Rahul Gandhi Defamation Case: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸಿಕ್ತು ಜಾಮೀನು, ವಿಚಾರಣೆ ಏಪ್ರಿಲ್ 13ಕ್ಕೆ ಮುಂದೂಡಿಕೆ
Rahul Gandhi : ಪ್ರಧಾನಿ ಮೋದಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಕುರಿತು 2019ರ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರಿಗೆ ಸೂರತ್ ಸೆಷನ್ಸ್ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್ 13ಕ್ಕೆ ನಿಗದಿಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ಅವಮಾನಿಸಿದ ಹೇಳಿಕೆಗಾಗಿ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆ ವಿಧಿಸಿದ ಮ್ಯಾಜಿಸ್ಟ್ರೇಟ್ ಆದೇಶವನ್ನು ರದ್ದುಗೊಳಿಸುವಂತೆ ಕಾಂಗ್ರೆಸ್ ನಾಯಕ ಸೂರತ್‌ನ ಸೆಷನ್ಸ್ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಹೀಗಾಗಿ ರಾಹುಲ್ ಗಾಂಧಿಗೆ ಗುಜರಾತ್ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ. ಏಪ್ರಿಲ್ 13ರ ತನಕ ಅವರಿಗೆ ರಿಲೀಫ್ ನೀಡಿದೆ.
2019ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಇವರೆಲ್ಲರ ಸರ್‌ನೇಮ್ ಒಂದೇ ಆಗಿದ್ದು, ಈ ಎಲ್ಲಾ ಕಳ್ಳರು ದೇಶವನ್ನು ಲೂಟಿ ಮಾಡಿದ್ದಾರೆ ಎಂದು ರಾಹುಲ್ ತಮ್ಮ ಭಾಷಣದಲ್ಲಿ ಹರಿಹಾಯ್ದಿದ್ದರು. ಈ ಹೇಳಿಕೆಯನ್ನು ಆಧಾರಿಸಿ ಬಿಜೆಪಿ ಶಾಸಕ ಮತ್ತು ಗುಜರಾತ್ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ಕ್ರಿಮಿನಲ್ ಮಾನಹಾನಿ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಶಿಕ್ಷೆಯನ್ನು ಆಧರಿಸಿ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.
ಅಂದಹಾಗೆ ರಾಹುಲ್ ಗಾಂಧಿ ಅವರು ಈ ಪ್ರಕರಣದಲ್ಲಿ ನೀಡಿರುವ ಶಿಕ್ಷೆಗೆ ಮಧ್ಯಂತರ ತಡೆ ನೀಡುವಂತೆಯೂ ವಿನಂತಿ ಮಾಡಿದ್ದಾರೆ. ಆ ಮೂಲಕ ಅವರ ಲೋಕಸಭಾ ಸದಸ್ಯ ಸ್ಥಾನ ತಕ್ಷಣದಲ್ಲಿಯೇ ಮರುಸ್ಥಾಪನೆಯಾಗಲು ಕಾರಣವಾಗಲಿದೆ. ಸೂರತ್‌ಗೆ ಬಂದು ರಾಹುಲ್ ಗಾಂಧಿ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸುವ ವೇಳೆ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಕಾಂಗ್ರೆಸ್ ಆಡಳಿತವಿರುವ ಮೂರು ರಾಜ್ಯಗಳ ಮುಖ್ಯಮಂತ್ರಿಗಳಾದ ಅಶೋಕ್ ಗ್ಲೆಹೋಟ್, ಭೂಪೇಶ್ ಭಾಗೇಲ್ ಮತ್ತು ಸುಖ್ವಿಂದರ್ ಸಿಂಗ್ ಸುಖು ಕೂಡ ಜೊತೆಯಲ್ಲಿದ್ದರು. ರಾಹುಲ್ ಗಾಂಧಿಗೆ ನೈತಿಕ ಬೆಂಬಲ ನೀಡುವ ದೃಷ್ಟಿಯಿಂದ ಇವರೆಲ್ಲರೂ ಗುಜರಾತ್‌ನಲ್ಲಿದ್ದಾರೆ.
ವಿಚಾರಣಾ ನ್ಯಾಯಾಲಯ ಮಾಡಿರುವಂಥ ಸ್ಪಷ್ಟ ದೋಷಗಳನ್ನು ಮೇಲ್ಮನವಿ ನ್ಯಾಯಾಲಯವು ಗುರುತಿಸುತ್ತದೆ ಮತ್ತು ತ್ವರಿತವಾಗಿ ನ್ಯಾಯವನ್ನು ನೀಡುತ್ತದೆ ಎಂದು ನಮಗೆ ವಿಶ್ವಾಸವಿದೆ ಎಂದು ರಾಹುಲ್ ಗಾಂಧಿ ಅವರ ಕಾನೂನು ತಂಡದ ಮೇಲ್ವಿಚಾರಣೆಯ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸಂಸದ ಅಭಿಷೇಕ್ ಸಿಂಘ್ವಿ ಈಗಾಗಲೇ ಹೇಳಿದ್ದಾರೆ.
ರಾಹುಲ್ ಗಾಂಧಿಯ ವಿರುದ್ಧ ನೀಡಿರುವ ಈ ತೀರ್ಪು ಅವರು ದೋಷಿ ಮಾತ್ರವಲ್ಲದೆ, ಚುನಾವಣೆಯಿಂದ ಎಂಟು ವರ್ಷಗಳ ಕಾಲ ಅಮಾನತಿನಲ್ಲಿರುವ ಸಾಧ್ಯತೆಯೂ ಕಾಣುತ್ತಿದೆ. ಹಾಗೇನಾದರೂ ಅವರ ಮೇಲಿನ ಶಿಕ್ಷೆಯನ್ನು ಸೆಷನ್ಸ್ ಕೋರ್ಟ್ ತೆರವು ಮಾಡದೇ ಇದಲ್ಲಿ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಅವಕಾಶದಿಂದಲೂ ವಂಚಿತರಾಗಲಿದ್ದಾರೆ.
Your article helped me a lot, is there any more related content? Thanks!