತ್ರವಲ್ಲ, ವಿಪರೀತ ಕೆಲಸದ ಒತ್ತಡ, ಅನಾರೋಗ್ಯಕರ ಜೀವನ ಶೈಲಿ, ಸರಿಯಾದ ಸಮಯಕ್ಕೆ ಆಹಾರ ಸೇವಿಸದೆ ಇರುವುದು, ಮದ್ಯಪಾನ, ಧೂಮಪಾನದಿಂದಲೂ ಬೆವರುಸಾಲೆ ಬರುತ್ತದೆ. ತಣ್ಣನೆಯ ನೀರಿನ ಸ್ನಾನ ಇದಕ್ಕೆ ಉತ್ತಮ ಪರಿಹಾರ. ದೇಹವನ್ನು ತಂಪಾಗಿಡುವುದು ಕೂಡ ಅತಿ ಮುಖ್ಯ.

ಬೆವರುಗುಳ್ಳೆಯ ಸಮಸ್ಯೆ ಸಾಮಾನ್ಯವಾಗಿ ಅಂಥಾ ಗಂಭೀರ ರೋಗವೇನಲ್ಲ. ವಾತಾವರಣ ತಂಪುಗೊಂಡಾಗ ಇದು ತನ್ನಿಂದ ತಾನೇ ಮರೆಯಾಗುವುದು. ಆದರೂ ತಾಪಮಾನದ ಏರಿಕೆ ನಿರಂತರವಾಗಿದ್ದಲ್ಲಿ, ನಿಮ್ಮ ಬೆವರಿನ ಉತ್ಪಾದನೆಯೂ ಹೆಚ್ಚಾದಾಗ, ಬೆವರುಗುಳ್ಳೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೇ ಬೇಕು.

ಬೆವರುಸಾಲೆ ನಿವಾರಿಸಲು ಕೆಲ ಮನೆಮದ್ದು ಇಲ್ಲಿ ತಿಳಿಸಲಾಗಿದೆ.

ಜೇನುತುಪ್ಪ ಕ್ಕೆ ಬೆವರುಸಾಲೆಯನ್ನು ಬೇಗ ವಾಸಿ ಮಾಡುವ ಗುಣವಿದೆ. ಕೇವಲ ಹಚ್ಚಿದರೆ ಸಾಲದು. ದೇಹದ ಒಳಗೂ ತಂಪಾಗಿಡಬೇಕು. ಸಿಹಿ ಲಸ್ಸಿ, ಒಂದು ಚಮಚ ಸಕ್ಕರೆ ಹಾಕಿದ ಮೊಸರು, ನಿಂಬೆ ಜ್ಯೂಸ್ ದಿನಕ್ಕೆರಡು ಬಾರಿ ಸೇವಿಸಿ ಬೆವರುಸಾಲೆಯಿಂದ ಮುಕ್ತಿ ಪಡೆಯಿರಿ.

ಬೇವಿನೆಲೆ ಹಾಕಿ ಕುದಿಸಿದ ನೀರನ್ನು ಸ್ನಾನ್ನಕ್ಕೆ ಬಳಸಿ. ಅಥವಾ ಬೇವಿನೆಲೆ ನೀರು ಬೆರೆಸಿ ರುಬ್ಬಿ ಪೇಸ್ಟ್ ತಯಾರಿಸಿ ಬೆವರುಸಾಲೆ ಮೇಲೆ ಹಚ್ಚಿ ಅರ್ಧ ಗಂಟೆ ನಂತರ ತಣ್ಣೀರ ಸ್ನಾನ ಮಾಡಿ.

ಅತಿಯಾದ ಬೆವರುಸಾಲೆಯಿಂದ ಅವು ಸೋಂಕಿಗೆ ಪರಿವರ್ತನೆಯಾಗುವುದನ್ನು ತಡೆಯುತ್ತದೆ.

