Farmers Manifesto: ರೈತ ಹುಡುಗರನ್ನು ಮದುವೆಯಾಗೋ ಹೆಣ್ಮಕ್ಕಳಿಗೆ ಸರ್ಕಾರಿ ಉದ್ಯೋಗ! ರೈತ ಸಂಘದ ಪ್ರಣಾಳಿಕೆಯಲ್ಲಿ ಮಹತ್ವದ ಘೋಷಣೆ
Farmers Manifesto : ಸದ್ಯ ಭಾರತದಲ್ಲಿ ಕಾಡುತ್ತಿರುವಂತಹ ದೊಡ್ಡ ಸಮಸ್ಯೆ ಎಂದರೆ ಹುಡುಗರಿಗೆ ಮದುವೆಯಾಗಲು ಹುಡುಗಿಯರು ಸಿಗದೇ ಇರುವುದು. ಅದರಲ್ಲೂ ಕೂಡ ನಮ್ಮ ರೈತ(Formers) ಮಕ್ಕಳ ಗೋಳಂತೂ ಕೇಳುವುದೇ ಬೇಡ. ಮದುವೆಯಾಗುವ ಸಲುವಾಗಿ ಹೆಣ್ಣು ಹುಡುಕಿ ಹುಡುಕಿ ಹಣ್ಣುಗಾಯಿ ನೀರುಗಾಯಿ ಆಗಿಬಿಟ್ಟಿದ್ದಾರೆ. ರೈತರೆಂದರೆ ಸಾಕು ಹೆಣ್ಣು ಕೊಡಲು ಹಿಂದೆ ಮುಂದೆ ನೋಡುತ್ತಾರೆ. ಈ ವಿಚಾರವಾಗಿ ಅನೇಕ ರೈತರು ಕೆಲ ತಿಂಗಳ ಹಿಂದೆ ಮಲೆಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆ ಮಾಡಿ ಹೆಣ್ಣುಸಿಗಲೆಂದು ಹರಕೆ ಹೊತ್ತಿದ್ದರು. ಜಾತ್ರೆಯ ವೇಳೆ ಬಾಳೆ ಹಣ್ಣಿನ ಮೇಲೆ ಹೆಣ್ಣು ಸಿಗಲೆಂದು ಬರೆದು ರಥಕ್ಕೆ ಎಸೆದಿದ್ದರು. ಆದರೀಗ ಈ ವಿಚಾರ ಕುರಿತಾಗೆ ರೈತ ಸಂಘದ ‘ರೈತ ಪ್ರಣಾಳಿಕೆ’ (Farmers Manifesto)ಯೊಂದು ಭಾರೀ ಸದ್ದು ಮಾಡುತ್ತಿದೆ.
ಹೌದು, ರೈತರ ಮಕ್ಕಳ ಮದುವೆಯಾಗೋ ಹೆಣ್ಮಕ್ಕಳಿಗೆ ಸರ್ಕಾರಿ ಕೆಲಸ ನೀಡಬೇಕು ಇಲ್ಲವಾದರೆ ಮೀಸಲಾತಿ ಘೋಷಣೆ ಮಾಡಬೇಕು ಎಂಬ ಬೇಡಿಕೆಯೊಂದಿಗೆ ಹಲವು ಘೋಷಣೆಗಳನ್ನು ರೈತ ಪ್ರಣಾಳಿಕೆಯಡಿ ಘೋಷಿಸಲಾಗಿದೆ. ಈ ಬೇಡಿಕೆಗಳನ್ನು ಈಡೇರಿಸುವ ಪಕ್ಷಕ್ಕೆ ರಾಜ್ಯದ ರೈತರ ಬೆಂಬಲ ಇರಲಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್(Kuruburu Shantaha kumar) ಹೇಳಿದ್ದಾರೆ.
ಇದರೊಂದಿಗೆ ರೈತರಿಗೂ ಕನಿಷ್ಠ ಆದಾಯ ಖಾತರಿಯನ್ನು ಒದಗಿಸಬೇಕು, ರೈತರ ಸಂಪೂರ್ಣ ಕೃಷಿ ಸಾಲವನ್ನು ಮನ್ನಾ ಮಾಡಬೇಕು. ಕೃಷಿ ಸಾಲ ನೀತಿ ಬದಲಾಗಬೇಕು ಎಂದು ರೈತ ಪ್ರಣಾಳಿಕೆಯಲ್ಲಿ ಬೇಡಿಕೆ ಇಡಲಾಗಿದೆ. ಮೈಸೂರಿನ ಗನ್‌ಹೌಸ್ ಬಳಿ ಇರುವ ವಿಶ್ವಮಾನವ ಉದ್ಯಾನದಲ್ಲಿ ನಡೆದ ಸಭೆಯಲ್ಲಿ ರೈತರ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಕುರುಬೂರು ಶಾಂತಕುಮಾರ್, ಸರಕಾರಿ ನೌಕರರು, ಎಂಎಲ್‌ಎಗಳು, ಮಂತ್ರಿಗಳು, ಎಲ್ಲ ವರ್ಗದವರಿಗೂ ಪ್ರತಿ ತಿಂಗಳು ಕನಿಷ್ಠ ಆದಾಯ ಬರುತ್ತದೆ. ರೈತರಿಗೂ ಕನಿಷ್ಠ ಆದಾಯ ಖಾತರಿ ಒದಗಿಸಬೇಕು ಎಂದು ಒತ್ತಾಯಿಸಿದರು.
