Election Code Of Conduct: ಏನಿದು ಚುನಾವಣೆ ನೀತಿ ಸಂಹಿತೆ ಅಂದ್ರೆ? ಹೇಗಿರುತ್ತೆ? ರಾಜಕಾರಣಿಗಳಿಗೇಕೆ ಭಯ?

Election Code Of Conduct : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ (Karnataka Election 2023) ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ (Election Code Of Conduct) ಕೂಡ ಜಾರಿಯಾಗಿದೆ. ಇದು ಜಾರಿಯಾದ ಸಮಯದಿಂದ ಸರ್ಕಾರ, ರಾಜಕಾರಣಿಗಳಿಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಚುನಾವಣೆಗೆ ದಿನಾಂಕ (Election Dates) ಘೋಷಣೆ ಆದ ದಿನದಿಂದ ಹಿಡಿದು, ಮತ ಎಣಿಕೆ ಮುಗಿಯೋವರೆಗೆ ಈ ನೀತಿ ಸಂಹಿತೆ ಜಾರಿಯಲ್ಲಿ ಇರುತ್ತದೆ. ಅಂದಹಾಗೆ ಈ ನೀತಿ ಸಂಹಿತೆ ಅಂದ್ರೆ ಏನು? ಏನಿದರ ನಿಯಮಗಳು? ರಾಜಕಾರಣಿಗಳಿಗೇಕೆ ಭಯ?

ಚುನಾವಣೆಗೆ ದಿನಾಂಕ ನಿಗದಿ ಆದ ಕೂಡಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತೆ. ಮುಕ್ತ, ನ್ಯಾಯ ಸಮ್ಮತ, ಶಾಂತಿಯುತ ಚುನಾವಣೆ ನಡೆಸುವ ಕಾನೂನು ಕ್ರಮವೇ ನೀತಿ ಸಂಹಿತೆ. ಈ ನೀತಿ ಸಂಹಿತೆ ಸರ್ಕಾರ, ಆಡಳಿತ ಸೇರಿದಂತೆ ಹಲವು ಕಡೆಗಳಿಗೆ ಅನ್ವಯ ಆಗಲಿದೆ. ಆಡಳಿತ, ವಿರೋಧ ಪಕ್ಷ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳೂ ಚುನಾವಣಾ ನೀತಿ ಸಂಹಿತೆ ವ್ಯಾಪ್ತಿಗೆ ಬರುತ್ತವೆ. ಸರ್ಕಾರದ ಎಲ್ಲಾ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ನಿಗಮ ಮಂಡಳಿಗಳು, ಸ್ಥಳೀಯ ಪೌರ ಸಂಸ್ಥೆಗಳು, ಸರ್ಕಾರದಿಂದ ಹಣಕಾಸಿನ ನೆರವನ್ನ ಪಡೆಯುವ ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಈ ಒಂದು ಚುನಾವಣಾ ನೀತಿ ಸಂಹಿತೆ ವ್ಯಾಪ್ತಿಗೆ ಬರ್ತಾರೆ. ಜನರಿಗೂ ನೀತಿ ಸಂಹಿತೆಯ ಬಿಸಿ ತಟ್ಟಲಿದೆ.

ಮೊದಲು ಚುನಾವಣೆ ದಿನಾಂಕ ಘೋಷಣೆಯಾಗಿ, ನಾಮಪತ್ರ ಸಲ್ಲಿಕೆಯ ದಿನಾಂಕದಿಂದ ನೀತಿ ಸಂಹಿತೆ ಜಾರಿಗೆ ಬರುತ್ತಿತ್ತು. ಈಗ ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ನಡೆಸಿ, ಚುನಾವಣೆ ದಿನಾಂಕ ಘೋಷಿಸುತ್ತಿದ್ದಂತೆಯೇ ನೀತಿ ಸಂಹಿತೆ ಜಾರಿಯಾಗುತ್ತದೆ. ಕರ್ನಾಟಕದಲ್ಲಿ ಈಗ ನೀತಿ ಸಂಹಿತೆ ಜಾರಿಯಾಗಿದೆ. ಈ ಚುನಾವಣಾ ನೀತಿ ಸಂಹಿತೆಯ ನಿಯಮಗಳು ಇಲ್ಲಿವೆ ನೋಡಿ.

ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಆಡಳಿತ ಯಂತ್ರದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ರಾಜಕಾರಣಿಗಳ ಹಸ್ತಕ್ಷೇಪವಿಲ್ಲದೆ ಆಡಳಿತ ಯಂತ್ರ ಕಾರ್ಯನಿರ್ವಹಿಸಲಿದೆ. ಅಧಿಕಾರಿಗಳೆ ಎಲ್ಲವನ್ನು ನಿರ್ವಹಿಸುತ್ತಾರೆ. ಸರ್ಕಾರದ ಕೆಲಸಗಳು ಎಂದಿನಂತೆ ನಡೆಯಲಿದೆ. ಆದರೆ ಅಧಿಕಾರಿಗಳು ಚುನಾವಣೆ ಕರ್ತವ್ಯದಲ್ಲಿ ತೊಡಗುವುದರಿಂದ ಸಾರ್ವಜನಿಕ ಸೇವೆಗಳಿಗೆ ವ್ಯತ್ಯಯವಾಗಲಿದೆ. ಇನ್ನು, ಮುಖ್ಯಮಂತ್ರಿ ಹಂಗಾಮಿಯಾಗುತ್ತಾರೆ. ತುರ್ತು ಸಂದರ್ಭ ಎದುರಾದರೆ ಮಾತ್ರ ಸಚಿವರು ಇಲಾಖೆಯ ಜವಾಬ್ದಾರಿ ನಿರ್ವಹಿಸಬಹುದು.

ನೀತಿ ಸಂಹಿತಿ (Code Of Conduct) ಜಾರಿಯಾದ ಅವಧಿಯಲ್ಲಿ ಅನುದಾನ ಬಿಡುಗಡೆ, ಯೋಜನೆಗಳ ಘೋಷಣೆ, ಶಂಕುಸ್ಥಾಪನೆ, ಗುದ್ದಲಿ ಪೂಜೆ, ಉದ್ಘಾಟನೆ, ನೇಮಕಾತಿ ಮಾಡುವಂತಿಲ್ಲ. ಇವುಗಳು ಮತದಾರರ ಮೇಲೆ ಪ್ರಭಾವ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಇವುಗಳಿಗೆ ನಿಷೇಧವಿದೆ. ಸಚಿವರು ಸರ್ಕಾರಿ ಯಂತ್ರವನ್ನು ಉಪಯೋಗಿಸಲು ನಿರ್ಬಂಧವಿರಲಿದೆ. ಸರ್ಕಾರದ ವಾಹನಗಳನ್ನು ಬಳಸುವಂತಿಲ್ಲ. ಸರ್ಕಾರಿ ಸಿಬ್ಬಂದಿ, ಅಧಿಕಾರಿಗಳ ನೆರವು ಕೂಡ ಪಡೆಯುವಂತಿಲ್ಲ.

