Rajakumara Special Show: ಮಹಾ ಶಿವರಾತ್ರಿಗೆ ತೆರೆಮೇಲೆ ಬರಲಿದ್ದಾನೆ ‘ರಾಜಕುಮಾರ’! ಮತ್ತೆ ರೀ ರಿಲೀಸ್ ಆಗಲಿದೆ ಜನ ಮನ ಗೆದ್ದ ಅಪ್ಪು ಸಿನಿಮಾ!

Share the Article

ದೊಡ್ಮನೆ ಹುಡುಗ, ನಗುಮೊಗದ ರಾಜಕುಮಾರ, ಪುನೀತ್‌ ರಾಜ್‌ಕುಮಾರ್‌ ನಮ್ಮನ್ನು ಬಿಟ್ಟು ಹೋಗಿ 1 ವರ್ಷ ಕಳೆದಿದೆ. ಅಭಿಮಾನಿಗಳು, ಕುಟುಂಬದವರು ಅಪ್ಪು ಅವರನ್ನು ನೆನೆಯದ ದಿನವೇ ಇಲ್ಲ. ಅವರ ಮಾತು, ನಗು, ಸಿನಿಮಾ ಡೈಲಾಗ್‌, ಡ್ಯಾನ್ಸ್‌, ಸರಳತೆ ಎಲ್ಲವೂ ಪದೇ ಪದೆ ನೆನಪಾಗುತ್ತಿದೆ. ಅವುಗಳೊಂದಿಗೇ ಪುನೀತ್ ಎಂದಿಗೂ ನಮ್ಮೊಂದಿಗೆ ಜೀವಂತವಾಗಿದ್ದಾರೆ. ಇದೀಗ ಅಪ್ಪು ಅಭಿಮಾನಿಗಳಿಗಾಗಿ ‘ರಾಜಕುಮಾರ’ ಚಿತ್ರದ ವಿಶೇಷ ಶೋ ಏರ್ಪಡಿಸಲಾಗಿದ್ದು ಸಿನಿಮಾ ನೋಡಲು ಅಡ್ವಾನ್ಸ್‌ ಬುಕ್ಕಿಂಗ್‌ ಕೂಡಾ ಆರಂಭವಾಗಿದೆ.

ಹೌದು, ಪುನೀತ್ ರಾಜಕುಮಾರ್ ನಟನೆಯ ಸೂಪರ್ ಹಿಟ್ ಸಿನಿಮಾಗಳಲ್ಲಿ ‘ರಾಜಕುಮಾರ’ ಸಿನಿಮಾ ಕೂಡ ಒಂದು. 2017 ರಲ್ಲಿ ತೆರೆ ಕಂಡ ‘ರಾಜಕುಮಾರ’ ಚಿತ್ರವನ್ನು ಸಂತೋಷ್‌ ಆನಂದ್‌ ರಾಮ್‌ ಕಥೆ ಬರೆದು ನಿರ್ದೇಶಿಸಿದ್ದರು. ಹೊಂಬಾಳೆ ಫಿಲ್ಸ್ಮ್‌ ಬ್ಯಾನರ್‌ ವತಿಯಿಂದ ವಿಜಯ್‌ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದರು. ಈ ಸಿನಿಮಾ ಶತದಿನೋತ್ಸವದ ಜೊತೆಗೆ ಕನ್ನಡ ಸಿನಿಮಾ ಇತಿಹಾಸದಲ್ಲೇ ಮೊದಲ ಬಾರಿಗೆ 75 ಕೋಟಿ ರೂಪಾಯಿ ಬಾಚಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದರೊಂದಿಗೆ ಹಲವಾರು ದಾಖಲೆಗಳನ್ನು ಕೂಡ ಬರೆದಿತ್ತು. ಜನರ ಮನ ಗೆದ್ದ ಈ ಸಿನಿಮಾವನ್ನು ಶಿವರಾತ್ರಿ ದಿನ ಮತ್ತೆ ಮರುಬಿಡುಗಡೆ ಮಾಡಲಾಗುತ್ತಿದೆ.

ಅಂದಹಾಗೆ ಶನಿವಾರ ಮಧ್ಯ ರಾತ್ರಿ 12.30 ಕ್ಕೆ ಪೀಣ್ಯದ ಭಾರತಿ ಚಿತ್ರಮಂದಿರದಲ್ಲಿ ಈ ಸಿನಿಮಾದ ವಿಶೇಷ ಶೋ ಇದ್ದು, ಬಾಲ್ಕನಿಗೆ 130 ಹಾಗೂ ಸೆಕೆಂಡ್‌ ಕ್ಲಾಸ್‌ಗೆ 100 ರೂಪಾಯಿ ಟಿಕೆಟ್‌ ದರ ನಿಗದಿಪಡಿಸಲಾಗಿದೆ. ಬುಕ್‌ ಮೈ ಶೋನಲ್ಲಿ ಅಡ್ವಾನ್ಸ್‌ ಬುಕ್ಕಿಂಗ್‌ ಓಪನ್‌ ಆಗಿದ್ದು ಪೀಣ್ಯದ ಸುತ್ತಮುತ್ತ ನೆಲೆಸಿರುವ ಅಪ್ಪು ಅಭಿಮಾನಿಗಳು ಶನಿವಾರ ಈ ಸಿನಿಮಾ ನೋಡಬಹುದಾಗಿದೆ. ಈ ಮೂಲಕ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸುವ ಉದ್ದೇಶವೂ ಇದರ ಹಿಂದಿದೆಯಂತೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಅನ್ನು ಥಿಯೇಟರ್ ಮಾಲೀಕರು ಆರಂಭಿಸಿದ್ದಾರೆ.

ಮಹಾಶಿವರಾತ್ರಿ ಹತ್ತಿರ ಬಂತು, ಈ ದಿನ ಅನೇಕ ಜನರು ಜಾಗರಣೆ ಮಾಡುತ್ತಾರೆ. ಕೆಲವರು ದೇವಸ್ಥಾನಗಳಿಗೆ ತೆರಳಿ ದೇವರ ಭಜನೆ, ಧ್ಯಾನದಲ್ಲಿ ಮುಳುಗಿದರೆ, ಕೆಲವರು ಗೇಮ್‌ ಆಡುವುದು, ಸಿನಿಮಾ ನೋಡುವ ಮೂಲಕ ದಿನ ಕಳೆಯುತ್ತಾರೆ. ಆದ್ದರಿಂದಲೇ ಬೆಂಗಳೂರಿನ ಪೀಣ್ಯದಲ್ಲಿ ಪುನೀತ್‌ ಅಭಿಮಾನಿಗಳಿಗಾಗಿ ‘ರಾಜಕುಮಾರ’ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿದು ಬಂದಿದೆ.

Leave A Reply