Increase rubber price, we will vote BJP- Kerala Bishap: ‘ ರಬ್ಬರ್ ದರವನ್ನು ಕೆಜಿಗೆ 300 ರೂ.ಗೆ ಹೆಚ್ಚಿಸಿ, ನಮ್ಮ ಮತಗಳನ್ನು ಬುಕ್ ಮಾಡ್ಕೊಳ್ಳಿ ‘ ಕೇಂದ್ರದ ಬಿಜೆಪಿಗೆ ಕೇರಳ ಬಿಷಪ್ ಸಂದೇಶ !
Increase rubber price, we will vote BJP- Kerala Bishap: ರಬ್ಬರ್ ಖರೀದಿ ದರವನ್ನು ಪ್ರತಿ ಕಿಲೋಗ್ರಾಂಗೆ 300 ರೂ.ಗೆ (Increase Rubber price to 300) ಹೆಚ್ಚಿಸುವುದಾಗಿ ಕೇಂದ್ರವು ಭರವಸೆ ನೀಡಿದರೆ, ಬಿಜೆಪಿಗೆ (BJP) ದಕ್ಷಿಣ ರಾಜ್ಯದಿಂದ ಸಂಸದರ ಕೊರತೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಕೇರಳದ ಬಿಷಪ್ ಹೇಳಿದ್ದಾರೆ. ಕೇರಳದ ಪ್ರಭಾವಿ ಸೈರೋ-ಮಲಬಾರ್ ಕ್ಯಾಥೋಲಿಕ್ ಚರ್ಚ್‌ನ ಹಿರಿಯ ಬಿಷಪ್ (Kerala Bishap) ಈ ರೀತಿ ಹೇಳುವ ಮೂಲಕ ಕೇರಳದ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಕೇರಳದ ತಲಶ್ಸೆರಿ ಆರ್ಚ್‌ಬಿಷಪ್ ಮಾರ್ ಜೋಸೆಫ್ ಪಂಪ್ಲಾನಿ (Kerala Bishap joseph pamplani) ಅವರು ರೈತರ ರ್ಯಾಲಿಯಲ್ಲಿ ಮಾತನಾಡುತ್ತಿದ್ದರು. ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮತವಾಗಿ ಪರಿವರ್ತನೆಯಾಗದಿದ್ದರೆ ಪ್ರಜಾಪ್ರಭುತ್ವದಲ್ಲಿ ಯಾವುದೇ ಪ್ರತಿಭಟನೆಗೆ ಬೆಲೆ ಇಲ್ಲ. ನೀವು ರಬ್ಬರ್ ಬೆಲೆ ಹೆಚ್ಚಿಸಿದರೆ ನಿಮ್ಮ ಪಕ್ಷ ಯಾವುದೇ ಇರಲಿ, ನಾವು ನಿಮಗೆ ಮತ ಹಾಕುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಹೇಳುತ್ತೇವೆ. 300 ರೂ.ಗೆ ರಬ್ಬರ್ ಬೆಲೆ ಹೆಚ್ಚಿಸಿದಿರೆಂದಾದರೆ ನಾವು ವಲಸಿಗ ಜನರು ನಿಮ್ಮ ಸಂಸದರ ಕೊರತೆಯ ಸಮಸ್ಯೆಯನ್ನು ಪರಿಹರಿಸುತ್ತೇವೆ.” ಎಂದಿದ್ದಾರೆ.
ಅಲ್ಪಸಂಖ್ಯಾತರ ಪ್ರಾಬಲ್ಯದ ಮೂರು ಈಶಾನ್ಯ ರಾಜ್ಯಗಳಲ್ಲಿ ತಮ್ಮ ಪಕ್ಷದ ಚುನಾವಣಾ ಸಾಧನೆಯಿಂದ ಉತ್ತೇಜಿತರಾದ ಪ್ರಧಾನಿ ನರೇಂದ್ರ ಮೋದಿ ಅವರು ಕೇಸರಿ ಪಕ್ಷಕ್ಕೆ ಅಲ್ಪಸಂಖ್ಯಾತರ ಹೆಚ್ಚುತ್ತಿರುವ ಬೆಂಬಲವನ್ನು ಪರಿಗಣಿಸಿ ಕೇರಳದಲ್ಲಿ ಬಿಜೆಪಿ ಮೈತ್ರಿಕೂಟ ಸರ್ಕಾರ ರಚಿಸಲಿದೆ ಎಂದು ಹೇಳಿದ ಒಂದೆರಡು ವಾರಗಳ ನಂತರ ಆರ್ಚ್‌ಬಿಷಪ್‌ರ ಈ ಹೇಳಿಕೆ ಬಂದಿದೆ.
