Belthangady Election : ಬಿಜೆಪಿಯ ನಿದ್ದೆಗೆಡಿಸಿದ ಕಾಂಗ್ರೆಸ್’ನ ಮಹಿಳಾ ಅಭ್ಯರ್ಥಿ ; ಕಾಂಗ್ರೆಸ್ ರಣತಂತ್ರಕ್ಕೆ ಹರೀಶ್ ಪೂಂಜಾ ಢವ ಢವ !
ರಾಜ್ಯ ವಿಧಾನಸಭಾ ಚುನಾವಣೆ ಕಾವು ಜೋರಾಗಿಯೇ ಏರುತ್ತಿದ್ದು ಆಯಾಯ ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳು ಅಭ್ಯರ್ಥಿಯ ಆಯ್ಕೆಯ ಕಸರತ್ತು ನಡೆಸುತ್ತಿದ್ದು ಈ ಬಾರಿಯ ಚುನಾವಣೆ ಭಾರಿ ಪೈಪೋಟಿ ನೀಡುವುದ೦ತೂ ಸ್ಪಷ್ಟ. ಇದಕ್ಕೆ ಪೂರಕವಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಪ್ರಬಲ ಬಿಜೆಪಿ ಅಭ್ಯರ್ಥಿ ಹರೀಶ್ ಪೂ೦ಜಾರನ್ನು ಸೋಲಿಸಲು ಕಾ೦ಗ್ರೇಸ್ ರಣತಂತ್ರವನ್ನು ರೂಪಿಸಿದೆ. ಬೆಳ್ತಂಗಡಿಯಲ್ಲಿ ಬಿಜೆಪಿಯನ್ನು ಮತ್ತು ಹಾಲಿ ಶಾಸಕ ಹರೀಶ್ ಪೂಂಜಾರನ್ನು ಶತಾಯಗತಾಯ ಬಗ್ಗಿಸಲು ಅಲ್ಲಿ ಯುವ ಅಭ್ಯರ್ಥಿಯಾಗಿ ಇತ್ತ ನವನಾಯಕ ರಕ್ಷಿತ್ ಶಿವರಾಮ್ ಹೆಸರು ಚಾಲ್ತಿಯಲ್ಲಿರುವಾಗಲೇ ಅಭ್ಯರ್ಥಿಯ ಆಯ್ಕೆಯಲ್ಲಿ ಅಚ್ಚರಿಯ ಬೆಳವಣಿಗೆಯೊಂದು ಕಂಡು ಬಂದಿದೆ. ಕಾಂಗ್ರೆಸ್ ಪಾಳಯದ ಬೆರಗಿನ ನಡೆಗೆ ಹರೀಶ್ ಪೂಂಜಾ ಬಳಗ ಬೆಚ್ಚಿ ಬಿದ್ದಿದೆ.
ಇವತ್ತು ಬೆಳ್ತಂಗಡಿಯಲ್ಲಿ ಹಾಲಿ ಶಾಸಕರ ಎದುರು ಕಾಂಗ್ರೆಸ್ ಹೂಡಲು ಹೊರಟಿರುವ ಅಸ್ತ್ರ ಬಿಜೆಪಿ ಊಹಿಸದೇ ಇರುವಂತದ್ದು. ಇಂತದ್ದು ಇತಿಹಾಸದಲ್ಲಿ ಹಲವು ಬಾರಿ ಆಗಿದೆ. ಅಂತಹ ಅಸ್ತ್ರವನ್ನು ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಪಕ್ಷ ಗುರಿ ಇಟ್ಟು ಹೂಡಿದೆ. ಅದುವೇ ಕಾಂಗ್ರೆಸ್ ನ ಮಹಿಳಾ ಅಭ್ಯರ್ಥಿ. ಈ ಮಹಿಳಾ ಅಭ್ಯರ್ಥಿಯ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಹಾಗಾದರೆ, ಆ ಪ್ರಭಾವಿ ಮಹಿಳಾ ಅಭ್ಯರ್ಥಿ ಯಾರಿರಬಹುದು ?
