ಏ.9ಕ್ಕೆ ಬಂಡೀಪುರಕ್ಕೆ ಪ್ರಧಾನಿ ಮೋದಿ ಆಗಮನ : ಸಾರ್ವಜನಿಕರಿಗೆ 2 ದಿನ ಸಫಾರಿ ಪ್ರವೇಶ ನಿರ್ಬಂಧ
Prime Minister Modi :ವಿಧಾನ ಸಭೆ ಚುನಾವಣಾ ಡೇಟ್ ಫಿಕ್ಸ್ ಆದರೂ ಮತ್ತೆ ಮತ್ತೆ ರಾಜ್ಯಕ್ಕೆ ದೇಶದ ಪ್ರಧಾನಿ ಮೋದಿ(Prime Minister Modi) ಆಗಮಿಸುತ್ತಿದ್ದು, ಇದೀಗ ಮತ್ತೆ ಏ.9ಕ್ಕೆ ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಈಗಾಗಲೇ ನಗರದಲ್ಲಿ ಹೆಚ್ಚಿನ ಭದ್ರತೆ ವಹಿಸಲು ಸಿದ್ದತೆ ನಡೆಸಲಾಗುತ್ತಿದೆ.
ಏ.9ರಂದು ಮೈಸೂರಿನಲ್ಲಿ ಪ್ರಾಜೆಕ್ಟ್ ಟೈಗರ್ ಸುವರ್ಣ ಮಹೋತ್ಸವದ ಸಮಾರಂಭದ ಬಳಿಕ ದೇಶದ ಪ್ರಸಿದ್ಧ ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಮೈಸೂರಿನಿಂದ ಕಾರ್ಯಕ್ರಮ ಮುಗಿಸಿದ ಬಳಿಕ ಹೆಲಿಕಾಪ್ಟರ್‌ನಲ್ಲಿ ನೇರವಾಗಿ ಬಂಡೀಪುರಕ್ಕೆ ಪ್ರಧಾನಿ ಮೋದಿ ಬರಲಿದ್ದಾರೆ.
ಬಂಡೀಪುರ ಅರಣ್ಯವನ್ನು ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಿ 50 ವರ್ಷಗಳು ಸಂದಿವೆ. ಹೀಗಾಗಿ ಬಂಡೀಪುರ ಅರಣ್ಯದಲ್ಲಿ ಸಫಾರಿ ನಡೆಸಲಿದ್ದಾರೆ. ಮೋದಿ ಆಗಮನಕ್ಕಾಗಿ ಭದ್ರತೆ ದೃಷ್ಟಿಯಿಂದ ಏ. 8 ಹಾಗೂ 9ರಂದು ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಗೊಳಿಸಲಾಗಿದೆ. ಬಂಡೀಪುರವನ್ನು ತಲುಪುವ ಮಾರ್ಗದ ದುರಸ್ತಿಯಲ್ಲಿ ಈಗಾಗಲೇ ಅರಣ್ಯ ಇಲಾಖೆಯ ಸಿಬ್ಬಂದಿಯು ನಿರತರಾಗಿದ್ದಾರೆʼ
ಪ್ರಧಾನಿ ಮೋದಿ ಬಂಡೀಪುರ ಭೇಟಿ ಹಿನ್ನಲೆ ದಕ್ಷಿಣ ವಲಯದ ಐಜಿಪಿ ಮಧುಕರ್ ಪ್ರವೀಣ್ ಪವಾರ್ ಹೆಲಿಪ್ಯಾಡ್, ಕೆಕ್ಕನಹಳ್ಳಿ ಗಡಿ ಹಾಗೂ ಬೋಳುಗುಡ್ಡ ವೀಕ್ಷಣೆ ಮಾಡಿದರು. ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೂ ಅವರೊಂದಿಗೆ ಹೆಲಿಪ್ಯಾಡ್, ಕೆಕ್ಕನಹಳ್ಳಿ ಗಡಿ ಹಾಗೂ ಬಂಡೀಪುರ ವಲಯದ ಬೋಳುಗುಡ್ಡ ಸ್ಥಳವನ್ನು ಖುದ್ದು ಪರಿಶೀಲನೆ ನಡೆಸಿದರು. ಈ ಸಮಯದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು. ಹೀಗೆ ಭದ್ರತೆ ವಹಿಸಲಾಗುತ್ತಿದೆ.