Addanda Cariappa: ಗಿರೀಶ್‌ ಕಾರ್ನಾಡ್‌ ಟಿಪ್ಪುವಿನ ನೈಜ ಇತಿಹಾಸವನ್ನು ಮರೆಮಾಚಿದ್ದರು! ಟಿಪ್ಪು 4 ದೇವಾಲಯಕ್ಕೆ ದತ್ತಿ ನೀಡಿ 80 ದೇವಾಲಯ ಧ್ವಂಸ ಮಾಡಿದ್ದ: ಅಡ್ಡಂಡ ಕಾರ್ಯಪ್ಪ

Addanda Cariappa: ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿರುವಂತಹ ಐತಿಹಾಸಿಕ ವ್ಯಕ್ತಿ ಎಂದರೆ ಅದು ಟಿಪ್ಪು ಸುಲ್ತಾನ್(Tippu Sulthan). ಕೆಲವು ಪಕ್ಷಗಳಂತು ಈ ಟಿಪ್ಪುವಿನ ಹೆಸರನ್ನೇ ತಮ್ಮ ಪ್ರಚಾರದ ಬಂಡವಾಳನ್ನಾಗಿ ಮಾಡಿ ಕೊಂಡಿವೆ. ಇನ್ನು ಕನ್ನಡದ ಅನೇಕ ಲೇಖಕರು ಟಿಪ್ಪು ಸುಲ್ತಾನನನ್ನು ಕೇಂದ್ರವಾಗಿರಿಸಿಕೊಂಡು ಹಲವಾರು ನಾಟಕಗಳನ್ನು, ಕೃತಿಗಳನ್ನು ರಚನೆ ಮಾಡಿ ಸಾಕಷ್ಟು ಚರ್ಚೆಗೂ ಕಾರಣವಾಗಿದ್ದರು. ಸದ್ಯ ಸಾಹಿತ್ಯ ಹಾಗೂ ರಂಗ ಭೂಮಿ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾದ ವಿಷಯವೆಂದರೆ ರಂಗಾಯಣದ ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪ(Addanda Cariappa)ನವರು ರಚಿಸಿದ ‘ಟಿಪ್ಪು ನಿಜ ಕನಸುಗಳು'(Tippuvina Naija Kanasugalu). ಇದು ಸದ್ಯ ರಂಗಭೂಮಿಮೇಲೆ ಪ್ರದರ್ಶನ ಗೊಳ್ಳುತ್ತಾ ಹೋದೆಡೆಯೆಲ್ಲ ಸುದ್ದಿಯಾಗುತ್ತಿದೆ. ಕೆಲವೆಡೆ ವಿರೋಧವನ್ನು ಎದುರಿಸುತ್ತಿದೆ. ಸದ್ಯ ಕಾರ್ಯಪ್ಪನವರು ಈ ಪುಸ್ತಕದ ಕುರಿತು ಮಾತನಾಡಿದ್ದು ಟಿಪ್ಪು ಸುಲ್ತಾನ್ ನೈಜ ಇತಿಹಾಸವನ್ನು ತಿರುಚಿ ಗಿರೀಶ್‌ ಕಾರ್ನಾಡ್‌(Girish Karnad) ಸಾಹಿತ್ಯ ರಚಿಸಿದ್ದರು, ನಾನು ನೈಜಾಂಶಗಳನ್ನು ತೆರೆದಿಟ್ಟಿದ್ದೇನೆ ಎಂದಿದ್ದಾರೆ.

