Adichunchanagiri : ಆದಿಚುಂಚನಗಿರಿ ಶ್ರೀಗಳಿಂದ ಸಿನಿಮಾ ವಿಚಾರಕ್ಕೆ ತರಾಟೆ: ಉರಿಗೌಡ ನಂಜೇಗೌಡ ಸಿನಿಮಾದಿಂದ ಹಿಂದೆ ಸರಿದ ಮುನಿರತ್ನ!

Adichunchanagiri : ಈಗಾಗಲೇ ಉರಿಗೌಡ, ನಂಜೇಗೌಡ (Urigowda Nanjegowda) ಸಿಮಿಮಾ ನಿರ್ಮಾಣ ಮಾಡಲು ಸಚಿವ ಮುನಿರತ್ನ ತೀರ್ಮಾನ ಮಾಡಿದ್ದರು. ಆದರೆ, ಆದಿಚುಂಚನಗಿರಿ (Adichunchanagiri) ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ಬಳಿಕ ಈ ಸಿನಿಮಾ ನಿರ್ಮಾಣ ಕೈಬಿಟ್ಟಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಟಿಪ್ಪು ಸುಲ್ತಾನನನ್ನು ಕೊಂದಿದ್ದಾರೆ ಎಂಬ ಒಕ್ಕಲಿಗ ವೀರರಾದ ಉರಿಗೌಡ, ನಂಜೇಗೌಡ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದ ಮುನಿರತ್ನ ಅವರನ್ನು ಆದಿಚುಂಚನಗಿರಿ ಶ್ರೀಗಳು ತಮ್ಮನ್ನು ಭೇಟಿಯಾಗುವಂತೆ ಸೂಚನೆ ನೀಡಿದ್ದು, ನಂತರ ಮುನಿರತ್ನ ಸ್ವಾಮೀಜಿಗಳನ್ನು ಭೇಟಿಯಾಗಿ ಚರ್ಚೆ ಮಾಡಿದ ನಂತರ ಸಿನಿಮಾ ನಿರ್ಮಾಣವನ್ನು ಕೈ ಬಿಟ್ಟಿದ್ದೇನೆ ಎಂದು ಸ್ವತಃ ಮುನಿರತ್ನ ಘೋಷಣೆ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಕೊಮ್ಮೇರಹಳ್ಳಿಯ ಆದಿಚುಂಚನಗಿರಿ ಮಠದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಯೊಂದಿಗೆ ಚರ್ಚೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಮುನಿರತ್ನ ಅವರು, ವೃಷಭ ಪ್ರೊಡಕ್ಷನ್ ಅಡಿಯಲ್ಲಿ ಮೇ 14 ಚಿತ್ರೀಕರಣದ ಮೂರ್ತ ಮಾಡಬೇಕು ಅಂದುಕೊಂಡಿದ್ದೆನು. ಅಲ್ಲದೆ ಮೈಸೂರು ಸಂಸ್ಥಾನಕ್ಕೆ ಬಹಳ ದೊಡ್ಡ ಸಿನಿಮಾ ಮಾಡಬೇಕೆಂಬ ನಿರೀಕ್ಷೆಯಿತ್ತು. ಜೊತೆಗೆ ಕುಮಾರಸ್ವಾಮಿ ಅವರ ಹೇಳಿಕೆಯಿಂದಲೇ ಸಿನಿಮಾ ಮಾಡಲು ನಿರ್ಧಾರ ಮಾಡಿದ್ದೆನು.

ಇದೀಗ ಉರಿಗೌಡ ನಂಜೇಗೌಡ ವಿಚಾರದಲ್ಲಿ ಪುರಾವೆಗಳು ಸರಿಯಾಗಿ ಮತ್ತು ಸ್ಪಷ್ಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರ ಜೊತೆ ಚರ್ಚೆ ಮಾಡಿದೆ. ಆಗ ನನಗೆ ಅನ್ನಿಸಿತು, ಯಾರಿಗೂ ಮನಸ್ಸು ನೋಯಿಸಿ ಸಿನಿಮಾ ಮಾಡಬಾರದು. ಸಿನಿಮಾ ಮಾಡಲು ಕಥೆಗಳು ತುಂಬಾ ಸಿಗುತ್ತದೆ ಎಂದು.

ಅದಲ್ಲದೆ ಬಿಜೆಪಿಯವನು ಅಂತಾ ನಾನು ಈ ಸಿನಿಮಾ ಮಾಡಲು ಹೋಗಲ್ಲ. ಶ್ರೀಗಳು ನೈಜತೆ ಇದ್ದರೆ ಅದರ ಬಗ್ಗೆ ಯೋಚನೆ ಮಾಡಿ ಎಂದು ಸೂಚಿಸಿದ್ದಾರೆ. ಹೀಗೆ, ನಾನಾ ಗೊಂದಲ ಇರುವಾಗ ಯಾವುದು ಸೂಕ್ತ ಎಂದು ಕೇಳಿದರು. ಆದ್ದರಿಂದ ಶ್ರೀಗಳ ಮಾತಿನಂತೆ ನನ್ನ ಸ್ವ ಇಚ್ಛೆ ಯಿಂದ ಸಿನಿಮಾ ಮಾಡುವುದನ್ನು ಕೈಬಿಟ್ಟಿದ್ದೇನೆ ಎಂದು ತಿಳಿಸಿದರು.

ನಾನು ಸುಮಾರು 25 ವರ್ಷಗಳಿಂದ ಸಿನಿಮಾ ಮಾಡುತ್ತಿದ್ದೇನೆ. ಕೊನೆಯದಾಗಿ ಕುರುಕ್ಷೇತ್ರ ಸಿನಿಮಾ ಮಾಡಿದ್ದೇನೆ. ಇನ್ನು ಶ್ರೀಗಳ ಬಗ್ಗೆ ಅಪಾರ ಗೌರವವಿದ್ದು, ಅವರು ಅಭಿಪ್ರಾಯ ಮೇರೆಗೆ , ಮತ್ತೆ ಚರ್ಚಿಸಲು ಮುಂದಾಗದೆ ಸಿನಿಮಾ ನಿರ್ಮಾಣ ಕೈಬಿಡಲು ನಿರ್ಧಾರ ಮಾಡಿದ್ದೇನೆ ಎಂದು ಮುನಿರತ್ನ ಅವರು ಹೇಳಿದರು.

ಒಟ್ಟಿನಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಾಥ್‌ ನೀಡಲು ಸಿದ್ಧಪಡಿಸುತ್ತಿದ್ದ ಉರಿಗೌಡ, ನಂಜೇಗೌಡ ಸಿನಿಮಾ ಪ್ರಯತ್ನಕ್ಕೆ ನಾಂದಿ ಹಾಡಲಾಗಿದೆ.

Leave A Reply

Your email address will not be published.