ಬೆಕ್ಕುಗಳು ಆಗಾಗ ಹುಲ್ಲು ತಿನ್ನಲು ಕಾರಣವೇನು? ಕುತೂಹಲಕಾರಿ ವಿಷಯ ಇಲ್ಲಿದೆ!
Why do cats eat grass: ಮನುಷ್ಯ ಸಂಘಜೀವಿ. ಪ್ರಾಣಿ ಪಕ್ಷಿಗಳನ್ನು ಪ್ರೀತಿಸುವ ಅದೆಷ್ಟೋ ಜನರಿಗೆ ಸಾಕು ಪ್ರಾಣಿಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿರುವುದಂತು ಸುಳ್ಳಲ್ಲ. ದಿನನಿತ್ಯದ ಜೀವನದಲ್ಲಿ ಸಾಕು ಪ್ರಾಣಿಗಳು ಒಬ್ಬ ಒಳ್ಳೆಯ ಸ್ನೇಹಿತನ ರೀತಿಯಲ್ಲಿ ಅವರ ಜೀವನದ ಗುಣಮಟ್ಟವನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುತ್ತವೆ. ಮಕ್ಕಳಿಲ್ಲದ ಅದೆಷ್ಟೋ ಜನರು ಸಾಕು ಪ್ರಾಣಿಗಳನ್ನು ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಾ ತಮಗೆ ಮಕ್ಕಳು ಇಲ್ಲವೆಂಬ ನೋವನ್ನು ಮರೆತು ಬಹಳ ಸಂತೋಷದಿಂದ ಜೀವನ ನಡೆಸುತ್ತಿರುವ ನಿದರ್ಶನಗಳಿವೆ. ತಮ್ಮ ಮುದ್ದಿನ ನಾಯಿಯೋ ಇಲ್ಲವೇ ಮುದ್ದಿನ ಬೆಕ್ಕು ತನ್ನ ಮೃದುವಾದ ಮೈಯನ್ನು ನನ್ನ ಕೈ ಅಥವಾ ಕಾಲಿಗೆ ಒರಸುತ್ತಾ ನಮ್ಮ ಸುತ್ತ ಬರುವಾಗ ನಮ್ಮೊಳಗಿದ್ದ ಯಾವುದೇ ನೋವಿದ್ದರೂ ಕ್ಷಣ ಮಾತ್ರದಲ್ಲಿ ಮಾಯವಾಗಿ ಬಿಡುತ್ತೆ.
ಸಾಮಾನ್ಯವಾಗಿ ನಾಯಿ (Dog)ಬೆಕ್ಕು(Cat) ಇನ್ನಿತರ ಪ್ರಾಣಿಗಳು ಹುಲ್ಲು ತಿನ್ನೋದನ್ನು ನೀವು ಗಮನಿಸಿರಬಹುದು. ಸಹಜವಾಗಿ ಮನೆಯಲ್ಲೇ ಇರುವ ನಾಯಿ ಬೆಕ್ಕು ಏಕೆ ಹುಲ್ಲು ತಿನ್ನುತ್ತವೆ (Why do cats eat grass)ಎಂಬ ಪ್ರಶ್ನೆ ನಿಮಗೆ ಕಾಡಿರಬಹುದು. ಬೆಕ್ಕು ನಾಯಿಗಳ ಹೊರತಾಗಿ ಸಿಂಹ ಹಾಗೂ ಇನ್ನಿತರ ವನ್ಯಜೀವಿಗಳು ಕೂಡ ಹುಲ್ಲು ತಿನ್ನುತ್ತವಂತೆ. ಇದು ವಿಶೇಷ ವಿಚಾರ ಎಂದೆನಿಸದಿದ್ದರು ಕೂಡ ಬೆಕ್ಕು ಹುಲ್ಲು ತಿನ್ನಲು ಕೆಲ ಕಾರಣಗಳಿವೆ ಎನ್ನುವುದಂತೂ ಸುಳ್ಳಲ್ಲ.
