Airbag Jeans: ನಿಮ್ಮ ಸುರಕ್ಷತೆಗೆ ಆದ್ಯತೆ ನೀಡಲು ಬರುತ್ತಿದೆ ಏರ್ ಬ್ಯಾಗ್ ಜೀನ್ಸ್!! ಏನಿದರ ವಿಶೇಷತೆ ಗೊತ್ತಾ?
Airbag Jeans: ಸರ್ಕಾರ ಎಷ್ಟೇ ರೂಲ್ಸ್ ಮಾಡಿದರು ಕೂಡ ಕ್ಯಾರೇ ಎನ್ನದೆ ರೂಲ್ಸ್ ಬ್ರೇಕ್ ಮಾಡಿ.. ನಾವಿರೋದೆ ಹಿಂಗೆ ಅನ್ನೋ ರೀತಿ ಸಂಚಾರಿ ಪೊಲೀಸರನ್ನು ಕಂಡ ಕೂಡಲೇ ಜೂಟ್ ಹೇಳುವವರೇ ಹೆಚ್ಚು. ಈ ರೀತಿ ಸಂಚಾರಿ ನಿಯಮಗಳನ್ನು ಪಾಲಿಸದೆ ಅಪಾಯಗಳಿಗೆ ಆಹ್ವಾನ ಕೊಟ್ಟಂತೆ ಆಗಿರುವ ಅನೇಕ ಪ್ರಸಂಗಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಈ ನಡುವೆ ದ್ವಿಚಕ್ರ ವಾಹನ ಸವಾರರಿಗೆ ಮುಖ್ಯ ಮಾಹಿತಿ ಇಲ್ಲಿದೆ. ನಿಮ್ಮ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕಂಪೆನಿಯೊಂದು ಸಾಧನವೊಂದನ್ನು ಪರಿಚಯಿಸಿದೆ. ಈ ಸಾಧನ ಧರಿಸಿದರೆ ನೀವು ಫುಲ್ ಸೇಫ್ !! ಹಾಗಿದ್ರೆ ಯಾವುದೀ ಸಾಧನ? ಇದರ ವಿಶೇಷತೆ ಏನು? ಅನ್ನೋ ಮಾಹಿತಿ ನಿಮಗಾಗಿ.
ಬೈಕ್ ಓಡಿಸುವಾಗ ಹೆಲ್ಮೆಟ್ ಕಡ್ಡಾಯ ಮಾಡಿದ್ದು ಗೊತ್ತಿರುವ ಸಂಗತಿಯೇ. ಈ ನಡುವೆ ಹೆಲ್ಮೆಟ್ ಧರಿಸಿದ ಬೈಕ್ ಸವಾರರು ದೊಡ್ಡ ಅನಾಹುತಗಳಿಂದ ಪಾರಾದ ನಿದರ್ಶನಗಳು ಕೂಡ ಇವೆ. ಹೀಗಾಗಿ, ಬೈಕ್ ಓಡಿಸುವ ಸಂದರ್ಭದಲ್ಲಿ ಸುರಕ್ಷತೆ ಬಹು ಮುಖ್ಯ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ಕಾರುಗಳಲ್ಲಿ ಏರ್ ಬ್ಯಾಗ್ ಗಳಂತಹ ಅನೇಕ ಸುರಕ್ಷತೆಗೆ ಸಂಬಂಧಿಸಿದ ವೈಶಿಷ್ಟ್ಯಗಳು ಇರುವುದು ಸಹಜ. ಇದೀಗ, ಸ್ವೀಡಿಷ್ ಕಂಪನಿ(Swidish Company) ದ್ವಿ ಚಕ್ರ ಚಾಲಕರಿಗಾಗಿಯೇ ಏರ್ ಬ್ಯಾಗ್ ಜೀನ್ಸ್ ಬಿಡುಗಡೆ ಮಾಡಿದೆ. ಇದು ಯಾವುದೇ ರೀತಿಯ ಅಪಘಾತದ ಸಂಭವಿಸಿದ ಸಂದರ್ಭದಲ್ಲಿ ದ್ವಿಚಕ್ರ ಸವಾರ ರಸ್ತೆಯ ಮೇಲೆ ಬಿದ್ದಾಗ ಚಾಲಕನ ಮೊಣಕಾಲುಗಳಿಗೆ ಹೆಚ್ಚಿನ ಸುರಕ್ಷತೆಯನ್ನು ಕಲ್ಪಿಸುತ್ತದೆ.
ಇಟಲಿ(Italy) ಮತ್ತು ಫ್ರಾನ್ಸ್‌ನಲ್ಲಿ(France) ಕೈಯಿಂದಲೇ ವಿನ್ಯಾಸಗೊಳಿಸಿರುವ ಈ ಜೀನ್ಸ್‌ಗಳನ್ನು ಉತ್ತಮ ಲುಕ್ ಹಾಗೂ ದ್ವಿಚಕ್ರ ಸವಾರರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ತಯಾರಿಸಲಾಗಿದೆ. ಸಾಮಾನ್ಯವಾಗಿ ಬೈಕ್‌ಗಳಿಗೆ ಏರ್‌ಬ್ಯಾಗ್(Airbag) ಸೌಲಭ್ಯವಿರುವುದಿಲ್ಲ. ಈ ವಿಚಾರವನ್ನು ಗಮನದಲ್ಲಿರಿಸಿ ಸ್ವೀಡಿಷ್ ಕಂಪನಿ ದ್ವಿ ಚಕ್ರ ವಾಹನ ಸವಾರರಿಗಾಗಿ ಏರ್ ಬ್ಯಾಗ್ ಜೀನ್ಸ್(Airbag Jeans) ಪರಿಚಯಿಸಿದೆ. ಸ್ವೀಡಿಶ್ ಬ್ರ್ಯಾಂಡ್ ಮೋಟರ್ ಸೈಕಲ್ ಒಂದು ಜೋಡಿ ಜೀನ್ಸ್ ವಿನ್ಯಾಸಗೊಳಿಸಿದ್ದು ಅದು ಏರ್‌ಬ್ಯಾಗ್ ವೈಶಿಷ್ಟ್ಯವನ್ನು ಒಳಗೊಂಡಿದೆ.
