ಬಹುಭಾಷಾ ನಟ ಡಾ. ಸುಮನ್ ತಲ್ವಾರ್‌ಗೆ ಅಭಿನಂದನೆ -‘ಸುಮನ ತಮ್ಮನ’
ಮಂಗಳೂರು: ಬಹುಭಾಷಾ ನಟ ಡಾ. ಸುಮನ್ ತಲ್ವಾರ್‌ಗೆ ಮಂಗಳೂರಿನ ಅಭಿನಂದನಾ ಸಮಿತಿ ವತಿಯಿಂದ ನಗರದ ಪುರಭವನದಲ್ಲಿ ಗುರುವಾರ ‘ಸುಮನ ತಮ್ಮನ’ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಕಲಾರಾಧನೆಯ ಮೂಲಕ ದಕ್ಷಿಣ ಭಾರತದ 1 ಭಾಷೆಗಳಲ್ಲಿ 700ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಅಭಿನಯಿಸಿದ ಮಂಗಳೂರಿನ ನಟ ಸುಮನ್ ತಲ್ವಾರ್ ತುಳುನಾಡಿನ ಕಲಾ ರಾಯಭಾರಿಯಾಗಿದ್ದಾರೆ. ತುಳುನಾಡಿನ ಹಲವು ಶ್ರೇಷ್ಠ ನಟ-ನಟಿಯರು ವಿವಿಧ ಭಾಷೆಗಳ ಸಿನೆಮಾದಲ್ಲಿ ಅಭಿನಯಿಸಿ ಸಾಧನೆ ಮಾಡಿದ್ದಾರೆ. ಈ ಪೈಕಿ ಸುಮನ್ ತುಳುನಾಡಿನ ಕೀರ್ತಿಯನ್ನು ಬಾನೆತ್ತರಕ್ಕೆ ಏರಿಸಿದ್ದಾರೆ ಎಂದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಮಾತನಾಡಿ ಸುಮನ್ ತಲ್ವಾರ್ ಚಿತ್ರಗಳ ಮೂಲಕ ಈಗಲೂ ಜನಮಾನಸದಲ್ಲಿ ಶಾಶ್ವತವಾಗಿದ್ದಾರೆ. ನಾಟಕ, ಸಿನೆಮಾಗಳು ಕೇವಲ ಮನರಂಜನೆಗೆ ಸೀಮಿತವಲ್ಲ. ಬದಲಾಗಿ ಅದರ ಹಿಂದೆ ಸಂದೇಶಗಳಿರುತ್ತದೆ. ಇದನ್ನು ಪರಿಪೂರ್ಣವಾಗಿ ಮಾಡಿದವರು ಸುಮನ್ ಎಂದರು.
ಸೊಲೂರು ಆರ್ಯ ಈಡಿಗ ಮಹಾಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಅಭಿನಂದನಾ ಸಮಿತಿ ಅಧ್ಯಕ್ಷ ಲೀಲಾಕ್ಷ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು.
ಶಾಸಕರಾದ ಉಮಾನಾಥ್ ಕೋಟ್ಯಾನ್, ಡಾ.ವೈ.ಭರತ್ ಶೆಟ್ಟಿ, ಮೇಯರ್ ಜಯಾನಂದ ಅಂಚನ್, ಮಾಜಿ ಸಚಿವ ಕೃಷ್ಣ ಪಾಲೆಮಾರ್, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಚಿತ್ರ ನಿರ್ದೇಶಕ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್, ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿ, ಪ್ರಮುಖರಾದ ರಾಜ್ ಕುಮಾರ್, ಪೀತಾಂಬರ ಹೆರಾಜೆ, ರಾಜಶೇಖರ ಕೋಟ್ಯಾನ್, ರತೀಂದ್ರನಾಥ್ ಎಚ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಬಿ. ಮತ್ತಿತರರು ಉಪಸ್ಥಿತರಿದ್ದರು.