Bjorn Borg: ಕಾರ್ಯಕ್ರಮಕ್ಕೆ ತಡವಾಗಿ ಬಂದ CM ಬೊಮ್ಮಾಯಿ! ಸನ್ಮಾನವನ್ನೇ ತಿರಸ್ಕರಿಸಿ ಹೊರನಡೆದ ಟೆನಿಸ್ ದಿಗ್ಗಜ ಬೋರ್ಗ್!
Bjorn Borg: ಸಮಯ ಪಾಲನೆ ವಿಷಯದಲ್ಲಿ ಭಾರತೀಯರಾದ ನಾವು ಹೇಗೆ ವರ್ತಿಸುತ್ತೇವೆಂಬುದು ಎಲ್ಲರಿಗೂ ಚೆನ್ನಾಗಿ ತಿಳಿದಿದೆ. ಅದರಲ್ಲೂ ಈ ರಾಜಕೀಯ ನಾಯಕರ ಟೈಮ್ ಸೆನ್ಸ್(Time sence) ಬಗ್ಗೆ ಹೇಳೋದೆ ಬೇಡ ಬಿಡಿ. ಯಾದಾದ್ರೂ ರಾಜಕೀಯ ಕಾರ್ಯಕ್ರಮಗಳಿಗೆ ಹೋದ್ರೆ ಅಲ್ಲಿ ಕಾದು ಕಾದು ಹಣ್ಣುಗಾಯಿ ನೀರುಗಾಯಿ ಆಗಬೇಕು ಅಷ್ಟೆ. ಇದು ನಮ್ಮಲ್ಲಿ ಎಲ್ಲರಿಗೂ ಅಭ್ಯಾಸವಾಗಿಬಿಟ್ಟಿದೆ. ಆದರೆ ವಿದೇಶಿಗರು ಈ ಸಮಯ ಪಾಲನೆ ವಿಚಾರದಲ್ಲಿ ತುಂಬಾ ಕಟ್ಟುನಿಟ್ಟು. ಅಂತೆಯೇ ಇದೀಗ ಸ್ವಿಸ್(Swiss) ಟೆನಿಸ್(Tennis) ದಂತಕಥೆ ಬ್ಯೋನ್ ಬೋರ್ಗ್(Bjorn borg), ಸ್ವತಃ ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavarj bommai)ಯವರಿಗೆ ಈ ಟೈಮ್ ಸೆನ್ಸ್ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ನಿಗದಿಯಾಗಿದ್ದ ಸನ್ಮಾನ ಸಮಾರಂಭಕ್ಕೆ ಮುಖ್ಯಮಂತ್ರಿಗಳು ಒಂದೂವರೆ ಗಂಟೆ ತಡವಾಗಿ ಬಂದಿದ್ದಕ್ಕೆ, ಬ್ಯೋನ್ ಬೋರ್ಗ್ ಅವರು ತಮ್ಮ ಸನ್ಮಾನವನ್ನೇ ತಿರಸ್ಕರಿಸಿಬಿಟ್ಟಿದ್ದಾರೆ.
ಹೌದು, ನಿಗದಿಯಾಗಿದ್ದ ಸನ್ಮಾನ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದೂವರೆ ಗಂಟೆ ತಡವಾಗಿ ಬಂದಿದ್ದಕ್ಕೆ, ಟೆನಿಸ್ ದಂತಕಥೆ ಬ್ಯೋನ್ ಬೋರ್ಗ್ ತಮ್ಮ ಸನ್ಮಾನವನ್ನೇ ತಿರಸ್ಕರಿಸಿದ ಘಟನೆಗೆ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ನಡೆದಿದೆ. ಬ್ಯೋನ್ ಬೋರ್ಗ್ ಪುತ್ರ ಲಿಯೊ ಬೋರ್ಗ್ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಂಡಿರುವುದರಿಂದ, ಮಗನ ಆಟವನ್ನು ನೋಡಲು ಅವರು ಬೆಂಗಳೂರಿಗೆ ಬಂದಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯು ಫೆಬ್ರವರಿ 21ರಂದು ಬೆಂಗಳೂರು ಓಪನ್ ಟೆನಿಸ್ ಟೂರ್ನಿ ಆರಂಭಕ್ಕೂ ಮುನ್ನ 11 ಬಾರಿ ಟೆನಿಸ್ ಗ್ರ್ಯಾನ್ ಸ್ಲಾಂ ವಿಜೇತ ಬ್ಯೋನ್ ಬೋರ್ಗ್ ಹಾಗೂ ಭಾರತದ ದಿಗ್ಗಜ ಟೆನಿಸಿಗ ವಿಜಯ್ ಅಮೃತ್‌ರಾಜ್(Vijay Amruth Raj) ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಬ್ಯೋನ್ ಬೋರ್ಗ್ ಹಾಗೂ ವಿಜಯ್ ಅಮೃತ್‌ರಾಜ್ ಸನ್ಮಾನ ಸಮಾರಂಭವು ಮಂಗಳವಾರ ಬೆಳಗ್ಗೆ 9.30ಕ್ಕೆ ನಿಗದಿಯಾಗಿತ್ತು. ಆ ನಂತರ ಮುಖ್ಯಮಂತ್ರಿಗಳು ಬರುವುದು ತಡವಾಗಿದ್ದರಿಂದ ಸನ್ಮಾನ ಕಾರ್ಯಕ್ರಮವನ್ನು 10.15ಕ್ಕೆ ಮುಂದೂಡಲಾಯಿತು. ಇನ್ನು ಲಿಯೊ ಬೋರ್ಗ್ ಅವರ ಮೊದಲ ಸುತ್ತಿನ ಪಂದ್ಯವು ಬೆಳಗ್ಗೆ 11 ಗಂಟೆಗೆ ನಿಗದಿಯಾಗಿತ್ತು. ಆದರೆ 11 ಗಂಟೆಯಾದರೂ ಮುಖ್ಯಮಂತ್ರಿಗಳು ಈ ಕಾರ್ಯಕ್ರಮಕ್ಕೆ ಬರದ ಹಿನ್ನೆಲೆಯಲ್ಲಿ ಅವರು ಮಗನ ಆಟವನ್ನು ನೋಡಲು ಗ್ಯಾಲರಿಗೆ ಬಂದು ಕುಳಿತುಕೊಂಡರು.
ಕೊನೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬೆಳಗ್ಗೆ 11.15ಕ್ಕೆ ಬಂದರು. ಮುಖ್ಯಮಂತ್ರಿ ಬಂದ ವಿಚಾರವನ್ನು ಬ್ಯೋನ್ ಬೋರ್ಗ್ ಅವರ ಗಮನಕ್ಕೆ ಆಯೋಜಕರು ತಂದರಾದರೂ, ಪಂದ್ಯ ಮುಗಿದ ಬಳಿಕವಷ್ಟೇ ತಾವು ಬರುವುದಾಗಿ ಅವರು ತಿಳಿಸಿದ್ದಾರೆ. ಹೀಗಾಗಿ ಸನ್ಮಾನ ಕಾರ್ಯಕ್ರಮವನ್ನೇ ರದ್ದುಗೊಳಿಸಲಾಗಿದೆ. ಇನ್ನು ಮುಖ್ಯಮಂತ್ರಿಗಳು ಬೇರೆ ಕಾರ್ಯಕ್ರಮವಿದ್ದುದ್ದರಿಂದ ತಡವಾಗಿ ಬಂದರು ಎಂದು ಬ್ಯೋನ್ ಬೋರ್ಗ್ ಅವರಿಗೆ ಆಯೋಜಕರು ತಿಳಿಸಿದರು. ಹೀಗಿದ್ದು, ಮುಖ್ಯಮಂತ್ರಿಗಳು, ಬ್ಯೋನ್ ಬೋರ್ಗ್ ಅವರ ನಿರ್ಧಾರವನ್ನು ಸ್ಪರ್ಧಾತ್ಮಕವಾಗಿಯೇ ತೆಗೆದುಕೊಂಡರು. ಕೆಲಕಾಲ ಪಂದ್ಯವನ್ನು ವೀಕ್ಷಿಸಿದ ನಂತರ ಬೊಮ್ಮಾಯಿಯವರು ವಾಪಸ್ಸಾದರು.
ಹನ್ನೊಂದು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ವಿಜೇತ ಬ್ಯೋನ್ ಬೋರ್ಗ್, ವೃತ್ತಿಜೀವನದ ಅದ್ಭುತ ಫಾರ್ಮ್‌ನಲ್ಲಿದ್ದಾಗಲೇ ತಮ್ಮ 27ನೇ ವಯಸ್ಸಿಗೆ ಟೆನಿಸ್ ವೃತ್ತಿಬದುಕಿಗೆ ವಿದಾಯ ಘೋಷಿಸಿದ್ದರು. ಸದ್ಯ ಅವರ ಪುತ್ರ ಲಿಯೊ ಬೋರ್ಗ್, ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಇದೀಗ ವೈಲ್ಡ್‌ಕಾರ್ಡ್ ಮೂಲಕ ಬೆಂಗಳೂರು ಓಪನ್ ಪ್ರಧಾನ ಸುತ್ತಿಗೆ ಲಗ್ಗೆಯಿಟ್ಟ ಲಿಯೊ ಬೋರ್ಗ್ ಅವರ ಆಟ ನೋಡಲು ಬ್ಯೋನ್ ಬೋರ್ಗ್, ನಗರಕ್ಕೆ ಬಂದಿದ್ದರು.