Robbery Case : ವರನ ಮನೆಯವರಿಗೆ ಅಮಲು ಪದಾರ್ಥ ನೀಡಿ ಪರಾರಿಯಾದ ಕಿಲಾಡಿ ವಧು ! ಕಾರಣ ಕೇಳಿದರೆ ಖಂಡಿತ ಬೆಚ್ಚಿಬೀಳ್ತೀರ
ಸಿನಿಮಾದಲ್ಲಿ, ಮದುವೆ ಹೆಣ್ಣು ವರನಿಗೆ ಅಮಲು ಪದಾರ್ಥ ನೀಡಿ, ಮದುವೆ ಮನೆಯಿಂದ ಓಡಿ ಹೋಗೋದು ಇವೆಲ್ಲಾ ನೀವು ನೋಡಿರುತ್ತಿರಾ. ಇತ್ತೀಚೆಗೆ ವರನಿಗೆ ಕೈಕೊಟ್ಟು ವಧು ಮದುವೆ ಮನೆಯಿಂದ ಎಸ್ಕೇಪ್ ಆಗೋದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಇಲ್ಲಿ ಕಿಲಾಡಿ ವಧುವೊಬ್ಬಳು ವರನ ಮನೆಯವರಿಗೆಲ್ಲಾ ಅಮಲು ಪದಾರ್ಥ ನೀಡಿ ಪರಾರಿಯಾಗಿದ್ದಾಳೆ. ಯಾಕೆ ಗೊತ್ತಾ? ನೀವಂತು ಇದರ ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಾ!!.
ನವ ವಧುವೊಬ್ಬಳು (Bride) ತನ್ನ ಮದುವೆ (marriage) ಆದ ಬಳಿಕ ವರನ ಮನೆಗೆ ಹೋಗುತ್ತಿದ್ದ ವೇಳೆ ಆತನ ಕುಟುಂಬದವರಿಗೆ ಅಮಲು ಪದಾರ್ಥ ನೀಡಿ ಚಿನ್ನಾಭರಣದೊಂದಿಗೆ ಎಸ್ಕೇಪ್ ಆಗಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.
ರಾಜಸ್ಥಾನದ (Rajasthan) ಅಜ್ಮೇರ್ ನಿವಾಸಿ ಅಂಕಿತ್ ಮಹೇಶ್ವರಿ ಎಂಬಾತನ ಮದುವೆ ಉತ್ತರ ಪ್ರದೇಶದ ಗೋರಖ್‌ಪುರದ ಗುಡಿಯಾ ಯಾದವ್ ಎಂಬಾಕೆಯ ಜೊತೆಗೆ ಕಳೆದ ಫೆಬ್ರವರಿ 5ರಂದು ನಡೆದಿತ್ತು. ರಾಜಸ್ಥಾನದಿಂದ ಅಂಕಿತ್ ತನ್ನ ಕುಟುಂಬ ಸಮೇತ ಮದುವೆಗಾಗಿ ಉತ್ತರ ಪ್ರದೇಶಕ್ಕೆ ಬಂದಿದ್ದರು. ಅಲ್ಲಿನ ಮಟಿಯಾರಾ ಗ್ರಾಮದಲ್ಲಿರುವ ಪರಿಚಿತರ ಮನೆಯಲ್ಲಿ ಸಂಪ್ರದಾಯ ಬದ್ಧವಾಗಿ, ಸುಸೂತ್ರವಾಗಿ ಇವರಿಬ್ಬರ ವಿವಾಹ ಸಮಾರಂಭ ನೆರವೇರಿತ್ತು.
ವಿವಾಹ ನಡೆದ ಮರುದಿನ ವರನ ಕುಟುಂಬದವರು ನವದಂಪತಿಗಳನ್ನು ಮನೆಗೆ ಕರೆದುಕೊಂಡು ಹೋಗಲಿದ್ದರು. ಈ ವೇಳೆ ವಧುವಿನ ಸಂಬಂಧಿ ನಾಗಿನಾ ಎಂಬಾಕೆಯನ್ನೂ ತಮ್ಮ ಜೊತೆಗೆ ಕರೆದುಕೊಂಡು ಹೋಗಿದ್ದರು. ಇವರೆಲ್ಲಾ ವಾರಾಣಸಿಯಲ್ಲಿ (Varanasi) ಸುತ್ತಾಡಿ, ನಂತರ ಜೈಪುರಕ್ಕೆ ಹೊರಟಿದ್ದ ಮರುಧಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕುಳಿತರು. ಇಲ್ಲೇ ಮತ್ತೊಬ್ಬ ಕಿರಾತಕ ರೈಲು ಹತ್ತಿದ್ದಾನೆ. ಅಜ್ಮೇರ್ ಗೆ ಸಾಗುವ ರೈಲಿನಲ್ಲಿ ಕುಳಿತಾಗ, ಅಲ್ಲೇ ವಧು ಗುಡಿಯಾಳ ಪರಿಚಿತ ಛೋಟು ಖಟ್ಕಾನಾ ಎಂಬಾತ ರೈಲು ಹತ್ತಿದ್ದ.
