Cine world : ‘RSS’ ಕುರಿತ ಸ್ಕ್ರಿಪ್ಟ್ ಬರೆಯೋದ್ರಲ್ಲಿ ಬ್ಯುಸಿಯಾದ ವಿಜಯೇಂದ್ರ ಪ್ರಸಾದ್! ತಂದೆಯ ಸ್ಕ್ರಿಪ್ಟ್ ಓದಿ ಕಣ್ಣೀರು ಹಾಕಿದ ರಾಜಮೌಳಿ ಹೇಳಿದ್ದೇನು?
ಸದ್ಯ ಭಾರತೀಯ ಚಿತ್ರರಂಗದಲ್ಲಿ ನಿರ್ದೇಶಕ ರಾಜಮೌಳಿ ಹಾಗೂ ಖ್ಯಾತ ಚಿತ್ರಕಥೆಗಾರ, ರಾಜಮೌಳಿಯ ತಂದೆಯೇ ಆದ ವಿಜಯೇಂದ್ರ ಪ್ರಸಾದ್ ಅವರ ಹೆಸರನ್ನು ಕೇಳದವರು ಯಾರು ಇಲ್ಲ ಎನ್ನಬಹುದು. ಚಿತ್ರಕಥೆ ಹಾಗೂ ಸಿನಿಮಾ ನಿರ್ದೇಶನದ ಮೂಲಕ ಈ ತಂದೆ ಮಗನ ಜೋಡಿ, ಮಾಡುವ ಮೋಡಿ ಬಗ್ಗೆ ಎಷ್ಟು ಹೇಳಿದರೂ ಸಾಲದು. ಇದೀಗ ವಿಜಯೇಂದ್ರ ಪ್ರಸಾದ್, ಮತ್ತೊಂದು ಹೊಸ ಸ್ಕ್ರಿಪ್ಟನ್ನು ಕೈಗೆತ್ತಿಕೊಂಡಿದ್ದು, ಎಲ್ಲರಿಗೂ ಕುತೂಹಲವನ್ನು ಕೆರಳಿಸಿದ್ದಾರೆ. ಹಾಗಾದ್ರೆ ಯಾವುದು ಆ ಸ್ಕ್ರಿಪ್ಟ್? ಅದರಲ್ಲೇನು ವಿಶೇಷವಿದೆ ಗೊತ್ತಾ?
ಭಾರತ ಚಿತ್ರ ರಂಗದಲ್ಲೇ ಈ ತಂದೆ ಮಗನದ್ದು ಒಂದು ಅಪರೂಪದ ಜೋಡಿ. ರಾಜಮೌಳಿ ನಿರ್ದೇಶನದ ಎಲ್ಲಾ ಸಿನಿಮಾಗಳಿಗೂ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರೇ ಕಥೆ ಬರೆದಿರುವುದು ವಿಶೇಷ. ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಬಾಹುಬಲಿ, ಹಾಗೂ ಇದೀಗ ಮಾಡುತ್ತಿರುವ ಆರ್ ಆರ್ ಆರ್ ಸಿನಿಮಾದ ಕಥೆ ಬರೆದಿದ್ದು ಸಹ ವಿಜಯೇಂದ್ರ ಪ್ರಸಾದ್. ಸದ್ಯ ಅವರು RSS ಸಿನಿಮಾಗೆ ಕಥೆ ಮಾಡುತ್ತಿದ್ದಾರೆ.
ಹೌದು, ಬಾಹುಬಲಿ, ಆರ್ ಆರ್ ಆರ್ ಅಂತಹ ಬ್ಲಾಕ್ಬಸ್ಟರ್ ಸಿನಿಮಾಗಳಿಗೆ ಸ್ಕ್ರಿಪ್ಟ್ ಬರೆದು ಸೈ ಎನಿಸಿಕೊಂಡಿರುವ ವಿಜಯೇಂದ್ರ ಪ್ರಸಾದ್, RSS (ರಾಷ್ಟ್ರೀಯ ಸ್ವಯಂಸೇವಕ ಸಂಘ) ಕುರಿತು ಹೊಸ ಸ್ಕ್ರಿಪ್ಟನ್ನು ಬರೆಯಲು ಶುರುಮಾಡಿದ್ದು ಜನರಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಅಲ್ಲದೆ ತಂದೆ ಬರೆದ ಸ್ಕ್ರಿಪ್ಟನ್ನು ಓದಿದ ರಾಜ ಮೌಳಿಯವರು ಅದನ್ನು ಓದಿ ನನಗೆ ಅಳುವೇ ಬಂದಂತಾಗಿತ್ತು ಎಂದು ಹೇಳಿದ್ದಾರೆ. ಇದರಿಂದಾಗಿ ಸ್ಕ್ರಿಪ್ಟ್ ಒಳಗೆ ಏನಿರಬಹುದು ಎಂದು ತಿಳಿಯುವ ತವಕ ಎಲ್ಲರೂ ಹೆಚ್ಚಾಗಿದೆ.
