AIDS : HIV ಏಡ್ಸ್ ಗೆ ಸಿಕ್ತು ಷರತ್ತುಬದ್ಧ ಚಿಕಿತ್ಸೆ!
HIV AIDS Treatment: ಏಡ್ಸ್ ಅನ್ನೋ ಮಹಾಮಾರಿ ಬಂದ್ರೆ ಮುಗೀತು ಕಥೆ ಎನ್ನುವ ಕಾಲವೊಂದಿತ್ತು. ಈಗ ತಂತ್ರಜ್ಞಾನ ಕ್ಷೇತ್ರದಲ್ಲಿ ಹಾಗೂ ವೈಜ್ಞಾನಿಕ ಕ್ಷೇತ್ರದಲ್ಲಿ ಅನೇಕ ಅನ್ವೇಷಣೆಗಳು ನಡೆದು ಅನೇಕ ರೋಗಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದರು ಕೂಡ ಏಡ್ಸ್ ಗೆ ಮಾತ್ರ ಯಾವುದೇ ಚಿಕಿತ್ಸೆ ಇಲ್ಲ ಎನ್ನಲಾಗುತ್ತಿತ್ತು. ಆದರೆ, ಈಗ ಪ್ರಪ್ರಥಮ ಬಾರಿಗೆ ಏಡ್ಸ್ ರೋಗಿಯೊಬ್ಬರು ಚೇತರಿಕೆ ಕಂಡು ಗುಣಮುಖರಾಗುತ್ತಿರುವ ಅಪರೂಪದ ಘಟನೆ ವರದಿಯಾಗಿದೆ.
2008 ರಲ್ಲಿ ಜರ್ಮನಿಯ ಡಸೆಲ್ಡಾರ್ಫ್‌ನ ನಿವಾಸಿಯೊಬ್ಬರಿಗೆ ಎಚ್ಐವಿ ಪಾಸಿಟಿವ್ ಕಂಡುಬಂದಿದ್ದು, 3 ವರ್ಷಗಳ ಬಳಿಕ ರಕ್ತದ ಕ್ಯಾನ್ಸರ್ ಪತ್ತೆಯಾಗಿದೆ. ಹೀಗಾಗಿ, 2013 ರಲ್ಲಿ, ಅವರಿಗೆ ಹೊಸ ಚಿಕಿತ್ಸಾ ವಿಧಾನದೊಂದಿಗೆ ಚಿಕಿತ್ಸೆ ಆರಂಭಿಸಲಾಗಿತ್ತು. ಇದನ್ನು ತೀವ್ರವಾದ ಮೈಲೋಯ್ಡ್ ಲ್ಯುಕೇಮಿಯಾವೆಂದು ಪರಿಗಣಿಸಲಾಗಿದೆ.
ಎಚ್ಐವಿಯಂತಹ ಮಾರಕ ಕಾಯಿಲೆಯ ವಿರುದ್ಧ ಹೋರಾಟ ನಡೆಸಿ ಗೆದ್ದಿರುವ ಜರ್ಮನಿಯ ನಿವಾಸಿ ಬೋನ್ ಮ್ಯಾರೋ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟೇಶನ್‌ನಿಂದ ಎಚ್‌ಐವಿ ರೋಗಿಯು ಚಿಕಿತ್ಸೆಯಿಂದ (HIV AIDS Treatment)ಸಂಪೂರ್ಣವಾಗಿ ಗುಣಮುಖರಾಗಲು ಸಾಧ್ಯವಾಗಿದೆ ಎಂದು ಫ್ರಾನ್ಸ್‌ನ ಪಾಶ್ಚರ್ ಇನ್‌ಸ್ಟಿಟ್ಯೂಟ್ ತಿಳಿಸಿದೆ. ಸದ್ಯ, ಏಡ್ಸ್ ನಿಂದ ಚಿಕಿತ್ಸೆ ಪಡೆಯುತ್ತಿರುವ ರೋಗಿ(HIV AIDS Treatment),ಮೂಳೆ ಮಜ್ಜೆಯ ಕಸಿಯ ಮುಖಾಂತರ ಎಚ್‌ಐವಿಯಿಂದ ಗುಣಮುಖರಾದ ವಿಶ್ವದ ಮೂರನೇ ವ್ಯಕ್ತಿಯೆಂದು ಗುರುತಿಸಿಕೊಂಡಿದ್ದಾರೆ.
