Paresh Mesta Case: ಪರೇಶ್ ಮೇಸ್ತಾ ಸಾವು ಪ್ರಕರಣ: ಕಾಗೇರಿ ಸೇರಿ 122ಜನರ ಮೇಲಿದ್ದ ಕೇಸ್ ಹಿಂಪಡೆದ ರಾಜ್ಯ ಸರ್ಕಾರ!
Paresh Mesta Case: 2017ರಲ್ಲಿ ಅನುಮಾನಾಸ್ಪದವಾಗಿ ಸಾವು ಕಂಡಿದ್ದ ಹೊನ್ನಾವರ(Honnavara)ದ ಪರೇಶ್ ಮೇಸ್ತಾ (Paresh Mesta case) ಪ್ರಕರಣ ಇಡೀ ರಾಜ್ಯದಲ್ಲಿ ಸಂಚಲನ ಉಂಟುಮಾಡಿತ್ತು. ಇದಾದ ಬಳಿಕ ಉತ್ತರ ಕನ್ನಡ(Uttara kannada) ಜಿಲ್ಲೆಯಲ್ಲಿ ಅನೇಕ ಕೋಮು ಸಂಘರ್ಷಗಳು ನಡೆದು ಪ್ರಕರಣ ತಾರಕಕ್ಕೇರಿತ್ತು. ಶಿರಸಿ(Shirasi) ಸೇರಿ ಜಿಲ್ಲೆಯ ಹಲವೆಡೆ ಗಲಭೆಗಳು ನಡೆದಿದ್ದವು. ಈ ಗಲಭೆ ಸಂಬಂಧಿಸಿ 122 ಜನರ ಮೇಲೆ ಮೂರು ಪ್ರಕರಣಗಳು ದಾಖಲಾಗಿ ಸಾಕಷ್ಟು ಸುದ್ಧಿಯಾಗಿತ್ತು. ಇದೀಗ ಈ ಮೂರು ಪ್ರಕರಣ ಹಿಂಪಡೆದು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai)ಆದೇಶ ಮಾಡಿದ್ದಾರೆ.
ಈ ಹಿಂದೆ 26 ಪ್ರಕರಣವನ್ನು ರಾಜ್ಯ ಸರ್ಕಾರ ಹಿಂಪಡೆದಿತ್ತು. ಆದರೂ, 112 ಜನರ ಮೇಲಿನ ಮೂರು ಪ್ರಕರಣಗಳು ಬಾಕಿಯಾಗಿದ್ದವು. ಅಂದು ಶಾಸಕ ಹಾಗೂ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ(Vishveshwara hegade kaageri), ಬಿಜೆಪಿ ಕಾರ್ಯಕರ್ತರು, ಬಜರಂಗದಳ ಕಾರ್ಯಕರ್ತರು ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಗಿತ್ತು. ಈಗ ರಾಜ್ಯ ಬಿಜೆಪಿ ಸರ್ಕಾರ 112 ಜನರ ಮೇಲಿನ ಪ್ರಕರಣಗಳನ್ನು ಹಿಂಪಡೆದು ಆದೇಶ ಹೊರಡಿಸಿದೆ. ಇದರಿಂದ ಹಲವರು ನಿಟ್ಟುಸಿರು ಬಿಡುವಂತಾಗಿದೆ.
ಏನಿದು ಪ್ರಕರಣ?: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಮಲಾಕರ ಮೇಸ್ತ(Kamalakara Mesta) ಎಂಬ ಮೀನುಗಾರರ ಕುಟುಂಬದಲ್ಲಿ ಜನಿಸಿದ ಪರೇಶ್ ಮೇಸ್ತಾ ಎಂಬ 21 ವರ್ಷದ ಯುವಕ ಏಕಾಏಕಿ ನಾಪತ್ತೆಯಾಗಿದ್ದ. 2017ರ ಡಿಸೆಂಬರ್ನಲ್ಲಿ ಕಾಂಗ್ರೆಸ್(Congress) ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಹೊನ್ನಾವರದ ಗುಡ್ ಲಕ್(Gud luck) ವೃತ್ತದಲ್ಲಿ ಕೋಮ ಗಲಭೆ ನಡೆದಿತ್ತು. ಈ ವೇಳೆ ಪಟ್ಟಣದ ತುಳುಸಿ ನಗರದ ಪರೇಶ್ ಮೇಸ್ತಾ ಎನ್ನುವ ಮೀನುಗಾರ ಯುವಕ ನಾಪತ್ತೆಯಾಗಿದ್ದ. ಎರಡು ದಿನಗಳ ನಂತರ ಹೊನ್ನಾವರದ ಶೆಟ್ಟಿಕೆರೆಯಲ್ಲಿ ಪರೇಶ್ ಮೇಸ್ತಾನ ಶವ ಪತ್ತೆಯಾಗಿತ್ತು.
ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತರಕನ್ನಡ ಜಿಲ್ಲೆಯ ಪ್ರವಾಸ ಮುಗಿಸಿ ತೆರಳಿದ ಬಳಿಕ, ಅಂದರೆ ಡಿ.8ರಂದು ಪರೇಶ್ ಮೇಸ್ತ ಶವವಾಗಿ ಪತ್ತೆಯಾಗಿದ್ದ. ಆತನ ದೇಹ ಹೊನ್ನಾವರ ಪಟ್ಟಣದ ಬಸ್ ನಿಲ್ದಾಣದ ಮುಂದಿರುವ ಶೆಟ್ಟಿಕೆರೆಯಲ್ಲಿ ಸಿಕ್ಕಿತ್ತು. ಇದಾದ ಬಳಿಕ ಪರೇಶ್ ಹತ್ಯೆಯ ಪ್ರಕರಣ ಇಡೀ ರಾಜ್ಯದಲ್ಲಿ ಭಾರೀ ಸದ್ದು ಮಾಡಿತ್ತು. ಇಡೀ ಜಿಲ್ಲೆಯಲ್ಲಿ ಕೋಮು ಗಲಭೆಯ ಬೆಂಕಿ ಹತ್ತಿಕೊಂಡಿತ್ತು. ಬಳಿಕ ಇದೊಂದು ಕೊಲೆ ಎಂದು ಬಿಜೆಪಿ ಸೇರಿದಂತೆ ಬಲಪಂಥೀಯ ಸಂಘಟನೆಗಳು ಆರೋಪಿಸಿದ್ದವು. ಹತ್ಯೆ ಖಂಡಿಸಿ ಆಗಿನ ಸಿದ್ದರಾಮಯ್ಯ ಸರ್ಕಾರದ(Siddaramaiah Government) ವಿರುದ್ಧ ಬೃಹತ್ ಪ್ರತಿಭಟನೆಗಳನ್ನು ನಡೆಸಲಾಗಿತ್ತು. ಶಿರಸಿಯಲ್ಲಿ ನಡೆದಿದ್ದ ಈ ಗಲಭೆಯಲ್ಲಿ 122 ಜನರ ಮೇಲೆ ಮೂರು ಪ್ರಕರಣವನ್ನು ದಾಖಲಿಸಲಾಗಿತ್ತು.
ನಂತರ ಈ ಪ್ರಕರಣವನ್ಧು ಸಿಬಿಐ(CBI) ಗೆ ವಹಿಸಲಾಗಿತ್ತು. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಸಿಬಿಐ ಇದು ಕೊಲೆಯಲ್ಲ, ಆಕಸ್ಮಿಕ ಸಾವೆಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿತ್ತು. ಈ ಮೂಲಕ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿತ್ತು. ಅನ್ಯ ಕೋಮಿನವರು ಪರೇಶ್ ಮೇಸ್ತಾನನ್ನು ಕೊಲೆ ಮಾಡಿ ಕೆರೆಯಲ್ಲಿ ಬಿಸಾಕಿ ಹೋಗಿದ್ದಾರೆಂದು ಬಿಜೆಪಿ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಆರೋಪ ಮಾಡಿದ್ದವು. ಆದರೆ, ತನಿಖೆ ನಡೆಸಿದ ಸಿಬಿಐ ಇದು ಕೊಲೆಯಲ್ಲ, ಆಕಸ್ಮಿಕ ಸಾವೆಂದು ನ್ಯಾಯಾಲಯಕ್ಕೆ “ಬಿ” ರಿಪೋರ್ಟ್ ಸಲ್ಲಿಸಿದ್ದು , ಇದು ಪರೇಶ್ ಮೇಸ್ತಾ ಕುಟುಂಬಸ್ಥರ ಅಸಮಾಧಾನಕ್ಕೆ ಸಹ ಕಾರಣವಾಗಿತ್ತು.
ಈ ರಿಪೋರ್ಟ್‌ನಲ್ಲಿ ಪರೇಶ್ ಮೇಸ್ತಾ ಸಾವು ಕೊಲೆಯಲ್ಲ, ಆಕಸ್ಮಿಕ ಸಾವು. ಕೊಲೆಯಾದ ಯಾವುದೇ ಕುರುಹುಗಳಿಲ್ಲ. ನೀರಿನಲ್ಲಿ ಮುಳುಗಿ ಪರೇಶ್ ಮೇಸ್ತಾ ಸಾವನ್ನಪ್ಪಿದ್ದಾನೆ ಎಂದು ವರದಿ ನೀಡಿತ್ತು. ಆದರೆ, ಸಿಬಿಐ ಸಲ್ಲಿಸಿರುವ ಬಿ ರಿಪೋರ್ಟ್ ವಿರುದ್ಧ ಪರೇಶ್ ಮೇಸ್ತಾ ತಂದೆ ಅಸಮಾಧಾನ ವ್ಯಕ್ತಪಡಿಸಿದ್ದರು. ಎಲ್ಲಾ ಪಕ್ಷದವರು ನಮ್ಮನ್ನು ಚುನಾವಣೆಗೆ ಬಳಸಿಕೊಂಡರೇ ಹೊರತು ಯಾವ ಸರಕಾರವೂ ನಮಗೆ ಆರ್ಥಿಕವಾಗಿಯೂ ಸಹಾಯ ಮಾಡಿಲ್ಲ. ಪ್ರಕರಣ ಸಂಬಂಧಿಸಿ ಎನ್ಐಎ ತನಿಖೆಗೆ ಆಗ್ರಹಿಸಲು ಚಿಂತಿಸುತ್ತೇನೆ ಅಂತ ಪರೇಶ್ ಮೇಸ್ತಾ ತಂದೆ ಕಮಲಾಕರ್ ಮೇಸ್ತಾ ತಿಳಿಸಿದ್ದರು.