ಹೌದು, ಗಿರೀಶ್ ಕಾರ್ನಾಡ್ ಅವರು ಉದ್ದೇಶಪೂರ್ವಕವಾಗಿಯೇ ಟಿಪ್ಪುವನ್ನ ಹೀರೋ ಮಾಡಿದ್ದಾರೆ. ನೈಜ ಸಂಗತಿ ಏನೆಂಬುದನ್ನು ಮರೆಮಾಚಿದ್ದಾರೆ. ಟಿಪ್ಪು 4 ದೇವಾಲಯಕ್ಕೆ ದತ್ತಿ ನೀಡಿ 80 ದೇವಾಲಯ ಧ್ವಂಸ ಮಾಡಿದ್ದ. ತುಘಲಕ್(Thugalak) ಅವನನ್ನ ನಮ್ಮ ಚರಿತ್ರೆ ಹುಚ್ಚು ದೊರೆ ಎಂದರೆ, ಕಾರ್ನಾಡ್ ಅವರು ಆದರ್ಶ ರಾಜ ಅಂತಾ ಹೇಳ್ತಾರೆ. ಔರಂಗಜೇಬ್ ಆದರ್ಶ ರಾಜ ಅಂತಾರೆನಮ್ಮ ಸಂಸ್ಕೃತಿಗೆ ಏಟು ಕೊಡುವುದೇ ಆಗಿನ ಎಡ ಪಂತೀಯ ಕಾಂಗ್ರೆಸ್ ಉದ್ದೇಶವಾಗಿತ್ತು ಎಂದು ರಂಗಾಯಣ(Rangayana) ನಿರ್ದೇಶಕ ಅಡ್ಡಂಡ ಕಾರ್ಯಪ್ಪ ತುಮಕೂರಿನಲ್ಲಿ ಹೇಳಿದ್ದಾರೆ.

ತಮ್ಮ ‘ಟಿಪ್ಪು ನಿಜ ಕನಸುಗಳು’ ನಾಟಕದ ಬಗ್ಗೆ ಮಾತನಾಡಿದ ಅವರು, ಈ ನಾಟಕ ಬಿಜೆಪಿಯ ಕಥಾನಕ ಅಲ್ಲ. ಇದು ಟಿಪ್ಪು ಕಥಾನಕ, ‌ಬಿಜೆಪಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಖಳನಾಯಕನನ್ನ ಖಳನಾಯಕನಾಗಿ ತೋರಿಸಬೇಕು. ಟಿಪ್ಪು ನಾಲ್ಕು ದೇವಸ್ಥಾನಗಳಿಗೆ ದತ್ತಿ ಕೊಟ್ಟು, 80 ದೇವಸ್ಥಾನಗಳನ್ನ ಒಡೆದುಹಾಕಿದ. ಹೀಗಾಗಿ 80 ದೇವಸ್ಥಾನಗಳನ್ನ ಒಡೆದಿದ್ದನ್ನು ಹೇಳಬೇಕಾಗುತ್ತದೆ. ಸಾವಿರಾರು ಜನರನ್ನ ಕೊಂದಿದ್ದನ್ನೂ, ಮತಾಂತರ ಮಾಡಿದ್ದನ್ನೂ ಹೇಳಬೇಕಾಗುತ್ತದೆ. ಆ ಸಮುದಾಯದ ಕೆಲವರ ಮನಸ್ಥಿತಿಯೇ ಹಾಗಿದೆ. ‌ಅವರು ಶಿಶುನಾಳ ಷರೀಫರನ್ನ(Shishunala Sharifa) ಗೌರವಿಸಲಾರರು. ಅವರು ಮತಾಂಧ ಟಿಪ್ಪುವನ್ನೇ ಗೌರವಿಸ್ತಾರೆ. ಯಾಕಂದ್ರೆ ಹಿಂದುಸ್ತಾನವನ್ನ ಇಸ್ಲಾಂ ರಾಷ್ಟ್ರ ಮಾಡಲು ಹೊರಟವರೇ ಅವರಿಗೆ ಪ್ರೀತಿ ಪಾತ್ರರು. ಭಾವೈಕ್ಯತೆಯನ್ನ ಸಾರಿದ ಶಿಶುನಾಳ ಶರೀಪರು, ಅಬ್ದುಲ್ ಕಲಾಂ(Abdul kalam) ಅವರಿಗೆ ಪ್ರೀತಿ ಪಾತ್ರರಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಅಲ್ಲದೆ ಸಾಕಷ್ಟು ಚರ್ಚೆ ಹುಟ್ಟು ಹಾಕಿರುವ ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ ಮಾರ್ಚ್ 2ನೇ ತಾರೀಕು ಸಂಜೆ 6 ಗಂಟೆಗೆ ತುಮಕೂರಿನಲ್ಲಿ ಪ್ರದರ್ಶ‌ನವಾಗಲಿದೆ. ನಗರದ ಗುಬ್ಬಿ ವೀರಣ್ಣ ರಂಗಮಂದಿರಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. ಈ ಬಗ್ಗೆ ಮಾತನಾಡಿದ ಕಾರ್ಯಪ್ಪನವರು, ತಮ್ಮ ನಾಟಕ ನೋಡಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಮನವಿ ಮಾಡಿದರು.‌ ಪ್ರತಿ ಟಿಕೆಟ್ ಗೆ 100ರೂ ನಿಗದಿ ಮಾಡಲಾಗಿದೆ. ಈ ಹಿಂದೆ ನಾಟಕ ಪ್ರದರ್ಶನಕ್ಕೆ ತಡೆ ಕೋರಿ ಅರ್ಜಿ ಹಾಕಿದವರು ಓಡಿ ಹೋದರು. ಸೂಕ್ತ ದಾಖಲೆ ಒದಗಿಸಲಾದ ಬಳಿಕ ಪಲಾಯನ ಮಾಡಿದರು. ಹಿಂದಿನ ಸರ್ಕಾರಗಳು ಟಿಪ್ಪುವನ್ನು ಹೀರೋ ಎಂದು ಬಿಂಬಿಸಿವೆ. ಆದರೆ ಟಿಪ್ಪು ನಿಜವಾದ ಖಳನಾಯಕ. ಆತನ ನಿಜ ಕನಸುಗಳನ್ನು ನಾಟಕದಲ್ಲಿ ಅನಾವರಣ ಮಾಡಲಾಗಿದೆ. ಸತ್ಯದ ಅನಾವರಣವೇ ಈ ನಾಟಕದ ಉದ್ದೇಶ ಎಂದರು.

