PNG,CNG Price : ಸಿಎನ್ ಜಿ, ಪಿಎನ್ ಜಿ ಗ್ಯಾಸ್ ದರ ನಿಗದಿಗೆ ಬಂತು ಹೊಸ ಮಾನದಂಡ!

PNG – CNG Price : ಹಣದುಬ್ಬರ ಸಮಸ್ಯೆಯನ್ನು ಆದಷ್ಟು ಕಡಿಮೆ ಮಾಡಲು ಸರ್ಕಾರ ಹಲವಾರು ಬದಲಾವಣೆಗಳನ್ನು ತರುತ್ತಿದೆ. ಈ ಹಿನ್ನೆಲೆಯಲ್ಲಿ ನೈಸರ್ಗಿಕ ಅನಿಲದ ದರ ನಿಗದಿಗೆ ಹೊಸ ಮಾನದಂಡ ನಿಗದಿಪಡಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಬೆಳವಣಿಗೆಯಿಂದ ಮನೆಗಳಲ್ಲಿ ಬಳಕೆಯಾಗುವ ಪಿಎನ್‌ಜಿ (Piped Natural Gas – PNG) ವಾಹನಗಳಿಗೆ ಬಳಕೆಯಾಗುವ ಸಿಎನ್‌ಜಿ (Compressed Natural Gas – CNG) ಬೆಲೆ ಶೇ 6ರಿಂದ 9ರಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಸದ್ಯ ಕರ್ನಾಟಕದಲ್ಲಿ ತುಮಕೂರು ಸೇರಿದಂತೆ ಹಲವು ನಗರಗಳಿಗೆ ಈಗಾಗಲೇ ಪಿಎನ್‌ಜಿ ಸರಬರಾಜು ಆರಂಭವಾಗಿದೆ. ಸದ್ಯ ಪೆಟ್ರೋಲ್-ಡೀಸೆಲ್ ಬೆಲೆಯ ಸತತ ಏರಿಕೆಯ ನಂತರ ಹಲವರು ಸಿಎನ್‌ಜಿ ವಾಹನಗಳ ಖರೀದಿಯತ್ತ ಮುಖ ಮಾಡಿದ್ದರು. ಹೊಸ ದರಗಳು ಜಾರಿಯಾದ ನಂತರ ಬೆಂಗಳೂರಿನಲ್ಲಿ ಪ್ರತಿ ಕೆಜಿ ಸಿಎನ್‌ಜಿ ಬೆಲೆ 83.5 ರೂ, ಒಂದು ಕೆಜಿ ಪಿಎನ್‌ಜಿ ಬೆಲೆ 52 ರೂಪಾಯಿಗೆ ಇಳಿಕೆಯಾಗಲಿದೆ.

ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ (Oil and Natural Gas Corporation – ONGC) ಮತ್ತು ಒಐಎಲ್ (Oil India Limited – OIL) ಕಂಪನಿಗಳು ಉತ್ಪಾದಿಸುವ ನೈಸರ್ಗಿಕ ಅನಿಲಕ್ಕೆ ಇಷ್ಟು ದಿನ ಎಪಿಎಂ (Administered Price Mechanism – APM) ಮೂಲಕ ಕೇಂದ್ರ ಸರ್ಕಾರವೇ ದರನಿಗದಿ ಪಡಿಸುತ್ತಿತ್ತು.

ಇದೀಗ ಕಚ್ಚಾತೈಲ ದರ ಸೂಚ್ಯಂಕದೊಂದಿಗೆ ಪಿಎನ್‌ಜಿ ಮತ್ತು ಸಿಎನ್‌ಜಿ ದರವನ್ನು (PNG – CNG Price )ಈ ಮೂಲಕ ಹಕ್ಕು ಬಿಟ್ಟುಕೊಡಲು ಕೇಂದ್ರ ಸರ್ಕಾರ ಮುಂದಾಗಿರುವುದು ಮಹತ್ವದ ವಿದ್ಯಮಾನ ಎನಿಸಿದೆ.