ಬೆವರುಸಾಲೆ ಇರುವಾಗ ಸ್ನಾನಕ್ಕೆ ಸೋಪ್ ಬಳಸಬೇಡಿ, ಲೋಳೆಸರ ಜೆಲ್ ಅಥವಾ ಲೋಳೆಸರ ತಿರುಳನ್ನು ಬೆವರುಸಾಲೆ ಮೇಲೆ ಹಚ್ಚಿದರೆ ತಂಪನೆಯ ಅನುಭವವಾಗಿ ತುರಿಕೆ ಕಡಿಮೆಯಾಗುತ್ತದೆ. ಬೇಗ ವಾಸಿಯಾಗುತ್ತದೆ. ಬೆವರುಸಾಲೆ ಮೇಲೆ ಐಸ್‌ಕ್ಯೂಬ್ ಅನ್ನು ನಿಧಾನವಾಗಿ ಸವರಿ.

ಅತಿಯಾದ ಬೆವರುಸಾಲೆ ಇದ್ದರೆ ಒಂದು ಕಪ್ ತಣ್ಣನೆಯ ನೀರಿಗೆ (water ) ಒಂದು ಚಮಚ ಬೇಕಿಂಗ್ ಪೌಡರ್ (baking powder ) ಬೆರೆಸಿ. ಇದಕ್ಕೆ ಬಟ್ಟೆಯನ್ನು ಅದ್ದಿ ಸ್ವಲ್ಪ ಹಿಂಡಿ ಬೆವರುಸಾಲೆ ಮೇಲೆ ಹೊದೆಯಿರಿ. ತುರಿಕೆ ಇಲ್ಲವಾಗಿಸುತ್ತದೆ. ದಿನಕ್ಕೆ 5-6 ಬಾರಿ ಹೀಗೆ ಮಾಡಿ.

ರಾಸಾಯನಿಕ ಸೋಪಿನ ಬದಲು ಕಡಲೆಹಿಟ್ಟು, ಅರಿಶಿನ, ಮೆಂತ್ಯ, ಹೆಸರುಕಾಳಿನ ಪುಡಿ, ಕಹಿಬೇವು, ಶ್ರೀಗಂಧ, ಆಯುರ್ವೇದ ಸೋಪು ಇತ್ಯಾದಿಗಳನ್ನು ಬಳಸಿ.

ಬಿಸಿ ಕುದಿಸಿ ಆರಿಸಿದ ತಣ್ಣಗಿನ ನೀರನ್ನು ಕುಡಿಯುತ್ತ ಇರಿ. ದಿನದಲ್ಲಿ ಕನಿಷ್ಠ ೩-೫ ಲೀಟರ್ ನೀರು ಅವಶ್ಯ. ಮಣ್ಣಿನ ಹೂಜಿಯಲ್ಲಿಟ್ಟ ನೀರು ಕುಡಿಯುವುದು ಉತ್ತಮ.

ಆದಷ್ಟು ಒಗೆದು ಶುಭ್ರವಾಗಿ ಒಣಗಿಸಿದ ಹಗುರವಾದ ಮತ್ತು ಸಡಿಲವಾದ ಹತ್ತಿ ಬಟ್ಟೆಗಳನ್ನೇ ಧರಿಸಿ. ಹೊರಗೆ ಓಡಾಡುವುದನ್ನು ಅತ್ಯಂತ ಮಿತಗೊಳಿಸಿ.

ಮುಳ್ಳುಸೌತೆ/ ಸೌತೆಕಾಯಿಯನ್ನು ವೃತ್ತಾಕಾರವಾಗಿ ಕತ್ತರಿಸಿ , ಆ ಬಿಲ್ಲೆಗಳಿಂದ ಬೆವರುಗುಳ್ಳೆಯಿರುವ ಜಾಗವನ್ನು ಮಸಾಜ್ ಮಾಡಿ.

