ಸಿ.ಟಿ.ರವಿ ವಿರುದ್ಧ ಬಾಡೂಟ ಸವಿದು ದೇವಾಲಯ ಪ್ರವೇಶ ಆರೋಪ; ವ್ಯಾಪಕ ಚರ್ಚೆ !

CT Ravi: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ ರವಿ (CT Ravi) ಮಾಂಸ ತಿಂದು ನಾಗಬನ ಮತ್ತು ಹನುಮ ದೇಗುಲಕ್ಕೆ ಭೇಟಿ ನೀಡಿದ್ರಾ ಅನ್ನೋ ಪ್ರಶ್ನೆ ಹರಿದಾಡುತ್ತಿದೆ. ಮೊನ್ನೆ ಫೆಬ್ರವರಿ 19 ರಂದು ಭಾನುವಾರ ಉತ್ತರ ಕನ್ನಡ ಜಿಲ್ಲೆಗೆ ಸಿ.ಟಿ.ರವಿ ಆಗಮಿಸಿದ್ದರು. ಆಗ ಅವರು ಕಾರವಾರದ ಶಿವಾಜಿ ಜಯಂತಿಯಲ್ಲಿ ಭಾಗವಹಿಸಿ ಭಟ್ಕಳಕ್ಕೆ ಬಂದಿದ್ದರು. ಅಲ್ಲಿ ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ್ ರವರ ಮನೆಯಲ್ಲಿ ಸಿ.ಟಿ.ರವಿ ಬಾಡೂಟ ಸವಿದಿದ್ದರು. ಬಾಡೂಟ ಸವಿದಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಲ್ಲಿ ಗಡದ್ ಬಾಡೂಟ ಸವಿದು ಭಟ್ಕಳ ನಗರದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿ ಬಂಟ ಹನುಮ ದೇವಸ್ಥಾನಕ್ಕೆ ಸಿ.ಟಿ.ರವಿ ಭೇಟಿ ನೀಡಿದ್ದರು. ಭಟ್ಕಳ ಶಾಸಕ ಸುನಿಲ್ ನಾಯ್ಕ್ ಹಾಗೂ ದೇವಸ್ಥಾನದ ಕಮಿಟಿ ಸದಸ್ಯರೊಂದಿಗೆ ಸಿ.ಟಿ.ರವಿ ದೇವಸ್ಥಾನಕ್ಕೆ ತೆರಳಿದ್ದರುಎನ್ನುವ ಆರೋಪ ಸಿಟಿ ರವಿಯ ಮೇಲಿದೆ. ಅವತ್ತು ನಾಗಬನದ ಬಾಗಿಲು ಹಾಕಿದ್ದರಿಂದ ದೇವಾಲಯದ ಗೇಟ್ ಮುಂಭಾಗದಲ್ಲಿ ದೇವರಿಗೆ ಸಿ.ಟಿ.ರವಿ ನಮಸ್ಕಾರ ಸಲ್ಲಿಸಿದ್ದರು. ನಂತರ ಗೇಟ್ ಮುಂಭಾಗದಲ್ಲಿಯೇ ಶಾಸಕ ಸುನಿಲ್ ನಾಯ್ಕ ಹಾಗೂ ಕಮಿಟಿ ಸದಸ್ಯರು ಸಿ.ಟಿ.ರವಿ ಅವರನ್ನು ಸನ್ಮಾನಿಸಿದ್ದರು.

ಮಾಂಸ ಸೇವನೆ ಮಾಡಿ ಧರ್ಮಸ್ಥಳದ ದೇವಾಲಯದೊಳಗೆ ಪ್ರವೇಶ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರು ಅಂದು ಭಾರಿ ವಿರೋಧವನ್ನು ಎದುರಿಸಿದ್ದರು. ಈಗ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಶಾಸಕರೊಬ್ಬರ ಮನೆಯಲ್ಲಿ ಭರ್ಜರಿ ಬಾಡೂಟವನ್ನು ಸವಿದು ದೇವಾಲಯ ಪ್ರವೇಶ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಿಂದೂ ಧರ್ಮದ ಬಗ್ಗೆ ಮಾತನಾಡುವ ರವಿ ಅವರು ಧರ್ಮದ ಆಚಾರ, ವಿಚಾರಗಳು ಹಾಗೂ ಸಂಪ್ರದಾಯವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ಉತ್ತರಕನ್ನಡ ಜಿಲ್ಲೆಯಾದ್ಯಂತ ಸಿ.ಟಿ. ರವಿ ಅವರ ಬಾಡೂಟ ಹಾಗೂ ದೇವಾಲಯ ಪ್ರವೇಶದ ಬಗ್ಗೆಯೇ ಚರ್ಚೆಯಾಗುತ್ತಿದೆ.

ಸಿದ್ದರಾಮಯ್ಯನವರು ಈ ಬಗ್ಗೆ ಪ್ರತಿಕ್ರಿಯಿಸಿ, ದೇವಸ್ಥಾನಕ್ಕೆ ಹೋಗಬೇಕಾ ಬೇಡವಾ, ಮಾಂಸ ತಿನ್ನಬೇಕು ಅಥವಾ ಬಿಡಬೇಕು ಅಥವಾ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬೇಕಾ ಬೇಡವಾ ಎನ್ನುವುದು ಪ್ರಶ್ನೆಯೇ ಅಲ್ಲ. ಜನರ ಸಮಸ್ಯೆಗೆ ಸ್ಪಂದಿಸುವುದು ಮತ್ತು ಅಭಿವೃದ್ಧಿ ಮಾಡುವುದರ ಬಗ್ಗೆ ಮಾತ್ರ ಚರ್ಚೆ ಆಗಬೇಕು ಎಂದಿದ್ದಾರೆ.

ತಮ್ಮ ಮೇಲೆ ಬಂದ ಆರೋಪಗಳನ್ನು ಸಚಿವ ಸಿಟಿ ರವಿ ಅವರು ತಳ್ಳಿ ಹಾಕಿದ್ದಾರೆ. ನಾನು ಮಾಂಸ ತಿನ್ನುವ ಜಾತಿಯಲ್ಲಿ ಹುಟ್ಟಿದವನು. ಆದುದರಿಂದ ನಾನು ಮಾಂಸವನ್ನು ಬಳಸುತ್ತೇನೆ. ಆದರೆ ನಾನು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ ಎಂದಿದ್ದಾರೆ ಸಿಟಿ ರವಿ.

Leave A Reply

Your email address will not be published.