C T Ravi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಕುಕ್ಕರ್ ಬಾಂಬ್ ಇಡೋರು ಹುಟ್ಕೊಳ್ತಾರೆ! ಬಿಜೆಪಿ ಗೆದ್ದರೆ ಭಾರತ್ ಮಾತಾ ಕೀ ಜೈ ಎನ್ನುತ್ತೇವೆ- ಸಿಟಿ ರವಿ
BJP-C T Ravi : ರಾಜ್ಯದಲ್ಲಿ ಚುನಾವಣೆ ಹತ್ತಿರವಾದಂತೆ ಕುಕ್ಕರ್ ಗಳು ವಿಷಲ್ ಹೊಡೆಯದೆ ಭಾರೀ ಸದ್ದುಮಾಡುತ್ತಿವೆ. ಈ ಸಲದ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಕೆಲವು ಕ್ಷೇತ್ರಗಳ ಅಭ್ಯರ್ಥಿಗಳು ಕುಕ್ಕರ್ ಮೊರೆ ಹೋಗಿದ್ದು, ಇದನ್ನೇ ಬಂಡವಾಳವನ್ನಾಗಿಸಿಕೊಂಡ ಬಿಜೆಪಿ(BJP)ಯು ಕಳೆದ ವರ್ಷ ಮಂಗಳೂರಿ(Mangalore) ನಲ್ಲಿ ನಡೆದ ಕುಕ್ಕರ್ ಬಾಂಬ್ ಪ್ರಕರಣಕ್ಕೂ ಈ ಕುಕ್ಕರ್ ವಿತರಣೆಗೂ ಲಿಂಕ್ ಮಾಡಿ ತನ್ನ ಪ್ರಚಾರಕ್ಕೆ ಹೊಸ ವಿಷಯವನ್ನು ಸೇರಿಸಿಕೊಂಡಿದೆ. ಯಾಕೆಂದರೆ ಬಿಜೆಪಿ ಶಾಸಕ ಸಿಟಿ ರವಿ(BJP-C T Ravi) ಅವರು ಇತ್ತೀಚಿನ ದಿನಗಳಲ್ಲಿ ಕುಕ್ಕರ್ ಬಾಂಬ್ ವಿಚಾರವಾಗಿಯೇ ಮಾತನಾಡುತ್ತಿದ್ದು, ಇದನ್ನೇ ಪ್ರತಿಪಕ್ಷಗಳನ್ನು ಅಲ್ಲಗಳೆಯಲು ಬಲವಾದ ಕಾರಣವಾಗಿ ಬಳಸೋದನ್ನು ನಾವು ಕಾಣುತ್ತಿದ್ದೇವೆ.
ಹೌದು, ಸದಾ ಈ ಕುಕ್ಕರ್ ವಿಚಾರವಾಗಿಯೇ ಮಾತನಾಡುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು ಇದೀಗ ‘ಕಾಂಗ್ರೆಸ್ ಗೆದ್ದರೆ ರಾಜ್ಯ ಮಾತ್ರವಲ್ಲ ದೇಶವೂ ಸೋತಂತೆ. ನಾವು ಬಿಜೆಪಿಯವರು ಗೆದ್ದರೆ ಭಾರತ ಮಾತಾ ಕೀ ಜೈ ಎನ್ನುತ್ತೇವೆ. ಮಾತ್ರವಲ್ಲದೇ, ಕಾಂಗ್ರೆಸ್ ಗೆದ್ದರೆ ಕುಕ್ಕರ್‌ನಲ್ಲಿ ಬಾಂಬ್ ಇಡುವವರು ಎದ್ದು ಕುಳಿತುಕೊಳ್ಳುತ್ತಾರೆ ಎಚ್ಚರಿಕೆ ಇರಲಿ ಎಂದು’ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಹಾವೇರಿ(Haveri) ಯಲ್ಲಿ ಶನಿವಾರ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋ, ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ನಮಗೆ ಬೇಕಾಗಿರುವುದು ನಾಯಕ ನರೇಂದ್ರ ಮೋದಿ, ರೈತ ನಾಯಕ ಯಡಿಯೂರಪ್ಪ, ಕಾಮನ್‌ಮ್ಯಾನ್ ಬಸವರಾಜ ಬೊಮ್ಮಾಯಿ. ಕಾಂಗ್ರೆಸ್ ಗೆದ್ದರೆ ರಾಜ್ಯ ಮಾತ್ರವಲ್ಲ, ದೇಶವು ಸೋತಂತೆ. ನಾವು ಗೆದ್ದರೆ ಭಾರತ ಮಾತಾ ಕೀ ಜೈ ಎನ್ನುತ್ತೇವೆ. ಕಾಂಗ್ರೆಸ್ ಗೆದ್ದರೆ ಕುಕ್ಕರ್‌ನಲ್ಲಿ ಬಾಂಬ್ ಇಡುವವರು ಎದ್ದು ಕುಳಿತುಕೊಳ್ಳುತ್ತಾರೆ. ಹೀಗಾಗಿ ನಮಗೆ ಕಾಂಗ್ರೆಸ್ ಬೇಡ. ಹೀಗಾಗಿ ಕಮಲ ಅರಳಿಸುವ ಸಂಕಲ್ಪ ಮಾಡಿ. ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತಂದು ವೇಗವಾಗಿ ಅಭಿವೃದ್ಧಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಬಳಿಕ ಮಾತನಾಡಿದ ಅವರು ‘ಹಾವೇರಿಯಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನಗೆ ಕಾಂಗ್ರೆಸ್‌ನವರು ಅಡ್ಡಗಾಲು ಹಾಕಿದ್ದೀರಿ. ಈಗ ಮೆಡಿಕಲ್ ಕಾಲೇಜು ಆರಂಭವಾಗಿದೆ. ಪ್ರತ್ಯೇಕ ಹಾಲು ಒಕ್ಕೂಟ ರಚನೆ ಆಗಿದೆ. ಹಾವೇರಿ ಜಿಲ್ಲೆಯಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ವಿಜಯ ಯಾತ್ರೆಯನ್ನಾಗಿ ಪರಿವರ್ತಿಸಿದ್ದೀರಿ. ಹೊಸ ವಿಶ್ವವಿದ್ಯಾಲಯ, ಎಂಜಿನಿಯರಿಂಗ್ ಕಾಲೇಜು ಆರಂಭವಾಗಿದೆ. ಇದೆಲ್ಲವನ್ನೂ ಮಾಡಿದ್ದು ಬಿಜೆಪಿ. ಹಾವೇರಿಗೆ ನಿಮ್ಮ ಕೊಡುಗೆ ಏನಿದೆ? ಹೀಗಾಗಿ ಕಾಂಗ್ರೆಸ್‌ನವರು ಓಟು ಕೇಳಲು ಬಂದಾಗ ನೀವೆಲ್ಲರೂ ಅವರಿಗೆ ಯಾವ ಮುಖ ಇಟ್ಟುಕೊಂಡು ವೋಟ್ ಕೇಳೋಕೆ ಬರುತ್ತೀರಿ ಎಂದು ಪ್ರಶ್ನಿಸಬೇಕು’ ಎಂದು ಹೇಳಿದರು.
ಹಾವೇರಿ ಸಂಸದ ಶಿವಕುಮಾರ ಉದಾಸಿ(Shivkumar Udasi) ಮಾತನಾಡಿ, ಕಾಂಗ್ರೆಸ್‌ನವರ ರೀತಿ ನಾವು ಗ್ಯಾರಂಟಿ ಕಾರ್ಡ್ ಹಿಡಿದು ನಿಂತಿಲ್ಲ, ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಡ್ ಹಿಡಿದು ಮತ ಕೇಳುತ್ತಿದ್ದೇವೆ. ನಮಗೆ ಯಾವುದೇ ಗ್ಯಾರಂಟಿ, ವಾರಂಟಿ ಕಾರ್ಡ್ ಬೇಕಿಲ್ಲ. ಯಾವ ವಸ್ತುವಿನ ಮೇಲೆ ವಿಶ್ವಾಸ ಇರುವುದಿಲ್ಲವೋ ಅಂತಹವರು ಗ್ಯಾರಂಟಿ, ವಾರಂಟಿ ಕಾರ್ಡ್ ಕೊಡ್ತಾರೆ ಎಂದು ಕಾಂಗ್ರೆಸ್‌ನನ್ನು ಟೀಕಿಸಿದರು.