Shah Rasheed Ahmed Quadri: ಕಾಂಗ್ರೆಸ್ ಮಾತ್ರ ಮುಸ್ಲಿಂಮರನ್ನು ಗುರುತಿಸೋದೆಂದು ಭಾವಿಸಿದ್ದೆ, ಬಿಜೆಪಿ ಅದನ್ನು ಹುಸಿಗೊಳಿಸಿದೆ! ಪ್ರಧಾನಿಯನ್ನು ಕೊಂಡಾಡಿದ ಪದ್ಮಶ್ರೀ ಪುರಸ್ಕೃತ ಅಹ್ಮದ್ ಖಾದ್ರಿ

Share the Article

Shah Rasheed Ahmed Quadri: ಬಿಜೆಪಿ ಸರ್ಕಾರ (BJP Government) ಮುಸ್ಲಿಮರಿಗೆ ಪ್ರಶಸ್ತಿ ನೀಡುವುದಿಲ್ಲ, ಕಾಂಗ್ರೆಸ್ ಸರ್ಕಾರ ಮಾತ್ರ ಮುಸ್ಲಿಂಮರನ್ನು ಗುರುತಿಸುವುದು ಎಂದು ಭಾವಿಸಿದ್ದೆ. ಆದರೆ ನನ್ನ ಊಹೆಯನ್ನು ನೀವು ಸುಳ್ಳು ಮಾಡಿದ್ದೀರಿ ಎಂದು ಪದ್ಮಶ್ರೀ ಪ್ರಶಸ್ತಿ ಪಡೆದ ಕರ್ನಾಟಕದ (Karnataka) ಖ್ಯಾತ ಬಿದರಿ ಕಲಾವಿದ ಶಾ ರಶೀದ್ ಅಹ್ಮದ್ ಖಾದ್ರಿ (Shah Rasheed Ahmed Quadri) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಹೇಳಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ನಿನ್ನೆ ದಿನ (ಏಪ್ರಿಲ್ 5) ರಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳು ಸಾಧಕರಿಗೆ ಪ್ರದ್ಮ ಪ್ರಶಸ್ತಿ (Padma Awards) ನೀಡಿ ಪುರಸ್ಕರಿಸಿದರು. ಈ ಕಾರ್ಯಕ್ರಮದ ನಂತರ ಪ್ರಧಾನಿ ಮೋದಿ ಎಲ್ಲಾ ಸಾಧಕರನ್ನು ಅಭಿನಂದಿಸಿ ಹಸ್ತಲಾಘವ ಮಾಡುತ್ತಿದ್ದರು. ಆ ಸಮಯದಲ್ಲಿ ಬಿದರಿ ಕಲಾವಿದ ಶಾ ರಶೀದ್ ಅಹ್ಮದ್ ಖಾದ್ರಿ (Shah Rasheed Ahmed Quadri) ಪ್ರಧಾನಿ ನರೇಂದ್ರ ಮೋದಿಯವರ ಕೈ ಹಿಡಿದು ಈ ರೀತಿಯ ಸಂತೋಷದ ನುಡಿಗಳನ್ನು ಆಡಿದ್ದಾರೆ.

ಪದ್ಮಶ್ರೀ ಪುರಸ್ಕೃತರಾದ ರಶೀದ್ ಅಹ್ಮದ್ ಖಾದ್ರಿ ಅವರಿಗೆ ಪ್ರಧಾನಿ ಮೋದಿ ಕೈ ಕುಲುಕಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮೋದಿ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಯುಪಿಎ ಸರ್ಕಾರದ (UPA Government) ಅವಧಿಯಲ್ಲಿ ಪದ್ಮ ಪ್ರಶಸ್ತಿಯನ್ನು ನಿರೀಕ್ಷಿಸಿದ್ದೆ. ಆದರೆ ನನಗೆ ಅದು ಸಿಗಲಿಲ್ಲ. ನಿಮ್ಮ ಬಿಜೆಪಿ ಸರ್ಕಾರ ಬಂದಾಗ ನನಗೆ ಯಾವುದೇ ಪ್ರಶಸ್ತಿ ಸಿಗುವುದಿಲ್ಲ ಎಂದು ಭಾವಿಸಿದ್ದೆ. ಆದರೆ ನೀವು ನನ್ನ ಊಹೆ ತಪ್ಪು ಎಂದು ಸಾಬೀತುಪಡಿಸಿದ್ದೀರಿ. ನಿಮಗೆ ನಾನು ಪ್ರಾಮಾಣಿಕ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.

ಅಂದಹಾಗೆ ಈ ಹಿಂದೆ ಮಾಧ್ಯಮದ ಜೊತೆ ಮಾತನಾಡಿದ್ದ ಅವರು, ಈ ಹಿಂದೆ ಹಲವು ಬಾರಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದೆ. ಆದರೆ, ಇದಕ್ಕೆ ಯಾವುದೇ ಸ್ಪಂದನೆಗಳು ಸಿಗದೇ ಇದ್ದಾಗ ಅರ್ಜಿ ಸಲ್ಲಿಸುವುದನ್ನೇ ನಿಲ್ಲಿಸಿ ಬಿಟ್ಟಿದ್ದೆ. ಇದೀಗ 5 ದಶಕಗಳ ನಮ್ಮ ಶ್ರಮವನ್ನು ಗುರುತಿಸಿ ಕೇಂದ್ರ ಸರ್ಕಾರ ನಮ್ಮ ಕಲೆಯನ್ನು ಗೌರವಿಸಿದೆ. ಇದು ನನಗೊಬ್ಬನಿಗೆ ಸಿಕ್ಕಿದ ಗೌರವ ಅಲ್ಲ. ಬೀದರ್ ಜಿಲ್ಲೆಯ ಎಲ್ಲಾ ಕಲಾವಿದರಿಗೆ ಸಂದ ಗೌರವವಾಗಿದೆ ಎಂದು ತಿಳಿಸಿದ್ದರು.

ಖ್ಯಾತ ಬಿದರಿ ಕಲಾವಿದರಾದ ಅಹ್ಮದ್ ಖಾದ್ರಿ ಅವರಿಗೆ 1984 ರಲ್ಲಿ ರಾಜ್ಯ ಪ್ರಶಸ್ತಿ, 1988 ರಲ್ಲಿ ರಾಷ್ಟ್ರೀಯ ಪ್ರಶಸ್ತಿ, 1996 ರಲ್ಲಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು 2004 ರಲ್ಲಿ ದಿ ಗ್ರೇಟ್ ಇಂಡಿಯನ್ ಅಚೀವರ್ಸ್ ಪ್ರಶಸ್ತಿಗಳು ಮುಡಿಗೇರಿವೆ.

Leave A Reply