ಬೇಸಿಗೆಯಲ್ಲಿ ಆಹಾರ ಮತ್ತು ನೀರಿನ ಮೂಲಕ ರೋಗ ಹರಡುವಿಕೆ : ಆಹಾರೋದ್ಯಮಿಗಳಿಗೆ ಜಿಲ್ಲಾಧಿಕಾರಿ ಸೂಚನೆ
Summer :ಮಂಗಳೂರು: ಬೇಸಿಗೆಯಲ್ಲಿ (summer) ಆಹಾರ ಮತ್ತು ನೀರಿನ ಮೂಲಕ ಹರಡುವ ರೋಗಗಳು ಹೆಚ್ಚಾಗುವ ಕಾರಣ ಉಪಾಹಾರ ಗೃಹಗಳು, ಕ್ಯಾಂಟೀನ್ಗಳು, ಹೊಟೇಲ್ಗಳು, ಬಾರ್ಗಳು, ಬೇಕರಿಗಳು ಮುಂತಾದ ಸಿದ್ಧಪಡಿಸಿದ ಆಹಾರ ಮಾರಾಟ ಮಾಡುವ ಆಹಾರ ಉದ್ಯಮಿಗಳು ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಕೆಲವು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ರವಿಕುಮಾರ್ ಸಲಹೆ ನೀಡಿದ್ದಾರೆ.
ಆಹಾರೋದ್ಯಮಿಗಳು ನೀರಿನ ಮೂಲಗಳನ್ನು ಶುಚಿಗೊಳಿಸಬೇಕು. ಸೂಕ್ತ ತಾಪಮಾನದಲ್ಲಿ ಆಹಾರವನ್ನು ಸಂಗ್ರಹಿಸಬೇಕು. ಕುಡಿಯಲು ಶುದ್ಧೀಕರಿಸಿದ ಹಾಗೂ ಬಿಸಿನೀರು ಪೂರೈಕೆ ಮಾಡಬೇಕು. ಹೊಟೇಲ್ಗಳಲ್ಲಿ ಆಹಾರ ಅಥವಾ ಅಡುಗೆ ತಯಾರಕರು ವೈಯಕ್ತಿಕ ಶುಚಿತ್ವ ಖಚಿತ ಪಡಿಸಿಕೊಳ್ಳಬೇಕು.
ಅನಾರೋಗ್ಯದ ವೇಳೆ ಆಹಾರವನ್ನು ತಯಾರಿಸುವ, ಸರಬರಾಜು ಮಾಡುವ ಮತ್ತು ಬಡಿಸುವ ಕಾರ್ಯ ಮಾಡಬಾರದು. ಉಪಾಹಾರ ಗೃಹಗಳು, ಕ್ಯಾಂಟೀನ್, ಹೊಟೇಲ್, ಬಾರ್, ಬೇಕರಿಗಳಲ್ಲಿ ಅಡುಗೆಮನೆಗೆ ಪ್ರವೇಶಿಸುವ ಮೊದಲು ಏಪ್ರನ್, ಕೈಗವಸುಗಳು ಮತ್ತು ಹೆಡ್ಕವರ್ ಧರಿಸಬೇಕು.
ಆಹಾರ ತಯಾರಿಸುವ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮುಚ್ಚಿದ ಕಸದ ತೊಟ್ಟಿಗಳನ್ನು ಒದಗಿಸಬೇಕು.
ತರಕಾರಿಗಳು ಮತ್ತು ಹಣ್ಣು ಗಳನ್ನು ವ್ಯವಸ್ಥಿತ ಹಾಗೂ ಶುಚಿ ಯಾಗಿ ಸಂಗ್ರಹಿಸಿಡಬೇಕು. ಮಂಜುಗಡ್ಡೆಗಳನ್ನು ತಯಾರಿಸುವ ಹಾಗೂ ಸರಬರಾಜು ಮಾಡುವ ಸಂಸ್ಥೆಯು ಶುದ್ಧ ನಿರಿನ ಬಳಕೆಯನ್ನು ಖಾತ್ರಿಪಡಿಸಿ ಕೊಳ್ಳಬೇಕು. ಹಸಿ ಮೀನು, ಮಾಂಸ ಮಾರಾಟಗಾರರು ತಾಜಾತನವನ್ನು ಖಚಿತಪಡಿಸಿಕೊಳ್ಳಬೇಕು. ಬೀದಿ ಬದಿ ಆಹಾರ ಪದಾರ್ಥಗಳ ಶುದ್ಧತೆ, ಶುಚಿತ್ವವನ್ನು ಖಾತರಿ ಪಡಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಪ್ರಕಟನೆಯಲ್ಲಿ ಸಲಹೆ ನೀಡಿದ್ದಾರೆ