Rishabh Pant: ‘ಪ್ರತಿಯೊಂದಕ್ಕೂ ಕೃತಜ್ಞನಾಗಿರುವೆ’ ಎಂದು ಅಪಘಾತದ ಬಳಿಕ ಮೊದಲ ವಿಡಿಯೋ ಹಂಚಿಕೊಂಡ ಪಂತ್
Rishabh Pant :ಟೀಮ್ ಇಂಡಿಯಾದ ಯುವ ಆಟಗಾರ ರಿಷಭ್ ಪಂತ್ (Rishabh Pant) ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪವಾಡಸದೃಶವಾಗಿ ಪಾರಾಗಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಇದಾದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿರುವ ಪಂತ್ ಇದೀಗ ಮನೆಯಲ್ಲಿಯೇ ಚಿಕಿತ್ಸೆ ಮುಂದುವರೆಸಿದ್ದಾರೆ. ಇದೀಗ ನಿಧಾನವಾಗಿ ಚೇತರಿಸುತ್ತಿರುವ ರಿಷಭ್ ಪಂತ್, ಈಜುಕೊಳದಲ್ಲಿ ಹೆಜ್ಜೆ ಹಾಕುತ್ತಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಭೀಕರ ಅಪಘಾತದ ಬಳಿಕ ರಿಷಭ್ ಪಂತ್ ಎಲ್ಲೂ ತಮ್ಮ ಬದುಕಿನ ಈ ಕೆಟ್ಟ ಘಳಿಗೆಯ ಅನುಭವವನ್ನು ಹಂಚಿಕೊಂಡಿರಲಿಲ್ಲ. ಅದರಲ್ಲೂ ಪ್ರಸ್ತುತ ಆರೋಗ್ಯ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ. ಇದೀಗ ಶುಶ್ರೂಷೆಯ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಖುದ್ದು ಪಂತ್ ಹಂಚಿಕೊಂಡಿದ್ದಾರೆ. ಜೊತೆಗೆ ಚೇತರಿಕೆ ಕಡೆಗೆ ಶ್ರಮಿಸುತ್ತಿರುವ ಸಂದೇಶ ರವಾನಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಫೋಟೊ ಹಂಚಿಕೊಂಡಿದ್ದ ರಿಷಭ್ ಪಂತ್, ಇದೀಗ ವಿಡಿಯೋ ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ ಪಂತ್ ಸ್ವಿಮಿಂಗ್ ಪೂಲ್‌ನಲ್ಲಿ ಆಧಾರ ಇಲ್ಲದೆ ನಿಧಾನವಾಗಿ ನಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ನೀರಿನಲ್ಲಿ ಇರುವ ಕಾರಣ ಮಂಡಿ ಮೇಲೆ ಹೆಚ್ಚು ಒತ್ತಡ ಬೀಳುವುದಿಲ್ಲ. ಹೀಗಾಗಿ ನಿಧಾನವಾಗಿ ತಮ್ಮ ಕಾಲಿನ ಚಲನೆಯನ್ನು ಸುಧಾರಿಸಿಕೊಳ್ಳುವ ಪ್ರಯತ್ನವನ್ನು ಪಂತ್ ಮಾಡಿದ್ದಾರೆ.
ಇನ್ನು ಈ ವಿಡಿಯೋಗೆ ‘ಸಣ್ಣಪುಟ್ಟ ವಿಷಯಗಳಿಗೂ, ದೊಡ್ಡ ವಿಷಯಗಳಿಗೂ ಎಲ್ಲದಕ್ಕೂ ನಾನು ಕೃತಜ್ಞನಾಗಿರುವೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಒಟ್ಟಿನಲ್ಲಿ ನಡೆಯಲು ಯತ್ನಿಸುತ್ತಿರುವ ವಿಡಿಯೋ ಹಂಚಿಕೊಳ್ಳುವ ಮೂಲಕ ರಿಷಭ್ ಪಂತ್ ಶೀಘ್ರದಲ್ಲೇ ಗುಣಮುಖನಾಗಲಿದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆ. ಇನ್ನು ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಟ್ವಿಟರ್ ಹ್ಯಾಂಡಲ್, ಮತ್ತಷ್ಟು ಬಲಿಷ್ಠವಾಗಲಿ ಎಂದು ಹಾರೈಸಿದ್ದಾರೆ.
“ಇದನ್ನೇ ಮುಂದುವರಿಸಿ ಪಂತ್” ಎಂದು ರವಿ ಶಾಸ್ತ್ರಿ(Ravi Shastri) ಕಾಮೆಂಟ್ ಮಾಡಿದ್ದಾರೆ. “ಚಾಂಪಿಯನ್ ನಿನಗೆ ಹೆಚ್ಚು ಶಕ್ತಿ ಸಿಗಲಿ” ಎಂದು ಸೂರ್ಯಕುಮಾರ್ ಯಾದವ್(Suryakumar Yadav) ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಗಳು ಕೂಡ ಸಾಲು ಸಾಲಾಗಿ ಶುಭ ಹಾರೈಸಿದ್ದು, ಬಗೆ ಬಗೆಯಾಗಿ ಕಮೆಂಟಿಸುತ್ತಿದ್ದಾರೆ.
ಅಂದಹಾಗೆ ಅಪಘಾತದಲ್ಲಿ ರಿಷಭ್ ಪಂತ್ ಅವರ ಮಂಡಿ ಮೂಳೆ ಮುರಿದಿತ್ತು. ಅದನ್ನು ಸರಿಪಡಿಸಲು ಮುಂಬೈನ ದೊಡ್ಡ ಆಸ್ಪತ್ರೆಯಲ್ಲಿ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಪರಿಣಾಮ ವೃತ್ತಿಪರ ಕ್ರಿಕೆಟ್‌ನಿಂದ ಒಂದು ವರ್ಷಕ್ಕೂ ಹೆಚ್ಚು ಸಮಯ ಹೊರಗುಳಿಯುವಂತ್ತಾಗಿದೆ. ಪರಿಣತರ ಪ್ರಕಾರ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕಮ್‌ಬ್ಯಾಕ್ ಮಾಡಲು ಇನ್ನು ಎರಡು ವರ್ಷವಾದರೂ ಸಮಯವಾದರೂ ಬೇಕಾಗಬಹುದೆಂದು ವೈದ್ಯರು ಹೇಳಿದ್ದರು.
ಇದನ್ನೂ ಓದಿ : ಸುಳ್ಯ ವಿಧಾನಸಭಾ ಕ್ಷೇತ್ರ !ಕಾಂಗ್ರೆಸ್,ಬಿಜೆಪಿ,ಎಸ್ಡಿಪಿಐ,ಆಪ್ ಸಂಭಾವ್ಯ ಅಭ್ಯರ್ಥಿಗಳು ಇವರೇ !
https://twitter.com/RishabhPant17/status/1635961020773552133?t=khzICAVam24q60C8heRBWQ&s=08