Renuka Chowdhury: ನನ್ನನ್ನು ಮೋದಿ ಶೂರ್ಪನಖಿ ಎಂದಿದ್ದರು, ಅವರ ವಿರುದ್ಧ ಮಾನನಷ್ಟ ಕೇಸ್ ಹಾಕ್ತೀನಿ :ರೇಣುಕಾ ಚೌಧರಿ! ಅಷ್ಟಕ್ಕೂ ಮೋದಿ ಹಾಗಂದಿದ್ಯಾಕೆ?
Renuka Chowdhury :ಪ್ರಧಾನಿ ಮೋದಿ(PM) ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ರಾಹುಲ್ ಗಾಂಧಿ (Rahul Gandhi)ಗೆ ಸೂರತ್ ಕೋರ್ಟ್ 2 ವರ್ಷ ಜೈಲು ವಿಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆಮಾಡಿದ ಬೆನ್ನಲ್ಲೇ ನಾನು ನರೇಂದ್ರ ಮೋದಿ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಕೇಸ್ ಹಾಕುತ್ತೇನೆ ಎಂದು ಕಾಂಗ್ರೆಸ್ ನಾಯಕಿ, ಮಾಜಿ ಸಚಿವೆ ರೇಣುಕಾ ಚೌಧರಿ (Renuka Chowdhury) ಹೇಳಿದ್ದಾರೆ.
ಹೌದು, ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಟ್ವೀಟ್ ಮಾಡಿ ‘ನನ್ನನ್ನು ಮೋದಿ ಶೂರ್ಪನಖಿ (Surpanaka) ಎಂದು ಉಲ್ಲೇಖಿಸಿದ್ದಾರೆ. ಹೀಗಾಗಿ ನಾನು ಮೋದಿ (Narendra Modi) ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ನ್ಯಾಯಾಲಯಗಳು ಎಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡೋಣ ಎಂದು ಸವಾಲೆಸಿದ್ದಾರೆ.
ಅಂದಹಾಗೆ 2018ರ ರಾಜ್ಯಸಭಾ (Rajya Sabha) ಕಲಾಪದ ಹಳೆ ವಿಡಿಯೋದಲ್ಲಿ ಆಧಾರ್ ಕಾರ್ಡ್‌ಗೆ (Aadhar Card) ಸಂಬಂಧಿಸಿದಂತೆ ಪ್ರಧಾನಿ ಮೋದಿ ಮಾತನಾಡುತ್ತಿರುತ್ತಾರೆ. ಈ ವೇಳೆ ಅವರ ಹೇಳಿಕೆಗೆ ಸಂಸದೆ ರೇಣುಕಾ ಚೌಧರಿ ಜೋರಾಗಿ ನಗುತ್ತಿರುತ್ತಾರೆ. ಆಗ ಸಭಾಪತಿ ವೆಂಕಯ್ಯ ನಾಯ್ಡು (Venkaiah Naidu) ಅವರು, “ನಿಮ್ಮ ಸಮಸ್ಯೆ ಏನು? ನಿಮಗೇನಾದರೂ ಸಮಸ್ಯೆ ಆಗಿದ್ದರೆ ವೈದ್ಯರ ಬಳಿ ಹೋಗಿ, ಇಲ್ಲದಿದ್ದರೆ ದಯವಿಟ್ಟು ಸುಮ್ಮನೇ ಕುಳಿತುಕೊಳ್ಳಿ” ಎಂದು ತರಾಟೆಗೆ ತೆಗೆದುಕೊಳ್ಳುತ್ತಾರೆ.
