Uri Gowda- Nanje Gowda: ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಉರಿ, ನಂಜು! ಯಾರು ಈ ಉರಿಗೌಡ, ನಂಜೇಗೌಡ? ಟಿಪ್ಪುವನ್ನು ಕೊಂದಿದ್ದು ಇವರೆನಾ? ಇತಿಹಾಸ ಏನು ಹೇಳುತ್ತೆ?
Uri Gowda- Nanje Gowda : ಕರ್ನಾಟಕದಲ್ಲಿ ಚುನಾವಣೆಯ ಪ್ರಚಾರಗಳು ಆರಂಭಗೊಂಡಾಗಿನಿಂದ ಟಿಪ್ಪು(Tippu) ಹಾಗೂ ಸಾವರ್ಕರ್(Savarkar) ಹೆಸರು ವಿಪರೀತವಾಗಿ ಕೇಳಿಬರುತ್ತಿತ್ತು. ಆದರೀಗ ಈ ಎರಡು ಹೆಸರುಗಳೊಂದಿಗೆ ಮಂಡ್ಯದ ಉರಿಗೌಡ ಮತ್ತು ನಂಜೇಗೌಡರ (Uri Gowda- Nanje Gowda) ಹೆಸರುಗಳು ಸೇರಿಕೊಂಡು ಅನಗತ್ಯ ವಿಚಾರಗಳ ಚರ್ಚೆಗಳು ವಿಕೋಪಕ್ಕೇರಿ, ರಾಜ್ಯಾದ್ಯಂತ ಗೊಂದಲ ಸೃಷ್ಟಿಯಾಗಿದೆ. ಇದರ ನಡುವೆಯೇ ಈ ಇಬ್ಬರು ಹೊಸ ಗೌಡರ ಕುರಿತು ಚಲನಚಿತ್ರಕೂಡ ನಿರ್ಮಣ ಆಗ್ತಿದೆಯಂತೆ. ಅಂದಹಾಗೆ ಉರಿಗೌಡ ಮತ್ತು ನಂಜೇಗೌಡರು ಯಾರು? ಅವರು ನಿಜಕ್ಕೂ ಇದ್ದರಾ ಅಥವಾ ಕಾಲ್ಪನಿಕ ವ್ಯಕ್ತಿಗಳಾ? ಟಿಪ್ಪುವನ್ನು ಕೊಂದಿದ್ದು ನಿಜಾನಾ? ಇತಿಹಾಸ ತಜ್ಞರು ಹೇಳಿದ್ದೇನು? ಎಲ್ಲದಕ್ಕೂ ಇಲ್ಲಿದೆ ಉತ್ತರ.
ಹೌದು, ಇತ್ತೀಚೆಗೆ ಪ್ರಧಾನಿ ಮೋದಿಯವರು ಮಂಡ್ಯದಲ್ಲಿ ರೋಡ್ ನಡೆಸಿ ಮರಳಿದ ಬಳಿಕ ಈ ಇಬ್ಬರು ಗೌಡರ ಬಗ್ಗೆ ರಾಜ್ಯದ್ಯಂತ ಒಟ್ಟಾರೆಯಾಗಿ ಚರ್ಚೆಯಾಗುತ್ತಿದೆ. ಒಂದೆಡೆ ಬಿಜೆಪಿ ನಾಯಕರು ಇವರು ಟಿಪ್ಪುವನ್ನು ಕೊಂದ ವೀರ ಕನ್ನಡಿಗರೆಂದು ಬಿಂಬಿಸುತ್ತಿದ್ದರೆ, ಅತ್ತ ಇತಿಹಾಸ ತಜ್ಞರು ಬೇರೆಯೇ ಅಭಿಪ್ರಾಯ ನೀಡಿದ್ದಾರೆ. ಇತರ ರಾಜಕೀಯ ನಾಯಕರು ಇವರು ಕಾಲ್ಪನಿಕ ವ್ಯಕ್ತಿಗಳೆಂದು ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ಮೋದಿ ಸಕ್ಕರೆ ನಾಡಿಗೆ (Mandya) ಭೇಟಿ ನೀಡಿ ಮರಳಿದಾಗಿನಿಂದ ಈ ಇಬ್ಬರ ಹೆಸರು ಭಾರೀ ಚರ್ಚೆ ಹುಟ್ಟು ಹಾಕಿದೆ. ಈ ನಡುವೆ ಇವರಿಬ್ಬರ ಕುರಿತು ಸಿನಿಮಾವೊಂದು ಸಿದ್ಧವಾಗ್ತಿದ್ದು, ಟೈಟಲ್ ಕೂಡ ಫಿಕ್ಸ್ ಆಗಿದೆ.
ಸಿನಿಮಾ ನಿರ್ಮಾಣದ ಕುರಿತು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ(H D Kumaraswamy) ವಿರೋಧ ವ್ಯಕ್ತಪಡಿಸಿದ್ದರು. ನಿನ್ನೆ(ಮಾ. 17) ದಿನ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಈ ಕುರಿತು ಸ್ಪಷ್ಟೀಕರಣ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje) ಯವರು ‘ಹಿಂದೂಗಳನ್ನೆಲ್ಲ ಕೊಲ್ಲುವುದಕ್ಕೆ ಅಂತ ಟಿಪ್ಪು ಡ್ರಾಪ್ ಮಾಡಿದ್ರು. ಅಲ್ಲಿ ಹಿಂದೂಗಳನ್ನೆಲ್ಲ ಕೊಲ್ಲಲಾಗುತಿತ್ತು. ರಸ್ತೆಗೆ, ಕಟ್ಟಡಕ್ಕೆಲ್ಲ ಗುಲಾಮಿತನದ ಹೆಸರಿಡಲಾಗಿದೆ. ಇತಿಹಾಸದ ಪುಟ ತೆರೆದು ನೋಡಿದ್ರೆ ಉರಿಗೌಡ-ನಂಜೇಗೌಡ (Uri Gowda- Nanje Gowda) ನ ಹೆಸರಿದೆ ಎಂದು ಹೇಳುವ ಮೂಲಕ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಸಿನಿಮಾ ಟೈಟಲ್ ಕುರಿತು ಸಮರ್ಥನೆ ಮಾಡಿಕೊಂಡಿದ್ದಾರೆ.
ಇಂದು ‘ಟಿಪ್ಪು ಬಗ್ಗೆ ಏಕೆ ಮಾತಾಡ್ತೀವಿ. ಟಿಪ್ಪು ದೇಶ ವಿರೋಧಿ, ಹಿಂದೂ ವಿರೋಧಿ, ಕನ್ನಡ ವಿರೋಧಿ ಆಗಿದ್ದ. ನಂದಿ ಬೆಟ್ಟಕ್ಕೆ ಹೋದ್ರೆ ಟಿಪ್ಪು ಡ್ರಾಪ್ ಇದೆ. ಅವರ ವಿರೋಧಿಗಳನ್ನ ಕೊಲ್ಲಲು ಟಿಪ್ಪು ಡ್ರಾಪ್ ಬಳಕೆಯಾಗ್ತಿತ್ತು. ಮೈಸೂರು ಮಹಾರಾಜರ ಅನುಯಾಯಿಗಳಾಗಿ ಕೆಲಸ ಮಾಡಿದವರು ಉರಿಗೌಡ, ನಂಜೇಗೌಡ. ಅವರವರ ನೇರಕ್ಕೆ ಕೆಲವರು ಪುಸ್ತಕ ಬರೆಸಿಕೊಂಡಿದ್ದಾರೆ. ಇತಿಹಾಸ ತೆರೆದು ನೋಡಿದ್ರೆ ಉರಿಗೌಡ, ನಂಜೇಗೌಡ ಹೆಸರಿದೆ. ಅವರು ಮೈಸೂರು ಮಹಾರಾಜರ ಪರವಾಗಿ ಕೆಲಸ ಮಾಡುತ್ತಿದ್ದರು. ಆದರೆ ಟಿಪ್ಪುವನ್ನ ಕೊಲ್ಲುವ ಮೂಲಕ ಇಬ್ಬರು ಇತಿಹಾಸ ಪುಟ ಸೇರಿದ್ದಾರೆ. ಇಂದು ಹೆಸರಿಡುವುದರಲ್ಲೂ ಗುಲಾಮಿತನ ಮಾಡ್ತಿದ್ದಾರೆ. ರಸ್ತೆಗೆ, ಕಟ್ಟಡಕ್ಕೆಲ್ಲ ಗುಲಾಮಿತನದ ಹೆಸರಿಡಲಾಗಿದೆ. ಟಿಪ್ಪು ಓಲೈಕೆ ಮಾಡ್ತಿದ್ದಾರೆ ಎಂದು ಎಚ್ಡಿಕೆಗೆ ತಿರುಗೇಟು ನೀಡಿದರು.