ಇನ್ನು ಪೊಲೀಸರ ಸಲಹೆಯಂತೆ ಒಳಾಂಗಣ ವೇದಿಕೆಯಲ್ಲಿ ಪ್ರದರ್ಶನ ಮಾಡಲಾಗ್ತಿದೆ. ನಾನು ಶಾಂತಿ ಪ್ರಿಯ. ಶಾಂತಿಯುತವಾಗಿ ಪ್ರದರ್ಶನ ಆಗಲಿ ಅನ್ನೋದೇ ನನ್ನ ಆಶಯ. ಇದರಿಂದ ಬಿಜೆಪಿಗೆ ಲಾಭ ಆಗುತ್ತದೆ ಅಥವಾ ಕಾಂಗ್ರೆಸ್ ಗೆ ನಷ್ಟ ಆಗುತ್ತದೆ ಎಂದು ಲೆಕ್ಕ ಹಾಕಿ ಕೂರುವ ವ್ಯಾಪಾರಿ ನಾನಲ್ಲ. ನಾನೊಬ್ಬ ರಂಗಭೂಮಿ ಕಲಾವಿದ. ನಾಟಕ ಮಾಡೋದಷ್ಟೇ ನನ್ನ ಕೆಲಸ ಎಂದು ಹೇಳಿದರು.
ತಮ್ಮ ‘ಟಿಪ್ಪು ನಿಜ ಕನಸುಗಳು’ ಪುಸ್ತಕ ಮಾರಾಟಕ್ಕೆ ಕೆಲವರು ತಡೆ ತಂದ ಕುರಿತು ಮಾತನಾಡಿದ ಅಡ್ಡಂಡ ಅವರು, ಮಾರಾಟಕ್ಕೆ ಅನುಮತಿ ಸಿಕ್ಕಿದೆ. ಸುಮಾರು 12 ಆವ್ರತ್ತಿಗಳು ಮುದ್ರಣ ಆಗಿದೆ. ಈಗಾಗಲೇ 40 ಸಾವಿರ ಪ್ರತಿಗಳು ಮಾರಾಟ ಆಗಿವೆ. ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ಪ್ರತಿಗಳು ಮಾರಾಟವಾಗಿರೋದು ಚಾರಿತ್ರಿಕ ದಾಖಲೆ ಎಂದರು.

Leave A Reply

Your email address will not be published.