ಬಿಷಪ್ ಹೇಳಿಕೆಯನ್ನು ಕೇರಳ ರಾಜ್ಯದ ಬಿಜೆಪಿ ಸ್ವಾಗತಿಸಿದ್ದು, ಈ ಬಗ್ಗೆ ಕೇಂದ್ರ ಮಟ್ಟದಲ್ಲಿ ಚರ್ಚಿಸಲು ಸಿದ್ಧ ಎಂದು ಬಿಜೆಪಿ ಘಟಕ ಹೇಳಿದೆ. ಕೇಸರಿ ಪಕ್ಷಕ್ಕೆ ಒಲವು ತೋರುವ ಆರ್ಚ್‌ಬಿಷಪ್‌ರ ಹೇಳಿಕೆಗಳಿಗೆ ಕಾಂಗ್ರೆಸ್ ಮತ್ತು ಕೇರಳದ ಆಡಳಿತಾರೂಢ ಸಿಪಿಐ(ಎಂ) ಎಚ್ಚರಿಕೆಯಿಂದ ಪ್ರತಿಕ್ರಿಯಿಸಿವೆ.
ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್, ರಾಜ್ಯ ಸರ್ಕಾರವು ಹಿಂದಿನಿಂದಲೂ ಕೇರಳದ ರೈತರನ್ನು ನಿರ್ಲಕ್ಷಿಸುತ್ತಿದೆ ಮತ್ತು ಸಿಪಿಐ(ಎಂ) ಈಗ ಕ್ರಿಶ್ಚಿಯನ್ ಸಮುದಾಯವು ಬಿಜೆಪಿಯೊಂದಿಗೆ ಕೈಜೋಡಿಸುವ ಭಯದಲ್ಲಿದೆ ಎಂದು ಕಿಡಿಕಾರಿದ್ದಾರೆ. ಆರ್ಚ್ ಬಿಷಪ್ ಪ್ರಸ್ತಾಪಿಸಿದ ವಿಷಯಗಳನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ಏನು ಮಾಡಬಹುದು ಎಂಬುದನ್ನು ಕೇಂದ್ರ ಮಟ್ಟದಲ್ಲಿ ಚರ್ಚಿಸಲು ಸಿದ್ಧ ಎಂದು ಸುರೇಂದ್ರನ್ ಹೇಳಿದರು.
ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾರೂಢ ಸಿಪಿಐ(ಎಂ) ಮತ್ತು ಕಾಂಗ್ರೆಸ್, ಭಾರತದಾದ್ಯಂತ ಹಲವಾರು ಕ್ರೈಸ್ತರ ಆರಾಧನಾ ಸ್ಥಳಗಳ ಮೇಲೆ ಸಂಘಪರಿವಾರ ಮತ್ತು ಆರ್‌ಎಸ್‌ಎಸ್‌ನಿಂದ ಆಪಾದಿತ ದಾಳಿಗಳನ್ನು ಎತ್ತಿ ತೋರಿಸಿದೆ. ಅದರ ವಿರುದ್ಧ ಇತ್ತೀಚೆಗೆ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಲಾಯಿತು, ಬಿಜೆಪಿಯನ್ನು ಅವರು ಬೆಂಬಲಿಸಲು ಸಾಧ್ಯವಿಲ್ಲ ಎಂದು ಹೇಳಿದೆ. “ಬಿಜೆಪಿಯವರು ಕೋಮು ಕಲಹ ಸೃಷ್ಟಿಸಿ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ರಬ್ಬರ್ ಬೆಲೆಯದ್ದು ಮಾತ್ರ ಸಮಸ್ಯೆ ಅಲ್ಲ” ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ ವಿ ಗೋವಿಂದನ್ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ವಿ ಡಿ ಸತೀಶನ್ ಅವರು ಆರ್ಚ್‌ಬಿಷಪ್ ಅವರ ಹೇಳಿಕೆಯು ರೈತರ ಸಂಕಷ್ಟದ ಆಧಾರದ ಮೇಲೆ ಕೇವಲ “ಭಾವನಾತ್ಮಕ” ಪ್ರತಿಕ್ರಿಯೆಯಾಗಿದೆ ಮತ್ತು ಅದಕ್ಕಿಂತ ಹೆಚ್ಚೇನೂ ಅಲ್ಲ. “ಉಮ್ಮನ್ ಚಾಂಡಿ ಸರ್ಕಾರದ ಅವಧಿಯಲ್ಲಿ 500 ಕೋಟಿ ರೂ. ರಬ್ಬರ್ ಅಭಿವೃದ್ಧಿ ನಿಧಿಯನ್ನು ಸಂಪೂರ್ಣವಾಗಿ ಬಳಸಲಾಗಿತ್ತು. ಪ್ರಸ್ತುತ ಅದು ಹೆಸರಿಗೆ ಮಾತ್ರ ಇದೆ ಮತ್ತು ಬಳಕೆಯಾಗುತ್ತಿಲ್ಲ” ಎಂದು ಅವರು ಆಡಳಿತಾರೂಢ ಸಿಪಿಐ (ಎಂ) ಅನ್ನು ದೂಷಿಸಿದ್ದಾರೆ.