ಅಂದಹಾಗೆ ಕಳೆದ ಭಾನುವಾರ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಧಾನಿ ಮೋದಿ 1.8 ಕಿ.ಮೀ ರೋಡ್ ಶೋ ಆಯೋಜಿಸಲಾಗಿತ್ತು. ಇಲ್ಲಿ ಮಾರ್ಗದುದ್ದಕ್ಕೂ 4 ಮಹಾದ್ವಾರ ಅಳವಡಿಸಲಾಗಿತ್ತು. ರೋಡ್ ಶೋ ಆರಂಭವಾಗುವ ಪ್ರವಾಸಿ ಮಂದಿರದ ಬಳಿ ಸರ್. ಎಂ.ವಿಶ್ವೇಶ್ವರಯ್ಯ ಮಹಾದ್ವಾರ, ಜೆಸಿ ವೃತ್ತದಲ್ಲಿ ಕೆಂಪೇಗೌಡ, ಮಹಾವೀರ ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾದ್ವಾರ ಹಾಕಲಾಗಿತ್ತು. ಈ ಮೂರು ಮಹಾದ್ವಾರಗಳ ಬಗ್ಗೆ ಜನರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಸಮಸ್ಯೆಯಾಗಿದ್ದೇ 4ನೇ ಮಹಾದ್ವಾರ. ಫ್ಯಾಕ್ಟರಿ ಸರ್ಕಲ್‌ನಲ್ಲಿ ಹಾಕಿದ್ದ ‘ಉರಿಗೌಡ ಮತ್ತು ದೊಡ್ಡನಂಜೇಗೌಡ ಮಹಾದ್ವಾರ’ಕ್ಕೆ ವ್ಯಕ್ತವಾದ ಪರ, ವಿರೋಧ ಭಾರೀ ಚರ್ಚೆಗೆ ಕಾರಣವಾಗಿತ್ತು. ರಾಜಕೀಯ ಲಾಭಕ್ಕಾಗಿ ಬಿಜೆಪಿ ನಾಯಕರು ಟಿಪ್ಪು ಕೊಂದಿದ್ದು ಒಕ್ಕಲಿಗರು ಎಂದು ಬಿಂಬಿಸಲು ಮುಂದಾಗಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ಚಿತ್ರ, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದ್ದು, ಇದರ ಬೆನ್ನಲ್ಲೇ ಮಂಡ್ಯ ಜಿಲ್ಲಾಡಳಿತ ಮಹಾದ್ವಾರದ ಹೆಸರು ಬದಲಾವಣೆ ಮಾಡಿತ್ತು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಉರಿಗೌಡ ಮತ್ತು ದೊಡ್ಡನಂಜೇಗೌಡ ಯಾರು ಎಂಬಿತ್ಯಾದಿ ಪ್ರಶ್ನೆಗಳು ರಾಜ್ಯಾದ್ಯಂತ ಸುದ್ಧಿಯಾಗುತ್ತಿದೆ.
ಸದ್ಯ ಉರಿಗೌಡ ಮತ್ತು ದೊಡ್ಡ ನಂಜೇಗೌಡರು ಎನ್ನಲಾದ ಫೋಟೋ ಒಂದು ಭಾರೀ ವೈರಲ್ ಆಗಲಾರಂಭಿಸಿವೆ. ಈ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದು, ನೆಟ್ಟಿಗರು ಈ ಫೋಟೋಗಳ ಅಸಲಿ ಕಥೆ ಬಯಲಿಗೆಳೆದಿದ್ದಾರೆ. ಫೋಟೋದಲ್ಲಿರುವುದು ತಮಿಳು ನೆಲದ ವೀರರಾದ ಮರುದು ಪಾಂಡ್ಯರ ಚಿತ್ರಗಳು. ಮರುದು ಪಾಂಡ್ಯರು (ಪೆರಿಯ ಮರುದು ಮತ್ತು ಚಿನ್ನ ಮರುದು) 18ನೇ ಶತಮಾನದ ಅಂತ್ಯದಲ್ಲಿ ತಮಿಳುನಾಡಿನ ಶಿವಗಂಗೈ ಪ್ರಾಂತ್ಯದಲ್ಲಿ ಪ್ರಸಿದ್ಧರಾಗಿದ್ದರು. ಈ ಇಬ್ಬರು ಸಹೋದರರು ಆಂಗ್ಲರ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ್ದರು. ನಿರ್ದಿಷ್ಟವಾಗಿ ಹೇಳುವುದಾದರೆ, ಮರುತು ಪಾಂಡ್ಯರದ್ದು ದಕ್ಷಿಣ ಭಾರತದ ವಿಮೋಚನಾ ಯುದ್ಧದ ಮೊದಲ ಹೋರಾಟವಾಗಿದೆ. ಆದರೆ ಇವರನ್ನು ಸೆರೆಹಿಡಿದು ಗಲ್ಲಿಗೇರಿಸಲಾಯಿತು ಎಂದು ಇತಿಹಾಸದ ಪುಟಗಳು ಹೇಳುತ್ತವೆ.