ಆದರೆ ಸಭಾಪತಿ ಸೂಚನೆಯನ್ನೂ ಧಿಕ್ಕರಿಸಿ ರೇಣುಕಾ ನಗುವುದನ್ನು ಮುಂದುವರಿಸುತ್ತಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, “ಸಭಾಪತಿಜೀ ರೇಣುಕಾಜೀ ಅವರಿಗೆ ನೀವು ನಗಲು ಬಿಡಿ. ಯಾಕೆಂದರೆ ರಾಮಾಯಣ (Ramayana) ಧಾರಾವಾಹಿಯ ನಂತರ ಈ ರೀತಿಯ ನಗುವನ್ನು ಕೇಳುವ ಸೌಭಾಗ್ಯ ಇಂದು ನಮಗೆ ಒದಗಿ ಬಂದಿದೆ” ಎಂದು ವ್ಯಂಗ್ಯವಾಡುತ್ತಾರೆ. ಮೋದಿ ರಾಮಾಯಣದ ಉದಾಹರಣೆ ನೀಡಿ ರೇಣುಕಾ ಚೌಧರಿ ಅವರ ಕಾಲೆಳೆಯುತ್ತಿದ್ದಂತೆ ಬಿಜೆಪಿ ಸಂಸದರು ಬೆಂಚನ್ನು ಕುಟ್ಟಿ ಜೋರಾಗಿ ಬಿದ್ದು ಬಿದ್ದು ನಗಲು ಶುರು ಮಾಡುತ್ತಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಈಗ ಕಾಂಗ್ರೆಸ್ ನಾಯಕರು ಈ ಹೇಳಿಕೆಯ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದರೆ ಕೆಲವರು ಈ ಹೇಳಿಕೆ ವಿರುದ್ಧ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಲು ಬರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಈ ವಿಚಾರವಾಗಿ ಕೇಸ್ ಹಾಕಲು ಸಾಧ್ಯವೇ? ಈ ಕೇಸ್ ಸ್ಟಾಂಡ್ ಆಗುತ್ತದೆಯಾ?
ಮೊದಲನೆಯದಾಗಿ ಕಲಾಪದ ವೇಳೆ ಮಾತನಾಡುವಾಗ ಮೋದಿ ಎಲ್ಲಿಯೂ ನೇರವಾಗಿ ರೇಣುಕಾ ಚೌಧರಿ ಅವರನ್ನು ʼಶೂರ್ಪನಖಿʼ ಎಂದು ಸಂಬೋಧನೆ ಮಾಡಿಲ್ಲ. ಎರಡನೇಯದಾಗಿ ಸಂಸತ್ತು ಅಥವಾ ರಾಜ್ಯದ ಶಾಸನ ಸಭೆಯಲ್ಲಿ ಸದಸ್ಯರ ವಿರುದ್ಧ ಏನೇ ಮಾತನಾಡಿದರೂ ಆ ಹೇಳಿಕೆಯನ್ನು ಪ್ರಶ್ನಿಸಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಸದನದಲ್ಲಿ ಮಾತನಾಡಿ ಹಕ್ಕು ಚ್ಯುತಿಯಾಗಿದ್ದರೆ ಅದನ್ನು ಸದನದಲ್ಲೇ ಪ್ರಶ್ನೆ ಮಾಡಬೇಕು. ಈ ವಿಚಾರದಲ್ಲಿ ಅಂತಿಮ ನಿರ್ಧಾರ ಸ್ಪೀಕರ್ ತೆಗೆದುಕೊಳ್ಳಬಹುದೇ ವಿನಾ: ನ್ಯಾಯಾಧೀಶರಿಗೆ ತೆಗೆದುಕೊಳ್ಳಲು ಬರುವುದಿಲ್ಲ. ಅಂತೆಯೇ ಮೋದಿ ರಾಜ್ಯಸಭಾ ಕಲಾಪದಲ್ಲಿ ಮಾತನಾಡಿದ್ದಾರೆ. ಹೀಗಾಗಿ ರೇಣುಕಾ ಚೌಧರಿ ಈ ವಿಷಯವನ್ನು ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲು ಸಾಧ್ಯವಾಗದೇ ಇರಬಹುದು.