“ಆದ್ದರಿಂದ ರಬ್ಬರ್ ರೈತರಿಗೆ ಯಾವುದೇ ಗ್ಯಾರಂಟಿ ಇಲ್ಲ. ಆದರೆ, ಆ ಕಾರಣಕ್ಕಾಗಿ, ನಾವು ಕೇಂದ್ರದಲ್ಲಿ ಪಕ್ಷದ ಆಡಳಿತವನ್ನು ಬೆಂಬಲಿಸಲು ಸಾಧ್ಯವಿಲ್ಲ, ಏಕೆಂದರೆ ಕಳೆದ 3-4 ವರ್ಷಗಳಲ್ಲಿ ದೇಶಾದ್ಯಂತ 500 ಕ್ಕೂ ಹೆಚ್ಚು ಕ್ರಿಶ್ಚಿಯನ್ ಆರಾಧನಾ ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ” ಎಂದು ಸತೀಶನ್ ಹೇಳಿದರು.
ಬಿಷಪ್ ಅವರ ಹೇಳಿಕೆ ವೈರಲ್ ಆಗುತ್ತಿದ್ದಂತೆ, ಈ ಹೇಳಿಕೆಯೊಂದಿಗೆ ಅವರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂಬ ಊಹಾಪೋಹದ ಜೊತೆಗೆ, ಆರ್ಚ್ ಬಿಷಪ್ ಅವರು ನಿರ್ದಿಷ್ಟವಾಗಿ ಕೇಸರಿ ಪಕ್ಷವನ್ನು ಉಲ್ಲೇಖಿಸುತ್ತಿಲ್ಲ, ಆದರೆ ರಬ್ಬರ್ ಖರೀದಿ ಬೆಲೆಯನ್ನು 300 ರೂ.ಗೆ ಏರಿಸುವ ಭರವಸೆಯನ್ನು ಯಾವ ಪಕ್ಷ ನೀಡುತ್ತದೋ ಆ ಪಕ್ಷವನ್ನು ಉಲ್ಲೇಖಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
“ನಾನು ಬಿಜೆಪಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿಲ್ಲ. ಅದು ಕಾಂಗ್ರೆಸ್ ಅಥವಾ ಮಾರ್ಕ್ಸ್‌ವಾದಿ ಪಕ್ಷವಾಗಿರಬಹುದು. ಪ್ರಸ್ತುತ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಮತ್ತು ಅವರು ನಮಗೆ ಸಹಾಯ ಮಾಡುವ ಸ್ಥಿತಿಯಲ್ಲಿದ್ದಾರೆ. ಹಾಗಾಗಿ ರಬ್ಬರ್ ಬೆಲೆ 300ಕ್ಕೆ ಏರಿಸಿದರೆ, ರೈತರು ಅವರಿಗೆ ಮತ ಹಾಕುತ್ತಾರೆ.ರೈತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ರೈತರು ತಮಗೆ ಸಹಾಯ ಮಾಡುವ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಹೇಳಿದರು. ಅವರಿಗೆ ಸಹಾಯ ಮಾಡಿದ್ದು ಬಿಜೆಪಿಯಾಗಿದ್ದರೆ, ರೈತರು ಅವರಿಗೆ ಮತ ಹಾಕುತ್ತಾರೆ. “ಕೇರಳದಲ್ಲಿ ಆಡಳಿತಾರೂಢ ಎಡರಂಗವು ಅದನ್ನು ಮಾಡಲು ಸಾಧ್ಯವಾದರೆ, ಅವರು ರೈತರ ಬೆಂಬಲವನ್ನು ಪಡೆಯುತ್ತಾರೆ. ಬಿಜೆಪಿಗೆ ಕೇರಳದಿಂದ ಯಾವುದೇ ಸಂಸದ ಇಲ್ಲ ಎಂದು ಎಲ್ಲರಿಗೂ ತಿಳಿದಿದೆ. ಎಡರಂಗಕ್ಕೂ ಈ ಪ್ರದೇಶದಿಂದ ಯಾವುದೇ ಸಂಸದ ಇಲ್ಲ” ಎಂದು ಬಿಷಪ್ ಅವರು ಹೇಳಿದ್ದಾರೆ.