ನೀತಿ ಸಂಹಿತೆ (Code Of Conduct) ಜಾರಿಯಲ್ಲಿರುವ ಅವಧಿಯಲ್ಲಿ ಮಾಧ್ಯಮಗಳಲ್ಲಿ ಸರ್ಕಾರದ ಖರ್ಚಿನಲ್ಲಿ ಜಾಹೀರಾತು ಪ್ರಕಟಿಸುವಂತಿಲ್ಲ. ಅಲ್ಲದೆ ಸರ್ಕಾರದ ಮಾಧ್ಯಮಗಳನ್ನು ಬಳಕೆ ಮಾಡಿಕೊಂಡು ಸಾಧನೆಗಳನ್ನು ಬಿಂಬಿಸಿಕೊಳ್ಳುವ ಪ್ರಯತ್ನವನ್ನು ಮಾಡುವಂತಿಲ್ಲ. ರಾಜಕೀಯ ಸಭೆ, ಸಮಾರಂಭಗಳು ನಡೆಸಲು ಆಡಳಿತದ ಅನುಮತಿ ಕಡ್ಡಾಯ. ಸ್ಪೀಕರ್, ಮೈಕ್ ಬಳಕೆ, ಪೊಲೀಸ್ ಬಂದೋಬಸ್ತ್ ಪಡೆಯಲು ಚುನಾವಣಾ ಆಯೋಗದ ಅನುಮತಿ ಪಡೆಯಬೇಕು. ಅಲ್ಲದೆ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಯು ಮೆರವಣಿಗೆ ನಡೆಸಲು ಅನುಮತಿ ಕಡ್ಡಾಯ. ಮೆರವಣಿಗೆ ಸಾಗುವ ಮಾರ್ಗದ ಕುರಿತು ಮುಂಚಿತವಾಗಿ ತಿಳಿಸಬೇಕು. ಆ ಮಾರ್ಗದ ಹೊರತು ಅನ್ಯ ಮಾರ್ಗ ಬಳಸಬಾರದು. ಇನ್ನು, ಮೆರವಣಿಗೆ ವೇಳೆ ಅನ್ಯ ಪಕ್ಷಗಳ ನಾಯಕರ ಪ್ರತಿಕೃತಿಯನ್ನು ಕೊಂಡೊಯ್ಯುವುದು, ಪ್ರತಿಕೃತಿ ದಹಿಸುವುದಕ್ಕೆ ನಿಷೇಧವಿದೆ. ಜಾತಿ, ಧರ್ಮದ ನಿಂದನಾತ್ಮಕ ಭಾಷಣ ಮಾಡುವಂತಿಲ್ಲ. ದೇಗುಲ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ರಾಜಕೀಯ ಪ್ರಚಾರ ನಿಷಿದ್ಧ. ಕಾರ್ಯಕ್ರಮ, ಯೋಜನೆಗಳ ಆಧಾರದಲ್ಲಿ ವಾಗ್ದಾಳಿಗೆ ಅವಕಾಶವಿದೆ. ಅದರೆ ವೈಯಕ್ತಿಕ, ಖಾಸಗಿ ವಿಚಾರಗಳನ್ನು ಮುಂದಿಟ್ಟುಕೊಂಡು ಭಾಷಣ ಮಾಡುವಂತಿಲ್ಲ.

ನಾಗರಿಕರ ಶಾಂತಿಯುತ ದೈನಂದಿನ ಬದುಕಿಗೆ ಭಂಗ ಉಂಟು ಮಾಡುವಂತಿಲ್ಲ. ಯಾವುದೆ ವ್ಯಕ್ತಿಯ ಅಭಿಪ್ರಾಯ, ರಾಜಕೀಯ ಪಾಲ್ಗೊಳ್ಳುವಿಕೆ ವಿರುದ್ಧ ಆತನ ಮನೆ ಮುಂದೆ ಧರಣಿ, ಪ್ರತಿಭಟನೆ ಮಾಡುವಂತಿಲ್ಲ. ಸಾರ್ವಜನಿಕರ ಅನುಮತಿ ಇಲ್ಲದೆ ಅವರ ಮನೆ ಗೋಡೆಗಳ ಮೇಲೆ ಪಕ್ಷ, ಅಭ್ಯರ್ಥಿ ಪ್ರಚಾರದ ಪೇಂಟಿಂಗ್ ಬರೆಯುವಂತಿಲ್ಲ. ಅನುಮತಿ ಇಲ್ಲದೆ ಪಕ್ಷದ ಧ್ವಜಗಳನ್ನು ಕಟ್ಟುವಂತಿಲ್ಲ.

ಅಂದಹಾಗೆ ಒಂದ್ಸಲ ಚುನಾವಣ ನೀತಿ ಸಂಹಿತೆ ಜಾರಿಯಾಗಿ ಬಿಟ್ರೆ ಸರ್ಕಾರವನ್ನ ನಡೆಸೋದೇ ಕಷ್ಟ.. ಸರ್ಕಾರದ ಹತ್ರ ಇರೋ ಹಲವಾರು ಅಧಿಕಾರಗಳು ಕಟ್ ಆಗಿ ಬಿಡ್ತವೆ. ಹಾಗಂತಾ ಸಂಪೂರ್ಣ ನಿರ್ಬಂಧ ಏನೂ ಇರೋದಿಲ್ಲ. ಒಂದಷ್ಟು ವಿನಾಯ್ತಿಗಳೂ ಇರ್ತವೆ.. ನೀರಾವರಿ, ಲೋಕೋಪಯೋಗಿ ಸೇರಿದಂತೆ ಈಗಾಗಲೇ ಕೆಲವೊಂದು ಯೋಜನೆಗಳ ಕಾರ್ಯ ಪ್ರಗತಿಯಲ್ಲಿದ್ದರೆ ಅವನ್ನ ಮುಂದುವರೆಸಬಹುದು. ನೀತಿ ಸಂಹಿತೆ ಪ್ರಕಾರ ಯಾವುದೇ ಅಡ್ಡಿ ಇಲ್ಲ. ಇದಲ್ಲದೆ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಯಾವೆಲ್ಲಾ ಯೋಜನೆಗಳು ಈಗಾಗಲೇ ಜಾರಿಯಲ್ಲಿ ಇದ್ಯೋ ಅವೆಲ್ಲ ಕಾರ್ಯಕ್ರಮಗಳನ್ನೂ ಮುಂದುವರೆಸಬಹುದು. ಆದ್ರೆ, ಈ ಕಾರ್ಯಕ್ರಮಗಳಿಗೆ ಹೊಸ ಫಲಾನುಭವಿಗಳನ್ನ ಆಯ್ಕೆ ಮಾಡುವಂತಿಲ್ಲ ಅಷ್ಟೇ.

