Old Pension Scheme : ಹಳೆ ಪಿಂಚಣಿ ಯೋಜನೆ ಆಯ್ಕೆಗೆ ಆಗಸ್ಟ್‌ವರೆಗೆ ಅವಕಾಶ!
Old Pension Scheme : ನಿವೃತ್ತಿಯ ನಂತರದ ಜೀವನಕ್ಕಾಗಿ ಹೂಡಿಕೆ ಮಾಡಲು ಬಯಸುವವರಿಗೆ ಇರುವ ಉತ್ತಮ ಆಯ್ಕೆಗಳಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ ಒಂದಾಗಿದ್ದು, ಉದ್ಯೋಗವನ್ನು ಆರಂಭಿಸಿದ ತಕ್ಷಣ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನಿವೃತ್ತಿಯ ಸಮಯದಲ್ಲಿ ದೊಡ್ಡ ಮೊತ್ತವನ್ನು ಪಡೆಯಬಹುದಾಗಿದೆ.
ಭಾರತ ಸರ್ಕಾರವು ತನ್ನ ನಾಗರಿಕರಿಗೆ 2003 ರಲ್ಲಿ ಹೊಸ ಪಿಂಚಣಿ ಯೋಜನೆಯನ್ನು ಪರಿಚಯಿಸಿದ್ದು, ಈ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ 2004 ರಲ್ಲಿ ಜಾರಿಗೆ ತರಲಾಗಿದೆ. ದೇಶದ ನಾಗರಿಕರಿಗೆ ವ್ಯಾಖ್ಯಾನಿಸಲಾದ ಕೊಡುಗೆ ಪಿಂಚಣಿಯನ್ನು ಒದಗಿಸುವ ನಿಟ್ಟಿನಲ್ಲಿ ಎನ್‌ಪಿಎಸ್ (NPS)ಕಾರ್ಯನಿರ್ವಹಿಸುತ್ತಿದೆ. 2003 ರ ಡಿಸೆಂಬರ್ 22ಗೂ ಮುನ್ನ ಅರ್ಜಿ ಸಲ್ಲಿಸಿದ್ದ ಉದ್ಯೋಗಗಳಿಗೆ ಕೇಂದ್ರ ಸರ್ಕಾರ ಒಂದು ಬಾರಿ ಹಳೆ ಪಿಂಚಣಿ ಆಯ್ಕೆಗೆ ಅವಕಾಶ ಕಲ್ಪಿಸಿದೆ. ಹೊಸ ಯೋಜನೆಯನ್ನು ಅಸ್ತಿತ್ವದಲ್ಲಿರುವ ಹಳೆಯ ಪಿಂಚಣಿ ಯೋಜನೆಗೆ ಪರ್ಯಾಯವಾಗಿ ಆರಂಭಿಸಲಾಗಿದ್ದು, ದೇಶದ ನಾಗರಿಕರಿಗೆ ಹೆಚ್ಚು ಸುರಕ್ಷಿತ ಮತ್ತು ಸ್ಥಿರ ನಿವೃತ್ತಿ ಆದಾಯವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಈ ನಡುವೆ ಕೇಂದ್ರ ಸರ್ಕಾರವು ತನ್ನಲ್ಲಿ ಉದ್ಯೋಗ ಮಾಡಲು ಇಚ್ಚಿಸುವ ನೌಕರರಿಗೆ ಹಳೆಯ ಪಿಂಚಣಿ ಯೋಜನೆ( Old Pension Scheme)(OPS) ಆಯ್ಕೆ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಛತ್ತೀಸ್‌ಗಢ, ರಾಜಸ್ಥಾನ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶಗಳಂತಹ ಹಲವಾರು ವಿರೋಧ ಪಕ್ಷದ ನೇತೃತ್ವದ ಸರ್ಕಾರಗಳು ತಾವು OPS ಅನ್ನು ಮರುಸ್ಥಾಪಿಸುವುದಾಗಿ ಈಗಾಗಲೇ ಘೋಷಣೆ ಮಾಡಿದ್ದು ಗೊತ್ತಿರುವ ಸಂಗತಿ. 2004 ರಿಂದ ಕೇಂದ್ರ ಸರ್ಕಾರಿ ಸೇವೆಗೆ (ಸಶಸ್ತ್ರ ಪಡೆಗಳನ್ನು ಹೊರತುಪಡಿಸಿ) ಸೇರುವ ಎಲ್ಲಾ ಹೊಸ ನೇಮಕಾತಿಗಳಿಗೆ ಅನ್ವಯವಾಗುವಂತೆ ಈ ಹೊಸ ಪಿಂಚಣಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಕೇಂದ್ರವು 2003ರ ಡಿಸೆಂಬರ್ ನಲ್ಲಿ ಜಾಹೀರಾತಿನ ಅನುಸಾರ 2004 ರ ಜನವರಿ ಒಳಗಾಗಿ ಸೇರ್ಪಡೆಯಾದ ಉದ್ಯೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಆರಿಸಿಕೊಳ್ಳಲು ಅವಕಾಶ ಕಲ್ಪಿಸಿದೆ.