ಬಿಲ್ಲವ ಸಮುದಾಯದ ಮಾಜಿ ಶಾಸಕ ಹಾಗೂ ಪ್ರಭಾವಿ ರಾಜಕಾರಣಿ ಶ್ರೀ ವಸಂತ ಬಂಗೇರ ಅವರು ರಾಜಕೀಯ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿದ್ದು ಬೆಳ್ತಂಗಡಿಯನ್ನು ತನ್ನ ಹಿಡಿತಕ್ಕೆ ಇಟ್ಟುಕೊಂಡಿದ್ದರು. ಈಗ ಅವರ ಸುಪುತ್ರಿ ಈ ಬಾರಿ ಕಾ೦ಗ್ರೇಸ್ ಅಭ್ಯರ್ಥಿಯಾಗಿ ಇಲ್ಲಿ ಸ್ಪರ್ಧಿಸುವ ಗುಮಾನಿ ದಟ್ಟವಾಗಿದೆ. ಈ ಮಹಿಳಾ ಅಭ್ಯರ್ಥಿಯ ಆಯ್ಕೆ ವಿಚಾರಕ್ಕೆ ಮಾಜಿ ಸಚಿವ ಜನಾರ್ಧನ ಪೂಜಾರಿಯವರ ಅಭಯ ದೊರಕಿದ್ದು ಬೆಳ್ತಂಗಡಿ ಕಾ೦ಗ್ರೇಸ್ ತಂಡ ದೆಹಲಿಯತ್ತ ದೌಡಾಯಿಸಿದೆ. ಈ ಬಾರಿ ಜೆಡಿಎಸ್ ಮತ್ತು ಇತರೆ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಮುಖ್ಯವಾಗಿ ಬಿಲ್ಲವ ಮತ ಕ್ರೋಢೀಕರಿಸಿ ಬಿಜೆಪಿಯನ್ನು ಸೋಲಿಸಲು ಕಾ೦ಗ್ರೇಸ್ ಪಾಳಯ ಯುದ್ಧ ತಂತ್ರ ರೂಪಿಸಿದೆ.
ಅತ್ತ, ಯುವ ಪಡೆಯ ಬೆಂಬಲವನ್ನು ನೆಚ್ಚಿಕೊಂಡಿರುವ ಹರೀಶ್ ಪೂಂಜಾರ ಎದುರಿಗೆ ಬಹುಸಂಖ್ಯಾತ ಬಿಲ್ಲವ ಸಮುದಾಯದ ಕ್ಯಾಂಡಿಡೇಟ್ ಅನ್ನು ಸ್ಪರ್ಧೆಗೆ ಒಡ್ಡಲಾಗುತ್ತಿದೆ. ಅಲ್ಲದೆ, ಆಕೆ ಬೆಳ್ತಂಗಡಿಯ ಪಳಗಿದ ಹಳೆಯ ಹುಲಿ ವಸಂತ ಬಂಗೇರ ಅವರ ಮಗಳು. ಅದಲ್ಲದೆ, ಆಕೆ ಮಹಿಳೆಯಾಗಿದ್ದು, ಬೆಳ್ತಂಗಡಿ ಈ ತನಕ ಯಾರೊಬ್ಬ ಮಹಿಳಾ ಶಾಸಕಿಯನ್ನು ಕಂಡಿಲ್ಲ. ಈ ಮೂರು ತಂತ್ರಗಾರಿಕೆಯಿಂದ ಕಾಂಗ್ರೆಸ್ ಇದೀಗ ಪುಳಕಗೊಂಡು ಮೈ ಕೊಡವಿಕೊಂಡು ದಿಗಲ್ಲನೆ ಎದ್ದು ಕೂತಿದೆ. ಹರೀಶ್ ಪೂಂಜಾರ ನಿದ್ದೆ ಮಾಯವಾಗಿದೆ.
