Weekend With Ramesh:ಈ ದಿನ ಶುರುವಾಗಲಿದೆ ವೀಕೆಂಡ್ ವಿತ್ ರಮೇಶ್ ! ಇವರೇ ನೋಡಿ ಸೀಸನ್ 5ರ ಮೊದಲ ಅತಿಥಿ!

Weekend With Ramesh :ಕಿರುತೆರೆಯ ಜನಪ್ರಿಯ ಶೋಗಳಲ್ಲಿ ‘ವೀಕೆಂಡ್ ವಿಥ್ ರಮೇಶ್’ ಶೋ ( Weekend With Ramesh Season 5 ) ಕೂಡ ಒಂದು. ಈಗಾಗಲೇ ನಾಲ್ಕು ಸೀಸನ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಈ ಶೋನ ಐದನೇ ಸೀಸನ್ ಆರಂಭವಾಗುವ ಕುರಿತು ವಾಹಿನಿಯೇ ಸುಳಿವು ನೀಡಿ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿತ್ತು. ಇದೀಗ ಎಲ್ಲರ ಈ ಕುತೂಹಲ ತಣಿಯುವ ಸಮಯ ಬಂದಿದ್ದು, ವೀಕೆಂಡ್ ವಿತ್ ರಮೇಶ್ ಯಾವಾಗ ಪ್ರಸಾರ ಆಗುತ್ತೆ, ಮೊದಲ ಅತಿಥಿ ಯಾರು ಅನ್ನೋದಕ್ಕೆ ಉತ್ತರಗಳು ಸಿಕ್ಕಿವೆ.

 

ಹೌದು, ಇದೇ ತಿಂಗಳು ಮಾರ್ಚ್ 25ರಂದು ವೀಕೆಂಡ್ ವಿತ್ ರಮೇಶ್ ಪ್ರಸಾರವಾಗುತ್ತದೆ ಎನ್ನಲಾಗಿದೆ. ಇನ್ನು ಈ ಕಾರ್ಯಕ್ರಮದ ಮೊದಲ ಅತಿಥಿಯಾಗಿ ಸದ್ಯ ಕನ್ನಡದಲ್ಲಿ ಮನೆಮಾತಾಗಿರೋ ಖ್ಯಾತ ನಿರ್ದೇಶಕ, ನಟ ರಿಷಬ್ ಶೆಟ್ಟಿ (Rishabh Shetty) ಬರುತ್ತಾರೆ ಎಂದು ಹೇಳಲಾಗಿತ್ತು. ಈಗಾಗಲೇ ರಿಷಬ್ ಬಗ್ಗೆ ರಮೇಶ್ (Ramesh Arvind) ತಂಡ ಸಂಶೋಧನೆ ನಡೆಸಿದ್ದಾರೆ ಎಂಬ ಮಾಹಿತಿ ಕೂಡ ಇತ್ತು. ಅಲ್ಲದೇ, ರಿಷಬ್ ಮೊದಲನೇ ಎಪಿಸೋಡ್ ಗಾಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುವ ಸುದ್ದಿಯಿತ್ತು. ಆದರೆ, ಇದೀಗ ಕೊನೆಯ ಹಂತದಲ್ಲಿ, ಮೊದಲ ಎಪಿಸೋಡಿನಲ್ಲಿ ಬರುವ ಅತಿಥಿ ಬದಲಾಗಿದ್ದಾರೆ.

5ನೇ ಸೀಸನ್ ನ ಮೊದಲ ಅತಿಥಿಯಾಗಿ ಖ್ಯಾತ ನೃತ್ಯ ನಿರ್ದೇಶಕ, ಚಿತ್ರ ನಿರ್ದೇಶಕ, ನಟ ಪ್ರಭುದೇವ (Prabhudeva) ಅವರು ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ನಿನ್ನೆಯಿಂದ ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಚಿತ್ರೀಕರಣ ಶುರುವಾಗಿದ್ದು, ಪ್ರಭುದೇವ್ ಅವರು ಚಿತ್ರೀಕರಣಕ್ಕೆ ಆಗಮಿಸಿದ್ದಾರೆ. ನಿನ್ನೆ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ನಡೆದ ಚಿತ್ರೀಕರಣದಲ್ಲಿ ಪ್ರಭುದೇವ ಪಾಲ್ಗೊಂಡಿದ್ದಾರೆ.

ಮೈಸೂರು ಮೂಲದ ಪ್ರಭುದೇವ ಕನ್ನಡ, ತಮಿಳು ಮತ್ತು ಹಿಂದಿ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ನಿರ್ದೇಶನ, ನಟನೆ, ನೃತ್ಯ ನಿರ್ದೇಶನ, ನಿರ್ಮಾಣ ಹೀಗೆ ಸಿನಿಮಾ ರಂಗದ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಪ್ರಭುದೇವ ಅವರ ತಂದೆ, ಸಹೋದರರು ಸಿನಿಮಾ ರಂಗದಲ್ಲೇ ದುಡಿದವರು. ಅಲ್ಲದೇ, ಪ್ರಭುದೇವ ಅವರ ಬದುಕು ವರ್ಣರಂಜಿತವಾದದ್ದು. ಹಾಗಾಗಿ ಸಹಜವಾಗಿಯೇ ಇವರ ಎಪಿಸೋಡ್ ಕುತೂಹಲದಿಂದ ಕೂಡಿರಲಿದೆ.

ಇನ್ನು ಸೀಸನ್ 5ರಲ್ಲಿ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲ, ಸಾಮಾನ್ಯ ಸಾಧಕರಿಗೂ ಅವಕಾಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಕ್ರಿಕೆಟ್, ರಾಜಕಾರಣಿಗಳು, ಸಿನಿಮಾ, ಕಿರುತೆರೆ, ರಂಗಭೂಮಿ ಹೀಗೆ ಬೇರೆ ಬೇರೆ ಕ್ಷೇತ್ರಗಳ ಸಾಧಕರು ಈ ಬಾರಿ ವೀಕೆಂಡ್ ಕುರ್ಚಿಯ ಮೇಲೆ ಕೂತು, ತಮ್ಮ ಕಥೆಯನ್ನು ಹೇಳಿಕೊಳ್ಳಲಿದ್ದಾರೆ. ಎಂದಿನಂತೆ ರಮೇಶ್ ಅರವಿಂದ್ ಅವರ ಮಾತಿಗೆ ಕಿವಿಯಾಗಲಿದ್ದಾರೆ.

Leave A Reply

Your email address will not be published.