2013 ರಲ್ಲಿ, ವೈದ್ಯರು ಮಹಿಳಾ ದಾನಿಯ ನೆರವಿನಿಂದ ಅವಳ ಮೂಳೆ ಮಜ್ಜೆಯನ್ನು ಕಾಂಡಕೋಶಗಳ ಸಹಾಯದಿಂದ ಕಸಿ ಮಾಡಲು ಸಾಧ್ಯವಾಗಿದೆ. ಸ್ತ್ರೀ ದಾನಿಯಿಂದ ಸಿಸಿಆರ್5 ರೂಪಾಂತರದ ಜೀನ್ ದೇಹದ ಮೂಲಕ ರೋಗವನ್ನು ಹರಡುವುದನ್ನು ಪೂರ್ಣ ಪ್ರಮಾಣದಲ್ಲಿ ತಡೆಯಲು ಸಾಧ್ಯವಾಗಿದೆ. ಇದು ಅಪರೂಪದ ವಂಶವಾಹಿಯಾಗಿರುವ ಹಿನ್ನೆಲೆ ಜೀವಕೋಶಗಳಲ್ಲಿ ಎಚ್ಐವಿ ಹರಡುವುದನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗುತ್ತದೆ ಎನ್ನಲಾಗಿದೆ.
ಈ ಬಳಿಕ ವೈದ್ಯರು 2018 ರಲ್ಲಿ ಎಚ್ಐವಿಗಾಗಿ ನೀಡಲಾದ ಆಂಟಿ-ರೆಟ್ರೋವೈರಲ್ ಚಿಕಿತ್ಸೆಯನ್ನು ಮುಂದುವರಿಸುವುದು ಬೇಡವೆಂದು ತೀರ್ಮಾನ ಕೈಗೊಂಡಿದ್ದಾರೆ. ಆ ಬಳಿಕ ರೋಗಿಯನ್ನು 4 ವರ್ಷಗಳ ಕಾಲ ಸೂಪರ್ವಿಶನ್ ಮೇಲೆ ಇರಿಸಲಾಗಿ ಅನೇಕ ಪ್ರಯೋಗಗಳಾಗಿ ಪರೀಕ್ಷೆಗಳನ್ನು ನಡೆಸಲಾಗಿದೆ. ಏಡ್ಸ್ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎನ್ನಲಾಗಿದೆ.ಇತಿಹಾಸದಲ್ಲಿ ಮೊದಲ ಬಾರಿಗೆ ವೈದ್ಯ ತಂಡ ಕೂಡ ಈ ಪವಾಡ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.
