Karnataka Budget 2023: 9 ಹೊಸ ರೈಲು ಯೋಜನಾ ಅನುಷ್ಠಾನಕ್ಕೆ ಅಸ್ತು ಎಂದ ರಾಜ್ಯ ಬಜೆಟ್! ಕರ್ನಾಟಕದ ರೈಲ್ವೆ ಯೋಜನೆಗಳಿಗೆ 7561 ಕೋಟಿ ಮೀಸಲಿಟ್ಟ ಸರ್ಕಾರ!
ವಿಧಾನಸೌಧದಲ್ಲಿ ಇಂದು ತಮ್ಮ ಎರಡನೇ ಬಜೆಟ್ ಮಂಡನೆ ಮಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಹಲವಾರು ಜನಪರ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ರೈಲು ಮಾರ್ಗಗಳ ಅಭಿವೃದ್ಧಿಗೂ ತಮ್ಮ ಬಜೆಟ್ ನಲ್ಲಿ ಅವಕಾಶ ಕಲ್ಪಿಸಿರುವ ಅವರು, ವಿವಿಧ ರೈಲು ಯೋಜನೆಗೆ ಅನುದಾನ ಮೀಸಲಿರಿಸಿದ್ದಾರೆ. ರಾಜ್ಯ ಸರ್ಕಾರವು ರೈಲ್ವೆ ಮಂತ್ರಾಲಯದೊಂದಿಗೆ 50:50 ರ ವೆಚ್ಚ ಹಂಚಿಕೆ ಆಧಾರದಲ್ಲಿ 9 ಹೊಸ ರೈಲ್ವೆ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತದೆ ಎಂದಿದ್ದಾರೆ.
ರಾಜ್ಯ ಸರ್ಕಾರವು ನಿರ್ಮಾಣ ವೆಚ್ಚದ ಪಾಲನ್ನು ಒದಗಿಸುವುದಲ್ಲದೇ, ಎಲ್ಲಾ ಯೋಜನೆಗಳಿಗೆ ಭೂ ಸ್ವಾಧೀನದ ವೆಚ್ಚವನ್ನು ಸಹ ಭರಿಸಲಿದೆ. ಅಲ್ಲದೆ ಈ ವರ್ಷದ ಕೇಂದ್ರ ಸರ್ಕಾರದ ಅಯವ್ಯಯದಲ್ಲಿ ಕರ್ನಾಟಕ ರೈಲು ಜಾಲವನ್ನು ಅಭಿವೃದ್ಧಿಪಡಿಸಲು 7,561 ಕೋಟಿ ರೂಪಾಯಿ ಮೀಸಲಿಡಲಾಗುತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಣೆ ಮಾಡಿದರು.
ಇನ್ನು ಯಾವ ಯೋಜನೆ, ವೆಚ್ಚ ಎಷ್ಟು ಎಂದು ನೋಡುವುದಾದರೆ ತುಮಕೂರು-ಚಿತ್ರದುರ್ಗ ರೈಲ್ವೆ ಮಾರ್ಗಕ್ಕೆ 220 ಕೋಟಿ ರೂ., ಶಿವಮೊಗ್ಗ-ಶಿಕಾರಿಪುರ ರೈಲ್ವೆ ಮಾರ್ಗಕ್ಕೆ 150 ಕೋಟಿ ರೂ., ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗಕ್ಕೆ 210 ಕೋಟಿ ರೂ., ಮುನಿರಾಬಾದ್-ಗಿಣಿಗೇರಾ- ರಾಯಚೂರು ರೈಲ್ವೆ ಮಾರ್ಗಕ್ಕೆ 150 ಕೋಟಿ ರೂ., ಗದಗ-ವಾಡಿ ರೈಲ್ವೆ ಮಾರ್ಗಕ್ಕೆ 200 ಕೋಟಿ ರೂ., ತುಮಕೂರು-ರಾಯದುರ್ಗ – ರೈಲ್ವೆ ಮಾರ್ಗಕ್ಕೆ 225 ಕೋಟಿ ರೂ., ಒಳಗೊಂಡಂತೆ ಎಲ್ಲಾ ಹೊಸ ರೈಲ್ವೆ ಕಾಮಗಾರಿಗಳಿಗೆ ಒಟ್ಟಾರೆಯಾಗಿ 1,537 ಕೋಟಿ ರೂಗಳನ್ನು ಕೇಂದ್ರ ಸರ್ಕಾರವು ಈ ವರ್ಷದ ಬಜೆಟ್ ನಲ್ಲಿ ನೀಡಿದೆ.