ಸಾಮಾನ್ಯವಾಗಿ ಬೆಕ್ಕುಗಳು ಕೀಟ, ಕಪ್ಪೆ, ಇಲಿ ಚರ್ಮ, ಸಣ್ಣ ಗರಿಗಳು, ಮೂಳೆ ಹೀಗೆ ಸೇವಿಸಿದ ಸಂದರ್ಭದಲ್ಲಿ ಈ ವಸ್ತುಗಳುಕೆಲವೊಮ್ಮೆ ಬೆಕ್ಕಿನ ಜೀರ್ಣಾಂಗದಲ್ಲಿ ಈ ವಸ್ತುಗಳು ಸಿಲುಕಬಹುದು. ಇದರಿಂದಾಗಿ ಕರುಳಿನ ಚಲನೆಗೆ ಸಮಸ್ಯೆ ಉಂಟಾಗುತ್ತದೆ. ಈ ವೇಳೆ ಬೆಕ್ಕು ಹೊಟ್ಟೆ ನೋವು ನಿವಾರಣೆಗೆ ತೆಳುವಾದ ಹುಲ್ಲನ್ನು ಸೇವಿಸುತ್ತವೆ. ಅದರಲ್ಲಿಯೂ ಅಗಲವಾದ ಹುಲ್ಲುಗಳು ಬೆಕ್ಕಿನ ಕರುಳಿನ ಚಲನೆಗೆ ಹೆಚ್ಚಿನ ಪ್ರಯೋಜನ ನೀಡುತ್ತವೆ.
ಸಾಮಾನ್ಯವಾಗಿ ಹೊಟ್ಟೆ ನೋವು ನಿವಾರಣೆಗೆ ಹುಲ್ಲನ್ನು ಸೇವಿಸುತ್ತವೆ. ಬೆಕ್ಕು ಇಲಿ ಇನ್ನಿತರ ಆಹಾರ ಸೇವನೆ ಮಾಡಿದಾಗ ಜೀರ್ಣಿಸಿಕೊಳ್ಳುವ ಸಲುವಾಗಿ ಬೇರೆ ಕಿಣ್ವಗಳನ್ನು ಒಳಗೊಂಡಿರುವುದಿಲ್ಲ.ಹೀಗಾಗಿ, ಹುಲ್ಲುಗಳನ್ನು ಸೇವಿಸಿ ತಮಗೆ ಜೀರ್ಣ ಕ್ರಿಯೆಗೆ ಅಡ್ಡಿಯಾಗುವ ಮೂಳೆ, ಚರ್ಮ ವಸ್ತುಗಳನ್ನು ಹುಲ್ಲು ತಿಂದ ಬಳಿಕ ವಾಂತಿ ಮಾಡಿ ಜೀರ್ಣವಾಗದ ಆಹಾರಗಳನ್ನು ಹೊರ ಹಾಕುತ್ತವೆ. ಸಹಜವಾಗಿ ತನಗೆ ಅವಶ್ಯಕವೆನಿಸಿದಷ್ಟು ಹುಲ್ಲನ್ನು ಸೇವಿಸುತ್ತವೆ.
ಬೆಕ್ಕುಗಳು ಆಗಾಗ ಹುಲ್ಲು ತಿನ್ನುತ್ತಿದ್ದರೆ, ಜೀರ್ಣಕ್ರಿಯೆ ಸಮಸ್ಯೆ ಜೊತೆಗೆ ವಿಟಮಿನ್ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತದೆ ಎಂದು ಅರಿತುಕೊಳ್ಳಬೇಕು. ಹುಲ್ಲಿನ ರಸದಲ್ಲಿ ಫೋಲಿಕ್ ಆಯಸಿಡ್ ಅಂಶಗಳು ಹೆಚ್ಚು ಕಂಡು ಬರುತ್ತದೆ. ಈ ಹಿನ್ನೆಲೆ ಬೆಕ್ಕುಗಳು ಹುಲ್ಲು ತಿನ್ನುವುದರಿಂದ ಅವುಗಳ ಬೆಳವಣಿಗೆ ಮತ್ತು ಬೆಕ್ಕಿನ ರಕ್ತದಲ್ಲಿನ ಆಮ್ಲಜನಕ ಪ್ರಮಾಣವನ್ನು ವೃದ್ಧಿಸಲು ನೆರವಾಗುತ್ತದೆ. ನೀವು ಕೂಡ ಮನೆಯಲ್ಲಿ ಬೆಕ್ಕು ಸಾಕಿದ್ದರೆ ವಿಷಕಾರಿ ಅಂಶಗಳನ್ನು ಆದಷ್ಟು ದೂರವಿರಿಸಿ. ಅವುಗಳ ಆರೋಗ್ಯದ ಕಡೆಗೂ ಗಮನ ಹರಿಸಿ. ನಿಮಗೆ ಸಂತೋಷ ನೀಡುವ ಜೀವಿಗಳ ಖುಷಿಯಲ್ಲಿರಿಸಲು ಪ್ರಯತ್ನಿಸಿ.