ತಾನು ನೋಡಿದ 470 ಸಿನಿಮಾಗಳ ಹೆಸರು, ಡೇಟ್ ಗಳೊಂದಿಗೆ ಕಂಪ್ಲೀಟ್ ಡಿಟೇಲ್ಸ್ ಬರೆದಿಟ್ಟ ತಾತ ! ಈತನ ಸಿನಿಮಾ ಹುಚ್ಚೇ ವಿಚಿತ್ರ !

Cinema Diary : ಅನೇಕರು ಚಿತ್ರಮಂದಿರಗಳಲ್ಲಿ ಚಲನಚಿತ್ರಗಳನ್ನು ವೀಕ್ಷಿಸುತ್ತಾರೆ. ಎಷ್ಟೋ ಜನ ತಾವು ನೋಡಿದ ಹೆಸರನ್ನು ಕೂಡ ಮರೆತು ಬಿಡೋದುಂಟು. ಆದರೆ ಕೆಲವು ಸಿನಿಪ್ರಿಯರಿಗೆ, ಚಲನಚಿತ್ರಗಳೇ ಎಲ್ಲವೂ. ಎಲ್ಲಾ ಮನರಂಜನೆಯನ್ನೂ ಅವರು ಸಿನಿಮಾದಲ್ಲೇ ಹುಡುಕುತ್ತಾರೆ. ಇಲ್ಲೊಬ್ಬರು ಅಜ್ಜ ಇದ್ದಾರೆ, ಆತ ಈ ಕೆಟಗರಿಗೆ ಸೇರಿದವರು. ಅವರು ಥಿಯೇಟರ್‌ಗಳಲ್ಲಿ ಸಿಕ್ಕಾಪಟ್ಟೆ ಸಿನಿಮಾಗಳನ್ನು ವೀಕ್ಷಿಸಿದ್ದಲ್ಲದೆ, ತಾನು ನೋಡಿದ ಎಲ್ಲಾ ಸಿನಿಮಾಗಳ ದಾಖಲೆ ( Cinema Diary) ಯನ್ನು ಡೈರಿಯಲ್ಲಿ ಬರೆದಿಟ್ಟುಕೊಂಡು ತನ್ನ ಚಲನಚಿತ್ರಗಳ ಮೇಲಿನ ಪ್ರೀತಿಯನ್ನು ಮುಂದಿನ ಹಂತಕ್ಕೆ ಹೇಗೆ ಕೊಂಡೊಯ್ದರು ಎಂಬುದನ್ನು ವ್ಯಕ್ತಿಯೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ಸಿನಿಮಾಪ್ರಿಯ ಅಜ್ಜನ ವ್ಯಕ್ತಿಯ ಪರಿಶ್ರಮಕ್ಕೆ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.
ಎ ಕೆ (@iamakshy_06) ಹೆಸರಿನ ಟ್ವಿಟರ್ ಬಳಕೆದಾರರು ಬಹಳ ಹಿಂದೆಯೇ ತಮ್ಮ ತಾತ ಅವರು ಥಿಯೇಟರ್‌ನಲ್ಲಿ ವೀಕ್ಷಿಸಿದ ಪ್ರತಿ ಚಲನಚಿತ್ರ, ಅದನ್ನು ವೀಕ್ಷಿಸಿದ ದಿನಾಂಕ, ಚಿತ್ರದ ಹೆಸರು, ಸಿನಿಮಾದ ಭಾಷೆಯನ್ನು ಅವರು ಬರೆದಿಟ್ಟಿದ್ದಾರೆ. ಅಷ್ಟೇ ಅಲ್ಲ, ಅವತ್ತು ಸಿನಿಮಾ ಪ್ರದರ್ಶನದ ಸಮಯ ಮತ್ತು ಅದನ್ನು ವೀಕ್ಷಿಸಿದ ಥಿಯೇಟರ್ ಅನ್ನು ಕೂಡಾ ನಮೂದಿಸಿದ್ದಾರೆ. ಅವರು ತನ್ನ ಸಿನಿಮಾ ವೀಕ್ಷಣಾ ದಿನಚರಿಯನ್ನು ಬಹಳ ಶ್ರಮದಿಂದ ನಿರ್ವಹಿಸುತ್ತಿದ್ದುದು ಅವರು ಬರೆದ ರೀತಿಯಿಂದಲೇ ಗೊತ್ತಾಗುತ್ತಿದೆ. ಅಚ್ಚುಕಟ್ಟಾಗಿ, ಟೇಬಲ್ ಹಾಕಿ ಬರೆದಂತೆ ಪ್ರತಿ ವಿಷ್ಯವನ್ನೂ ಅಲ್ಲಿ ನಮೂದಿಸಿದ್ದಾರೆ.