ಈ ಏರ್ ಬ್ಯಾಗ್ ವಿಶೇಷತೆ ಬಗ್ಗೆ ಗಮನಿಸಿದರೆ, ಮೊಣಕಾಲುಗಳಿಗೆ ಹೆಚ್ಚಿನ ರಕ್ಷಣೆ ನೀಡುವ ನಿಟ್ಟಿನಲ್ಲಿ, ಕಂಪನಿಯು ಈ ಏರ್‌ಬ್ಯಾಗ್‌ನಲ್ಲಿ ವಿಶೇಷ ಮೊಣಕಾಲು ಪ್ರೊಟೆಕ್ಟರ್‌ಗಳನ್ನು ಬಳಕೆ ಮಾಡಿರುವ ಹಿನ್ನೆಲೆ ಅಪಘಾತದ ಸಮಯದಲ್ಲಿ ಸವಾರ ರಸ್ತೆಯ ಮೇಲೆ ಬಿದ್ದಾಗ ಚಾಲಕನ ಮೊಣಕಾಲುಗಳಿಗೆ ಹೆಚ್ಚಿನ ಸುರಕ್ಷತೆಯನ್ನು ಕಲ್ಪಿಸುತ್ತದೆ. ಈ ಏರ್ ಬ್ಯಾಗ್ ಜೀನ್ಸ್ ಕಪ್ಪು ಮತ್ತು ನೀಲಿ ಎರಡು ಬಣ್ಣಗಳಲ್ಲಿ ದೊರೆಯಲಿವೆ. ಇನ್ನು ಈ ಏರ್ ಬ್ಯಾಗ್ ಬೆಲೆ ಬಗ್ಗೆ ಗಮನಿಸಿದರೆ, ಏರ್‌ಬ್ಯಾಗ್ ಸರಿಸುಮಾರು 88 ಪೌಂಡ್‌ಗಳ (40 ಕೆಜಿ) ಬಲದ ಅವಶ್ಯಕತೆಯಿದೆ. ಇದರ ಬೆಲೆಯನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಿದರೆ ಸುಮಾರು 41,317 ರೂ. ಆಗಲಿದ್ದು, ಕಂಪನಿಯು ಈ ಏರ್ ಬ್ಯಾಗ್ ಜೀನ್ಸ್ ಮುಂದಿನ ತಿಂಗಳಿನಿಂದ ಮಾರುಕಟ್ಟೆಗೆ ಲಗ್ಗೆ ಇಡಲು ಅನುವಾಗುವ ಸಾಧ್ಯತೆ ದಟ್ಟವಾಗಿದೆ.
ಈ ಜೀನ್ಸ್‌ನಲ್ಲಿ CO2 (ಕಾರ್ಬನ್ ಡೈಆಕ್ಸೈಡ್) ಕಾರ್ಟ್ರಿಡ್ಜ್ ನೀಡಲಾಗಿದ್ದು, ಒಮ್ಮೆ ಉಪಯೋಗಿಸಿದ ಬಳಿಕ ಅದನ್ನು ಮತ್ತೆ ಬದಲಾಯಿಸಬೇಕಾಗುತ್ತದೆ. ಹೀಗಾಗಿ, ಈ ಜೀನ್ಸ್ ಧರಿಸಿದ ಬಳಿಕ, ಅದರಲ್ಲಿ ನೀಡಲಾದ ಸ್ಟ್ರಿಪ್ ಅನ್ನು ಶಾಕರ್, ಫ್ರೇಮ್ ಇಲ್ಲವೇ ಫುಟ್‌ರೆಸ್ಟ್ ಮುಂತಾದ ಬೈಕ್‌ನ ಯಾವುದೇ ಭಾಗಕ್ಕೆ ಕಟ್ಟಬೇಕಾಗುತ್ತದೆ. ಈ ಏರ್ ಬ್ಯಾಗ್ ದ್ವಿಚಕ್ರ ವಾಹನ ಸವಾರರಿಗೆ ಅಪಘಾತದ ಸಂದರ್ಭದಲ್ಲಿ ದೇಹದ ಕೆಳಭಾಗಕ್ಕೆ ರಕ್ಷಣೆ ನೀಡಲಿದೆ. ಬೈಕ್ ಸವಾರ ಕೆಳಗೆ ಬಿದ್ದ ಕೆಲವೇ ಸೆಕೆಂಡುಗಳಲ್ಲಿ ಈ ಜೀನ್ಸ್ ಊದಿಕೊಳ್ಳಲಿದೆ. ಈ ಜೀನ್ಸ್ ಸಾಮಾನ್ಯ ಪ್ಯಾಂಟ್ ಗಳಂತೆಯೇ ಕಂಡರೂ ಕೂಡ ಏರ್ ಬ್ಯಾಗ್ ಅಳವಡಿಕೆಯಾಗಿರುವ ಹಿನ್ನೆಲೆ ಇದರಲ್ಲಿ ವಿಶೇಷವಾದ ಬಟ್ಟೆಯನ್ನು ಬಳಕೆ ಮಾಡಲಾಗಿದೆ. ಹಾಯಾದ ಅನುಭವದ ಜೊತೆಗೆ ನಿಮಗೆ ಉತ್ತಮ ರಕ್ಷಣೆ ಕೂಡ ಲಭ್ಯವಾಗಲಿದೆ.