ಪ್ರಸ್ತುತ ಉದ್ಯೋಗಿಗಳಿಗೆ ಆಗಸ್ಟ್ 31 ರವರೆಗೆ OPS ಆಯ್ಕೆ ಮಾಡಲು ಸಮಯಾವಧಿ ಕಲ್ಪಿಸಿದೆ. ಹಳೆ ಪಿಂಚಣಿ ಯೋಜನೆ (OPS) ಅಥವಾ ಡಿಫೈನ್ಡ್ ಪೆನ್ಶನ್ ಬೆನಿಫಿಟ್ ಯೋಜನೆ(Old Pension Scheme) ಉದ್ಯೋಗಿ ನಿವೃತ್ತಿಯ ನಂತರದ ಜೀವಿತಾವಧಿಯ ಆದಾಯವನ್ನೂ ಖಚಿತ ಪಡಿಸಿ ಆರ್ಥಿಕವಾಗಿ ವ್ಯಕ್ತಿಗೆ ಬೆಂಬಲ ಒದಗಿಸುತ್ತದೆ. ಅಂತಿಮವಾಗಿ ನೌಕರ ಗಳಿಸುವ ಸಂಬಳದ ಶೇಕಡಾ 50ರಷ್ಟಕ್ಕೆ ಸಮಾನವಾಗಿರುತ್ತದೆ. ಪಿಂಚಣಿಗೆ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಕೇಂದ್ರ ಸರ್ಕಾರಿ ನೌಕರರು ಜನವರಿ 31 ರವರೆಗೆ 23,65,693 ಮತ್ತು 60,32,768 ರಾಜ್ಯ ಸರ್ಕಾರಿ ನೌಕರರು ಎನ್‌ಪಿಎಸ್ ಅಡಿಯಲ್ಲಿ ದಾಖಲಾಗಿದ್ದು, ಸದ್ಯ ,ಪಶ್ಚಿಮ ಬಂಗಾಳವನ್ನು ಹೊರತುಪಡಿಸಿದರೆ ದೇಶದ ಬಹುತೇಕ ಎಲ್ಲಾ ರಾಜ್ಯಗಳು ಎನ್‌ಪಿಎಸ್ ಮರು ಜಾರಿಗೆ ತಂದಿದೆ.
ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DPPW) ಹಣಕಾಸು ಮತ್ತು ಕಾನೂನು ಸಚಿವಾಲಯಗಳು ವೆಚ್ಚ ಸಿಬ್ಬಂದಿ ಇಲಾಖೆಗಳೊಂದಿಗೆ ಈ ಕುರಿತು ಸಮಗ್ರ ಚರ್ಚೆ ನಡೆಸಿ ಸಮಾಲೋಚನೆ ಮಾಡಿದ್ದು ಈ ಸಂದರ್ಭದಲ್ಲಿ ಉದ್ಯೋಗಿಗಳಿಗೆ OPS ಮರು ಜಾರಿಗೆ ಎಲ್ಲರೂ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.