ಇದರೊಂದಿಗೆ ತುಮಕೂರು ರಾಯದುರ್ಗ, ಗಿಣಿಗೇರಾ – ರಾಯಚೂರು, ಬಾಗಲಕೋಟೆ-ಕುಡಚಿ ಮತ್ತು ಚಿಕ್ಕಮಗಳೂರು-ಬೇಲೂರು ರೈಲ್ವೆ ಮಾರ್ಗಗಳ ಮೂಲ ಅಂದಾಜು 2,880 ಕೋಟಿ ರೂ. ಗಳಿದ್ದು, ಕಳೆದ ವರ್ಷದಲ್ಲಿ ಇದನ್ನು 5,838 ಕೋಟಿ ರೂ. ಗಳಿಗೆ ಪರಿಷ್ಕರಿಸಲಾಗಿದ್ದು, ಇದಕ್ಕೆ 960 ಕೋಟಿ ರೂ. ಗಳ ಹೆಚ್ಚುವರಿ ಅನುದಾನವನ್ನು ರಾಜ್ಯ ಸರ್ಕಾರದ ವತಿಯಿಂದ ಒದಗಿಸಲಾಗುವುದು. ಜೊತೆಗೆ ಬೆಳಗಾವಿ-ಕಿತ್ತೂರು-ಧಾರವಾಡ ರೈಲ್ವೆ ಮಾರ್ಗಕ್ಕೆ ಭೂ ಸ್ವಾಧೀನಕ್ಕಾಗಿ 150 ಕೋಟಿ ರೂ.ಗಳನ್ನು ಈ ವರ್ಷದಲ್ಲಿ ಒದಗಿಸಲಾಗುವುದೆಂದು ಸಿಎಂ ಬೊಮ್ಮಾಯಿ ಹೇಳಿದರು.
ಇದಲ್ಲದೆ, ಡಬ್ಲಿಂಗ್ ಕಾಮಗಾರಿಗಳಿಗೂ ಸಹ ಕೇಂದ್ರ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ಬೈಯ್ಯಪ್ಪನಹಳ್ಳಿ-ಹೊಸೂರು 100 ಕೋಟಿ ರೂ., ಹುಬ್ಬಳ್ಳಿ-ಚಿಕ್ಕಜಾಜೂರು 150 ಕೋಟಿ ರೂ., ಹೊಸಪೇಟೆ- ಹುಬ್ಬಳ್ಳಿ-ಲೋಂಡಾ-ವಾಸ್ಕೋ-ಡ-ಗಾಮ 400 ಕೋಟಿ ರೂ., ಗದಗ-ಹೋಟಗಿ 170 ಕೋಟಿ ರೂ., ಕೆ.ಆರ್. ಪುರಂ-ವೈಟ್‌ಫೀಲ್ಡ್ 250 ಕೋಟಿ ರೂ. ಒಳಗೊಂಡಂತೆ ಎಲ್ಲಾ ಡಬ್ಲಿಂಗ್ ಕಾಮಗಾರಿಗಳಿಗೆ ಈ ವರ್ಷದಲ್ಲಿ 1,490 ಕೋಟಿ ರೂ. ಗಳನ್ನು ಒದಗಿಸಲಾಗುತ್ತಿದೆ. ಈ ಎಲ್ಲಾ ಕಾಮಗಾರಿಗಳಿಗೆ ಅಗತ್ಯವಿರುವ ರಾಜ್ಯ ಸರ್ಕಾರದ ಪಾಲನ್ನು ನೀಡಲಾಗುವುದು ಎಂದು ಬೊಮ್ಮಾಯಿ ಬಜೆಟ್ ಮಂಡನೆ ವೇಳೆ ತಿಳಿಸಿದರು.