Longest Duration Flying Birds : ನಿರಂತರ 10 ತಿಂಗಳು ಆಕಾಶದಿಂದ ಇಳಿಯದೆ ಹಾರಾಡಬಲ್ಲ ಪಕ್ಷಿ ಯಾವುದು ಅನ್ನೋ ಕುತೂಹಲ ನಿಮಗಿದೆಯಾ ?
Longest Duration Flying swift Birds: ಪಕ್ಷಿಗಳು ಗಾಳಿಯಲ್ಲಿ ಹಾರಾಡುವಂತಹ ದೇಹ ರಚನೆಯನ್ನು ಮತ್ತು ತಂತ್ರಗಾರಿಕೆಯನ್ನು ಪ್ರಕೃತಿ ನೀಡಿದೆ. ಆದರೆ ಎಷ್ಟು ಹೊತ್ತು ಪಕ್ಷಿಗಳು, ನೆಲದಿಂದ ಮೇಲಕ್ಕೆ ಎಗರಿ ಗಾಳಿಯಲ್ಲಿ ತೇಲಬಲ್ಲವು. ಹೆಚ್ಚೇನದರೆ ಕೆಲವು ಗಂಟೆಗಳಲ್ಲಿ ಪಕ್ಷಿಗಳ ರೆಕ್ಕೆಯ ಬಲ ಕುಸಿದು ಮತ್ತೆ ಅದು ನೆಲದ ಮೇಲೆ ಇಳಿಯಲೇಬೇಕು ಅಂದುಕೊಂಡಿದ್ದರೆ ಅದು ತಪ್ಪಾದೀತು. ಕಾರಣ, ಅಲ್ಲೊಂದು ಪಕ್ಷಿ ನಿರಂತರವಾಗಿ 10 ತಿಂಗಳ ಕಾಲ ಗಾಳಿಯಲ್ಲಿ ಹಾರಾಡುತ್ತ ತನ್ನ ಫಿಟ್ ನೆಸ್ ಅನ್ನು ತೋರಿಸಿದೆ.
ಪಕ್ಷಿ ಪ್ರಪಂಚವೇ (Bird Life) ಅದ್ಭುತ ಮತ್ತು ವೈವಿಧ್ಯಮಯ. ಹಕ್ಕಿಗಳ ವಲಸೆ, ಅವುಗಳ ವೇಗ, ಅವು ಕ್ರಮಿಸುವ ದೂರ, ಸಾಧಿಸುವ ಎತ್ತರ, ಖಂಡ ಖಂಡಾಂತರ ಸಾಗಿದರೂ ಪಥ ಮರೆಯದೆ ದಾರಿ ಕಂಡುಕೊಳ್ಳುವ ಅವುಗಳ ವಿಜ್ಞಾನ, ಹಾರುವಾಗಿನ ಇಂಧನ ಕ್ಷಮತೆ – ಅವುಗಳಿಗೆ ಅವುಗಳೇ ಸಾಟಿ. ಈಗ ನಾವಿಲ್ಲಿ ಹಕ್ಕಿಗಳ ನಿರಂತರ ಪ್ರಯಾಣದ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರವನ್ನು ನಿಮಗೆ ತೆರೆದಿಡಲಿದ್ದೇವೆ.
ವಿಜ್ಞಾನಿಗಳು ಇತ್ತೀಚೆಗೆ ಕಂಡು ಹಿಡಿದಂತೆ, ಗ್ರೇಟ್ ಫ್ರಿಗೇಟ್‌ಬರ್ಡ್‌ಗಳು ಎರಡು ತಿಂಗಳವರೆಗೆ ಗಾಳಿಯಲ್ಲಿ ಉಳಿಯುತ್ತವೆ. ಗಾಳಿಯಲ್ಲಿ ಹಾರುವ ಸಂದರ್ಭದಲ್ಲಿ ಕೂಡಾ ಅವುಗಳು 10 ಸೆಕೆಂಡ್ ಗ್ಯಾಪ್ ನಲ್ಲಿ ಮಲಗಿಬಿಡುತ್ತವೆ. ಮತ್ತೆ ಎಚ್ಚರಗೊಂಡು ಮತ್ತೆ ಮತ್ತೆ ಸಣ್ಣ ನಿದ್ದೆಗೆ ಜಾರುತ್ತವೆ. ಆದರೆ ರೆಕ್ಕೆಗಳು ಮಾತ್ರ ಯಾಂತ್ರಿಕವಾಗಿ ಬಡಿದುಕೊಳ್ಳುತ್ತಲೇ ಇರುತ್ತಿದ್ದು, ಹಕ್ಕಿ ತನ್ನ ಪ್ರಯಾಣವನ್ನು ಮುಂದುವರಿಸುತ್ತಿರುತ್ತದೆ. ಆದರೆ, ಅಡೆತಡೆಯಿಲ್ಲದ ಹಾರಾಟಕ್ಕೆ ಬಂದಾಗ, ಆಲ್ಪೈನ್ ಸ್ವಿಫ್ಟ್ ಸುದೀರ್ಘ 200 ದಿನಗಳ ಹಾರಾಟದ ದಾಖಲೆಯನ್ನು ಹೊಂದಿದೆ.