ಈ ಕುರಿತು ಭಾರತ ಸರ್ಕಾರದ ವಕ್ತಾರ ಮತ್ತು ಪಿಐಬಿ ಪ್ರಧಾನ ನಿರ್ದೇಶಕ ರಾಜೇಶ್ ಮಲ್ಲೋತ್ರ ಟ್ವಿಟ್ ಮಾಡಿದ್ದು, ಪೆಟ್ರೋಲಿಯಂ ಸಚಿವಾಲಯದ ಹೊಸ ಆಲೋಚನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ. ‘ಸಿಎನ್‌ಜಿ ಮತ್ತು ಪಿಎನ್‌ಜಿಗೆ ಇಂಡಿಯನ್ ಕ್ರೂಡ್ ಬ್ಯಾಸ್ಕೆಟ್‌ನ (ಭಾರತದ ಕಚ್ಚಾತೈಲ ಆಮದು ದರದ ಸರಾಸರಿ) ಶೇ 10ರಷ್ಟು (ಕಡಿಮೆ) ದರ ನಿಗದಿಪಡಿಸಲಾಗುವುದು. ಈ ದರವನ್ನು ತಿಂಗಳಿಗೆ ಒಮ್ಮೆ ಪರಿಷ್ಕರಿಸಲಾಗುವುದು. ಈ ಮೂಲಕ ದರನಿಗದಿ ಪ್ರಕ್ರಿಯೆಯಲ್ಲಿ ಸ್ಥಿರತೆ ಬರಲಿದೆ. ಅದರ ಜೊತೆಗೆ ಅನಿಲ ಉತ್ಪಾದಕರಿಗೆ ಬೆಲೆ ಹೊಯ್ದಾಟದಿಂದ ರಕ್ಷಣೆಯೂ ಸಿಗಲಿದೆ’ ಎಂದು ತಿಳಿಸಿದ್ದಾರೆ.

ಈ ಬೆಳವಣಿಗೆಯ ಕುರಿತು ಟ್ವಿಟ್ ಮಾಡಿರುವ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್‌ದೀಪ್ ಪುರಿ, ‘ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಹಲವು ಮಹತ್ವದ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗುವ ಬೆಲೆ ಏರಿಳಿತಗಳಿಂದ ಭಾರತದ ಗ್ರಾಹಕರನ್ನು ರಕ್ಷಿಸಲು ಇದು ನೆರವಾಗಲಿದೆ. ಹೊಸ ಮಾರ್ಗದರ್ಶಿ ಸೂತ್ರಗಳಿಗೆ ಕೇಂದ್ರ ಸಚಿವ ಪ್ರಸ್ತುತ ಭಾರತದಲ್ಲಿ ಉತ್ಪತ್ತಿಯಾಗುವ ನೈಸರ್ಗಿಕ ಅನಿಲ ದರ ನಿಗದಿಪಡಿಸಲು ಹೆನ್ರಿ ಹಬ್, ಅಲ್‌ಬೆನಾ, ನ್ಯಾಷನಲ್ ಬ್ಯಾಲೆನ್ಸಿಂಗ್ ಪಾಯಿಂಟ್ (ಬ್ರಿಟನ್) ಮತ್ತು ರಷ್ಯಾದ ಸರಾಸರಿ ದರಗಳನ್ನು ಪರಿಗಣಿಸಲಾಗುತ್ತಿದೆ. ಆರು ತಿಂಗಳಿಗೆ ಒಮ್ಮೆ ದರ ಪರಿಷ್ಕರಿಸಲಾಗುತ್ತಿದೆ ಎಂದಿದ್ದಾರೆ.

‘ಪರಿಷ್ಕೃತ ಮಾರ್ಗಸೂಚಿಗಳ ಅನ್ವಯ ನೈಸರ್ಗಿಕ ಅನಿಲ ದರಗಳನ್ನು ಕಚ್ಚಾತೈಲದ ದರಕ್ಕೆ ಸಂಯೋಜಿಸಲಾಗಿದೆ. ಹಲವು ದೇಶಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಗೆ ಬಂದಿದೆ. ನಮ್ಮ ಬಳಕೆದಾರರಿಗೆ ಇದರಿಂದ ಅನುಕೂಲ, ಜಾಗತಿಕ ವಹಿವಾಟಿಗೂ ಅನುಕೂಲ’ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.

ಸದ್ಯ ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಅಂದಾಜಿನಂತೆ ದೇಶಾದ್ಯಂತ ಪಿಎನ್‌ಜಿ ಮತ್ತು ಸಿಎನ್‌ಜಿ ದರಗಳಲ್ಲಿ ಸರಾಸರಿ 6 ರೂಪಾಯಿ ಕಡಿಮೆಯಾಗಲಿದೆ. ಶನಿವಾರದಿಂದಲೇ (ಏ 8) ಹೊಸದರಗಳು ಜಾರಿಗೆ ಬರುವ ಸಾಧ್ಯತೆಯಿದ್ದು, ಗರಿಷ್ಠ ಶೇ 11ರಷ್ಟು ಬೆಲೆ ಇಳಿಕೆ ನಿರೀಕ್ಷಿಸಲಾಗಿದೆ.

 

ಇದನ್ನು ಓದಿ : KOS Exam 2023 : ಕರ್ನಾಟಕ ಮುಕ್ತಶಾಲೆಯ ಪರೀಕ್ಷಾ ವೇಳಾಪಟ್ಟಿ ಪ್ರಕಟ! 

 

Leave A Reply

Your email address will not be published.