ಅವರು ವೀಕ್ಷಿಸಿದ ಇಂಗ್ಲಿಷ್ ಚಲನಚಿತ್ರಗಳಲ್ಲಿ ಸಿಂಡರ್‌ಫೆಲ್ಲ, ಕಮ್ ಸೆಪ್ಟೆಂಬರ್, ಟೋಕಿಯೊ ಬೈ ನೈಟ್ ಮತ್ತು ದಿ ಬರ್ಡ್ಸ್ – ಇವೆಲ್ಲವೂ 1965 ರಲ್ಲಿ ಅವರು ವೀಕ್ಷಿಸಿದ ಸಿನೆಮಾಗಳು. ಗಮನಿಸಿ ಓದುಗರೇ, ಆ ಕಾಲಕ್ಕೇ ಈ ತಾತ ಆಲ್ಫ್ರೆಡ್ ಹಿಚ್‌ಕಾಕ್ ಮತ್ತು ಜೇಮ್ಸ್ ಬಾಂಡ್ ಚಲನಚಿತ್ರಗಳನ್ನು ಸಹಾ ವೀಕ್ಷಿಸಿದ್ದರು. ಅಜ್ಜನ ಸಿನಿಮಾ ವೀಕ್ಷಣಾ ಪಟ್ಟಿಯಲ್ಲಿ ಸಾಕ್ಷ್ಯಚಿತ್ರಗಳು ಮತ್ತು ಬಹಳಷ್ಟು ತಮಿಳು ಚಲನಚಿತ್ರಗಳೂ ಸೇರಿವೆ. ಈ ಪಟ್ಟಿ 1958 ರಲ್ಲಿ ಆರಂಭವಾಗಿ 1974ರಲ್ಲಿ ಕೊನೆಗೊಂಡಿದ್ದು, ಅವರ ತಾತ ದಾಖಲೆಯ ಮಟ್ಟದಲ್ಲಿ ಚಿತ್ರ ವೀಕ್ಷಿದ್ದಾರೆ. ಒಟ್ಟು 470 ಸಿನಿಮಾಗಳನ್ನು ಅವರು ವೀಕ್ಷಿಸಿದ್ದಾರೆ ಎಂದು ಟ್ವೀಟ್ ಮಾಡಿರುವ ವ್ಯಕ್ತಿ ಹೇಳಿದ್ದಾರೆ. ಮೊನ್ನೆ ಫೆಬ್ರವರಿ 25 ರಂದು ಹಂಚಿಕೊಳ್ಳಲಾದ ಅಜ್ಜನ ಸಿನಿ ಪ್ರೀತಿಯ ಟ್ವೀಟ್ ಇದುವರೆಗೆ 7,600 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.
“ ಈ ಪಟ್ಟಿಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಈ ದಿನಚರಿಯು ಚಲನಚಿತ್ರ ವೀಕ್ಷಣೆಯ ಅಭ್ಯಾಸಗಳ ಬಗೆಗಿನ ಇತಿಹಾಸದ ಅದ್ಭುತ ದಾಖಲೆಯಾಗಿದೆ. ನೀವು ಯಾವಾಗ ಅಜ್ಜನ ಇಡೀ ಡೈರಿಯನ್ನು ಹಂಚಿಕೊಳ್ಳುತ್ತೀರಿ ಎಂದು ಕಾಯುತ್ತಿದ್ದೇನೆ. ಯಾಕೆಂದರೆ ಅವರು ಯಾವ ಯಾವ ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಿದ್ದಾರೆಂದು ತಿಳಿದುಕೊಳ್ಳುವ ತೀವ್ರ ಕುತೂಹಲವಿದೆ ”ಎಂದು ಒಬ್ಬರು ಕಾಮೆಂಟ್ ಮಾಡಿ ಹೇಳಿದ್ದಾರೆ. “ಇದು ನಿಜವಾಗಿಯೂ ರತ್ನ. ನಾನು ಥಿಯೇಟರ್‌ಗಳಲ್ಲಿ ಏಕಾಂಗಿಯಾಗಿ ವೀಕ್ಷಿಸಿದ ಚಲನಚಿತ್ರಗಳ ಮೇಲೆ ನಾನು ಯಾಕೆ ರೀತಿಯ ಪಟ್ಟಿ ಸಿದ್ಧಪಡಿಸಿಲ್ಲ ಎನ್ನುವುದು ಬೇಸರ ತರಿಸುತ್ತಿದೆ ” ಎಂದು ಇನ್ನೊಬ್ಬರು ಪೋಸ್ಟ್ ಮಾಡಿದ್ದಾರೆ.
ಒಟ್ಟಾರೆಯಾಗಿ, ತಮಿಳುನಾಡಿನ ಈ ಸಿನಿಪ್ರಿಯ ಕಿಲಾಡಿ ಅಜ್ಜ ಕೇವಲ ಸಿನಿಮಾ ನೋಡಿ ಆನಂದಿಸಿದ್ದಲ್ಲ, ಬದಲಿಗೆ ಅದರ ದಾಖಲೆಗಳನ್ನು ಕೂಡಾ ಬರೆದು ಈಗ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸರಿ ಸುಮಾರು 16 ವರ್ಷಗಳಷ್ಟು ಕಾಲ ಅವರು ನಿರಂತರವಾಗಿ ಚಿತ್ರ ವೀಕ್ಸಿಸಿದ್ದಾರೆ, ಜತೆಗೆ ಅದರ ವಿವರಗಳನ್ನು ಬರೆದಿಟ್ಟಿದ್ದಾರೆ.