ಮಾಸ್ಟರ್ ಪ್ಲ್ಯಾನ್ ಮೊದಲೇ ರೆಡಿಯಾಗಿತ್ತು. ರೈಲು ಹತ್ತಿದ ಕಿರಾತಕ ಏನು ಮಾಡಿದೆ ಗೊತ್ತಾ? ಈ ಛೋಟು, ವರ ಹಾಗೂ ಆತನ ಕುಟುಂಬದ ಎಲ್ಲಾ ಸದಸ್ಯರಿಗೂ ಅಮಲು ಪದಾರ್ಥ ಬೆರೆಸಿದ್ದ ಹಣ್ಣು ಮತ್ತು ಟೀ ನೀಡಿದ್ದ. ಸದಸ್ಯರು ಅದನ್ನು ಪೂರ್ತಿ ಸೇವಿಸುವವರೆಗೂ ಕಾದ ಈ ಮೂವರು ವಧು, ಛೋಟು, ನಾಗಿನಾ ನಂತರ ತಮ್ಮ ಕೈಚಳಕ ತೋರಿದ್ದಾರೆ. ಮತ್ತು ಬರಿಸಿದ ಆಹಾರ ತಿಂದ ಬಳಿಕ ಕುಟುಂಬ ಸದಸ್ಯರೆಲ್ಲಾ ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದಾರೆ. ಇದೇ ಸಮಯಕ್ಕೆ ಕಾಯುತ್ತಿದ್ದ, ಈ ಮೂವರು ಖದೀಮರು ವರನ ಕುಟುಂಬದವರ ಬಳಿ ಇದ್ದ ಎಲ್ಲಾ ಬೆಲೆಬಾಳುವ ವಸ್ತು, ಚಿನ್ನಾಭರಣಗಳನ್ನು ತೆಗೆದುಕೊಂಡು ಕಾನ್ಪುರ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಇಳಿದು ಪರಾರಿಯಾಗಿದ್ದಾರೆ.
ಬಹಳ ಸಮಯದ ನಂತರ ವರನ ಮನೆಯವರಿಗೆ ನಶೆ ಇಳಿದು ಹೋಗಿ, ಎಚ್ಚರವಾಗಿದೆ. ಕಣ್ಣು ಬಿಟ್ಟು ನೋಡಿದರೆ ತಾವು ಮೋಸ ಹೋಗಿರೋದು ಬೆಳಕಿಗೆ ಬಂದಿದೆ. ವಧುವಿನ ಕೃತ್ಯ ಕಂಡು ತಲೆ ಮೇಲೆ ಕೈ ಹೊತ್ತು ಕುಳಿತರು. ತಮ್ಮಲ್ಲಿದ್ದ ಎಲ್ಲಾ ಬೆಳೆಬಾಳುವ ವಸ್ತುಗಳನ್ನು ವಧು ದೋಚಿದ್ದಳು. ತಕ್ಷಣ ವರನ ಮನೆಯವರು ಎಟಾವಾದಲ್ಲಿರುವ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ವೇಳೆ ಯುವತಿಗೆ ಇದು ಎರಡನೇ ಮದುವೆ ಎಂಬುದು ಬೆಳಕಿಗೆ ಬಂದಿದ್ದು, ಅಲ್ಲದೇ, ಮೊದಲ ಗಂಡನಿಗೂ ಆಕೆ ಇದೇ ರೀತಿ ವಂಚಿಸಿದ್ದಳು ಎಂದು ತಿಳಿದು, ವರನ ಕಡೆಯವರಿಗೆ ಇನ್ನಷ್ಟು ಆಘಾತ ಉಂಟಾಗಿದೆ. ಸದ್ಯ ದೂರು ದಾಖಲಾದ ಬೆನ್ನಲ್ಲೆ, ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಗುಡಿಯಾ ಮತ್ತು ನಾಗಿನಾರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಛೋಟು ತಪ್ಪಿಸಿಕೊಂಡಿದ್ದು, ಆತನನ್ನು ಬಂಧಿಸಲು ಶೋಧ ಕಾರ್ಯ ನಡೆಯುತ್ತಿದೆ.