ಪ್ರಸ್ತುತ, ನ್ಯಾಯಾಲಯದ ತೀರ್ಪು ಮತ್ತು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಗಳ ಆದೇಶ ಉಲ್ಲೇಖಿಸಿ ಸರ್ಕಾರಿ ನೌಕರರಿಂದ ಪ್ರಾತಿನಿಧ್ಯ ಪಡೆದುಕೊಳ್ಳಲಾಗಿದೆ. ಹೀಗಾಗಿ, ನೌಕರರಿಗೆ OPS ಕುರಿತು ತೀರ್ಮಾನ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಉದ್ಯೋಗಿಗಳಿಗೆ ಓಪಿಎಸ್ ಮೊರೆ ಹೋಗುವ ಪ್ರಸ್ತಾಪವನ್ನು ಮುಂದಿಡಲಾಗಿದ್ದು, ಡಿಪಿಪಿಡಬ್ಲ್ಯು ಪ್ರಸ್ತಾವನೆಗೆ ಶುಕ್ರವಾರ ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.
ಡಿಪಿಪಿಡಬ್ಲ್ಯೂ (ಮಾರ್ಚ್ 3)ರಂದು ಆದೇಶ ಹೊರಡಿಸಿದ್ದು, ಎಲ್ಲ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರದ ನೌಕರರು ಅಂದರೆ ಹೊಸ ಪಿಂಚಣಿ ವ್ಯವಸ್ಥೆ (NPS) ವ್ಯಾಪ್ತಿಯಲ್ಲಿರುವವರು ನಿಯಮಗಳ ಅನುಸಾರ ಒಂದು-ಬಾರಿ ಆಯ್ಕೆ ಮಾಡಿಕೊಳ್ಳಲು ಅನುವು ಮಾಡಿಕೊಡಲಾಗಿದ್ದು, ಹೀಗಾಗಿ, ಮುಂದಿನ ಆಗಸ್ಟ್ ವರೆಗೆ ಸಮಯಾವಧಿ ಕಲ್ಪಿಸಿರುವ ಕುರಿತು ಅನುಮೋದನೆಯಲ್ಲಿ ತಿಳಿಸಲಾಗಿದೆ. ಅಖಿಲ ಭಾರತ ರಕ್ಷಣಾ ನೌಕರರ ಒಕ್ಕೂಟ ಕೂಡ ಈ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.
NPS ಮತ್ತು OPS ನಡುವಿನ ಮುಖ್ಯ ವ್ಯತ್ಯಾಸವನ್ನು ಗಮನಿಸಿದರೆ, ನೀಡಲಾಗುತ್ತಿರುವ ಖಾತರಿಯ ಪಿಂಚಣಿ ಮಟ್ಟ ಎನ್ನಬಹುದು. NPS ಯಾವುದೇ ಖಾತರಿಯ ಪಿಂಚಣಿಯನ್ನು ನಿವೃತ್ತ ನೌಕರರಿಗೆ ಒದಗಿಸದು. ಆದರೆ OPS ಕೊನೆಯದಾಗಿ ಪಡೆದ ವೇತನ ಮತ್ತು ವ್ಯಕ್ತಿಯ ಸೇವೆಯ ವರ್ಷಗಳ ಸಂಖ್ಯೆಯನ್ನು ಆಧರಿಸಿ ಖಾತರಿಪಡಿಸಿದ ಪಿಂಚಣಿಯನ್ನು ಒದಗಿಸುತ್ತದೆ. ತಮ್ಮ ನಿವೃತ್ತಿಯಲ್ಲಿ ಖಾತರಿಯ ಪಿಂಚಣಿ ಹುಡುಕುತ್ತಿರುವವರಿಗೆ OPS ಅನ್ನು ಹೆಚ್ಚು ಸುರಕ್ಷಿತ ಮತ್ತು ಸ್ಥಿರವಾದ ಆಯ್ಕೆ ಎನ್ನಲಾಗುತ್ತದೆ.