Sullia election: ಕೈ ಪಾಳಯದಲ್ಲಿ ಅಸಮಾಧಾನ ಸ್ಪೋಟ ! ಈ ಬಾರಿ ಸುಳ್ಯದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ-ಕೃಷ್ಣಪ್ಪ ! ಸುಳ್ಯದಲ್ಲಿ ಪಕ್ಷ ಗೆಲ್ಲಬಾರದು ಎಂಬ ನಿಲುವು ನಾಯಕರಿಗೆ ಇದ್ದ ಹಾಗಿದೆ- ನಂದ ಕುಮಾರ್
Sullia election: ದಕ್ಷಿಣಕನ್ನಡ : ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು,ಮೊದಲ ಪಟ್ಟಿಯಲ್ಲಿ 124 ಸ್ಥಾನಗಳಿಗೆ ಟಿಕೆಟ್ ಘೋಷಿಸಲಾಗಿದೆ.
ಸುಳ್ಯ(Sullia election) ಕ್ಷೇತ್ರಕ್ಕೆ ಕೆ.ಪಿ.ಸಿ.ಸಿ ಸಂಯೋಜಕ ಜಿ.ಕೃಷ್ಣಪ್ಪ ಅವರ ಹೆಸರು ಫೈನಲ್ ಮಾಡಲಾಗಿದೆ. ಇದು ನಂದ ಕುಮಾರ್ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರ ಅಸಹನೆಗೆ ಕಾರಣವಾಗಿದೆ.ಕೃಷ್ಣಪ್ಪ ಅವರ ಬೆಂಬಲಿಗರು ಫುಲ್ ಖುಷ್ ಆಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಅವರು ,ಸುಳ್ಯ ಕ್ಷೇತ್ರದಲ್ಲಿ ಜನತೆ ನೊಂದಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಬದಲಾವಣೆ ನಿಶ್ಚಿತ. ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಹೈಕಮಾಂಡ್ ಈ ಅವಕಾಶ ನೀಡಿದೆ. ಟಿಕೆಟ್ ಘೋಷಣೆಯಾದ ಸಂದರ್ಭದಲ್ಲಿ ಇತರ ಆಕಾಂಕ್ಷಿಗಳಿಗೆ ಬೇಸರವಾಗುವುದು ಸಹಜ. ಇದನ್ನು ಸಮಾಧಾನಪಡಿಸಿ ಬಗೆಹರಿಸಲು ನಾಯಕರಿದ್ದಾರೆ. ಎಲ್ಲರೂ ಮಾತನಾಡಿ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುತ್ತೇವೆ. ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಇನ್ನೋರ್ವ ಟಿಕೇಟ್ ಆಕಾಂಕ್ಷಿ ಕೆಪಿಸಿಸಿ ಸದಸ್ಯ ಹೆಚ್.ಎಂ.ನಂದ ಕುಮಾರ್ ಅವರು ಪ್ರತಿಕ್ರಿಯೆ ನೀಡಿ,ಸುಳ್ಯ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಭಾವನೆಗಳಿಗೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಹಾಗು ಹೈಕಮಾಂಡ್ ಬೆಲೆ ಕೊಟ್ಟಿಲ್ಲ. ಜಿಲ್ಲೆಯ ಕೆಲವು ನಾಯಕರಿಗೆ, ಹೈಕಮಾಂಡ್‌ಗೆ ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದು ಬೇಕಾಗಿಲ್ಲ .ಕಾರ್ಯಕರ್ತರು ಹಾಗೂ ಸ್ನೇಹಿತರ ಜೊತೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಎಐಸಿಸಿ ಹಾಗು ಕೆಪಿಸಿಸಿ ನಡೆಸಿದ ಎಲ್ಲಾ ಸಮೀಕ್ಷೆಗಳಲ್ಲಿ ನನ್ನ ಹೆಸರು ಮುಂಚೂಣಿಯಲ್ಲಿತ್ತು. ಕಳೆದ 5-6 ವರ್ಷಗಳಿಂದ ಸುಳ್ಯ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಕಾರ್ಯಕರ್ತರ, ಜನರ ಒಲವು ಇತ್ತು. ಆದರೆ ಜಿಲ್ಲೆಯ ಕೆಲವು ಕಾಂಗ್ರೆಸ್ ಮುಖಂಡರು ಟಿಕೆಟ್ ತಪ್ಪಿಸಿದ್ದಾರೆ.ಅವರಿಗೆ ಸುಳ್ಯದಲ್ಲಿ ಕಾಂಗ್ರೆಸ್ ಗೆಲ್ಲಬಾರದು ಎಂಬ ನಿಲುವು ಇದ್ದ ಹಾಗಿದೆ ಎಂದು ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಮುಂದಿನ ರಾಜಕೀಯ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.