Plastic Bag: ನೀರಿಗೆ ಹಾಕಿದರೆ ಸಾಕು ಕರಗೋ ಪ್ಲಾಸ್ಟಿಕ್ ! ಮಾರುಕಟ್ಟೆಯಲ್ಲಿ ಇನ್ನು ಗ್ರಾಹಕರಿಗಾಗಿ!
Non Plastic Bag: ಪ್ಲಾಸ್ಟಿಕ್( Plastic) ಬಳಕೆಯಿಂದ ಪರಿಸರದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಅದೆಷ್ಟೇ ಅರಿವು ಮೂಡಿಸಿದರು ಕೂಡ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗುವುದು ಹೇಳಿದಷ್ಟು ಸುಲಭವಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.ನಾವು ಬಳಕೆ ಮಾಡುವ ಹೆಚ್ಚಿನ ವಸ್ತುಗಳು ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಬಾಟಲ್, ಜ್ಯೂಸ್, ಆಹಾರ ಪದಾರ್ಥಗಳ ಪೊಟ್ಟಣ ಹೀಗೆ ಎಲ್ಲವೂ ಪ್ಲಾಸ್ಟಿಕ್ ಮಯವಾಗಿದ್ದು, ಇದು ಮಣ್ಣಿನಲ್ಲಿ ಕರಗದ ಹಿನ್ನೆಲೆ ಪರಿಸರದ( Environment) ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಹೀಗಾಗಿ, ಸರ್ಕಾರ (Government) ಪ್ಲಾಸ್ಟಿಕ್ ಬಳಕೆ ನಿಷೇಧ ಹೇರಿದೆ.ಇದೀಗ, ಕಂಪೆನಿಯೊಂದು ಪ್ಲಾಸ್ಟಿಕ್ ಗೆ ಪರ್ಯಾಯವಾದ ಉತ್ಪನ್ನವನ್ನು ಪರಿಚಯಿಸಿದೆ.
ಹೌದು!! ಮುಂಬೈ (Mumbai)ಮೂಲದ ವ್ಯಾಲ್ಯುವೇಬಲ್ ಎನರ್ಜಿ ಕಂಪೆನಿ ಏಕಬಳಕೆ ಪ್ಲಾಸ್ಟಿಕ್ಗೆ ಬ್ರೇಕ್ ನೀಡುವ ನಿಟ್ಟಿನಲ್ಲಿ ನೀರಿನಲ್ಲಿ ಕರಗುವ, ಪರಿಸರಸ್ನೇಹಿ, ಪ್ಲಾಸ್ಟಿಕ್ಗೆ ಪರ್ಯಾಯವೆನಿಸುವ ಏಕಬಳಕೆ ನಾನ್ ಪ್ಲಾಸ್ಟಿಕ್ ಬ್ಯಾಗ್ (Non Plastic Bag )ಹಾಗೂ ಬಹುಪಯೋಗಿ ಫ್ಯಾಬ್ರಿಕ್ ಬ್ಯಾಗ್ಗಳನ್ನು (Fabric Bags) ಬಿಡುಗಡೆ ಮಾಡಿದೆ.
ದೇಶದಲ್ಲಿ ಪ್ಲಾಸ್ಟಿಕ್ ಉದ್ಯಮ 1945ರಲ್ಲಿ ಮಾರುಕಟ್ಟೆಗೆ ಉದ್ಯಮ ಆರಂಭವಾಗಿದೆ. ದೇಶದಲ್ಲಿ 30 ಸಾವಿರಕ್ಕೂ ಅಧಿಕ ಪ್ಲಾಸ್ಟಿಕ್ ಉತ್ಪನ್ನ ಉತ್ಪಾದನಾ ಘಟಕಗಳನ್ನ ಒಳಗೊಂಡಿವೆ. ಗೋವಾ, ದೆಹಲಿ, ಕೇರಳಗಳಲ್ಲಿ ತಲಾವಾರು ಅತ್ಯಧಿಕ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ತಲಾವಾರು 700ಗ್ರಾಂನಿಂದ 2,500 ಗ್ರಾಂವರೆಗೆ ಬಳಕೆ ಕೂಡ ಆಗುತ್ತಿದೆ. ಉತ್ಪಾದನೆಯಾದ ಒಟ್ಟು ಪ್ಲಾಸ್ಟಿಕ್ನಲ್ಲಿ ಶೇ.24 ಪ್ಯಾಕೇಜಿಂಗ್, ಶೇ.23 ಕೃಷಿ, ಶೇ.10 ಗೃಹಬಳಕೆಗೆ ವಿನಿಯೋಗವಾಗುತ್ತಿದೆ. ಪ್ಲಾಸ್ಟಿಕ್ ಎಂಬ ಸಾಧನ ಬಳಕೆ ಹೆಚ್ಚಾಗುತ್ತಿದ್ದು, ವಾರ್ಷಿಕ 3.4 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಅದರಲ್ಲಿಯೂ ಬಳಕೆಯಾದ ಏಕಬಳಕೆ ಪ್ಲಾಸ್ಟಿಕ್ನಲ್ಲಿ ಶೇ.60 ಮಾತ್ರ ಸಂಗ್ರಹವಾಗುತ್ತಿದೆ. ಹೀಗಾಗಿ, ಪ್ಲಾಸ್ಟಿಕ್ ಬಳಕೆಗೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳ ಬಳಕೆ ಮಾಡುವುದು ಉತ್ತಮ. ಈ ನಿಟ್ಟಿನಲ್ಲಿ ಮುಂಬೈನ ಏಕಬಳಕೆ ಪ್ಲಾಸ್ಟಿಕ್ ಗಳಿಗೆ ಪರ್ಯಾಯವಾಗಿ ನಾನ್ ಪ್ಲಾಸ್ಟಿಕ್ ಬ್ಯಾಗ್ ಅನ್ನು ಪರಿಚಯಿಸಿದ್ದು, ಹೊಸ ಬದಲಾವಣೆಗೆ ಮುನ್ನುಡಿ ಬರೆಯುವ ಸಾಧ್ಯತೆ ದಟ್ಟವಾಗಿದೆ.