ಕಾ೦ಗ್ರೇಸ್ ಅಭ್ಯರ್ಥಿಯೆಂದು ಇದೀಗ ಬಿಂಬಿತ ಆಗುತ್ತಿರುವ ಬಂಗೇರ ಸುಪುತ್ರಿ ವಿದೇಶದಲ್ಲಿ ಉತ್ತಮ ಶಿಕ್ಷಣ ಹೊಂದಿದ್ದಾರೆ. ಆಕೆ ಅಮೇರಿಕಾದ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ ಹೊಂದಿದ್ದು ಸಾಮಾಜಿಕ ಸೇವೆಯಲ್ಲಿ ಅಪಾರ ಕೊಡುಗೆ ನೀಡಿ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿದ್ದು ತಮ್ಮ ಹುಟ್ಟೂರಲ್ಲಿ ಜನ ಸೇವೆಗೈಯಲು ಸನ್ನದ್ದರಾಗಿದ್ದಾರೆ. ಕಳೆದ ಬಾರಿಯೇ ಆಕೆ ಬೆಳ್ತಂಗಡಿಯಲ್ಲಿ ಚುನಾವಣಾ ಕಣಕ್ಕೆ ಇಳಿಯುವ ಆಸಕ್ತಿ ಮತ್ತು ಆಶೆಯನ್ನು ವ್ಯಕ್ತಪಡಿಸಿದ್ದರು. ಆದರೆ, ” ಇರಮ್ಮಾ, ಈ ಸಲ ನಾನೇ ನಿಂತ್ಕೊತೇನೆ. ಮುಂದಿನ ಬಾರಿ ನಿಂಗೇನೇ” ಎಂದಿದ್ದರು ವಸಂತ ಬಂಗೇರ. ಆಕೆ ಕೂಡಾ ಒಲ್ಲದ ಮನಸ್ಸಿನಿಂದಲೇ ಹೂಂ ಅಂದಿದ್ದರು. ಈಗ ಐದು ವರ್ಷಗಳೇ ಕಳೆದುಹೋಗಿದೆ. ಮತ್ತೆ ಚುನಾವಣಾ ಸನ್ನಿಹಿತ. ಹಳೆಯವೇ ಭರವಸೆಗಳ ನಡುವೆ ಹೊಸ ಅಭ್ಯರ್ಥಿಗಳು ಎದ್ದು ನಿಂತಿದ್ದಾರೆ. ಅದೇ ಕಾರಣಕ್ಕೆ ಬೆಳ್ತಂಗಡಿಯ ಚುನಾವಣಾ ಕಣದಲ್ಲಿ ಇದೀಗ ಹಬೆ ಮೂಡುತ್ತಿರುವುದು.
ಇಲ್ಲಿ ಈ ಬಾರಿಯ ಚುನಾವಣ ಮಹತ್ವ ಪಡೆಯಲು ಇನ್ನೂ ಕಾರಣಗಳಿವೆ. ಯುವ ನೇತಾರ ರಕ್ಷಿತ್ ಶಿವರಾಂ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಿಲ್ಲಲು ತುದಿಗಾಲಿನಲ್ಲಿ ನಿಂತಿದ್ದಾರೆ. ಯುವ ಪಡೆ , ಗೋರಿ ಗೋರಿ ದುಡ್ಡು ಚೆಲ್ಲಿದರೂ ಖಾಲಿಯಾಗದ ಖಜಾನೆ ಮತ್ತು ಹೈಕಮಾಂಡ್ ನಲ್ಲಿ ಒಳ್ಳೆಯ ಹೆಸರನ್ನು ಇಟ್ಟುಕೊಂಡ ಹುಡುಗ ರಕ್ಷಿತ್. ನೋಡಲು ಸ್ಪುರದ್ರೂಪಿ ಮತ್ತು ಯುವಕರನ್ನು ಆಕರ್ಷಿಸಬಲ್ಲ ಛರಿಸ್ಮಾ ರಕ್ಷಿತ್ ಶಿವರಾಂ ಗೆ ಕೂಡಾ ಇದೆ. ಅಲ್ಲದೆ ಆತ ಬಲಿಷ್ಠ ಬಿಲ್ಲವರ ಪ್ರತಿನಿಧಿ ಕೂಡ ಹೌದು. ಹಾಗಾಗಿ ಆತ ಕೂಡಾ ಹರೀಶ್ ಪೂಂಜಾರಿಗೆ ಕೋಡಿಗೆ ಕೋಡು ಮಸೆದು ಸ್ಪರ್ಧೆ ನೀಡಬಲ್ಲ ಸ್ಪರ್ಧಿಯೇ !
