ಅದೃಷ್ಟ ಬರುತ್ತೆ ಎಂದು ನಂಬಿ ನರಿ ಸಾಕಿದ್ದ ಕೋಳಿ ಸಾಕಾಣಿಕೆದಾರ, ಅದೃಷ್ಟ ಎಕ್ಕುಟ್ಟಿ ಜೈಲು ಪಾಲು !
Tumkur : ಅದೃಷ್ಟ ತರುತ್ತದೆ ಎಂದು ನಂಬಿ ನರಿಮರಿಯನ್ನು ಸಾಕಿದ್ದ ವ್ಯಕ್ತಿಯನ್ನು ಕರ್ನಾಟಕ ಪೊಲೀಸ್‌ನ ಅಪರಾಧ ತನಿಖಾ ವಿಭಾಗ (ಸಿಐಡಿ) ಪೊಲೀಸರು ಬಂಧಿಸಿದ್ದಾರೆ. ನರಿಯನ್ನು ಸಾಕಿದ ಕಾರಣದಿಂದ ಅದೃಷ್ಟ ಕೈಕೊಟ್ಟು ಆರೋಪಿ ಪೋಲೀಸರ ಅತಿಥಿಯಾಗಿದ್ದಾನೆ. ಆರೋಪಿಯನ್ನು ತುಮಕೂರು (Tumkur) ಜಿಲ್ಲೆಯ ನಾಗವಳ್ಳಿ ಗ್ರಾಮದ ನಿವಾಸಿ, 42 ವರ್ಷದ ಲಕ್ಷ್ಮೀಕಾಂತ್ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಆರೋಪಿ ಕೋಳಿ ಸಾಕಣೆ ಮಾಡುತ್ತಿದ್ದಾನೆ ಮತ್ತು ಸುಮಾರು ಏಳು ತಿಂಗಳ ವಯಸ್ಸಿನ ನರಿಯನ್ನು ಅವನ ಜಮೀನಿನಲ್ಲಿ ಪಂಜರದಲ್ಲಿ ಇರಿಸಲಾಗಿತ್ತು. ಅಕ್ರಮವಾಗಿ ಕಾಡುಪ್ರಾಣಿಯನ್ನು ಸಾಕಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮಂಗಳವಾರ ದಾಳಿ ನಡೆಸಿ ಆತನನ್ನು ಬಂಧಿಸಲಾಗಿದೆ.
ಇದು ಅದೃಷ್ಟವನ್ನು ತರುತ್ತದೆ ಎಂದು ಭಾವಿಸಲಾಗಿದೆ. ಏಳು ತಿಂಗಳ ಹಿಂದೆ ನವಜಾತ ನರಿಯನ್ನು ಅವರು ಹಿಡಿದಿದ್ದರು. ಅಂದಿನಿಂದ ತನ್ನ ಕೋಳಿ ಫಾರಂನಲ್ಲಿ ಆ ನರಿಮರಿಯನ್ನು ಸಾಕಿದ್ದರು. ಅಕ್ರಮವಾಗಿ ನರಿಯನ್ನು ಇರಿಸಿಕೊಂಡಿದ್ದಾಗಿ ಲಕ್ಷ್ಮೀಕಾಂತ್ ಪೊಲೀಸರಿಗೆ ತಿಳಿಸಿದ್ದಾರೆ. ಈ ಪ್ರಾಣಿಯು ಅದೃಷ್ಟವನ್ನು ತರುತ್ತದೆ ಎಂದು ನರಿಯನ್ನು ಸಾಕಿದ್ದೆ ಎಂದು ಲಕ್ಷ್ಮಿಕಾಂತ್ ಅವರು ಪೊಲೀಸರಿಗೆ ತಿಳಿಸಿದ್ದಾರೆ. ದಾಳಿಯ ನಂತರ, ಲಕ್ಷ್ಮೀಕಾಂತನನ್ನು ಬಂಧಿಸಿ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ನರಿ ಆರೋಗ್ಯವಾಗಿದ್ದು, ತುಮಕೂರು ವಲಯ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ನರಿಯನ್ನು ಕಾಡಿನಲ್ಲಿ ಬಿಡುಗಡೆ ಮಾಡಲಾಗುವುದು ಎಂದಿದೆ ಅರಣ್ಯ ಇಲಾಖೆ. ಕಾಡಿನಲ್ಲಿ ಬದುಕುವ ಸಾಮರ್ಥ್ಯದ ಮೌಲ್ಯಮಾಪನದ ನಂತರ, ಅರಣ್ಯ ಇಲಾಖೆಯು ನರಿಯನ್ನು ಕಾಡಿನಲ್ಲಿ ಬಿಡಲು ಯೋಜಿಸಿದೆ. ಕರ್ನಾಟಕದಲ್ಲಿ, ನರಿಯು ಅದೃಷ್ಟ ಸೂಚಕ ಎನ್ನುವ ನಂಬಿಕೆ ಹಿಂದಿನಿಂದಲೂ ಇದೆ. ಏನಾದರೂ ಒಳ್ಳೆಯದು ಘಟಿಸಿದರೆ, ” ಏನು ಬೆಲ್ ಬೆಳ್ಗೆ ನರಿಯ ಮುಖ ಏನಾದರೂ ನೋಡಿದ್ದೀರಾ ? ” ಎಂಬ ಮಾತೂ ಆಗಾಗ ಆಡು ಭಾಷೆಯಲ್ಲಿ ಚಾಲ್ತಿಯಲ್ಲಿದೆ.
ಭಾರತದಲ್ಲಿ ಹಲವು ನರಿಪ್ರಭೇದಗಳಿದ್ದು, ಇದು ಥ್ರೆಟೆನ್ಡ್ ಸ್ಪೀಷೀಸ್‌ನಲ್ಲಿ ಕಡಿಮೆ ಕಾಳಜಿ ಎಂದು ಪಟ್ಟಿಮಾಡಲಾಗಿದ್ದರೂ, 1972 ರ ವನ್ಯಜೀವಿ ರಕ್ಷಣೆ (Wildlife Protection) ಕಾಯಿದೆ ಅಡಿಯಲ್ಲಿ ಇದನ್ನು ರಕ್ಷಿಸಲಾಗುತ್ತಿದೆ. ಈ ಕಾಯ್ದೆಯ ಅಡಿಯಲ್ಲಿ, ನರಿಗಳನ್ನು ಸಾಕುವುದು, ಬೇಟೆಯಾಡುವುದು ಅಪರಾಧ. ಮತ್ತು ಅದಕ್ಕೆ ವನ್ಯಜೀವಿ ಕಾಯ್ದೆಯ ಅಡಿಯಲ್ಲಿ ಶಿಕ್ಷೆಯನ್ನು ವಿಧಿಸಲಾಗುತ್ತದೆ.