ಮುಂಬೈ ಮೂಲದ ವ್ಯಾಲ್ಯುವೇಬಲ್ ಎನರ್ಜಿ ಕಂಪನಿಯು ಏಕಬಳಕೆ ಪ್ಲಾಸ್ಟಿಕ್ ಗಳಿಗೆ ಪರ್ಯಾಯವಾಗಿ ಏಕಬಳಕೆ ನಾನ್ ಪ್ಲಾಸ್ಟಿಕ್ ಬ್ಯಾಗ್ ಮತ್ತು ಬಹುಪಯೋಗಿ ಫ್ಯಾಬ್ರಿಕ್ ಬ್ಯಾಗ್ಗಳನ್ನು ಉತ್ಪಾದನೆ ಮಾಡುತ್ತಿದೆ. ಇವು, ಪಾಲಿಮಾರ್, ಅಲ್ಕೋಹಾಲ್ ಆಧಾರಿತವಾಗಿದ್ದು, ಶೇ.100 ವಿಷರಹಿತವಾದ ನಾನ್ ಪ್ಲಾಸ್ಟಿಕ್ ಉತ್ಪನ್ನವಾಗಿದೆ. ಯುರೋಪಿಯನ್ ಸ್ಟ್ಯಾಂಡರ್ಡ್ ಮಟ್ಟದ ಉತ್ಪನ್ನವಾಗಿದ್ದು, ಯುಎಸ್-21 ಮಾನ್ಯತೆಯನ್ನೂ ಸಹ ಗಳಿಸಿದೆ. ಕಂಪೆನಿ ಪರಿಸರಸ್ನೇಹಿಯಾದ ಎರಡು ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದು, ಶೇ.100 ನಾನ್ ಪ್ಲಾಸ್ಟಿಕ್ ಉತ್ಪನ್ನ ಎಂದು ಕಂಪನಿ ಹೇಳಿಕೊಂಡಿದೆ. ನೂತನ ಉತ್ಪನ್ನ ಕೊಂಚ ದುಬಾರಿ ಬೆಲೆ ಹೊಂದಿದ್ದರು ಕೂಡ ಪರಿಸರ, ಆರೋಗ್ಯದ ಆಯಾಮದಲ್ಲಿ ವಿಶೇಷ ಮಹತ್ವ ಪಡೆದುಕೊಂಡಿದೆ.
ಬಹುಬಳಕೆ ವಿಶೇಷತೆ ಹೊಂದಿರುವ ಬ್ಯಾಗ್ (bag)ಆಗಿರುವ ಫ್ಯಾಬ್ರಿಕ್ ಬ್ಯಾಗ್ 10 ಕೆಜಿ ತೂಕವನ್ನು ಶೇಖರಣೆ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ. ಅಷ್ಟೆ ಅಲ್ಲದೇ, ಇದರ ವಿಶೇಷತೆ ಕೇಳಿದರೆ ಅಚ್ಚರಿ ಆಗಬಹುದು. ಕೆಲವು ಬಾರಿ ಬಳಕೆ ಮಾಡಿದ ಬಳಿಕ ಕೇವಲ 3 ಸೆಕೆಂಡ್ಗಳಲ್ಲಿ ಸುಮಾರು 55ರಿಂದ 80 ಡಿಗ್ರಿ ಉಷ್ಣಾಂಶದ ಬಿಸಿನೀರಿಗೆ ಹಾಕಿ ಬಿಟ್ಟರೆ ಕರಗುವ ಸಾಮರ್ಥ್ಯ ಕೂಡ ಹೊಂದಿದೆ. ತಣ್ಣನೆ ನೀರು ಬಳಕೆ ಮಾಡಿದರೆ ಈ ಬ್ಯಾಗ್ ಏನು ಆಗದು.ಆದರೆ, ಬಿಸಿನೀರಿನಲ್ಲಿ (Hot water) ಮಾತ್ರ ಫ್ಯಾಬ್ರಿಕ್ ಬ್ಯಾಗ್ ಕರಗಲಿದೆ(Melt).ಇದಲ್ಲದೆ, ಆ ನೀರನ್ನು ಗಿಡಗಳಿಗೂ (Plant)ಕೂಡ ಉಪಯೋಗಿಸಬಹುದು.
