ಉಪ್ಪಿನಂಗಡಿ : ಆಶ್ರಮದ ನಕಲಿ ಐಡಿ ತೋರಿಸಿ ಭಿಕ್ಷಾಟನೆ, ಬಟ್ಟೆ ,ಹಣ ಸಂಗ್ರಹ : ಸಾಮಾಜಿಕ ಕಾರ್ಯಕರ್ತನಿಂದ ನಿಜ ಬಣ್ಣ ಬಯಲು

Uppinangady : ತಾವು ಆಶ್ರಮಕ್ಕೆ ಹಣ, ಹಳೆಯ ಬಟ್ಟೆ-ಬರೆಗಳನ್ನು ಸಂಗ್ರಹಿಸುತ್ತಿದ್ದೇವೆಂದು ನಕಲಿ ಐಡಿ ಕಾರ್ಡ್‌ ತೋರಿಸಿ ಭಿಕ್ಷಾಟನೆ ನಡೆಸುತ್ತಿರುವ ತಂಡವೊಂದು ಉಪ್ಪಿನಂಗಡಿ ( Uppinangady )ಯಲ್ಲಿದ್ದು, ಕೊಯಿಲದ ಮನೆಯೊಂದಕ್ಕೆ ಈ ತಂಡದ ಸದಸ್ಯರು ಹೋದಾಗ ಅಲ್ಲಿ ಅವರ ನಿಜ ಬಣ್ಣ ಬಯಲಾಗಿದೆ.

ಸಾಮಾಜಿಕ ಕಾರ್ಯಕರ್ತ ಪ್ರದೀಪ್‌ ಕೊಯಿಲ ಅವರ ಮನೆಗೆ ಸೋಮವಾರ ಬಂದ ಇಬ್ಬರು ಹೆಂಗಸರು ತಾವು ಮೈಸೂರಿನ ಇಲವಾಲದ ಬಳಿಯಿರುವ ಅಂಗವಿಕಲ ಮತ್ತು ವೃದ್ಧಾಶ್ರಮದ ಪರವಾಗಿ ಬಂದಿದ್ದು, ಅಲ್ಲಿಗೆ ಬಟ್ಟೆ- ಬರೆ, ಹಣವನ್ನು ಸಹಾಯ ನೀಡಿ ಎಂದು ಕೇಳಿದ್ದರು. ಆಗ ಅನುಮಾನ ಬಂದು ಸಂಸ್ಥೆಯ ಐಡಿ ಕಾರ್ಡ್‌ ತೋರಿಸುವಂತೆ ಕೇಳಿದಾಗ ಅವರು ಸಮರ್ಪಕ ಉತ್ತರ ನೀಡಿರಲಿಲ್ಲ.

ಬಳಿಕ ಆಶ್ರಮದ ಅಧ್ಯಕ್ಷರು ನೆರವು ನೀಡುವಂತೆ ಮನವಿ ಮಾಡಿರುವ ಕರಪತ್ರವೊಂದನ್ನು ಅವರು ತೋರಿಸಿದ್ದು, ಅದರಲ್ಲಿದ್ದ ನಂಬರ್‌ಗೆ ಕರೆ ಮಾಡಿದಾಗ ಮಾತನಾಡಿದ ಆಶ್ರಮದ ಅಧ್ಯಕ್ಷ ಎಸ್‌. ಕೆ. ರಮೇಶ್‌ ಅವರು ನಾವು ಯಾರಿಗೂ ಆಶ್ರಮದ ಹೆಸರು ಹೇಳಿ ಹಣ ಹಾಗೂ ಬಟ್ಟೆ ಬರೆ ಸಂಗ್ರಹ ಮಾಡಲು ಹೇಳಿಲ್ಲ.ಆ ಮಹಿಳೆಯರು ನಮ್ಮ ಸಂಸ್ಥೆಯವರು ಅಲ್ಲ. ಆದ್ದರಿಂದ ಅವರಿಗೆ ಸಹಾಯ ಮಾಡಬೇಡಿ ಎಂದು ತಿಳಿಸಿದ್ದಾರಲ್ಲದೆ, ಆಶ್ರಮದ ಹೆಸರಿನಲ್ಲಿರುವ ಕರಪತ್ರವನ್ನು ಅವರಿಂದ ವಶಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಬಳಿಕ ಆ ಮಹಿಳೆಯರು ಅಲ್ಲಿಂದ ಕಾಲ್ಕಿತ್ತಿದ್ದಾರೆ.ಈ ಬಗ್ಗೆ ಮಾಹಿತಿ ನೀಡಿರುವ ಪ್ರದೀಪ್‌, ಇವರ ತಂಡ ಉಪ್ಪಿನಂಗಡಿ ಹಳೆಗೇಟಿನ ನೇತ್ರಾವತಿ ನದಿ ಕಿನಾರೆಯಲ್ಲಿ ಬೀಡು ಬಿಟ್ಟಿದ್ದು ಅವರು ಸಂಗ್ರಹಿಸಿದ ಹಳೆಯ ಬಟ್ಟೆ ಬರೆಗಳನ್ನು ಒಗೆದು ಸಂತೆಗೆ ತೆಗೆದುಕೊಂಡು ಹೋಗಿ ಹೊಸ ಬಟ್ಟೆ ಎಂದು ಜನರನ್ನು ಮೋಸಗೊಳಿಸುತ್ತಿದ್ದಾರೆ. ಆದ್ದರಿಂದ ಜನರು ಇಂತಹವರ ಮೋಸಕ್ಕೆ ಒಳಗಾಗಬಾರದು. ಪೊಲೀಸರು ಕೂಡ ಇಂತಹ ವಂಚನೆ ಎಸಗುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Leave A Reply

Your email address will not be published.