N Y Gopalakrishna: BJPಯಲ್ಲಿ ಮುಂದುವರೆದ ಪಕ್ಷಾಂತರ ಪರ್ವ: ಕೂಡ್ಲಿಗಿ ಶಾಸಕ ಎನ್‌.ವೈ ಗೋಪಾಲಕೃಷ್ಣ ಕಾಂಗ್ರೆಸ್‌ಗೆ

Share the Article

N Y Gopalakrishna :ರಾಜ್ಯದಲ್ಲಿ ವಿಧಾನಸಭೆ(Karnataka Assembly Election) ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಪಕ್ಷಗಳಲ್ಲಿ ಬೆಳವಣಿಗೆಗಳು ಆಗುತ್ತಲೇ ಇವೆ. ಇದರೊಂದಿಗೆ ಪಕ್ಷಾಂತರ ಪರ್ವ ಮುಂದುವರೆಯುತ್ತಲೇ ಇದೆ. ಬಿಜೆಪಿ(BJP) ಪಾರ್ಟಿಗಂತೂ ಶಾಕ್ ಮೇಲೆ ಶಾಕ್ ಆಗುತ್ತಲೇ ಇದೆ. ಇಂದು ಕೂಡ ಪಕ್ಷದಲ್ಲಿ ಮತ್ತೊಂದು ವಿಕೆಟ್ ಪತನವಾಗಿದ್ದು, ಕೂಡ್ಲಿಗಿಯ ಬಿಜೆಪಿ ಶಾಸಕ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ.

ಹೌದು, ಪ್ರತಿಷ್ಠಿತ ಕೂಡ್ಲಿಗಿ(Kudligi) ಕ್ಷೇತ್ರದ ಶಾಸಕ ಎನ್‌.ವೈ. ಗೋಪಾಲಕೃಷ್ಣ(N Y Gopalakrishna) ಅವರು ಬಿಜೆಪಿ ಬಿಟ್ಟು ಇಂದು(ಮಾರ್ಚ್ 28) ಕೈ ಪಾಳಯ ಸೇರಿದ್ದಾರೆ. ಅಂದಹಾಗೆ ಕೂಡ್ಲಿಗಿ ವಿಧಾಸಭಾ ಕ್ಷೇತ್ರದಲ್ಲಿ 6 ಬಾರಿ ಶಾಸಕರಾಗಿರುವ ಎನ್‌.ವೈ.ಗೋಪಾಲಕೃಷ್ಣ ಅವರು ಕಾಂಗ್ರೆಸ್‌ ಸೇರ್ಪಡೆಯಾಗುವ ಮೂಲಕ ಬಿಜೆಪಿಗೆ ಶಾಕ್‌ ಕೊಟ್ಟಿದ್ದಾರೆ.

ಮೂಲ ಕಾಂಗ್ರೆಸಿಗರಾಗಿರುವ ಇವರು 2018ರಲ್ಲಿ ಬಿಜೆಪಿ ಸೇರಿ ಕೂಡ್ಲಿಗಿ ಶಾಸಕರಾಗಿದ್ದರು. ಇದೀಗ ಅವರು ಮರಳಿ ಕಾಂಗ್ರೆಸ್‌ ಸೇರಿದ ಬಳಿಕ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು(Molkalmuru) ಕ್ಷೇತ್ರದ ಅಭ್ಯರ್ಥಿಯಾಗುವ ಸಾಧ್ಯತೆ ಕಂಡುಬಂದಿದೆ. ಅವರು ಸೋಮವಾರ ರಾತ್ರಿ ಕಾಂಗ್ರೆಸ್‌ನ ಹಿರಿಯ ನಾಯಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ರಾಜಾನುಕುಂಟೆಯ ರೆಸಾರ್ಟ್‌ನಲ್ಲಿ ಭೇಟಿಯಾಗಿದ್ದು, ಪಕ್ಷ ಸೇರ್ಪಡೆಯನ್ನು ಖಚಿತಪಡಿಸಿದ್ದರು.

ಎನ್‌.ವೈ. ಗೋಪಾಲಕೃಷ್ಣ ಅವರು ಮೂಲತಃ ಮೊಳಕಾಲ್ಮುರು ಕ್ಷೇತ್ರದವರು. ಅಲ್ಲಿ ನಾಲ್ಕು ಬಾರಿ ಗೆದ್ದಿದ್ದರು. ಈ ಬಾರಿ ಬಿಜೆಪಿ ನಾಯಕ ಶ್ರೀರಾಮುಲು ಅವರು ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸದೆ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಬರಲಿದ್ದಾರೆ. ಇದು ಗೋಪಾಲಕೃಷ್ಣ ಅವರಿಗೆ ಅನುಕೂಲವಾಗುವ ನಿರೀಕ್ಷೆ ಇದೆ. ಆದರೆ, ಕಳೆದ ಬಾರಿ ಮೊಳಕಾಲ್ಮುರುವಿನಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಾ. ಬಿ. ಯೋಗೇಶ್ ಬಾಬುಗೆ ಟಿಕೆಟ್‌ ಮಿಸ್‌ ಆಗುವ ಸಾಧ್ಯತೆಗಳಿವೆ. ನಿಜವೆಂದರೆ ಅವರಿಗೆ ಟಿಕೆಟ್‌ ಸಿಗಲಿ ಎಂದು ಅವರ ಅಭಿಮಾನಿಗಳು ಮೊಣಕಾಲಿನಿಂದ ತಿರುಪತಿ ಬೆಟ್ಟ ಹತ್ತಿದ್ದಾರೆ.

ಎನ್‌. ಯಲ್ಲಪ್ಪ ಗೋಪಾಲಕೃಷ್ಣ ಅವರು ಒಟ್ಟು ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ನಾಲ್ಕು ಬಾರಿ ಮೊಳಕಾಲ್ಮುರುವಿನಿಂದ (1993ರಿಂದ 2013) ಶಾಸಕರಾಗಿದ್ದು, 2014ರಲ್ಲಿ ಕಾಂಗ್ರೆಸ್‌ನಿಂದ ಬಳ್ಳಾರಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಅವರು 2018ರಲ್ಲಿ ಬಿಜೆಪಿ ಸೇರಿ ಕೂಡ್ಲಿಗಿ ಶಾಸಕರಾದರು. ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ನಂತರ 2018ರಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಸಿಗದ ಕಾರಣ ಕೂಡ್ಲಿಗಿಯಿಂದ ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ಕಾಂಗ್ರೆಸ್ ಬಿಡುಗಡೆ ಮಾಡಿದ ಕೈ ಟಿಕೆಟ್ ಅಭ್ಯರ್ಥಿಗಳ ಹೆಸರಲ್ಲಿ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಟಿಕೆಟ್ ಘೋಷಣೆಯಾಗದ ಹಿನ್ನೆಲೆಯಲ್ಲಿ ಡಾ. ಯೋಗೇಶ್ ಬಾಬು ಅವರ ಅಭಿಮಾನಿಗಳು ಗೊಂದಲದಲ್ಲಿದ್ದಾರೆ. ಹಾಲಿ ಬಿಜೆಪಿ ಶಾಸಕ ಎನ್ ವೈ ಗೋಪಾಲಕೃಷ್ಣ ರಂಗಪ್ರವೇಶದಿಂದ ಡಾ. ಯೋಗೇಶ್ ಬಾಬುಗೆ ಕೈ ಟಿಕೆಟ್ ತಪ್ಪುವ ಆತಂಕ ಎದುರಾಗಿದೆ.

Leave A Reply