ಏಕಬಳಕೆ ಬ್ಯಾಗಿನ ವಿಶೇಷತೆ ಏನು ಎಂದು ಗಮನಿಸಿದರೆ,
5 ಕೆಜಿವರೆಗೂ ಭಾರದ ವಸ್ತುಗಳನ್ನು ಒಯ್ಯಬಹುದು.ಕೈಯಿಂದ ಜಗ್ಗಿದರೂ ಇದು ಹರಿಯದೆ ಇರುವಷ್ಟು ಗಟ್ಟಿಯಾಗಿದೆ. ಒಣ ಆಹಾರ ಪದಾರ್ಥಗಳನ್ನು, ಇತರೆ ಒಣ ಪದಾರ್ಥಗಳನ್ನು ಪ್ಯಾಕ್ ಮಾಡಿ ಇರಿಸಿಕೊಳ್ಳಬಹುದು. ಆದರೆ, ಹಸಿ ಉತ್ಪನ್ನಗಳಿಗೆ ಬ್ಯಾಗ್ ಬಳಕೆ ಮಾಡುವಂತಿಲ್ಲ ಎಂಬುದನ್ನು ಗಮನಿಸಬೇಕು. ಇದನ್ನು ಬಳಕೆ ಮಾಡಿದ ಬಳಿಕ ತಣ್ಣಗಿನ ನೀರಿನಲ್ಲಿ ಹಾಕಿದರೆ 10 ಸೆಕೆಂಡ್ಗಳಲ್ಲಿ ಕರಗಿಬಿಡುವ ವಿಶೇಷತೆ ಹೊಂದಿದೆ. ಈ ನೀರನ್ನು ಗಿಡಗಳಿಗೆ ಬಳಕೆ ಮಾಡಲು ಇಲ್ಲವೇ ಶುದ್ಧೀಕರಿಸಿ ಕುಡಿಯಲು ಕೂಡ ಬಳಕೆ ಮಾಡಬಹುದು.ಇದು ಜಾಗತಿಕ ಮಟ್ಟದ ಉತ್ಪನ್ನವಾಗಿದ್ದು, ದೇಶಿಯ ಮಾರುಕಟ್ಟೆ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಮಾರಾಟಕ್ಕೆ ಲಗ್ಗೆ ಇಡುವ ಸಾಧ್ಯತೆಗಳಿವೆ.
ವಿದೇಶಗಳಿಂದ ಹಾಗೂ ದೇಶಿಯವಾಗಿ ಕಚ್ಚಾ ಸಾಮಗ್ರಿಗಳನ್ನು ಪಡೆಯಲಾಗುತ್ತಿದ್ದು, ಸಾಮಾನ್ಯ ಪ್ಲಾಸ್ಟಿಕ್ ಉತ್ಪಾದನೆಯ ಯಂತ್ರಗಳಲ್ಲೇ ಈ ಬ್ಯಾಗ್ಗಳನ್ನು ಉತ್ಪಾದನೆ ಮಾಡಬಹುದು. ಸದ್ಯ ಈ ಬ್ಯಾಗ್ ಗಳನ್ನು ಮುಂಬೈನಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಒಂದು ವೇಳೆ, ಸರಕಾರ ಕಚ್ಚಾ ಸಾಮಗ್ರಿಗಳಿಗೆ ರಿಯಾಯಿತಿ ಘೋಷಣೆ ಮಾಡಿ ಬೆಂಬಲ ನೀಡಿ ಉತ್ತೇಜನ ನೀಡಲು ಮುಂದಾಗಿ ಹೆಚ್ಚಿನ ಪ್ರಮಾಣದ ಉತ್ಪನ್ನಗಳು ಮಾರುಕಟ್ಟೆಗೆ ಪ್ರವೇಶಿಸಿದರೆ ಬೆಲೆ ಇಳಿಕೆ ಕಾಣುವ ಸಾಧ್ಯತೆಗಳಿವೆ.