ಯಸ್, ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಜಮೌಳಿ RSS ಸಿನಿಮಾ ಮತ್ತು ಕಥೆಯ ಬಗ್ಗೆ ಮಾತನಾಡಿದ್ದಾರೆ. ಈ ಸಮಯದಲ್ಲಿ ಸ್ಕ್ರಿಪ್ಟ್ ಬಗ್ಗೆ ಏನನಿಸುತ್ತದೆ ಎಂದು ರಾಜಮೌಳಿ ಅವರನ್ನು ಪ್ರಶ್ನಿಸಲಾಗಿದೆ. ಇದಕ್ಕೆ ಉತ್ತರಿಸಿದ ರಾಜಮೌಳಿ ‘ನನಗೆ, ಆರ್ಎಸ್ಎಸ್ ಬಗ್ಗೆ ಹೆಚ್ಚು ತಿಳಿದಿಲ್ಲ. ನಾನು ಸಂಘಟನೆಯ ಬಗ್ಗೆ ಸ್ಪಷ್ಟವಾಗಿ ಕೇಳಿದ್ದೇನೆ, ಆದರೆ ಅದು ಹೇಗೆ ರೂಪುಗೊಂಡಿತು, ಅವರ ನಿಖರವಾದ ನಂಬಿಕೆಗಳು ಯಾವುವು, ಅವರು ಹೇಗೆ ಅಭಿವೃದ್ಧಿ ಹೊಂದಿದ್ದಾರೆ ಎದೆಲ್ಲವೂ ನನಗೆ ತಿಳಿದಿಲ್ಲ. ಬದಲಿಗೆ ನಾನು ನನ್ನ ತಂದೆಯ ಸ್ಕ್ರಿಪ್ಟ್ ಅನ್ನು ಓದಿದ್ದೇನೆ. ಅದು ತುಂಬಾ ಭಾವನಾತ್ಮಕವಾಗಿದೆ. ಆ ಸ್ಕ್ರಿಪ್ಟ್ ಅನ್ನು ಓದುವಾಗ ನಾನು ಅನೇಕ ಬಾರಿ ಅತಿದ್ದೇನೆ, ಅದು ಅನೇಕ ಬಾರಿ ನನಗೆ ಕಣ್ಣೀರು ತರಿಸಿದೆ. ಆದರೆ ಆ ಪ್ರತಿಕ್ರಿಯೆಯು ಕಥೆಯ ಇತಿಹಾಸದ ಭಾಗದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ’ ಎಂದು ಹೇಳಿದ್ದಾರೆ.
ನಂತರ ಈ ಸಿನಿಮಾವನ್ನು ನೀವೇ ನಿರ್ದೇಶನ ಮಾಡ್ತೀರಾ ಎಂದು ಕೇಳಿದ ಪ್ರಶ್ನೆಗೆ ರಾಜಮೌಳಿಯವರು, ‘ನಾನು ಓದಿದ ಸ್ಕ್ರಿಪ್ಟ್ ತುಂಬಾ ಭಾವನಾತ್ಮಕವಾಗಿದೆ ಮತ್ತು ತುಂಬಾ ಚೆನ್ನಾಗಿದೆ, ಆದರೆ ಅದು ಸಮಾಜದ ಬಗ್ಗೆ ಏನು ಸೂಚಿಸುತ್ತದೆ ಎಂದು ನನಗೆ ತಿಳಿದಿಲ್ಲ. ಈ ಸಿನಿಮಾ ನಿರ್ದೇಶನ ನನ್ನಿಂದ ಸಾಧ್ಯವೇ ಎಂಬುದೂ ನನಗೆ ತಿಳಿದಿಲ್ಲ, ಏಕೆಂದರೆ ನನ್ನ ತಂದೆ ಈ ಸ್ಕ್ರಿಪ್ಟ್ ಅನ್ನು ಬೇರೆ ಯಾರಾದರೂ ನಿರ್ಮಾಪಕರಿಗಾಗಿ ಬರೆದಿದ್ದಾರೆಯೇ ಎಂದು ನನಗೆ ಗೊತ್ತಿಲ್ಲ. ಹಾಗಾಗಿ ನನ್ನ ಬಳಿ ಖಚಿತವಾದ ಉತ್ತರವಿಲ್ಲ’ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ತಂದೆ ವಿಜೇಂದ್ರ ಪ್ರಸಾದ್ ಅವರು ಬರೆದಿರುವ RSS ಕಥೆಗೆ ರಾಜಮೌಳಿ ಅವರೇ ಆಕ್ಷನ್ ಕಟ್ ಹೇಳ್ತಾರಾ ಎನ್ನುವ ಕುತೂಹಲ ಎಲ್ಲರಲ್ಲಿದೆ.