2007 ರಲ್ಲಿ ತಿಮೋತಿ ರೇ ಬ್ರೌನ್‌ಗೆ ಚಿಕಿತ್ಸೆ ನೀಡಲು ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟ್ ಅನ್ನು ಮೊದಲು ಬಳಕೆ ಮಾಡಲಾಗಿತ್ತು. ತಿಮೋತಿಯನ್ನು ಬರ್ಲಿನ್ ರೋಗಿ ಎನ್ನಲಾಗುತ್ತದೆ. ಈ ಸಂದರ್ಭದಲ್ಲಿ ವೈದ್ಯರು ಲ್ಯುಕೇಮಿಯಾ(Leukaemia)ರೋಗಕ್ಕೆ ಪರಿಹಾರ ಕಂಡುಕೊಳ್ಳಲು ಮೂಳೆ ಮಜ್ಜೆಯ ಅಪಾಯಕಾರಿ ಕೋಶಗಳನ್ನು ನಾಶಪಡಿಸಿದ್ದರು. ಮೂಳೆ ಮಜ್ಜೆಯು ಕಾಂಡಕೋಶಗಳನ್ನು ಹೊಂದಿರುವ ಮೂಳೆಗಳ ನಡುವೆ ಕಂಡುಬರುವ ವಸ್ತುವಾಗಿದ್ದು, ಅಸ್ಥಿಮಜ್ಜೆಯು ದೋಷಪೂರಿತವಾಗಿದ್ದರೆ, ಥಲಸ್ಸೆಮಿಯಾ, ಸಿಕಲ್ ಸೆಲ್ ಅನೀಮಿಯಾ, ಲ್ಯುಕೇಮಿಯಾ ಮುಂತಾದ ರೋಗಗಳು ಉಂಟಾಗುತ್ತವೆ. ಈ ಚಿಕಿತ್ಸೆಗಳಿಗಾಗಿ ರೋಗಿಯ ಅಸ್ಥಿಮಜ್ಜೆಯನ್ನು ಕಸಿ ಮಾಡಲಾಗುತ್ತದೆ.ಮೂಳೆ ಮಜ್ಜೆಯು ಕೆಲಸ ಮಾಡುವುದನ್ನು ನಿಲ್ಲಿಸಿದ ಸಂದರ್ಭ ಆ ಕಾಯಿಲೆಗಳಲ್ಲಿ ಮೂಳೆ ಮಜ್ಜೆಯ ಕಸಿಯ ಅವಶ್ಯಕತೆ ಎದುರಾಗುತ್ತದೆ.
ಮೂಳೆ ಮಜ್ಜೆಯ ಕಸಿ (Bone marrow transplantation) (BMT)ಒಂದು ಸಂಕೀರ್ಣ ವೈದ್ಯಕೀಯ ವಿಧಾನವಾಗಿದ್ದು, ಇದರಲ್ಲಿ ಹಾನಿಗೊಳಗಾದ ಇಲ್ಲವೇ ನಾಶವಾದ ಕಾಂಡಕೋಶಗಳನ್ನು ಆರೋಗ್ಯಕರ ಮೂಳೆ ಮಜ್ಜೆಯ ಜೀವಕೋಶಗಳೊಂದಿಗೆ ಬದಲಾವಣೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಆಟೋಲೋಗಸ್ ಮತ್ತು ಅಲೋಜೆನಿಕ್ ಎರಡು ವಿಧಗಳಿವೆ.
ಮೂಳೆ ಮಜ್ಜೆಯ ಕಸಿ ಮಾಡುವ ಸಂದರ್ಭ ರೋಗಿಯ ಮೂಳೆ ಮಜ್ಜೆಯು ದಾನಿಯ ಅಸ್ಥಿಮಜ್ಜೆಯೊಂದಿಗೆ ಹೊಂದಿಕೆಯಾಗುವುದು ಅವಶ್ಯಕ. ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿಯಂತ್ರಿಸುವ ಹೆಚ್ಎಲ್ಎ ಒಂದು ರೀತಿಯ ಪ್ರೋಟೀನ್ ಆಗಿದ್ದು, ಹ್ಯೂಮನ್ ಲ್ಯುಕೋಸೈಟ್ ಆಂಟಿಜೆನ್ ಅಂದರೆ ‘ಹೆಚ್ಎಲ್ಎ’ ಯ ಹೊಂದಾಣಿಕೆಯನ್ನು ಹೊಂದಿರುವುದು ತುಂಬಾ ಮುಖ್ಯ. ‘ಹೆಚ್ಎಲ್ಎ’ ಶೇ. 100 ರಷ್ಟು ಹೊಂದಿಕೆಯಾದ ಸಂದರ್ಭದಲ್ಲಿ ಮಾತ್ರ, ವೈದ್ಯರು ಅದರ ಕಸಿಗಾಗಿ ತಯಾರಿ ನಡೆಸುತ್ತಾರೆ.ಸದ್ಯ, ಈ ಪ್ರಯೋಗವು ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಮೈಲಿಗಲ್ಲು ಸೃಷ್ಟಿಸುವ ಲಕ್ಷಣಗಳು ದಟ್ಟವಾಗಿದೆ.