ಉಳಿದಂತೆ ಗಂಗಾಧರ ಗೌಡರು ತಾನೇ ನಿಲ್ಲುತ್ತೇನೆ ಎನ್ನುವ ಉತ್ಸಾಹದಲ್ಲಿದ್ದಾರೆ. ಆದರೆ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ದೊರೆಯುವುದು ದುರ್ಲಾಭ. ವಸಂತ ಬಂಗೇರಾ ಮಾತ್ರ ಸೈಲೆಂಟ್ ಆಗಿದ್ದಾರೆ. ಅವರು ಇತ್ತೀಚಿಗೆ ಮೀಟಿಂಗ್ ಗಳಿಗೆ ಕೂಡಾ ಹೋಗುತ್ತಿಲ್ಲ. ತಮ್ಮ ಸುಪುತ್ರಿಗೆ ಸೀಟು ಪಕ್ಕಾ ಅಂತ ಆತ್ಮವಿಶ್ವಾಸ ಬಂಗೇರ ಅವರಲ್ಲಿ ಇದೆ. ಹಾಗಾಗಿ ಕಣದಲ್ಲಿ ಈಗ ಮೂರು ಪ್ರಬಲ ಸ್ಪರ್ಧಿಗಳು ಕಂಡು ಬರುತ್ತಿದ್ದಾರೆ. ಈ ಸಲ ಬೆಳ್ತಂಗಡಿಯಲ್ಲಿ ಮಹಿಳಾ ಮತದಾರರೇ ನಿರ್ಣಾಯಕ. ಒಂದು ವೇಳೆ ಬೆಳ್ತಂಗಡಿಯ ಮಹಿಳೆಯರು ” ಒಂಜಿ ಸರ್ತಿ ಪೊಂಜೊವ್ ಗೆಲ್ಪಾಡ್, ದಾನೆ ಆಂಜೊವ್ವೆ ಶಾಸಕೆ ಆಪುನನ ?” ಎಂದು ಮತಗಟ್ಟೆಯಲ್ಲಿ ತೋರು ಬೆರಳು ತೋರಿಸಿದರೆ ಹರೀಶ್ ಪೂಂಜಾ ಔಟ್ ಆಗೋದು ಖಚಿತ. ಅಲ್ಲದೆ ತಿಮರೋಡಿ ಮಹೇಶ್ ಶೆಟ್ಟಿ ಬಳಗ ಹರೀಶ್ ಪೂಂಜಾರ ವಿರುದ್ಧ ಕೆಲಸ ಮಾಡುವ ಎಲ್ಲಾ ಮುನ್ಸೂಚನೆ ಇದೆ. ಯುದ್ಧಕ್ಕೆ ಅಖಾಡ ಸಿದ್ಧವಾಗಿದೆ. ಈ ಸಲ ಖಚಿತವಾಗಿ ಮಹಿಳೆ ಮತ್ತು ಪುರುಷರ ನಡುವೆ ಬೆಳ್ತಂಗಡಿಯಲ್ಲಿ ಹಗ್ಗ ಜಗ್ಗಾಟ ! ಕಾಂಗ್ರೆಸ್ ನ ಯುದ್ಧ ತಂತ್ರಕ್ಕೆ ಹರೀಶ್ ಪೂಂಜಾ ತತ್ತರಿಸಿದ್ದಾರೆ. ಮುಂದೇನಾಗುತ್ತೆ ಅನ್ನುವುದನ್ನು ಬೆಳ್ತಂಗಡಿಯ ಮಹಿಳೆಯರು ನಿರ್ಧರಿಸಲಿದ್ದಾರೆ. ಕದನ ಕುತೂಹಲಿಗರು ಮುಂದಿನ ಬೆಳವಣಿಗೆಗಳ ಕಡೆಗೆ ಕಾದು ಕೂರಿ.