Sindhuri-Mahesh War: ರಾಜಿಯಾದ್ರಾ ರೋಹಿಣಿ ಸಿಂಧೂರಿ-ಸಾರಾ ಮಹೇಶ್? ಹಾಗಾದ್ರೆ ಸಂಧಾನ ಮಾಡ್ಸಿದ ಆ IAS ಅಧಿಕಾರಿ ಯಾರು?
Sindhuri-Mahesh War : ಐಎಎಸ್ ಅಧಿಕಾರಿ (IAS Officer) ರೋಹಿಣಿ ಸಿಂಧೂರಿ (Rohini Sindhuri) ಹಾಗೂ ಮೈಸೂರಿನ (Mysuru) ಕೆಆರ್ ನಗರ (KR Nagar) ಕ್ಷೇತ್ರದ ಶಾಸಕ ಸಾರಾ ಮಹೇಶ್ (MLA Sara Mahesh) ನಡುವಿನ ಸಂಘರ್ಷದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೀಗ ಶಾಸಕ ಸಾರಾ ಮಹೇಶ್ (SR Mahesh) ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ( Rohini Sindhuri) ನಡುವಿನ ಪ್ರತಿಷ್ಠೆಯ ಯುದ್ಧಕ್ಕೆ ತಾರ್ಕಿಕ ಅಂತ್ಯ ಕಾಣುವ ಸೂಚನೆ ಸಿಕ್ಕಿದೆ. ಕ್ಷಮೆಯಾಚನೆಯ ಮೂಲಕ ರಾಜಿ ಮಾಡಿಕೊಳ್ಳಲು ರೋಹಿಣಿ ಅವರು ಮುಂದಾಗಿರುವುದಾಗಿ ತಿಳಿದು ಬಂದಿದೆ. ಇತ್ತೀಚೆಗಷ್ಟೇ ಇಬ್ಬರೂ ಹೋಟೆಲ್ವೊಂದರಲ್ಲಿ ಮಾತನಾಡಿರುವ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ಕುತೂಹಲ ಕೆರಳಿಸಿದೆ.
ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ರೋಹಿಣಿ ಅವರು ಕಲ್ಯಾಣ ಮಂಟಪದ ಪಕ್ಕದ ಜಾಗ ಒತ್ತುವರಿಯಾಗಿದೆ ಎಂದು ಕೆ.ಆರ್.ನಗರ ಶಾಸಕ ಸಾ.ರಾ. ಮಹೇಶ್ ಅವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಜಟಾಪಟಿಯು ತಾರಕಕ್ಕೇರಿತ್ತು. ರೋಹಿಣಿ ಸಿಂಧೂರಿ ಹಾಗೂ ಸಾರಾ ಮಹೇಶ್ ಅವರ ಜಟಾಪಟಿ(Sindhuri-Mahesh War) ರಾಜ್ಯಾದ್ಯಂತ ಸದ್ದು ಮಾಡಿತ್ತು. ಆರೋಪ, ಪ್ರತ್ಯಾರೋಪಗಳ ಮಧ್ಯೆ ಸದನದಲ್ಲೂ ಸಾರಾ ಮಹೇಶ್, ರೋಹಿಣಿ ವಿರುದ್ಧ ಸಮರ ಸಾರಿದ್ದರು. ನಾನು ವೀಕ್ ಮೈಂಡೆಡ್ ಆಗಿದಿದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ. ಅಧಿಕಾರಿಗಳಿಗೆ ಆಶ್ರಯ ಇದೆ, ನಮಗೆ ಆಶ್ರಯ ಇಲ್ಲ. ನನ್ನನ್ನೇ ನಾನು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಸದನದಲ್ಲಿ ರೋಹಿಣಿ ಸಿಂಧೂರಿ ನೀಡಿದ ಪತ್ರವನ್ನು ಓದಿದ್ದರು. IAS ಅಧಿಕಾರಿ ವಿರುದ್ಧ ತನಿಖೆಗೂ ಬಿಗಿ ಪಟ್ಟು ಹಿಡಿದಿದ್ದರು. ಇದೀಗ ಇಬ್ಬರ ನಡುವೆ ಸಂಧಾನ ನಡೆದಿರುವ ಬಗ್ಗೆ ಚರ್ಚೆಯಾಗುತ್ತಿದೆ.
