ADAS: ಟಾಟಾ ಕಾರು ಪರಿಚಯಿಸಿದ ಎಡಿಎಎಸ್ ಫೀಚರ್ಸ್ ವಿಶೇಷತೆಗಳೇನು?
ADAS: ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್(Tata Motors) ಮಾರುತಿ ಸುಜುಕಿ, ಹ್ಯುಂಡೈ ಕಾರುಗಳೊಂದಿಗೆ ಸ್ಪರ್ಧಿಸುವ ಪ್ರಮುಖ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಭಾರತದ ಮಾರುಕಟ್ಟೆಯಲ್ಲಿ ಟಾಟಾದ ಹ್ಯಾರಿಯರ್, ಸಫಾರಿ ಮತ್ತು ನೆಕ್ಸಾನ್ ಎಸ್‌ಯುವಿಗಳ ರೆಡ್ ಡಾರ್ಕ್ ಆವೃತ್ತಿ ಬಿಡುಗಡೆಯಾಗಿದ್ದು, ಮೂರು ಎಸ್‌ಯುವಿಗಳು ಹಲವು ಕಾಸ್ಮೆಟಿಕ್ ನವೀಕರಣಗಳನ್ನು ಮಾಡಿದೆ.
ಟಾಟಾ ಮೋಟಾರ್ಸ್ ಸಹ ಇದೀಗ ತನ್ನ ಪ್ರಮುಖ ಕಾರುಗಳಲ್ಲಿ ಹೊಸ ಫೀಚರ್ಸ್ ಪರಿಚಯಿಸಿದೆ. ಹೊಸ ಕಾರುಗಳಲ್ಲಿ ಇದೀಗ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅದರಲ್ಲೂ ಮಧ್ಯಮ ಕ್ರಮಾಂಕದ ಕಾರುಗಳ ಸುರಕ್ಷತೆಯು ಸಾಕಷ್ಟು ಸುಧಾರಿಸಿದ್ದು, ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅನೇಕ ಹೊಸ ಫೀಚರ್ಸ್ ನೀಡಲಾಗುತ್ತಿದೆ. ಅದರಲ್ಲೂ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಇದೀಗ ಹೆಚ್ಚು ಬೇಡಿಕೆ ಪಡೆದುಕೊಂಡಿದೆ. ಭಾರತದಲ್ಲಿ ಮಾರಾಟಗೊಳ್ಳುವ ಹೊಸ ಕಾರುಗಳ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಟಾಟಾ ಕಾರುಗಳು ಗ್ರಾಹಕರ ಬೇಡಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಸದ್ಯ,ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಸಫಾರಿ ಮತ್ತು ಹ್ಯಾರಿಯರ್ ಕಾರುಗಳಲ್ಲಿ ಹೊಸದಾಗಿ ಎಡಿಎಎಸ್ ಸೇಫ್ಟಿ (ADAS)(Advanced driver-assistance system)ವಿಶೇಷತೆಯನ್ನು ಹೊಂದಿದೆ.
ಇಂದು ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಅನೇಕ ಕಾರುಗಳು ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಸುಧಾರಣೆ ಕಂಡಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ವಿಶೇಷತೆಗಳನ್ನು ಒಳಗೊಂಡಿದೆ. 2023ರ ಹ್ಯಾರಿಯರ್ ಮತ್ತು ಸಫಾರಿ ಕಾರುಗಳಲ್ಲಿ ಎಡಿಎಸ್ ನೀಡಲಾಗಿದ್ದು, ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ನೆರವಾಗುತ್ತದೆ. ಹೊಸ ಕಾರುಗಳಲ್ಲಿ ಗರಿಷ್ಠ ಸುರಕ್ಷತೆಯ ಮೂಲಕ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಉತ್ತಮ ರೇಟಿಂಗ್ಸ್ ಗಳಿಸುತ್ತಿದ್ದು, ಇದೀಗ ಹೊಸದಾಗಿ ಎಡಿಎಎಸ್ ಅಥವಾ ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟೆನ್ಸ್ ಸಿಸ್ಟಂ (Advanced driver-assistance system)ಸೌಲಭ್ಯ ಹೊಂದಿದೆ.
