ಕಸಾಯಿಖಾನೆಗೆ ತಂದಿಳಿಸಿದ ಎಮ್ಮೆ ಹಗ್ಗ ಬಿಚ್ಚಿ ಪರಾರಿ!! ಎಮ್ಮೆ ಹಿಡಿಯೋಕೆ ಹರಸಾಹಸ, ತಿವಿತಕ್ಕೆ ಯುವಕನೋರ್ವ ಸಾವು!!!

Buffalo attack : ದಿನನಿತ್ಯ ಸಮಾಜದಲ್ಲಿ ಒಂದಲ್ಲ ಒಂದು ಘಟನೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಅಂತಹದೇ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಾಸರಗೋಡಿನ ಮೊಗ್ರಾಲ್ ಪುತ್ತೂರಿನಲ್ಲಿ ಎಮ್ಮೆ (Domestic water buffalo attack) ದಾಳಿಗೆ ಯುವಕನೋರ್ವ ಸಾವನ್ನಪ್ಪಿರುವ (death) ಘಟನೆ ಬೆಳಕಿಗೆ ಬಂದಿದ್ದು, ಮೃತ ಯುವಕನನ್ನು ಸಾದಿಕ್ (22) ಎಂದು ಗುರುತಿಸಲಾಗಿದೆ.

 

ಮೃತ ಯುವಕ ಚಿತ್ರದುರ್ಗ ನಿವಾಸಿ ಎನ್ನಲಾಗಿದ್ದು, ಯುವಕ ಗುರುವಾರ (ನಿನ್ನೆ) ಸಂಜೆ 4 ಗಂಟೆಯ ಹೊತ್ತಿಗೆ ಮೊಗ್ರಾಲ್ ಪುತ್ತೂರಿನ ಕಸಾಯಿಖಾನೆಗೆ (Slaughterhouse) ಎಮ್ಮೆಯನ್ನು ತಂದಿದ್ದನು. ಅದನ್ನು ಇಳಿಸುತ್ತಿದ್ದಾಗ ಎಮ್ಮೆ ಹಗ್ಗ ಹರಿದು ಓಡಿ ಹೋಗಿದೆ. ಕೈಯಿಂದ ತಪ್ಪಿಸಿಕೊಂಡಿತು ಎಂದು ಸಾದಿಕ್‌ ಎಮ್ಮೆಯನ್ನು ಹಿಡಿಯಲು ಮುಂದಾಗಿದ್ದಾನೆ. ಈ ವೇಳೆ ಎಮ್ಮೆ ತನ್ನ ಕೊಂಬಿನಿಂದ ಯುವಕನಿಗೆ ತಿವಿದಿದ್ದು, ಹೊಟ್ಟೆಗೆ ಕೊಂಬು ಚುಚ್ಚಿದೆ. ಘಟನೆಯ ಪರಿಣಾಮ ಸಾದಿಕ್ ಗಂಭೀರ ಗಾಯಗೊಂಡಿದ್ದು, ತಕ್ಷಣವೇ ಆತನನ್ನು ಮಂಗಳೂರಿನ (manglore) ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾಧಿಕ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಯುವಕನಿಗೆ ತಿವಿದು ಓಡಿ ಹೋದ ಎಮ್ಮೆ ತನ್ನ ಎದುರಿಗೆ ಬಂದ ಜನರಿಗೆ, ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳಿಗೆ ಗುದ್ದಲು ಯತ್ನಿಸಿದೆ. ಅಲ್ಲದೆ, ಎರಡು ಅಂಗಡಿಗಳಿಗೆ ಹಾನಿ ಮಾಡಿದ್ದು, ಬೇಕರಿಗೆ ನುಗ್ಗಿ ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದೆ. ಇದರಿಂದ ಜನರಲ್ಲಿ ಭೀತಿ ಉಂಟಾಗಿದ್ದು, ಭಯದ ವಾತಾವರಣ ನೆಲೆಸಿದೆ. ಸದ್ಯ ಎಮ್ಮೆಯ ಗುದ್ದಾಟಕ್ಕೆ ಕೆಲವರಿಗೆ ಗಾಯಗಳಾಗಿವೆ. ಗಾಯಾಳುಗಳು ಚಿಕಿತ್ಸೆ ಪಡೆದು ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿಯನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿ, ಎಮ್ಮೆ ಸೆರೆ ಹಿಡಿಯುವ ಕಾರ್ಯ ಕೈಗೊಂಡಿದ್ದಾರೆ. ಸ್ಥಳೀಯರು, ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಇವರೆಲ್ಲಾ ಎಷ್ಟೇ ಪ್ರಯತ್ನಪಟ್ಟರೂ ಅದು ಯಾರ ಕೈಗೂ ಸಿಗಲಿಲ್ಲ. ಕೊನೆಗೆ ಹಗ್ಗದ ಮೂಲಕ ಎಮ್ಮೆಯನ್ನು ಸೆರೆಹಿಡಿದು ಅದರ ಮಾಲೀಕರಿಗೆ ಒಪ್ಪಿಸಲಾಯಿತು ಎಂದು ಹೇಳಲಾಗಿದೆ.

Leave A Reply

Your email address will not be published.