ಅಥವಾ ಹಸಿ ಆಲೂಗೆಡ್ಡೆಯನ್ನು (potato ) ಚೆನ್ನಾಗಿ ಹೆಚ್ಚಿ, ಅದರ ರಸವನ್ನು ತೆಗೆದು ಬೆವರುಸಾಲೆ ಇರುವ ಜಾಗಕ್ಕೆ ಹಚ್ಚುವುದು ತುಂಬಾ ಪ್ರಯೋಜನಕಾರಿ. ಆಲೂಗೆಡ್ಡೆಯ ರಸವನ್ನು ಹಚ್ಚಿ ಸುಮಾರು 10 ರಿಂದ 15 ನಿಮಿಷಗಳ ಕಾಲ ಬಿಡಬೇಕು ಮತ್ತು ನಂತರ ಆ ಸ್ಥಳವನ್ನು ತಣ್ಣೀರಿನಿಂದ ಸ್ವಚ್ಛಗೊಳಿಸಬೇಕು. ಇದು ಬೆವರುಸಾಲೆ ಸಮಸ್ಯೆಯನ್ನು ಕಡಿಮೆ ಮಾಡುವುದಲ್ಲದೆ ತ್ವಚೆಗೆ ಇನ್ನೂ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

ನೆಲ್ಲಿಕಾಯಿಯನ್ನು ಜಜ್ಜಿ ರಸ ತೆಗೆದು ಅದನ್ನು ಅಂಗೈ, ಅಂಗಾಲಿಗೆ ಹಚ್ಚುವುದರಿಂದ ಬೆವರುವ ಪ್ರಮಾಣದಲ್ಲಿ ಕಡಿಮೆಯಾಗುವುದನ್ನು ಕಾಣಬಹುದು.

ಇನ್ನು ಕೊತ್ತಂಬರಿಬೀಜದ ಪುಡಿ- ಅರಸಿನವನ್ನು ಕಲಸಿ ರೋಸ್‌ವಾಟರ್ ಬೆರೆಸಿ ಬೆವರುಸಾಲೆ ಮೇಲೆ ಹಚ್ಚಿ ಒಣಗಿದ ನಂತರ ತೊಳೆಯಿರಿ.

ಅಥವಾ ಶ್ರೀಗಂಧದ ಪುಡಿಗೆ ರೋಸ್‌ವಾಟರ್ ಬೆರೆಸಿದ ಪೇಸ್ಟ್‌ನ್ನು ಬೆವರುಸಾಲೆಯಾದ ಭಾಗಗಳಿಗೆ ಲೇಪಿಸಿ.

ಇದರ ಹೊರತು ಅಕ್ಕಿ ತೊಳೆದ ನೀರನ್ನು ಬೆವರುಸಾಲೆಗೆ ಬಳಸಬಹುದಾಗಿದೆ.

10 ಗ್ರಾಂ ಶ್ರೀಗಂಧದ ಹುಡಿ ಮತ್ತು 5 ಗ್ರಾಂ ರುಬ್ಬಿದ ಗಸಗಸೆ ಮತ್ತು ರೋಸ್‌ವಾಟರ್ ಬೆರೆಸಿ ಮಿಶ್ರಣ ತಯಾರಿಸಿ ಬೆವರುಸಾಲೆಗೆ ಲೇಪಿಸಿ. ಒಣಗಿದ ನಂತರ ಸ್ನಾನ ಮಾಡಿ.

ಜೀರಿಗೆ ಪುಡಿ ಮತ್ತು ಕೊಬ್ಬರಿಎಣ್ಣೆ ಬೆರೆಸಿ ದಪ್ಪಗಾದ ಪಾಕದಂತೆ ಮಾಡಿ ಬೆವರುಸಾಲೆಯ ಮೇಲೆ ಲೇಪಿಸಿ. ಅರ್ಧ ಗಂಟೆ ನಂತರ ಸ್ನಾನ ಮಾಡಿ.

ಕಲ್ಲಂಗಡಿ ಅಥವಾ ಸೌತೆಕಾಯಿ ತುಂಡನ್ನು ಬೆವರುಸಾಲೆ ಮೇಲೆ ಸವರಿಕೊಳ್ಳಿ. ಕರ್ಪೂರವನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ನೆನೆಸಿಡಿ. ಅದು ಕರಗಿದ ನಂತರ ಬೆವರುಸಾಲೆ ಮೇಲೆ ಹಚ್ಚಿ.

ಇದರ ಹೊರತು ಗುಳ್ಳೆಗಳನ್ನು ಪದೇ ಪದೇ ತುರಿಸುವುದು ಮಾಡಬೇಡಿ, ಯಾವುದೇ ರಾಸಾಯನಿಕ ಕ್ರೀಮ್ ಬಳಕೆ ಮಾಡದಿರಿ, ಬಿಗಿಯಾದ ಉಡುಪು ಧರಿಸುವುದು, ಬಿಸಿಲಿನಲ್ಲಿ ಅಡ್ಡಾಡುವುದು, ಧೂಮಪಾನ, ಜಂಕ್ ಫುಡ್, ಅತಿಯಾಗಿ ತಿನ್ನುವುದು ಮಾಡಬೇಡಿ.

ಮುಖ್ಯವಾಗಿ ತಂಪಾದ ಆಹಾರಗಳಾದ ಪಪ್ಪಾಯ ಹಣ್ಣು,ಕಲ್ಲಂಗಡಿ ಹಣ್ಣು, ವಿಟಮಿನ್ ಸಿ ಅಧಿಕವಾಗಿರುವ ಕಿತ್ತಳೆ, ಸೇಬು, ನೆಲ್ಲಿಕಾಯಿ,ದ್ರಾಕ್ಷಿ, ಟೊಮೇಟೊ, ಸೌತೆಕಾಯಿ, ಪುದೀನಾ ಬೆರೆಸಿದ ನಿಂಬೆ ಹಣ್ಣಿನ ಪಾನಕ, ಕೊಕ್ಕಮ್ ಹಣ್ಣಿನ ಪಾನಕ, ಬೀಟ್ರೂಟ್ ಜ್ಯೂಸು, ಕ್ಯಾರೆಟ್ ಜ್ಯೂಸು, ರಾಗಿ ಪಾನಕ, ಹೆಸರು ಕಾಳಿನ ಪಾನಕ, ಎಳ್ಳಿನ ಪಾನಕ, ಜೀರಿಗೆ ಪಾನಕ, ನೀರಲ್ಲಿ ನೆನೆಸಿದ ತಂಪಿನ ಬೀಜದ ಪಾನಕ, ತಂಬುಳಿಗಳು, ತರಹೇವಾರಿ ಸೊಪ್ಪಿನ ಪಲ್ಯಗಳು, ಇಂಗು, ಶುಂಠಿ, ಕೊತ್ತಂಬರಿ ಸೊಪ್ಪು ಹಾಕಿದ ಮಜ್ಜಿಗೆ ಮುಂತಾದ ಆಹಾರ ಸೇವಿಸುವುದರಿಂದ ಬೆವರುಸಾಲೆ ತನ್ನಷ್ಟಕ್ಕೆ ಕಡಿಮೆ ಆಗಲಿದೆ.

 

ಇದನ್ನು ಓದಿ : Virat Kohli Viral Photo: ವಿರಾಟ್ ಕೊಹ್ಲಿ ಬಾಲ್ಯದ ಫೋಟೋ ವೈರಲ್ ; ಕೊಹ್ಲಿ ಜೊತೆಗಿರುವ ಆಟಗಾರ ಯಾರು? ಕಂಡುಹಿಡಿಯಿರಿ!! 

Leave A Reply

Your email address will not be published.