ವಿಶ್ವಾದ್ಯಂತ ಪ್ರಮುಖ ಕಾರು ಉತ್ಪಾದನಾ ಕಂಪನಿಗಳು ಹೊಸ ಸುರಕ್ಷಾ ಸೌಲಭ್ಯವನ್ನು ತಮ್ಮ ಪ್ರಮುಖ ಕಾರು ಉತ್ಪನ್ನಗಳಲ್ಲಿ ಹಂತ-ಹಂತವಾಗಿ ಜೋಡಣೆ ಮಾಡುವಲ್ಲಿ ನಿರತವಾಗಿದೆ. ಲೆವಲ್ 2 ಎಡಿಎಎಸ್ ನಲ್ಲಿ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಪೆಡೆಸ್ಟ್ರಿಯನ್ ಡಿಟೆಕ್ಷನ್, ಸರೌಂಡ್ ವ್ಯೂ, ಪಾರ್ಕಿಂಗ್ ಅಸಿಸ್ಟ್, ಲೇನ್ ಕೀಪ್ ಅಸಿಸ್ಟ್, ಫಾರ್ವಡ್ ಕೂಲಿಷನ್ ಅಸಿಸ್ಟ್, ರಿಯರ್ ಕ್ರಾಸ್ ಟ್ರಾಫಿಕ್ ಅಸಿಸ್ಟ್ ಸೌಲಭ್ಯಗಳು ಕೂಡ ಈ ಕಾರುಗಳಲ್ಲಿ ಇರಲಿವೆ.
ಲೆವಲ್ 2 ಎಡಿಎಎಸ್ ಫೀಚರ್ಸ್ ನಲ್ಲಿ ಅನೇಕ ವೈಶಿಷ್ಟ್ಯತೆಗಳಿದ್ದು, ಒಂದು ವೇಳೆ ಚಾಲಕ ಕಾರು ಚಾಲನೆ ಮಾಡುವ ಸಂದರ್ಭ ನಿದ್ರೆಗೆ ಜಾರಿದರೆ ಕೂಡಲೇ ಅಲರ್ಟ್ ಮಾಡುತ್ತದೆ. ಅಷ್ಟೆ ಅಲ್ಲದೇ, ಚಾಲಕ ಕಾರು ಚಾಲನೆ ಮಾಡುವ ಶೈಲಿಯನ್ನು ಆಧರಿಸಿ ನಿದ್ರೆಯ ಗುಂಗಿನಲ್ಲಿ ಮುಳುಗಿದ್ದರೆ ಮಂಪರಿನಿಂದ ಎಚ್ಚರಿಸಿ ವಿಶ್ರಾಂತಿಗೆ ಸೂಚನೆ ಕೂಡ ನೀಡುತ್ತೆ. ಈ ವಿಶೇಷತೆಯ ಮೂಲಕ ಅಪಘಾತ ಆಗುವುದನ್ನು ತಪ್ಪಿಸಲು ನೆರವಾಗುತ್ತದೆ. ಎಡಿಎಎಸ್ ಸೌಲಭ್ಯವು ಸಂಪೂರ್ಣವಾಗಿ ರಡಾರ್ ಆಧರಿಸಿ ಕಾರ್ಯನಿರ್ವಹಿಸಲಿದೆ. ನೂತನ ಹ್ಯಾರಿಯರ್, ಸಫಾರಿ ಹಾಗೂ ನೆಕ್ಸಾನ್ ರೆಡ್ ಡಾರ್ಕ್ ಆವೃತ್ತಿಗಳ ಹೊರ ಭಾಗದ ವಿನ್ಯಾಸ ಬಹುತೇಕ ಹಿಂದಿನ ಮಾದರಿಗಳನ್ನು ಹೋಲಿಕೆಯಾಗುತ್ತದೆ.
ಎಡಿಎಎಸ್ ಸುರಕ್ಷಾ ಸೌಲಭ್ಯವು ಇತ್ತೀಚಿನ ಆಧುನಿಕ ಕಾರು ಮಾದರಿಗಳಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದು ಸಂಭಾವ್ಯ ಅಪಘಾತಗಳನ್ನು ತಗ್ಗಿಸಲು ಸಾಕಷ್ಟು ನೆರವಾಗುತ್ತಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳು ಈ ಸೇಫ್ಟಿ ಫೀಚರ್ಸ್ ಪಡೆದುಕೊಳ್ಳುತ್ತಿವೆ. 2023ರ ಹಲವು ಕಾರು ಮಾದರಿಗಳಲ್ಲಿ ಎಡಿಎಎಸ್ ಜೋಡಿಸಲಾಗುತ್ತಿದ್ದು, ಇದು ಅಪಘಾತಗಳ ಸಂಖ್ಯೆ ತಗ್ಗಿಸಲು ಮಹತ್ವದ ಪಾತ್ರವಹಿಸಲಿದೆ. ಭಾರತದಲ್ಲಿ ಪ್ರಮುಖ ಕಾರುಗಳು ಸದ್ಯಕ್ಕೆ ಲೆವಲ್ 2 ಎಡಿಎಎಸ್ ವಿಶೇಷತೆ ಹೊಂದಿದೆ. ಸಫಾರಿ ಮತ್ತು ಹ್ಯಾರಿಯರ್ ಕಾರುಗಳು ಹೊಸ ವಿಶೇಷತೆ ಮೂಲಕ ಜನ ಮನ ಸೆಳೆಯಲು ಅಣಿಯಾಗಿದೆ.