ರೋಹಿಣಿ ಸಿಂಧೂರಿ ಅವರು ಈಗಾಗಲೇ ಎರಡು ಬಾರಿ ರಾಜಿಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಡಿ.14 ರಂದು ಬೆಳಗಾವಿ(Belagavi) ಅಧಿವೇಶನದ ಸಂದರ್ಭ ಸಾರಾ ಮಹೇಶ್ ಅವರನ್ನು ಭೇಟಿ ಮಾಡಿ ಕ್ಷಮೆಯಾಚಿಸಿರುವ ಬಗ್ಗೆ ಸುದ್ದಿ ಹಬ್ಬಿತ್ತು. ಬೆಂಗಳೂರಿನಲ್ಲಿ ಅಧಿವೇಶನದಲ್ಲೂ ಈ ವಿಚಾರ ಪ್ರಸ್ತಾಪವಾಗಿರುವುದರಿಂದ ಶಾಸಕರ ಮೊಬೈಲ್ಗೆ ರೋಹಿಣಿ ಸಿಂಧೂರಿ ಅವರು ಸಂದೇಶ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸುದ್ದಿಗಳಿಗೆ ಪುಷ್ಠಿ ನೀಡುವಂತೆ ಸಾರಾ ಮಹೇಶ್, ರೋಹಿಣಿ ಸಿಂಧೂರಿ ಹಾಗೂ ಹಿರಿಯ ಐಎಎಸ್ ಅಧಿಕಾರಿ ಮಣಿವಣ್ಣನ್ ಕುಳಿತು ಮಾತನಾಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಹೌದು, ಸಾರಾ ಮಹೇಶ್ ಮತ್ತು ರೋಹಿಣಿ ಸಿಂಧೂರಿ ಅವರು ಎದುರಿಗೆ ಕುಳಿತು ಹೋಟೆಲ್ ಒಂದರಲ್ಲಿ ಮಾತನಾಡುತ್ತಿರುವ ಫೋಟೋ ವೈರಲ್ ಆಗಿದೆ. ಹಿರಿಯ ಐಎಎಸ್(IAS) ಅಧಿಕಾರಿ ಮಣಿವಣ್ಣನ್(Manivannan) ಅವರು ಜೊತೆಯಲ್ಲಿದ್ದರು ಎನ್ನಲಾಗುತ್ತಿದೆ. ರೋಹಿಣಿ ಅವರು ಕ್ಷಮೆ ಕೇಳುವ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ನಡೆಸಿರುವುದಾಗಿ ತಿಳಿದು ಬಂದಿದೆ.
ಈ ಭೇಟಿ ನಂತರ ಸಾರಾ ಮಹೇಶ್ ವಾಟ್ಸಾಪ್ಗೆ ಸುದೀರ್ಘ ಮೆಸೇಜ್ ಕಳಿಸಿದ್ದಾರಂತೆ. ನಿಮ್ಮ ಜಾಗದ ವಿಚಾರದಲ್ಲಿ ಸರ್ವೇಗೆ ದಿಶಾ ಆಯಪ್ ನೋಡಿ ಆದೇಶಿಸಿದ್ದೆ. ನಾನು ನನ್ನ ಕೆಲಸ ಮಾಡಿದ್ದೇನೆ. ದಯವಿಟ್ಟು ತಪ್ಪು ತಿಳಿಯಬೇಡಿ. ಇದು ಕೇವಲ ಕೆಲಸದ ವಿಚಾರ. ಅಲ್ಲದೆ ಇದರಲ್ಲಿ ವೈಯಕ್ತಿಕವಾಗಿ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಂದೇಶ ಬಂದಿರುವುದನ್ನು ಸ್ವತಃ ಸಾ.ರಾ. ಮಹೇಶ್ ಕೂಡ ಖಚಿತಪಡಿಸಿದ್ದಾರೆ.
ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕರು, ಎಲ್ಲವನ್ನೂ ಜನತೆಯ ಮುಂದಿಟ್ಟಿದ್ದೇನೆ. ಸರ್ಕಾರಕ್ಕೂ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದೇನೆ. ಯಾರೂ ಕ್ಷಮೆ ಕೇಳಬೇಕು ಎಂದು ನಾನು ಹೇಳಿಲ್ಲ ಎಂದು ಹೇಳಿದ್ದಾರೆ. ನನ್ನ ಮೇಲೆ ಅವರು ಆರೋಪ ಮಾಡಿದ್ದರು. ಸರ್ಕಾರ ನನ್ನ ಮೇಲೆ ಹೇಗೆ ನಿರ್ದಾಕ್ಷಿಣ್ಯವಾಗಿ ತನಿಖೆ ಮಾಡಿ ವರದಿ ಸಲ್ಲಿಸಿದೆಯೋ ಹಾಗೆಯೇ ಈಗ ಅವರ ಮೇಲೆಯೂ ಕ್ರಮ ಕೈಗೊಳ್ಳಬೇಕಲ್ವಾ? ಆದರೆ ನಾನು ಯಾವುದಕ್ಕೂ ಒತ್ತಾಯಿಸಿಲ್ಲ. ಎಲ್ಲವನ್ನೂ ಜನತೆ ಮುಂದಿಟ್ಟಿದ್ದೇನೆ. ಲಿಖಿತ ರೂಪದಲ್ಲಿ ಉತ್ತರಿಸಿದ್ದೇನೆ. ಅದಾದ ಮೇಲೆ ಮೊನ್ನೆ ಸಚಿವ ಮಾಧುಸ್ವಾಮಿ ಅವರು ಕರೆಸಿ ಚರ್ಚೆ ಮಾಡಿದರು. ನನಗೆ ಯಾರೂ ಕ್ಷಮೆ ಕೇಳಬೇಕು ಅಥವಾ ಯಾರನ್ನೂ ಕ್ಷಮೆ ಕೇಳಿಸಬೇಕೆಂದು ಇಲ್ಲ’ ಎಂದು ಹೇಳಿದ್ದಾರೆ.