ಇಷ್ಟೇ ಅಲ್ಲ, ಇದಕ್ಕಿಂತ ಹೆಚ್ಚಿನ, ಹೊಸ ದಾಖಲೆ ಹೊಂದಿರುವವರು ಕೂಡಾ ಇದ್ದಾರೆ. ಅಲ್ಲೊಂದು ಹಕ್ಕಿ ಆಲ್ಪೈನ್‌ನ ಹಿಂದಿನ ದಾಖಲೆಯನ್ನು ಸಂಪೂರ್ಣವಾಗಿ ಅಳಿಸಿ ಹಾಕಿದೆ. ಈಗ ಗೊತ್ತಾದ ಹೊಸ ಸಂಶೋಧನೆಯ ಪ್ರಕಾರ, ಕಾಮನ್ ಸ್ವಿಫ್ಟ್ ಹಕ್ಕಿಗಳು ಸುದೀರ್ಘ 10 ತಿಂಗಳವರೆಗೆ ನಿಲ್ಲದೆ ಗಾಳಿಯಲ್ಲಿ ತೇಲಬಲ್ಲವು. ಹೌದು, ಒಂದಲ್ಲ ಎರಡಲ್ಲ – 10 ತಿಂಗಳು !!! ಈ ಹಿಂದೆ ಈ ಪಕ್ಷಿಯು ಅಂತಹ ಅದ್ಭುತ ಸಾಧನೆಗೆ ಸಮರ್ಥವಾಗಿರಬಹುದೆಂದು ವಿಜ್ಞಾನಿಗಳು ಬಹಳ ಹಿಂದೆಯೇ ಅನುಮಾನಿಸುತ್ತಿದ್ದರೂ, ಇದೀಗ ಅದು ಸಾಬೀತಾಗಿದೆ.
ಯುರೋಪಿಯನ್ (ಸಾಮಾನ್ಯ) ಸ್ವಿಫ್ಟ್(Swift birds) ಸಂತಾನೋತ್ಪತ್ತಿ ಮಾಡದ ಸಮಯದಲ್ಲಿ ನಿರಂತರ ಹಾರಾಟದಲ್ಲಿ ಹತ್ತು ತಿಂಗಳವರೆಗೆ ಕಳೆಯಬಲ್ಲುದು. ಗೂಡು ಕಟ್ಟುವುದನ್ನು ಹೊರತುಪಡಿಸಿ, ಸ್ವಿಫ್ಟ್‌ಗಳು ತಮ್ಮ ಜೀವನವನ್ನು ಗಾಳಿಯಲ್ಲಿ ಕಳೆಯುತ್ತವೆ. ಹಾರಾಟದಲ್ಲಿ ಸಿಕ್ಕಿಬಿದ್ದ ಕೀಟಗಳನ್ನು ತಿಂದು ಅವು ಜೀವಿಸುತ್ತವೆ; ಗಾಳಿಯಲ್ಲೇ ವಾಸ ಮಾಡುತ್ತಾ, ಗಾಳಿಯಲ್ಲೇ ಸಿಕ್ಕ ನೀರ ಹನಿಗಳನ್ನು ಅವುಗಳು ಕುಡಿಯುತ್ತವೆ. ಅಷ್ಟಲ್ಲದೇ ಆಗಾಗ್ಗೆ ಸಮಯ ಸಿಕ್ಕಾಗ, ಮೂಡು ಒದಗಿ ಬಂದಾಗ ಸಂಗಾತಿಯ ಜತೆ ಸುಖಿಸುತ್ತದೆ. ಅಲ್ಲದೆ ರೆಕ್ಕೆಯನ್ನು ಹರಡಿ ನಿದ್ರೆ ಕೂಡಾ ಮಾಡುತ್ತದೆ. ಕೆಲವು ಹಕ್ಕಿಗಳು ಅನೂಹ್ಯ 10 ತಿಂಗಳುಗಳ ಕಾಲ ಕೆಳಕ್ಕೆ ಇಳಿಯದೆ ಹಾರಿದ್ದಾವೆ. ಅಂದರೆ ಅವುಗಳ ಕ್ಷಮತೆ ಎಷ್ಟರಮಟ್ಟಿಗೆ ಇರಬಹುದೋ ನೀವೇ ಯೋಚಿಸಿ. ಬೇರೆ ಯಾವುದೇ ಪಕ್ಷಿಯು ತನ್ನ ಜೀವನವನ್ನು ಈ ಮಟ್ಟದಲ್ಲಿ ಹಾರಾಟದಲ್ಲಿ ಕಳೆಯುವುದಿಲ್ಲ. ಈ ಹಕ್ಕಿಗಳ ರೆಕ್ಕೆಗಳು ತುಂಬಾ ಉದ್ದವಾಗಿದ್ದು, ಅವುಗಳ ಕಾಲುಗಳು ತುಂಬಾ ಚಿಕ್ಕದಾಗಿದೆ. ಹೀಗಾಗಿ, ದೂರಕ್ಕೆ ಬಹು ತಿಂಗಳುಗಳ ಕಾಲ ಅವುಗಳು ರೆಕ್ಕೆ ಬೀಸಬಲ್ಲವು. ಅದೇ ಕಾರಣಕ್ಕೇನೆ ಸಾಮಾನ್ಯ ಸ್ವಿಫ್ಟ್ ಹಕ್ಕಿಗಳು ಪ್ರಕೃತಿಯ ಶ್ರೇಷ್ಠ ವೈಮಾನಿಕರು (Natural aeronautes) ಎನ್ನುವ ಖ್ಯಾತಿಗೆ ಪಾತ್ರವಾಗಿದೆ.