Mithun Rai: ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು! ಭಾರೀ ಆಕ್ರೋಶಕ್ಕೆ ಕಾರಣವಾಯ್ತು ಕಾಂಗ್ರೆಸ್ ನಾಯಕ ಮಿಥುನ್ ರೈ ಹೇಳಿಕೆ!
Mithun Rai :ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Assembly Election) ಕಾವು ರಂಗೇರುತ್ತಿದ್ದು, ಪಕ್ಷಗಳು ಅಬ್ಬರದ ಪ್ರಚಾರವನ್ನು ನಡೆಸುತ್ತಿವೆ. ಈ ವೇಳೆ ರಾಜಕೀಯ ನಾಯಕರು ಹಿಂದು ಮುಂದು ಯೋಚಿಸದೆ ಮನಬಂದಂತೆ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಇದರಲ್ಲಿ ಕೆಲವು ವಿವಾದಾತ್ಮ ಹೇಳಿಕೆಗಳು ಸೇರಿಕೊಂಡು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗುತ್ತದೆ. ಅಂತೆಯೇ ಇದೀಗ ಮೂಡಬಿದ್ರೆ (Moodbidri) ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಆಪ್ತ ಮಿಥುನ್ ರೈ (Mithun Rai) ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು ಕರಾವಳಿ ಭಾಗದಲ್ಲಿ ಹಾಗೂ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಎಡೆಮಾಡಿದೆ.
ಹೌದು, ದ.ಕ ಜಿಲ್ಲೆಯ ಮೂಡಬಿದ್ರೆ (Moodbidri) ತಾಲೂಕಿನ ಪುತ್ತಿಗೆ(Puttige)ಯಲ್ಲಿ ‘ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮವು ನೆರವೇರಿದ್ದು, ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಿಥುನ್ ಅವರು ‘ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನರು’ ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸದ್ಯ ಸಾಮಾಜಿಕ ತಾಣಗಳಲ್ಲಿ ಮಿಥುನ್ ರೈ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ.
ಇದೀಗ ಅನೇಕ ಹಿಂದೂಪರ ಸಂಘಟನೆಗಳು, ಬಿಜೆಪಿ(BJP) ನಾಯಕರು ಮಿಥುನ್ ಹೇಳಿಕೆಗೆ ಕಿಡಿ ಕಾರಿದ್ದಾರೆ. ಬಿಜೆಪಿ ಶಾಸಕ ಸಿಟಿ ರವಿ (CT Ravi) ತಿರುಗೇಟು ನೀಡಿ ‘ ಮುಂದೆ ಈ ಕಾಂಗ್ರೆಸ್ ನಾಯಕರು, ಕೇವಲ ಕೃಷ್ಣ ಮಠ ಅಲ್ಲ, ಭಾರತ ಅನ್ನೋ ಹೆಸರು ಕೊಟ್ಟಿದ್ದು ಮುಸ್ಲಿಂರು, ಅವರೇ ನಾಮಕರಣ ಮಾಡಿದ್ದೆಂದು ಹೇಳಿದರೂ ಅಚ್ಚರಿ ಇಲ್ಲ. ಅಲ್ಲದೆ ಮುಸಲ್ಮಾನ ದೊರೆಗಳೇ ರಾಮಮಂದಿರ ನಿರ್ಮಾಣ ಮಾಡಿದ್ದು. ಮುಸಲ್ಮಾನ ದೊರೆಗಳೇ ಕಾಶಿ ವಿಶ್ವನಾಥನ ಪ್ರತಿಷ್ಠಾಪನೆ ಮಾಡಿದ್ದೆಂದು ಹೇಳಿದರೂ ನಾವೆಲ್ಲಾ ಅಚ್ಚರಿ ಪಡಬೇಕಿಲ್ಲ ಎಂದು ಹೇಳಿದ್ದಾರೆ.