ಅಲ್ಲದೆ ಕರ್ನಾಟಕದಲ್ಲಿ ಎಲೆಕ್ಷನ್ ಘೋಷಣೆಗೆ ಮುನ್ನವೇ ಈಗಾಗಲೇ ಪೊಲೀಸರೂ ಸೇರಿದಂತೆ ಹಲವು ಇಲಾಖೆಗಳು ದಾಳಿ ನಡೆಸ್ತಿವೆ. ಜನರಿಗೆ ಫ್ರೀ ಆಗಿ ಹಂಚೋದಕ್ಕೆ ತಂದಿದ್ದ ದಿನಸಿ, ಕುಕ್ಕರ್‌, ಮಿಕ್ಸಿಗಳನ್ನ ವಶಕ್ಕೆ ಪಡೀತಿದ್ಧಾರೆ. ಎಲೆಕ್ಷನ್ ಘೋಷಣೆ ಆದ ಮೇಲೆ ಈ ಕಾರ್ಯಾಚರಣೆಗಳು ಇನ್ನಷ್ಟು ಹೆಚ್ಚಲಿವೆ. ಆದ್ರೆ, ಎಲೆಕ್ಷನ್‌ನಲ್ಲಿ ಗೆದ್ದರೆ ನಾವು ಫ್ರೀಯಾಗಿ ಟಿವಿ ಕೊಡ್ತೇವೆ, ದುಡ್ಡು ಕೊಡ್ತೇವೆ ಅಂತಾ ಬಿಟ್ಟಿ ಭಾಗ್ಯಗಳನ್ನ ಘೋಷಣೆ ಮಾಡೋ ರಾಜಕೀಯ ಪಕ್ಷಗಳಿಗೆ ಇನ್ನೂ ಲಗಾಮು ಬಿದ್ದಿಲ್ಲ. ಜೊತೆಗೆ ನಾವು ಅಧಿಕಾರಕ್ಕೆ ಬಂದ್ರೆ ಏನೆಲ್ಲಾ ಮಾಡಿಬಿಡ್ತೇವೆ ಅಂತಾ ಬಾಯಿಗೆ ಬಂದಂಗೆ ಆಶ್ವಾಸನೆ ಕೊಡೋ ರಾಜಕೀಯ ನಾಯಕರ ಮಾತಿಗೂ ಕಡಿವಾಣ ಬಿದ್ದಿಲ್ಲ. ಫೈನಲ್ ಆಗಿ ರಾಜಕೀಯ ಪಕ್ಷಗಳಿಗೆ ದುಡ್ಡು ಎಲ್ಲಿಂದ ಬರುತ್ತೆ ಅಂತಾ ತಿಳಿದುಕೊಳ್ಳೋದಕ್ಕೂ ಚುನಾವಣಾ ಆಯೋಗ ಇನ್ನಷ್ಟು ಟಫ್ ರೂಲ್ಸ್ ಮಾಡಬೇಕಿದೆ.

ಇದನ್ನೂ ಓದಿ: Upendra Rao: ಬಾಲಿಶ ಪ್ರಶ್ನೆ ಕೇಳಿದ ಉಪೇಂದ್ರಗೆ ನೆಟ್ಟಿಗರ ಕ್ಲಾಸ್, ಕೌಂಟ್ರು ಕೊಟ್ಟ ಉಪ್ಪಿ ಹೇಳಿದ್ದೇನು!

Leave A Reply

Your email address will not be published.