ಇನ್ನು ಈ ಕುರಿತು ಮಾತನಾಡಿದ ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ ಅವರು ಆಶ್ವಥ್ ನಾರಾಯಣ್, ಸಿ.ಟಿ.ರವಿ ಬಿಜೆಪಿಗೆ ಅವಮಾನ ಮಾಡಲು ಹೊರಟ್ಟಿದ್ಧಾರೆ. ಇವರು ಸುಳ್ಳನ್ನು ಸತ್ಯ ಮಾಡಲು ಹೊರಟ್ಟಿದ್ದಾರೆ. ಸಚಿವ ಅಶ್ವಥ್ ನಾರಾಯಣ್ ಒಬ್ಬ ಮೂರ್ಖ, ಬೆಂಗಳೂರಿನಲ್ಲಿ ಕೆಂಪೇಗೌಡರ ಇದ್ದರು. ಇದೀಗ ಮಂಡ್ಯ ಮೈಸೂರು ಭಾಗದಲ್ಲಿ ಮುಸ್ಲಿಂ ವಿರೋಧ ಮಾಡಿಕೊಂಡು ಟಿಪ್ಪು ಕೊಂದವರು ಉರಿಗೌಡ-ನಂಜೇಗೌಡ ಎಂದು ಬಿಂಬಿಸುತ್ತಿದ್ದಾರೆ . ಈ ಬಗ್ಗೆ ಯಾವುದೇ ದಾಖಲೆಗಳು ಇತಿಹಾಸದಲ್ಲಿ ಇಲ್ಲ. ಇವರಿಬ್ಬರು ಕೇವಲ ಕಾಲ್ಪನಿಕ ಪಾತ್ರಗಳಷ್ಟೆ. ಇಷ್ಟು ವರ್ಷ ಇತಿಹಾಸ ಓದಿದ್ದೇನೆ. ಟಿಪ್ಪುವಿನ ಚರಿತ್ರೆಯಲ್ಲಿ ಎಲ್ಲಿಯೂ ಈ ಹೆಸರುಗಳು ಬರುವುದಿಲ್ಲ ಎಂದಿದ್ದಾರೆ.
ಅಲ್ಲದೆ ಇದು ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಹುಟ್ಟಿದ ಇತಿಹಾಸ. ಬ್ರಿಟಿಷ್- ಪರ್ಷಿಯನ್ ದಾಖಲೆಗಳಲ್ಲೂ ಇವರ ಪರಿಚಯ ಇಲ್ಲ. ಕಳೆದ ಎರಡು ವರ್ಷಗಳಿಂದ ಈ ಹೆಸರುಗಳು ಮುನ್ನೆಲೆಗೆ ಬಂದಿವೆ. ಟಿಪ್ಪು ಸುಲ್ತಾನ್ ಎಲ್ಲ ಜಾತಿ, ಜನಾಂಗಕ್ಕೂ ಸಹಾಯ ಹಸ್ತ ಚಾಚಿದ್ದ. ವಿಶೇಷವಾಗಿ ರೈತ ಬರ ಬಗ್ಗೆ ಕಾಳಜಿ ತೋರಿದ್ದ, ಬಡ್ಡಿ ರಹಿತ ಸಾಲವನ್ನು ನೀಡುತ್ತಿದ್ದ. ಉಳುಮೆಗೆ ಜಮೀನುಗಳನ್ನು ನೀಡಿದ್ದಲ್ಲದೇ, ರೇಷ್ಮೆ ಕೃಷಿಯನ್ನು ಬೆಳೆಸಿ ಮೈಸೂರು ಭಾಗದ ರೈತರಿಗೆ ನೆರವಾದ. ಆದರೀಗ ಒಕ್ಕಲಿಗ ಸಮುದಾಯವನ್ನು ಟಾರ್ಗೆಟ್ ಮಾಡಿ ಉರಿಗೌಡ, ನಂಜೇಗೌಡರ ಕಥೆಯನ್ನು ವಾಟ್ಸಾಪ್‌ನಲ್ಲಿ ಹರಿಬಿಟ್ಟಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಟಿಪ್ಪು ಸತ್ತ ದಿನ ಏನಾಗಿತ್ತು ಎಂಬ ಬಗ್ಗೆಯೂ ಬೆಳಕು ಚೆಲ್ಲಿರುವ ಪ್ರೊ. ನಂಜರಾಜೇ ಅರಸ್ ಅಂದು ಬ್ರಿಟಿಷರು ಅವನ ಮನೆಯಲ್ಲಿ ಹುಡುಕಾಟ ನಡೆಸುತ್ತಾರೆ. ಬಹುಶಃ ಟಿಪ್ಪು ಬದುಕಿರಬಹುದು ಎಂಬ ಅನುಮಾಣ ಇದಕ್ಕೆ ಕಾರಣವಾಗಿರಬಹುದು. ಆದರೆ ಟಿಪ್ಪು ಹತನಾಗಿದ್ದಾನೆ ಎಂಬ ಮಾಹಿತಿ ಸಿಕ್ಕ ಬಳಿಕ ಮತ್ತೆ ಹಣದ ರಾಶಿಗಳ ಮಧ್ಯೆ ಆತನ ಶರೀರಕ್ಕಾಗಿ ಹುಡುಕಾಡುತ್ತಾರೆ. ಇದು ನಡೆದಿದೆ ಎನ್ನುವುದಕ್ಕೆ ಪುರಾವೆ ಇದೆ. ಟಿಪ್ಪು ಶವ ಸಿಕ್ಕ ನಂತರ ಜನರಲ್ ಹ್ಯಾರೀಸ್- ಇಂದು ಭಾರತ ನಮ್ಮದಾಯಿತು. ನಾವು ಭಾರತವನ್ನು ಗೆದ್ದೆವು ಎಂದು ಸಂಭ್ರಮಿಸಿದ್ದರು. ಟಿಪ್ಪು ಪರ ಹಾಗೂ ವಿರೋಧ ಇದ್ದ ಎಲ್ಲಾ ಇತಿಹಾಸಕಾರರೂ ಇದನ್ನೇ ಬರೆದಿದ್ದಾರೆ.
ಆದರೆ ಇತ್ತೀಚೆಗೆ ಈ ಇತಿಹಾಸವನ್ನು ತಿರುಚಿ ಟಿಪ್ಪು ರಣರಂಗದಲ್ಲಿ ಇರುವುದು ಗೊತ್ತಾಗಿ, ಉರಿಗೌಡ ಮತ್ತು ದೊಡ್ಡ ನಂಜೇಗೌಡರು ಕತ್ತಿ ಹಿಡಿದು ಹೊರಟರು. ಯುದ್ಧ ಮಾಡುತ್ತಿದ್ದ ಟಿಪ್ಪು ಇವರನ್ನು ದೂರದಿಂದ ನೋಡಿ ಓಡಿಹೋದ. ಆದರೆ ಈ ಇಬ್ಬರು ಸಹೋದರರು ಬೆನ್ನಟ್ಟಿ ಆತನನ್ನು ಕೊಂದರು ಎಂದು ವಾಟ್ಸಾಪ್ ಯೂನಿವರ್ಸಿಟಿ ಮೂಲಕ ತಪ್ಪು ಮಾಹಿತಿ ಹಂಚಲಾಗುತ್ತಿದೆ. ಹಾಗಾದರೆ ಟಿಪ್ಪುವಿನ ಸೈನಿಕರು ಏನು ಮಾಡುತ್ತಿದ್ದರು? ಕಡ್ಲೆಕಾಯಿ ತಿನ್ನುತ್ತಿದ್ದರೆ? ಈ ಸಹೋದರರು ಭಾರತೀಯರಾದ ಕಾರಣ ಕಪ್ಪು ವರ್ಣದವರು. ನಮ್ಮ ಸೈನಿಕರಲ್ಲ ಎಂದು ತಿಳಿದೂ ಬ್ರಿಟಿಷರು ಹಾಗೆಯೇ ಬಿಟ್ಟುಬಿಟ್ಟರೆ? ಎಂದು ಪ್ರೊ. ನಂಜರಾಜೇ ಅರಸ್ ಪ್ರಶ್ನಿಸಿದ್ದಾರೆ.