ಉಡುಪಿ ಶಾಸಕ ಕೆ ರಘುಪತಿ ಭಟ್ (K Raghupati Bhat) ಆಕ್ರೋಶ ವ್ಯಕ್ತಪಡಿಸಿ ‘ಮುಸಲ್ಮಾನ ಅರಸರು ಯಾವುದೇ ಜಾಗವನ್ನು ಕೃಷ್ಣ ಮಠಕ್ಕಾಗಲಿ, ಅನಂತೇಶ್ವರಕ್ಕಾಗಲಿ ನೀಡಿಲ್ಲ. ಅನಂತೇಶ್ವರ ದೇಗುಲಕ್ಕೆ ರಾಮಭೋಜನು ಭೂಮಿ ಕೊಟ್ಟ ಬಗ್ಗೆ ಉಲ್ಲೇಖ ಇದೆ. ಮುಂದೆ ಆ ಭೂಮಿಯೆ ಕೃಷ್ಣ ಮಠಕ್ಕೆ ಬಳಕೆಯಾಗಿದೆ. ಅನಂತೇಶ್ವರ ದೇಗುಲ ನಂತರ ಕೃಷ್ಣ ಮಠ ನಿರ್ಮಾಣಗೊಂಡಿದೆ. ಸದ್ಯ ಇರುವ ಜಾಮಿಯಾ ಮಸೀದಿ ಕೂಡ ಜಂಗಮರ ಮಠದ ಜಾಗದಲ್ಲಿತ್ತು ಎಂದು ಹೇಳಲಾಗುತ್ತೆ. ಶೋಕ ಮಾತಾ ಚರ್ಚ್ ಕೃಷ್ಣ ಮಠದವರು ಕೊಟ್ಟ ಲೀಸ್ ಭೂಮಿಯಲ್ಲಿದೆ. ಉಡುಪಿ ಸೌಹಾರ್ದತೆಗೆ ಹೆಸರಾದ ಕ್ಷೇತ್ರ. ಮುಸಲ್ಮಾನರಿಗೂ ಮಸೀದಿ ಕಟ್ಟಲು ಜಂಗಮರ ಮಠ ಜಾಗ ಕೊಟ್ಟಿದೆ. ಕ್ರಿಶ್ಚಿಯನ್ ಸಮುದಾಯಕ್ಕೆ ಚರ್ಚ್ ಕಟ್ಟಲು ಕೃಷ್ಣಾಪುರ ಮಠ ಭೂಮಿ ಕೊಟ್ಟಿದೆ. ಹಾಜಿ ಅಬ್ದುಲ್ಲಾ ಸಾಹೇಬರು ಭಕ್ತರಾಗಿ ಕೃಷ್ಣ ಮಠಕ್ಕೆ ಸಹಾಯ ಮಾಡಿದ ಉಲ್ಲೇಖವಿದೆ’ ಎಂದು ಹೇಳಿದ್ದಾರೆ.
ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಇದನ್ನು ಖಂಡಿಸಿ ‘ಮಿಥುನ್ ರೈ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಶ್ರೀಕೃಷ್ಣ ಮಠಕ್ಕೆ 800 ವರ್ಷಗಳ ಇತಿಹಾಸ ಇದೆ. ಹಿಂದೂಗಳಿಗೆ ಅವಮಾನ ಆಗುವಂತಹ ಹೇಳಿಕೆ ನೀಡಿದ್ದಾರೆ. ಮಿಥುನ್ ರೈ ಕೂಡಲೇ ಹಿಂದೂಗಳ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದ್ದಾರೆ. ಇನ್ನು ಮಿಥುನ್ ರೈ ಅವರು ಈ ಕುರಿತು ಸ್ಪಷ್ಟೀಕರಣ ನೀಡಿ, ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಪತ್ರಿಕೆಗಳಲ್ಲಿ ಬಂದಿದ್ದ ವರದಿ ನೋಡಿ ನಾನು ಹೇಳಿಕೆ ನೀಡಿದ್ದೇನೆ. ನಾನು ಸೌಹಾರ್ದಯುತ ಹೇಳಿಕೆ ನೀಡಿದ್ದೇನೆ ಎಂದಿದ್ದಾರೆ.
ಹಾಗೆ ಯಾರು ಈ ಮಿಥುನ್ ರೈ ಎಂದು ನೋಡೋದಾದ್ರೆ, ಇವರು ಕಾಂಗ್ರೆಸ್( Congress) ಯುವ ನಾಯಕನಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಪ್ತ ಬಣದಲ್ಲಿ ಕಾಣಸಿಕೊಂಡಿದ್ದಾರೆ. ಇವರು ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ನಳೀನ್ ಕುಮಾರ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಹಾಗೇ ಮಿಥುನ್ ರೈ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆದರೆ ಕೆಲವು ದಿನಗಳ ಬಳಿಕ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.