ದೇಶದ 135 ಕೋಟಿ ಜನರಿಗೆ ಆಹಾರ ಉತ್ಪಾದನೆ ಮಾಡುವ ರೈತನಿಗೆ ಬಡ್ಡಿ ರಹಿತವಾಗಿ ಕೃಷಿ ಸಾಲವನ್ನು ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನೀಡುವಂತಹ ಯೋಜನೆ ಜಾರಿಗೆ ಬರಬೇಕು. ಡಾ ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ಫಸಲ್ ಭೀಮಾ ಯೋಜನೆ ತಿದ್ದುಪಡಿ ಮಾಡಬೇಕು, ಎಲ್ಲಾ ಬೆಳೆಗಳಿಗೂ ಬೆಳೆ ವಿಮೆ ಅನ್ವಯ ಮಾಡಬೇಕು. ಕಬ್ಬು ಕಟಾವು, ಸಾಗಣೆ ದುಬಾರಿ ವೆಚ್ಚ ಹಾಗೂ ರೈತರ ಸುಲಿಗೆ ತಪ್ಪಿಸಲು ಕಬ್ಬಿನ ಎಫ್‌ಆರ್‌ಪಿ ದರ ರೈತರ ಹೊಲದಲ್ಲಿನ ದರ ಎಂದು ನಿಗದಿ ಪಡಿಸಬೇಕು. ರೈತರು ಆಲೆಮನೆಗಳಲ್ಲಿ ಕಬ್ಬಿನಿಂದ ಎಥನಾಲ್ ಉತ್ಪಾದನೆಗೆ, ಟ್ರ್ಯಾಕ್ಟರ್ ಮತ್ತಿತರ ಯಂತ್ರಗಳಿಗೆ ಬಳಸಿಕೊಳ್ಳಲು ಅವಕಾಶ ನೀಡಬೇಕು ಎಂದು ಬೇಡಿಕೆಗಳನ್ನು ಪಕ್ಷಗಳ ಮುಂದೆ ಇಟ್ಟರು.
ಅಲ್ಲದೆ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಹಾಗೂ ಹಗಲು ವೇಳೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ 12 ಗಂಟೆ ನಿರಂತರ ವಿದ್ಯುತ್ ನೀಡುವ ಭರವಸೆ ಬೇಕು. ದೇಶದ ಉದ್ಯಮಿಗಳಿಗೆ 10 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ ರೀತಿಯಲ್ಲಿಯೇ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಆಗಬೇಕು. ಕೃಷಿ ಸಾಲ ನೀತಿ ಬದಲಾಗಬೇಕು. ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕುಟುಂಬಸ್ಥರನ್ನು ಸಚಿವ ಸಂಪುಟಕ್ಕೆ ಸೇರಿಸಿಕೂಳ್ಳಬಾರದು. ರಾಜ್ಯದಲ್ಲಿ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯಿದೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಈ ಹಿಂದೆಯೇ ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ 2 ಲಕ್ಷ ರೂ. ನೀಡುವುದಾಗಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ(HD Kumaraswamy) ಘೋಷಿಸಿದ್ದರು. ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದ ಪಂಚರತ್ನ ಯಾತ್ರೆ ಸಮಾವೇಶದಲ್ಲಿ ಅವರು ಮಾತನಾಡುತ್ತಾ, ರೈತರ ಮಕ್ಕಳಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಕಂಕಣ ಭಾಗ್ಯ ಕೂಡಿ ಬರಲಿ ಅಂತ ಅವಿವಾಹಿತ ರೈತ ಸಮುದಾಯದ ಯುವಕರು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡಿದ್ದನ್ನು ನಾನು ಗಮನಿಸಿದ್ದೇನೆ. ರೈತರು ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ನಮ್ಮ ಪಂಚರತ್ನ ರಥಯಾತ್ರೆಯ ಪ್ರಣಾಳಿಕೆಯಲ್ಲಿ ಈ ವಿಚಾರವನ್ನು ಸೇರ್ಪಡೆ ಮಾಡಿದ್ದು, ರೈತರ ಮಕ್ಕಳನ್ನ ಮದುವೆಯಾಗುವ ಯುವತಿಯರಿಗೆ 2 ಲಕ್ಷ ಪ್ರೋತ್ಸಾಹ ಧನ ನೀಡುವ ಮಹತ್ವದ ಯೋಜನೆಯನ್ನು ಜಾರಿಗೊಳಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ :PM Modi : ಛಾಯಾಗ್ರಹಣದಲ್ಲಿ ಆಸಕ್ತಿ ಇರುವವರಿಗೆ ಬಂಪರ್ ಆಫರ್, ಕೇಂದ್ರ ಸರಕಾರದಿಂದ ದೊರಕಲಿದೆ ಲಕ್ಷ ರೂಪಾಯಿ!