ಈ ವಿಚಾರ ಕೆಲವು ವರ್ಷಗಳ ಹಿಂದೆಯೂ ಚರ್ಚೆಯಾಗಿತ್ತು. ನವಂಬರ್ 29 ರಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ರಾವಣನಿಗೆ ಹೋಲಿಸಿದ್ದರು. ವಿಧಾನಸಭೆ ಚುನಾವಣೆ ಘೋಷಣೆಯಾಗಿರುವ ಗುಜರಾತ್‌ನ ಅಹಮದಾಬಾದ್‌ನ ಬೆಹ್ರಾಮ್‌ಪುರದಲ್ಲಿ ಮಾತನಾಡಿದ ಖರ್ಗೆ(Mallikarjun Kharge), ಪ್ರಧಾನಿ ನರೇಂದ್ರ ಮೋದಿಗೆ ರಾವಣನಂತೆ 100 ತಲೆಗಳಿವೆಯೇ. ಪ್ರಧಾನಿ ಮೋದಿ (Prime Minister Narendra Modi) ಯಾವಾಗಲೂ ತಮ್ಮ ಬಗ್ಗೆಯೇ ಮಾತನಾಡುತ್ತಾರೆ. ಅವರು ಬೇರೆ ಯಾರನ್ನೂ ನೋಡಬೇಡಿ, ಮೋದಿಯತ್ತ ನೋಡಿ ಮತ ಚಲಾಯಿಸಿ ಎನ್ನುತ್ತಾರೆ. ಎಷ್ಟು ಸಲ ಅಂತ ನಾವು ನಿಮ್ಮನ್ನು ನೋಡಬೇಕು? ಕಾರ್ಪೋರೇಷನ್ ಚುನಾವಣೆಯೇ ಬರಲಿ, ಎಂಎಲ್‌ಎ ಚುನಾವಣೆ ಅಥವಾ ಎಂಪಿ ಚುನಾವಣೆಯೇ ಬರಲಿ ಬಿಜೆಪಿಯವರು ಮೋದಿಯತ್ತ ನೋಡಿ ಮತ ಹಾಕಿ ಎಂದು ಹೇಳುತ್ತಾರೆ. ನಿಮಗೇನಾದರೂ ರಾವಣನಂತೆ 100 ತಲೆ ಇದೆಯೇ ಎಂದು ಖರ್ಗೆ ಪ್ರಶ್ನಿಸಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ಆರದರೆ ಈ ವೇಳೆ ಖರ್ಗೆ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಕಾಂಗ್ರೆಸ್‌ನ ಹಿರಿಯ ನಾಯಕಿ ರೇಣುಕಾ ಚೌಧರಿ ಈ ಹಿಂದೆ ಪ್ರಧಾನಿ ನನ್ನನ್ನು ಶೂರ್ಪನಖಿಗೆ ಹೋಲಿಸಿದ್ದರು ಆಗ ಈ ಮೀಡಿಯಾಗಳು ಎಲ್ಲಿದ್ದವು ಎಂದು ಕಿಡಿಕಾರಿದ್ದರು. ಈ ಬಗ್ಗೆ ಟ್ವಿಟ್ ಮಾಡಿದ್ದ ಅವರು ನನ್ನನ್ನು ಪ್ರಧಾನಿ ನರೇಂದ್ರ ಮೋದಿ ಸಂಸತ್‌ನಲ್ಲಿ ರಾವಣನ ಸಹೋದರಿ ಶೂರ್ಪನಖಿಗೆ ಹೋಲಿಸಿದ್ದರೂ ಆಗ ಮಾಧ್ಯಮಗಳು ಎಲ್ಲಿ ಹೋಗಿದ್ದವು ಎಂದು ಪ್ರಶ್ನೆ ಮಾಡಿದ್ದರು.
ಇದನ್ನೂ ಓದಿ: RahulGandhi :ಸಂಸದ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ಆದೇಶ