Naegleria Fowleri : ಅಮೆರಿಕದಲ್ಲಿ ಮಿದುಳು ತಿನ್ನುವ ಅಮೀಬಾ ; ಸೋಂಕಿಗೆ ಮತ್ತೊಂದು ಜೀವ ಬಲಿ!
Naegleria Fowleri : ಮಿದುಳು(brain) ತಿನ್ನುವ ಅಮೀಬಾ ‘ನೆಗಲೇರಿಯಾ ಫ್ಲೊವೆರಿ’ (Naegleria Fowleri) ಸೋಂಕಿಗೆ ಇದೀಗ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಕಳೆದ ವರ್ಷ ಈ ಮಾರಕ ಸೋಂಕಿಗೆ ದಕ್ಷಿಣ ಕೊರಿಯಾದ 50ರ ವ್ಯಕ್ತಿಯೊಬ್ಬರು ತುತ್ತಾಗಿ ಸಾವನ್ನಪ್ಪಿದ್ದರು. ಇದೀಗ ಅಮೆರಿಕದ ಫ್ಲೋರಿಡಾದಲ್ಲಿ (Florida) ‘ನೆಗಲೇರಿಯಾ ಫ್ಲೊವೆರಿ’ ಸೋಂಕಿಗೆ ಅಲ್ಲಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಅಮೆರಿಕಾ(America)ದ ಈ ವ್ಯಕ್ತಿಗೆ ಸೋಂಕು ಹೇಗೆ ಹರಡಿತೆಂದರೆ, ಫ್ಲೋರಿಡಾದ ಷಾರ್ಲೆಟ್ ಕೌಂಟಿಯಲ್ಲಿ ಈತ ಟ್ಯಾಪ್ ನೀರಿನಿಂದ ಮುಖ ತೊಳೆದಿದ್ದಾರೆ. ಈ ವೇಳೆ ಮೂಗಿನ ಮೂಲಕ ಅಮೀಬಾ ದೇಹಕ್ಕೆ ಸೇರಿದೆ, ನಂತರ ಅಮೀಬಾ (Amoeba) ಮೆದುಳನ್ನು ನಾಶಪಡಿಸಿದೆ. ಹಾಗಾಗಿ ವ್ಯಕ್ತಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.
ಎಲ್ಲಿ, ಹೇಗಿರುತ್ತೆ?
ಮಿದುಳು ತಿನ್ನುವ ಅಮೀಬಾ ಎಂದು ಕರೆಯಲ್ಪಡುವ ನೆಗಲೇರಿಯಾ ಫ್ಲೊವೆರಿ ಏಕಕೋಶ ಜೀವಿಯಾಗಿದ್ದು, ಸೂಕ್ಷ್ಮದರ್ಶಕದ ಮೂಲಕ ಮಾತ್ರವೇ ಕಾಣಿಸುತ್ತದೆ. ನೆಗ್ಲೇರಿಯಾ ಫೌಲೆರಿ ಅಮೀಬಾ ಶುದ್ಧ ನೀರಿನ (Water) ಮೂಲಗಳಲ್ಲಿ ಕಂಡುಬರುತ್ತವೆ. ನದಿ, ಕೆರೆಗಳಲ್ಲಿ ಸಾಮಾನ್ಯವಾಗಿರುತ್ತವೆ. ನೀರಿನ ಮೂಲಕ ಮನುಷ್ಯನ ದೇಹಕ್ಕೆ ಸೇರಿಕೊಳ್ಳುತ್ತದೆ. ನೀರು, ಮೂಗಿನ ಮೂಲಕ ದೇಹಕ್ಕೆ ಸೇರಿದ ನಂತರ ಮೆದುಳಿನ ಕಡೆಗೆ ಚಲಿಸಿ, ಮಿದುಳಿನ ಅಂಗಾಂಶವನ್ನು ನಾಶಪಡಿಸುತ್ತದೆ. ಇದು ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಎಂಬ ಹಾನಿಕಾರಕ ಸೋಂಕನ್ನು ಉಂಟುಮಾಡುತ್ತದೆ. ಈ ಸೋಂಕು ಸಾವನ್ನು ಉಂಟುಮಾಡುತ್ತದೆ.
ಇದರ ಲಕ್ಷಣವೇನು?
ತಲೆನೋವು (Headache), ಜ್ವರ(fever), ವಾಂತಿ, ಕುತ್ತಿಗೆ ನೋವು, ಭೇದಿ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಈ ಲಕ್ಷಣಗಳು ಕಾಣಿಸಿದ 18 ದಿನದೊಳಗೆ ಮನುಷ್ಯ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ.