Sullia constituency election 2023 : ಬಿಜೆಪಿಯಲ್ಲಿ ಅವಕಾಶ ನೀಡುವಂತೆ ಹೈಕಮಾಂಡ್ ಕದ ತಟ್ಟಿದ ಸಿ.ಟಿ.ರವಿ ಆಪ್ತ
Sullia constituency election 2023 :ಮಂಗಳೂರು : ದ.ಕ. ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ (Sullia constituency election 2023) ಈ ಬಾರಿ ಬಿಜೆಪಿಯಲ್ಲೂ ಆಕಾಂಕ್ಷಿಗಳ ಪಟ್ಟಿ ಹೆಚ್ಚಳವಾಗಿದೆ. ಆಂತರೀಕ ಅಭಿಪ್ರಾಯ ಸಂಗ್ರಹದಲ್ಲಿ ಇದ್ದಕ್ಕಿದ್ದಂತೆ ಹೊಸ ಹೆಸರೊಂದು ಕೇಳಿ ಬಂದಿದೆ.
ಆ ಹೆಸರೇ ಸೀತಾರಾಮ ಭರಣ್ಯ.ಮೂಲತಃ ಪುತ್ತೂರು ತಾಲೂಕಿನ ಪಾಣಾಜೆಯ ಭರಣ್ಯ ನಿವಾಸಿ.ಪ್ರಸ್ತುತ ಚಿಕ್ಕಮಗಳೂರಿನಲ್ಲಿ ನೆಲೆಸಿದ್ದಾರೆ.
ಎಬಿವಿಪಿ ,ರಾಷ್ಟ್ರೀಯ ಸ್ವಯಂ ಸೇವಕ ಹಾಗೂ ಬಿಜೆಪಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿರುವ ಸೀತಾರಾಮ ಭರಣ್ಯ ಅವರು ಸಿ.ಟಿ.ರವಿ ಅವರ ಆಪ್ತ ವಲಯದಲ್ಲಿ ಕಂಡು ಬಂದಿದ್ದು, ಸುಳ್ಯ ಕ್ಷೇತ್ರದಿಂದ ಅವಕಾಶ ನೀಡುವಂತೆ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೇ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಸುಳ್ಯದಲ್ಲಿ ಅವಕಾಶ ನೀಡುವಂತೆ ಕೋರಿಕೆ ಸಲ್ಲಿಸಿದ್ದು,ಸುಳ್ಯದಲ್ಲಿ ಇದೇ ಮೊದಲ ಬಾರಿಗೆ ಅಭ್ಯರ್ಥಿ ಬದಲಾವಣೆಯ ಕೂಗು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಚಿಕ್ಕಮಗಳೂರು ಬಿಜೆಪಿಯಲ್ಲಿ ಸಂಘಟನಾ ಕಾರ್ಯದರ್ಶಿಯಾಗಿರುವ ಸೀತಾರಾಮ ಭರಣ್ಯ ಅವರು ದತ್ತಪೀಠ ಅಭಿಯಾನದಲ್ಲೂ ಮುಂಚೂಣಿಯಲ್ಲಿ ಕೆಲಸ ಮಾಡಿದ್ದು, ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಆದರೆ ಸುಳ್ಯದಲ್ಲಿ ಎಸ್.ಅಂಗಾರ ಹಾಗೂ ಭಾಗೀರಥಿ ಮುರುಳ್ಯ ಅವರ ಹೆಸರುಗಳು ಮುಂಚೂಣಿಯಲ್ಲಿದ್ದು, ಯಾರಿಗೆ ಹೈ ಕಮಾಂಡ್ ಮಣೆ ಹಾಕಲಿದೆ ಎಂಬುದು ಸಸ್ಪೆನ್ಸ್.
1989ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕುಶಲ ಅವರ ವಿರುದ್ಧ (ಬಿಜೆಪಿ) ಅಂಗಾರ ಸೋತರೂ 1994ರಿಂದ 2018ರ ತನಕ ನಿರಂತರ ಗೆಲುವು ದಾಖಲಿಸಿದ್ದಾರೆ.
2013ರಲ್ಲಿ ದ.ಕ. ಜಿಲ್ಲೆಯಲ್ಲಿನ 8 ಸ್ಥಾನಗಳ ಪೈಕಿ ಬಿಜೆಪಿ 7ರಲ್ಲಿ ಸೋತಿತ್ತು. ಸುಳ್ಯ ಕ್ಷೇತ್ರದಲ್ಲಿ ಗೆಲುವು ದಾಖಲಿಸಿ ಬಿಜೆಪಿ ಭದ್ರಕೋಟೆ ಅನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿತು. ಸುಳ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೂಚಿಸುವ ವ್ಯಕ್ತಿಯೇ ಅಭ್ಯರ್ಥಿಯಾಗುವುದು ಈ ಹಿಂದಿನಿಂದಲೂ ಬಂದ ರೂಢಿ.
ಅಭ್ಯರ್ಥಿ ಕುರಿತಾದ ಎಲ್ಲಾ ವದಂತಿ ಹಾಗೂ ಊಹಾಪೋಹಗಳಿಗೆ ಎ.6ರಂದು ತೆರೆಕಾಣಲಿದ್ದು,ಮೊದಲ ಪಟ್ಟಿಯಲ್ಲೇ ಸುಳ್ಯ ಕ್ಷೇತ್ರದ ಹೆಸರು ಪ್ರಕಟಗೊಳ್ಳಲಿದೆ ಎಂದು ಹೇಳಲಾಗಿದೆ.